ಸಿಎಂ ನೇತೃತ್ವದಲ್ಲಿ ಹುಣಸಗಿ, ಮಹಾಗಾಂವ್‌ಗಳಲ್ಲಿ ಯಾತ್ರೆ, ದಲಿತರ ಮನೆಯಲ್ಲಿ ಸಿಎಂ ಉಪಾಹಾರ, ಮಹಾಗಾಂವ್‌ನಲ್ಲಿ ಸಮಾವೇಶಕ್ಕೆ ಮಳೆ ಅಡ್ಡಿ, ಮಳೆಯಲ್ಲೇ 10 ನಿಮಿಷ ಭಾಷಣ ಮಾಡಿದ ಸಿಎಂ
ಕಲಬುರಗಿ(ಅ.20): ಕಲ್ಯಾಣ ನಾಡು, ಯಾದಗಿರಿಯ ಹುಣಸಗಿ ಹಾಗೂ ಕಲಬುರಗಿಯ ಮಹಾಗಾಂವ್‌ಗಳಲ್ಲಿ ಬುಧವಾರ ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಜನಸಂಕಲ್ಪ ಯಾತ್ರೆ ನಡೆಯಿತು. ಸುಮಾರು 40 ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದ ಯಾತ್ರೆಯಲ್ಲಿ ಎಲ್ಲೆಲ್ಲೂ ಕೇಸರಿ ಕಲರವ ಪ್ರತಿಧ್ವನಿಸುತ್ತಿತ್ತು.
ಮಧ್ಯಾಹ್ನ 12.25ರ ಸುಮಾರಿಗೆ ಹುಣಸಗಿ-ಕೊಡೇಕಲ್ ರಸ್ತೆಯಲ್ಲಿ ನಿರ್ಮಿಸಿದ್ದ ಹೆಲಿಪ್ಯಾಡ್‌ಗೆ ಆಗಮಿಸಿದ ಸಿಎಂ, ವಿವಿಧ ಸಂಘ, ಸಂಸ್ಥೆಗಳು ಸಲ್ಲಿಸಿದ ಅಹವಾಲು ಸ್ವೀಕರಿಸಿದರು. ಅಲ್ಲಿಂದ ಹುಣಸಗಿಯ ಜನತಾ ಕಾಲೋನಿಯ ದಲಿತ ಮುಖಂಡ ಪರಮಣ್ಣ ಕಟ್ಟಿಮನಿ ಅವರ ಮನೆಗೆ ಆಗಮಿಸಿ, ಉಪಾಹಾರ ಸೇವಿಸಿದರು. ಮುತ್ತೈದೆಯರು ಆರತಿ ಬೆಳಗಿ, ತಿಲಕವಿಟ್ಟು ಅವರನ್ನು ಸ್ವಾಗತಿಸಿದರು. ಈ ವೇಳೆ, ಬೊಮ್ಮಾಯಿ ಹಾಗೂ ಸಚಿವರಿಗೆ ಹುಣಸಗಿ ಪಟ್ಟಣದ ಜನತಾ ಕಾಲೋನಿಯ ಪರಿಶಿಷ್ಟಜಾತಿಯ ಮಾದಿಗ ಸಮುದಾಯದ ಪರವಾಗಿ ಶಾಲು ಹೊದಿಸಿ ಸನ್ಮಾನಿಸಲಾಯಿತು. ನಂತರ, ಹುಣಸಗಿಯ ಯುಕೆಪಿ ಕ್ಯಾಂಪ್‌ನಲ್ಲಿ ಹಾಕಿದ್ದ ಬೃಹತ್ ವೇದಿಕೆಯಲ್ಲಿ ಬಹಿರಂಗ ಸಮಾವೇಶ ಉದ್ದೇಶಿಸಿ ಅವರು ಮಾತನಾಡಿದರು.
undefined
Jana Sankalpa Yatra: ಕಾರಂಜಾದಿಂದ ಔರಾದ್‌ಗೆ ಕುಡಿವ ನೀರು: ಸಿಎಂ ಬೊಮ್ಮಾಯಿ
ಮಳೆಯಿಂದಾಗಿ ಕಾರ್ಯಕ್ರಮ ಮೊಟಕು:
ಬಳಿಕ, ಸಂಜೆ 4ರ ಸುಮಾರಿಗೆ ಮಹಾಗಾಂವ್‌ಗೆ ಆಗಮಿಸಿದ ಸಿಎಂ, ಕಾರ್ಯಕ್ರಮದ ವೇದಿಕೆ ಹತ್ತುತ್ತಿದ್ದಂತೆಯೇ ಜೋರಾಗಿ ಮಳೆ ಸುರಿಯಲು ಆರಂಭವಾಯಿತು. ಹೀಗಾಗಿ, ಉದ್ಘಾಟನೆ, ಹಾರ ತುರಾಯಿ, ಸ್ವಾಗತ ಕಾರ್ಯಕ್ರಮಗಳನ್ನು ಮೊಟಕುಗೊಳಿಸಿ ಜನರನ್ನುದ್ದೇಶಿಸಿ ಸುರಿವ ಮಳೆಯಲ್ಲೇ 10 ನಿಮಿಷ ಭಾಷಣ ಮಾಡಿದರು. ಈ ವೇಳೆ, ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು ಅವರು ಸಿಎಂಗೆ ಲಕ್ಷ್ಮೀ ವಿಗ್ರಹ ನೀಡಿ, ಹೂವಿನ ಮಾಲೆ ಹಾಕಿ, ಅವರ ಕಾಲಿಗೆರಗಿ ಶಿರ ಸಾಷ್ಟಾಂಗ ನಮಸ್ಕಾರ ಮಾಡಿದರು.
ಸಂಸದ ಅಮರೇಶ್ವರ ನಾಯಕ್, ಸಚಿವರಾದ ಬಿ. ಶ್ರೀರಾಮುಲು, ಗೋವಿಂದ್ ಕಾರಜೋಳ, ಭೈರತಿ ಬಸವರಾಜ್, ಮುರುಗೇಶ ನಿರಾಣಿ, ಸುರಪುರ ಶಾಸಕ ಹಾಗೂ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ನರಸಿಂಹ ನಾಯಕ್ (ರಾಜೂಗೌಡ) ಹಾಗೂ ಇತರ ಮುಖಂಡರು ಹಾಜರಿದ್ದರು.