
ಬೆಂಗಳೂರು (ನ.27): ರಾಜ್ಯದಲ್ಲಿ ಮುಂಬರುವ ಚುನಾವಣೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿಯೇ ಎದುರಿಸಲಾಗುತ್ತಿದೆ ಎಂದು ಹೈಕಮಾಂಡ್ ಕೂಡ ಹೇಳಿದೆ. ಆದರೆ, ಚುನಾವಣೆ ಹೊಸ್ತಿಲಲ್ಲಿ ಇರುವಾಗ ಒಕ್ಕಲಿಗ ಸಮುದಾಯವು ಮೀಸಲಾತಿ ಹೆಚ್ಚಳ ಮಾಡುವಂತೆ ಆಗ್ರಹಿಸುತ್ತಿರುವುದರಿಂದ ಸಿಎಂ ಬೊಮ್ಮಾಯಿಗೆ ಮೀಸಲಾತಿ ಸಂಕಷ್ಟ ಎದುರಾಗುವ ಮುನ್ಸೂಚನೆ ಕಂಡುಬರುತ್ತಿದೆ.
ಈಗಾಗಲೇ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಹೆಚ್ಚಳ ಮಾಡಲಾಗಿದೆ. ಈಗ ಚುನಾವಣೆ ಹೊಸ್ತಿಲಲ್ಲಿ ಇರುವಾಗ ಒಕ್ಕಲಿಗ ಸಮುದಾಯವು ನಮಗೂ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಬೇಕು ಎಂದು ಹೋರಾಟದ ಕಣಕ್ಕೆ ಇಳಿಯುತ್ತಿದೆ. ಮತ್ತೊಂದು ಕಡೆಯಲ್ಲಿ ಕಳೆದ ಎರಡು ವರ್ಷಗಳಿಂದ ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಹೋರಾಟ, ಸಮಾವೇಶ ಮತ್ತು ಪಾದಯಾತ್ರೆಗಳನ್ನು ಮಾಡುತ್ತಾ ಬರಲಾಗಿದ್ದು, ಇದೇ ಡಿ.೧೯ರೊಳಗೆ ಮೀಸಲಾತಿ ಕುರಿತ ವರದಿಯನ್ನು ಪಡೆಯಲು ಗಡುವು ನೀಡಲಾಗಿದೆ. ಈಗ ಪಂಚಮಸಾಲಿ ಸಮುದಾಯದ ಹೋರಾಟದ ಮಾದರಿಯಲ್ಲಿಯೇ ಒಕ್ಕಲಿಗ ಸಮುದಾಯದಿಂದ ಒಕ್ಕಲಿಗರ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಹೋರಾಟ ಮಾಡಲು ರೂಪುರೇಷೆ ಸಿದ್ಧವಾಗುತ್ತಿದೆ.
ಮೀಸಲಾತಿಗಾಗಿ ಒಕ್ಕಲಿಗರ ಮೀಟಿಂಗ್: ಸರ್ಕಾರಕ್ಕೆ ಹೊಸ ಟೆನ್ಶನ್
ಒಕ್ಕಲಿಗ ಮುಖಂಡರ ಸಭೆ: ರಾಜ್ಯದಲ್ಲಿ ಒಕ್ಕಲಿಗ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಡ ಹೇರುವ ನಿಟ್ಟಿನಲ್ಲಿ ಇಂದು ಬೆಂಗಳೂರಿನ ಒಕ್ಕಲಿಗರ ಸಂಘದ ಕಚೇರಿಯಲ್ಲಿ ಮಹತ್ವದ ಸಭೆ ನಡೆಸಲಾಗಿದೆ. ಈ ವೇಳೆ ಹೋರಾಟದ ರೂಪುರೇಷೆ ಬಗ್ಗೆ ಮೊದಲ ಹಂತದ ಚರ್ಚೆ ಮಾಡಲಾಗಿದೆ. ಹಲವು ನಾಯಕರು ಈ ಸಭೆಯಲ್ಲಿ ಭಾಗಿಯಾಗಿದ್ದು, ಒಕ್ಕಲಿಗರಿಗೆ ಮೀಸಲಾತಿ ಹೆಚ್ಚಳ ಕುರಿತು ರಾಜ್ಯ ಸರ್ಕಾರವನ್ನು ಆಗ್ರಹಿಸಲು ತೀರ್ಮಾನ ಕೈಗೊಂಡಿದ್ದಾರೆ. ರಾಜ್ಯದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ.16ಕ್ಕೂ ಹೆಚ್ಚು ಒಕ್ಕಲಿಗ ಸಮುದಾಯದ ಜನರಿದ್ದಾರೆ. ಆದರೆ, ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಸಿಕ್ಕಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ.
ದಲಿತ ಸಂಘಟನೆಗಳಿಂದ ಒಳಮೀಸಲಾತಿಗೆ ಪಟ್ಟು: ರಾಜ್ಯದಲ್ಲಿನ ದಲಿತ ಸಮುದಾಯಗಳಲ್ಲಿ (ಪರಿಶಿಷ್ಟ ಜಾತಿಯಲ್ಲಿ) 106ಕ್ಕೂ ಅಧಿಕ ಜಾತಿಗಳು ಬರುತ್ತವೆ. ಆದರೆ, ಇವುಗಳಲ್ಲಿ ಕೆಲವು ಜಾತಿಗಳ ಜನರಿಗೆ ಮೀಸಲಾತಿಯ ಸದುಪಯೋಗ ಆಗುತ್ತಿಲ್ಲ. ಹೀಗಾಗಿ, ಮಾದಿಗ ಸಮುದಾಯ ಸೇರಿ ಕೆಲವು ಸಮುದಾಯಗಳಿಗೆ ಒಳಮೀಸಲಾತಿಯನ್ನು ಕಲ್ಪಿಸಬೇಕು ಎಂದು ಆಗ್ರಹಿಸುತ್ತಿವೆ. ಮುಂಬರುವ ವಿಧಾನಸಭಾ ಅಧಿವೇಶನದ ವೇಳೆ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಲೂ ಸಿದ್ಧತೆ ಮಾಡಿಕೊಳ್ಳುತ್ತಿವೆ. ಉಳಿದಂತೆ, ಕುರುಬ ಸಮುದಾಯವನ್ನು ಎಸ್‌ಟಿ ಮೀಸಲಾತಿಗೆ ಸೇರಿಸಬೇಕು ಎಂಬ ಒತ್ತಡವೂ ವ್ಯಕ್ತವಾಗಿದ್ದು, ಚುನಾವಣೆ ಹೊಸ್ತಿಲಲ್ಲಿ ಹೋರಾಟ ವ್ಯಕ್ತವಾಗುವ ಸಾಧ್ಯತೆಗಳಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.