
ಬೆಂಗಳೂರು (ನ.27): ರಾಜ್ಯದಲ್ಲಿ ಬಿಜೆಪಿಯ ಹಿಂದುಳಿದ ವರ್ಗಗಳ ಸಮಾವೇಶ ಹಾಗೂ ಎಸ್‌ಟಿ ಸಮುದಾಯದ ನವಶಕ್ತಿ ಸಮಾವೇಶಕ್ಕೆ ಠಕ್ಕರ್ ಕೊಡುವ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಂಡಿರುವ ಕಾಂಗ್ರೆಸ್ ನಾಯಕರು, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಐಕ್ಯತಾ ಸಮಾವೇಶವನ್ನು ಜ.8 ರಂದು ನಡೆಸಲು ತೀರ್ಮಾನ ಕೈಗೊಂಡಿದ್ದಾರೆ. ಈ ಐಕ್ಯತಾ ಸಮಾವೇಶವನ್ನು ಚಿತ್ರದುರ್ಗದಲ್ಲಿ ಆಯೋಜನೆ ಮಾಡಲಾಗುತ್ತಿದ್ದು, ದಕ್ಷಿಣ ಮತ್ತು ಉತ್ತರ ಭಾಗದ ಜಿಲ್ಲೆಗಳ ಜನರನ್ನು ಸೇರಿಸುವ ಉದ್ದೇಶ ಇಟ್ಟುಕೊಂಡಿದೆ.
ದಲಿತ ಹಾಗೂ ಪರಿಶಿಷ್ಟ ಪಂಗಡದ ನಾಯಕರ ಸಭೆ ಮೇಲೆ ಸಭೆ ನಡೆಸಿದ್ದಾರೆ. ಇಂದು ಬೆಂಗಳೂರಿನ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಕಾಂಗ್ರೆಸ್‌ನ ಎಸ್.ಸಿ ಎಸ್.ಟಿ ನಾಯಕರು ಎರಡನೇ ಸುತ್ತಿನ ಸಭೆ ನಡೆಸಿದರು. ಡಾ.ಜಿ. ಪರಮೇಶ್ವರ, ಡಿ.ಕೆ. ಶಿವಕುಮಾರ್, ಎಚ್.ಸಿ. ಮಹದೇವಪ್ಪ, ಎಚ್. ಆಂಜನೇಯ, ಬಿ.ಎನ್. ಚಂದ್ರಪ್ಪ, ಟಿ. ರಘುಮೂರ್ತಿ ಸೇರಿ ಹಲವರು ಭಾಗಿಯಾಗಿದ್ದರು. ಛಿದ್ರಛಿದ್ರವಾಗಿರುವ ದಲಿತ ಮತಗಳನ್ನು ಒಗ್ಗೂಡಿಸುವ ಬಗ್ಗೆ ಗಂಭೀರ ಚರ್ಚೆ ಮಾಡಲಾಗಿದೆ. ದಲಿತ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಬಗ್ಗೆ ಚರ್ಚೆ ಮಾಡಲಾಗಿದೆ. ಸಭೆಯಲ್ಲಿ ಅಂತಿಮವಾಗಿ ಜನವರಿ 8 ರಂದು ಚಿತ್ರದುರ್ಗದಲ್ಲಿ ಐಕ್ಯತಾ ಸಮಾವೇಶಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ. ಚಿತ್ರದುರ್ಗದಲ್ಲಿ ಐಕ್ಯತಾ ಸಮಾವೇಶ ಆಯೋಜನೆ ಮೂಲಕ ಹೈದ್ರಾಬಾದ್ ಕರ್ನಾಟಕ ಭಾಗಕ್ಕೂ ತಲುಪುವ ಪ್ರಯತ್ನ ಮಾಡಲಾಗುತ್ತಿದೆ.
ಜನವರಿಗೆ ಕಾಂಗ್ರೆಸ್‌ನಿಂದ ದಲಿತ ಸಮಾವೇಶ: ಪರಂಗೆ ಸಂಪೂರ್ಣ ಜವಾಬ್ದಾರಿ
ಒಗ್ಗಟ್ಟಾಗಿ ಚುನಾವಣೆ ಎದುರಿಸಲು ಸಿದ್ಧತೆ: ಐಕ್ಯತಾ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದ ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಪಕ್ಷ ಒಗ್ಗಟ್ಟಾಗಿ ಚುನಾವಣೆ ಎದುರಿಸಲಿದೆ ಎಂದು ಹೇಳಿದರು. ಬಿಜೆಪಿಯ ಸಂವಿಧಾನ ವಿರೋಧಿ ನಡೆ ಕಾನೂನುಬಾಹಿರ ಆಡಳಿತದಿಂದ ಜನರ ಜೀವನ ಹಾಳಾಗುತ್ತಿದೆ. ಇದನ್ನು ಸರಿ ಮಾಡುವುದು ಕಾಂಗ್ರೆಸ್ ಜವಾಬ್ದಾರಿ ಇರುವುದರಿಂದ ಒಗ್ಗಟ್ಟಾಗಿ ಕಾರ್ಯಕ್ರಮ ಮಾಡುತ್ತಿದ್ದೇವೆ. ದಲಿತ ಸಂಘಟನೆಗಳ ನಾಯಕರೆಲ್ಲ ಒಗ್ಗಟ್ಟಾಗಿ ಹೋಗುತ್ತೇವೆ. ಎಸ್.ಸಿ ಎಸ್.ಟಿ ಮತಗಳು ಕಾಂಗ್ರೆಸ್ ಆಧಾರ ಸ್ಥಂಭ, ಮೂಲ ಮತ ಅವುಗಳು. ಒಳಗುಂಪುಗಳು ಕೆಲವು ಕಾರಣದಿಂದಾಗಿ ಆಚೆ ಈಚೆ ಆಗಿದೆ. ಅದೆಲ್ಲವನ್ನೂ ಒಟ್ಟೂಗೂಡಿಸುವ ಕೆಲಸ ನಾವು ಮಾಡ್ತೇವೆ ಎಂದರು.
ಬಳ್ಳಾರಿಯಲ್ಲಿ 'ಕೇಸರಿ' ಗರ್ಜನೆ: ಬಿಜೆಪಿ ಬೆನ್ನಲ್ಲೇ ಕಾಂಗ್ರೆಸ್‌ನಿಂದ ಸಮಾವೇಶ?
ಟಿಕೆಟ್ ನೀಡುವ ಹೈಕಮಾಂಡ್ ತೀರ್ಮಾನ: ಒಬ್ಬರಿಗೆ ಒಂದೇ ಟಿಕೇಟ್ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಆದರೆ, ಒಬ್ಬರಿಗೆ ಎಷ್ಟು ಟಿಕೆಟ್ ನೀಡಬೇಕು ಎಂಬುದನ್ನು ಎಐಸಿಸಿ ಅಧ್ಯಕ್ಷರ ನೇತೃತ್ವದಲ್ಲಿ ಸೆಂಟ್ರಲ್ ಇಲೆಕ್ಷನ್ ಕಮಿಟಿ ನಿರ್ಧಾರ ಮಾಡುತ್ತದೆ. ಯಾರಿಗೆ ಯಾವ ಟಿಕೆಟ್ ಕೊಡಬೇಕು? ಎಷ್ಟು ಟಿಕೇಟ್ ಕೊಡಬೇಕು? ಎಂಬುದನ್ನು ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ. ನಂಜನಗೂಡಿಗೆ ನಾನೂ ಅರ್ಜಿ ಹಾಕಿದ್ದೀನಿ, ಧೃವನಾರಾಯಣ ಹಾಗೂ ಕಳಲೆ ಕೇಶವ ಮೂರ್ತಿ ಕೂಡ ಅರ್ಜಿ ಹಾಕಿದ್ದಾರೆ. ಅಂತಿಮವಾಗಿ ಟಿಕೇಟ್ ಯಾರಿಗೆ ಕೊಡಬೇಕು ಅಂತ ಪಕ್ಷ ನಿರ್ಧಾರ ಮಾಡುತ್ತದೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.