ಪ್ರಧಾನಿ ನರೇಂದ್ರ ಮೋದಿ ಬಗ್ಗೆ ವಿದೇಶಿಗರು ಮೆಚ್ಚುಗೆ ಮಾತುಗಳನ್ನಾಡುತ್ತಿದ್ದರೆ, ನಮ್ಮ ದೇಶದವರೇ ವಿದೇಶಕ್ಕೆ ಹೋಗಿ ದೇಶದ ಪ್ರಜಾಪ್ರಭುತ್ವ ಆಪತ್ತಿನಲ್ಲಿದೆಯೆಂದು ದೇಶದ ಮಾನ ಕಳೆದು, ದೇಶದ್ರೋಹದ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದೆ.
ದಾವಣಗೆರೆ (ಮಾ.26): ಪ್ರಧಾನಿ ನರೇಂದ್ರ ಮೋದಿ ಬಗ್ಗೆ ವಿದೇಶಿಗರು ಮೆಚ್ಚುಗೆ ಮಾತುಗಳನ್ನಾಡುತ್ತಿದ್ದರೆ, ನಮ್ಮ ದೇಶದವರೇ ವಿದೇಶಕ್ಕೆ ಹೋಗಿ ದೇಶದ ಪ್ರಜಾಪ್ರಭುತ್ವ ಆಪತ್ತಿನಲ್ಲಿದೆಯೆಂದು ದೇಶದ ಮಾನ ಕಳೆದು, ದೇಶದ್ರೋಹದ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದೆ. ಇಂತಹವರ ನಾಯಕತ್ವ ನಮಗೆ ಬೇಕಾ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಐಸಿಸಿ ಮುಖಂಡ ರಾಹುಲ್ ಗಾಂಧಿ ಸೇರಿ ವಿಪಕ್ಷದವರ ವಿರುದ್ಧ ವಾಗ್ಧಾಳಿ ನಡೆಸಿದರು. ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಮಹಾ ಸಂಗಮದಲ್ಲಿ ಮಾತನಾಡಿ, ಜಗತ್ತಿನ ಬಹುತೇಕ ದೇಶಗಳು ಆರ್ಥಿಕ ಸಂಕಷ್ಟದಲ್ಲಿದ್ದರೂ, ಮುಂದಿನ 25 ವರ್ಷಗಳ ಕಾಲ ನಮಗೆ ಯಾವುದೇ ಕಷ್ಟಇಲ್ಲ ಎಂಬುದನ್ನು ನರೇಂದ್ರ ಮೋದಿ ಸಾಧಿಸಿ, ತೋರಿಸಿದ್ದಾರೆ ಎಂದರು.
ಕರ್ನಾಟಕದ ಬಗ್ಗೆ ಮೋದಿಯವರಿಗೆ ವಿಶೇಷ ಪ್ರೀತಿ ಇದೆ. ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಮಹಾ ಸಂಗಮ ಸಮಾವೇಶವು ದಿಗ್ವಿಜಯದ ಸಂಕೇತವಾಗಿದೆ. ಈ ಮಹಾ ಸಂಗಮವು ಭವಿಷ್ಯದ ವಿಜಯದ ಸಂಕೇತವನ್ನು ತೋರಿಸುತ್ತಿದೆ. ಬಿಜೆಪಿ ಸುನಾಮಿಯೇ ಇಲ್ಲಿ ಎದ್ದಿದೆ. ಹಿಂದಿನ ಯುಪಿಎ ಸರ್ಕಾರಕ್ಕಿಂತ 5 ಪಟ್ಟು ಹೆಚ್ಚು ಹಣವನ್ನು ಎಲ್ಲಾ ಕ್ಷೇತ್ರಗಳಿಗೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ನೀಡಿದೆ. ರೈಲ್ವೇ, ನೀರಾವರಿ, ಭದ್ರಾ ಮೇಲ್ದಂಡೆಯಂತಹ ಯೋಜನೆಗಳಿಗೆ ಹಿಂದಿನ ಯಾವೊಂದು ಸರ್ಕಾರ ಸಹಕಾರ ನೀಡಲಿಲ್ಲ. ಆದರೆ, ಮೋದಿ ರಾಜ್ಯದ ಎಲ್ಲಾ ಯೋಜನೆಗಳಿಗೆ ಹಣ ನೀಡಿದ್ದಾರೆ ಎಂದು ಹೇಳಿದರು.
ಪ್ರಧಾನಿ ಮೋದಿ ವೋಟಿಗೋಸ್ಕರ ಪದೇ ಪದೇ ರಾಜ್ಯಕ್ಕೆ ಬರುತ್ತಿದ್ದಾರೆ: ಸಿದ್ದರಾಮಯ್ಯ
ದೇಶದ 130 ಕೋಟಿ ಜನರ ಮನೆ ಮನೆಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗಿದೆ. 12 ಕೋಟಿ ಮನೆಗಳಿಗೆ ಈಗಾಗಲೇ ನೀಡಲಾಗಿದೆ. ರಾಜ್ಯದಲ್ಲಿ 72 ವರ್ಷ ಕೇವಲ 28 ಲಕ್ಷ ಜನರ ಮನೆಗೆ ಮಾತ್ರ ನಳ ಸಂಪರ್ಕ ಇತ್ತು. ಕೇವಲ 3 ವರ್ಷದ ಲ್ಲಿ 40 ಲಕ್ಷ ಮನೆಗಳಿಗೆ ನೀರು ಪೂರೈಸಿದ್ದೇವೆ. ಇದು ಭಗೀರಥ ಪ್ರಯತ್ನ, ಜಲಕ್ರಾಂತಿಯನ್ನು ರಾಜ್ಯದಲ್ಲಿ ಮಾಡಲಾಗಿದೆ. 17 ಲಕ್ಷ ಮನೆಗಳನ್ನು ಪಿಎಂಎವೈ ಯೋಜನೆಯಡಿ ನೀಡಲಾಗಿದೆ. ಯಾವುದೇ ಯೋಜನೆಗೆ ಮಧ್ಯವರ್ತಿಗಳು ಇಲ್ಲದೇ, ನೇರ ವಾಗಿ ಫಲಾನುಭವಿಗಳ ಖಾತೆಗೆ ಹಣ ಪಾವತಿಸಲಾಗಿದೆ ಎಂದು ತಿಳಿಸಿದರು.
ಸಾಮಾಜಿಕ ನ್ಯಾಯ ಕೊಟ್ಟ ಬಿಜೆಪಿ: ಬಿಜೆಪಿ ಸರ್ಕಾರ ಪರಿಶಿಷ್ಟಜಾತಿಯವರಿಗೆ ಮೀಸಲಾತಿ ಹೆಚ್ಚಿಸಿರುವುದು ರಾಜ್ಯದ ಇತಿಹಾಸದಲ್ಲೇ ಐತಿಹಾಸಿಕ ಕ್ರಮ ಎಂದು ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ಕುಮಾರ ಕಟೀಲು ತಿಳಿಸಿದರು. ನಗರದ ಜಿಎಂಐಟಿ ಕಾಲೇಜು ಪಕ್ಕ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಮಹಾ ಸಂಗಮದಲ್ಲಿ ಮಾತನಾಡಿ, 8 ವರ್ಷಗಳ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಡಬಲ್ ಇಂಜಿನ್ ಸರ್ಕಾರಗಳು ಹಲವಾರು ಸಾಧನೆ, ಅಭಿವೃದ್ಧಿ ಸಾಧನೆ ಮುಂದಿಟ್ಟು, ನಂದಘಡ, ಬಸವ ಕಲ್ಯಾಣ, ದೇವನಹಳ್ಳಿ, ಮಲೆಮಹದೇಶ್ವರ ಹೀಗೆ ನಾಲ್ಕು ಕಡೆಯಿಂದ ಆರಂಭಿಸಿದ್ದ ವಿಜಯ ಸಂಕಲ್ಪ ಯಾತ್ರೆ ಮಹಾ ಸಂಗಮ ಇಲ್ಲಿ ಆಗಿದೆ ಎಂದರು.
ಇಡೀ ರಾಜ್ಯದ 224 ಕ್ಷೇತ್ರಗಳಲ್ಲಿ ವಿಜಯ ಸಂಕಲ್ಪ ಯಾತ್ರೆ ಪ್ರವಾಸ ಮಾಡಿ ಇಲ್ಲಿ ಸಂಗಮವಾಗಿವೆ. ಹಳ್ಳಿ ಹಳ್ಳಿಗಳನ್ನು ಸಂಪರ್ಕಿಸಿದ ಯಾತ್ರೆಗೆ ರಾಜ್ಯದ ಮೂಲೆ ಮೂಲೆಗಳಲ್ಲೂ ಬೆಂಬಲ ವ್ಯಕ್ತವಾಗಿದೆ. ದಾವಣಗೆರೆಯನ್ನು ಸ್ಮಾರ್ಟ್ ಸಿಟಿ ಮಾಡುವಲ್ಲಿ ಪ್ರಧಾನಿ ಮೋದಿ ಕೊಡುಗೆ ಇದೆ. ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆಯಾಗಿದ್ದು, 3500 ಕೋಟಿ ಮೀಸಲಿಟ್ಟು ಸ್ಪಂದಿಸಿದ್ದಾರೆ ಎಂದು ಹೇಳಿದರು.
ನನ್ನನ್ನು ಕಟ್ಟಿಹಾಕಲು ಯಾರಿಂದಲೂ ಆಗುವುದಿಲ್ಲ: ಎಚ್.ಡಿ.ಕುಮಾರಸ್ವಾಮಿ
ನವ ಕರ್ನಾಟಕ ನಿರ್ಮಾಣದ ಜೊತೆ ನವ ಭಾರತ ನಿರ್ಮಾಣ ಸಾಧ್ಯ. ಕೇವಲ ವಿಧಾನಸಭೆ ಚುನಾವಣೆ ಮಾತ್ರವಲ್ಲ 2024ರ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿಯನ್ನು ಬೆಂಬಲಿಸಿ, ರಾಜ್ಯ, ದೇಶದ ಅಭಿವೃದ್ಧಿಗೆ ನಾಡಿನ ಜನತೆ ಸಹಕಾರ ನೀಡಬೇಕು. ಅಲ್ಲದೇ, ರಾಜ್ಯ ಚುನಾವಣೆಯು ಮುಂಬರುವ ಲೋಕಸಭೆ ಚುನಾವಣೆಗೂ ದಿಕ್ಸೂಚಿ ಆಗಲಿದೆ.
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ