ಹಾವೇರಿ: ಜಿಲ್ಲೆಯ 5 ಕ್ಷೇತ್ರಗಳಿಗೆ ಕಾಂಗ್ರೆಸ್‌ ಅಭ್ಯರ್ಥಿಗಳು ಫೈನಲ್‌: ಶಿಗ್ಗಾಂವಿಗೆ ಯಾರು?

By Kannadaprabha News  |  First Published Mar 26, 2023, 1:32 PM IST

ಶಿಗ್ಗಾಂವಿ ಹೊರತುಪಡಿಸಿ ಜಿಲ್ಲೆಯ 5 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಕಾಂಗ್ರೆಸ್‌ ಹೈಕಮಾಂಡ್‌ ಪಟ್ಟಿಬಿಡುಗಡೆ ಮಾಡಿದೆ. ಹಾವೇರಿ, ಬ್ಯಾಡಗಿ ಮತ್ತು ಹಾನಗಲ್ಲನಲ್ಲಿ ನಿರೀಕ್ಷೆಯಂತೆ ಹಳಬರಿಗೆ ಅವಕಾಶ ನೀಡಿದ್ದರೆ, ಇತ್ತೀಚೆಗೆ ಪಕ್ಷ ಸೇರಿದ್ದ ಯು.ಬಿ. ಬಣಕಾರಗೆ ಹಿರೇಕೆರೂರು, ರಾಣಿಬೆನ್ನೂರಿನಲ್ಲಿ ಕೆ.ಬಿ. ಕೋಳಿವಾಡರ ಪುತ್ರ ಪ್ರಕಾಶ ಕೋಳಿವಾಡಗೆ ಟಿಕೆಟ್‌ ನೀಡಿದೆ.


ನಾರಾಯಣ ಹೆಗಡೆ

ಹಾವೇರಿ (ಮಾ.26) : ಶಿಗ್ಗಾಂವಿ ಹೊರತುಪಡಿಸಿ ಜಿಲ್ಲೆಯ 5 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಕಾಂಗ್ರೆಸ್‌ ಹೈಕಮಾಂಡ್‌ ಪಟ್ಟಿಬಿಡುಗಡೆ ಮಾಡಿದೆ. ಹಾವೇರಿ, ಬ್ಯಾಡಗಿ ಮತ್ತು ಹಾನಗಲ್ಲನಲ್ಲಿ ನಿರೀಕ್ಷೆಯಂತೆ ಹಳಬರಿಗೆ ಅವಕಾಶ ನೀಡಿದ್ದರೆ, ಇತ್ತೀಚೆಗೆ ಪಕ್ಷ ಸೇರಿದ್ದ ಯು.ಬಿ. ಬಣಕಾರಗೆ ಹಿರೇಕೆರೂರು, ರಾಣಿಬೆನ್ನೂರಿನಲ್ಲಿ ಕೆ.ಬಿ. ಕೋಳಿವಾಡರ ಪುತ್ರ ಪ್ರಕಾಶ ಕೋಳಿವಾಡಗೆ ಟಿಕೆಟ್‌ ನೀಡಿದೆ.

Tap to resize

Latest Videos

undefined

ನಿರೀಕ್ಷೆಯಂತೆಯೇ ಹಾವೇರಿ ಎಸ್ಸಿ ಮೀಸಲು ಕ್ಷೇತ್ರಕ್ಕೆ ಮಾಜಿ ಸಚಿವ ರುದ್ರಪ್ಪ ಲಮಾಣಿ(Rudrappa lamani)ಗೆ ಟಿಕೆಟ್‌ ನೀಡಿದೆ. ಬ್ಯಾಡಗಿ ಕ್ಷೇತ್ರಕ್ಕೆ ಮಾಜಿ ಸಚಿವ ಬಸವರಾಜ ಶಿವಣ್ಣನವರ, ರಾಣಿಬೆನ್ನೂರು ಕ್ಷೇತ್ರಕ್ಕೆ ಪ್ರಕಾಶ ಕೋಳಿವಾಡ, ಹಿರೇಕೆರೂರ ಕ್ಷೇತ್ರಕ್ಕೆ ಮಾಜಿ ಶಾಸಕ ಯು.ಬಿ. ಬಣಕಾರ, ಹಾನಗಲ್ಲ ಕ್ಷೇತ್ರಕ್ಕೆ ಶಾಸಕ ಶ್ರೀನಿವಾಸ ಮಾನೆ ಹೆಸರನ್ನು ಘೋಷಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿನಿಧಿಸುವ ಶಿಗ್ಗಾಂವಿ ಕ್ಷೇತ್ರಕ್ಕೆ ಟಿಕೆಟ್‌ ಘೋಷಣೆ ಮಾಡಿಲ್ಲ.

ಕೃಷಿ ಕಾಯ್ದೆ ಹಿಂಪಡೆಯದಿದ್ದರೆ ರೈತರ ಮತ ಬಿಜೆಪಿಗಿಲ್ಲ: ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಕೆ

ಹಳಬರಿಗೆ ಅವಕಾಶ:

ಈ ಸಲ ಆಕಾಂಕ್ಷಿಗಳಿಂದ ಅರ್ಜಿ ಸ್ವೀಕರಿಸಿದ್ದ ಪ್ರದೇಶ ಕಾಂಗ್ರೆಸ್‌ ಸಮಿತಿ ಚುನಾವಣೆ ಘೋಷಣೆಗೂ ಮುನ್ನವೇ ಅಭ್ಯರ್ಥಿಗಳ ಮೊದಲ ಪಟ್ಟಿಬಿಡುಗಡೆ ಮಾಡಿದೆ. ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲೂ ಆಕಾಂಕ್ಷಿಗಳ ಪಟ್ಟಿದೊಡ್ಡದೇ ಇತ್ತು. ಟಿಕೆಟ್‌ ಘೋಷಣೆಯಾಗಿರುವ 5 ಕ್ಷೇತ್ರಗಳಲ್ಲಿ ಕೈ ಟಿಕೆಟ್‌ಗಾಗಿ ಅನೇಕರು ಪೈಪೋಟಿ ನಡೆಸಿದ್ದರು. ಹಾವೇರಿಯಲ್ಲಿ ರುದ್ರಪ್ಪ ಲಮಾಣಿ ಅವರಿಗೆ ಟಿಕೆಟ್‌ ತಪ್ಪಿಸಲು ಪ್ರಯತ್ನ ನಡೆದರೂ ಅಂತಿಮವಾಗಿ ಕೈ ಹೈಕಮಾಂಡ್‌ ಅವರ ಹೆಸರನ್ನೇ ಅಂತಿಮಗೊಳಿಸಿದೆ. ಬ್ಯಾಡಗಿ ಕ್ಷೇತ್ರದಲ್ಲಿ ಕಳೆದ ಬಾರಿ ಟಿಕೆಟ್‌ ವಂಚಿತರಾಗಿದ್ದ ಬಸವರಾಜ ಶಿವಣ್ಣನವರಗೆ ಈ ಸಲ ಮತ್ತೆ ಲಕ್‌ ತಿರುಗಿದೆ. ಶಿವಣ್ಣನವರ ಮತ್ತು ಎಸ್‌.ಆರ್‌. ಪಾಟೀಲ ನಡುವೆ ಟಿಕೆಟ್‌ಗಾಗಿ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಕಳೆದ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಎಸ್‌.ಆರ್‌. ಪಾಟೀಲರನ್ನು ಕೈಬಿಟ್ಟು ಶಿವಣ್ಣನವರಿಗೆ ಅವಕಾಶ ನೀಡಲಾಗಿದೆ. ಇನ್ನು ಹಾನಗಲ್ಲನಲ್ಲಿ ನಿರೀಕ್ಷೆಯಂತೆ ಹಾಲಿ ಶಾಸಕ ಶ್ರೀನಿವಾಸ ಮಾನೆಗೆ ಅವಕಾಶ ನೀಡಲಾಗಿದೆ. ಕಳೆದ ಉಪಚುನಾವಣೆಯಲ್ಲಿ ಇಡೀ ಸರ್ಕಾರವೇ ಬಂದರೂ ಗೆದ್ದು ಬೀಗಿದ್ದ ಮಾನೆಗೆ ಸಹಜವಾಗಿಯೇ ಮೊದಲ ಪಟ್ಟಿಯಲ್ಲೇ ಟಿಕೆಟ್‌ ಘೋಷಿಸಲಾಗಿದೆ.

ಹೊಸಬರಿಗೂ ಮಣೆ:

ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿರುವ ಯು.ಬಿ. ಬಣಕಾರಗೆ ಹಿರೇಕೆರೂರ ಕ್ಷೇತ್ರದ ಟಿಕೆಟ್‌ ಸಿಕ್ಕಿದೆ. ಅಲ್ಲಿ ಮಾಜಿ ಶಾಸಕ ಬಿ.ಎಚ್‌. ಬನ್ನಿಕೋಡ ಕೂಡ ಆಕಾಂಕ್ಷಿಯಾಗಿದ್ದರೂ ಪಕ್ಷಕ್ಕೆ ಹೊಸಬರಾಗಿರುವ ಬಣಕಾರಗೆ ಕಾಂಗ್ರೆಸ್‌ ಮಣೆ ಹಾಕಿದೆ. ರಾಣಿಬೆನ್ನೂರು ಕ್ಷೇತ್ರದಲ್ಲಿ ಕೈ ಟಿಕೆಟ್‌ ಪಡೆದುಕೊಳ್ಳುವಲ್ಲಿ ಪ್ರಕಾಶ ಕೋಳಿವಾಡ ಯಶಸ್ವಿಯಾಗಿದ್ದಾರೆ. ಮಾಜಿ ಸ್ವೀಕರ್‌ ಕೆ.ಬಿ. ಕೋಳಿವಾಡ ಅವರು ನಾಲ್ಕು ದಶಕಗಳಿಂದ ಪ್ರತಿನಿಧಿಸುತ್ತಿದ್ದ ಕ್ಷೇತ್ರ ಈಗ ಅವರ ಪುತ್ರನಿಗೆ ಕಾಂಗ್ರೆಸ್‌ ಹಸ್ತಾಂತರಿಸಿದೆ.

ಒಳಗೊಳಗೆ ಕೊತಕೊತ:

ಅಳೆದುತೂಗಿ ಟಿಕೆಟ್‌ ಪ್ರಕಟಿಸಿರುವ ಹೈಕಮಾಂಡ್‌ ಅಸಮಾಧಾನ ಸ್ಫೋಟಗೊಳ್ಳದಂತೆ ಎಚ್ಚರಿಕೆ ವಹಿಸಿದೆ. ಆದರೆ, ಟಿಕೆಟ್‌ ವಂಚಿತ ಅನೇಕರು ಒಳಗೊಳಗೇ ಅಸಮಾಧಾನಗೊಂಡಿದ್ದಾರೆ. ಅರ್ಜಿ ಕರೆದು ಹಣ ತುಂಬಿಸಿಕೊಂಡು ಮತ್ತೆ ಹಳಬರಿಗೇ ಟಿಕೆಟ್‌ ನೀಡುವುದಾದರೆ ಅರ್ಜಿ ಯಾಕೆ ಪಡೆಯಬೇಕಿತ್ತು ಎಂದು ಪ್ರಶ್ನಿಸುತ್ತಿದ್ದಾರೆ. ಈ ಅಸಮಾಧಾನ ತಣಿಸುವ ಕಾರ್ಯವನ್ನು ಕೈ ನಾಯಕರು ಹೇಗೆ ನಿಭಾಯಿಸುತ್ತಾರೆ ಎಂಬುದರ ಮೇಲೆ ಯಶಸ್ಸು ಅಡಗಿದೆ. ಆಕಾಂಕ್ಷಿಗಳೆಲ್ಲರೂ ಅಧಿಕೃತ ಅಭ್ಯರ್ಥಿ ಪರವಾಗಿ ಕೆಲಸ ಮಾಡುವಂತೆ ಮನವೊಲಿಸುವ ಪ್ರಯತ್ನ ಮುಂದಿನ ದಿನಗಳಲ್ಲಿ ಆಗಲಿದೆ. ಸದ್ಯಕ್ಕೆ ಎಲ್ಲಿಯೂ ಬಹಿರಂಗವಾಗಿ ಅಸಮಾಧಾನ ಹೊರಹಾಕದ ಟಿಕೆಟ್‌ ವಂಚಿತರು, ಮುಂದಿನ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಅದರಲ್ಲೂ ಬ್ಯಾಡಗಿ ಮತ್ತು ಹಾನಗಲ್ಲನಲ್ಲಿ ಅತೃಪ್ತಿ ಜೋರಾಗಿ ಹೊಗೆಯಾಡುತ್ತಿದೆ.

ಮುಂದಿನ ನಡೆ ಬಗ್ಗೆ ಕುತೂಹಲ:

ಬ್ಯಾಡಗಿ ಕ್ಷೇತ್ರ(Byadagi assembly constituency)ದಿಂದ ಟಿಕೆಟ್‌ ತಪ್ಪಿದ್ದಕ್ಕೆ ಎಸ್‌.ಆರ್‌. ಪಾಟೀಲ(SR Patil), ಹಾನಗಲ್ಲ ಕ್ಷೇತ್ರದಲ್ಲಿ ಮನೋಹರ ತಹಶೀಲ್ದಾರ ಬೆಂಬಲಿಗರು ಅಸಮಾಧಾನಗೊಂಡಿದ್ದಾರೆ. ಈ ಎರಡು ಕ್ಷೇತ್ರಗಳಲ್ಲಿ ಭಿನ್ನರನ್ನು ಹೇಗೆ ಸಮಾಧಾನಪಡಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

2018ರ ಚುನಾವಣೆಯಲ್ಲಿ ಸೋತರೂ ಸಹ ಕೋವಿಡ್‌ನಂತಹ ಕಷ್ಟಪರಿಸ್ಥಿತಿಯಲ್ಲಿ ಕ್ಷೇತ್ರದ ಜನತೆಯೊಂದಿಗೆ ಇದ್ದು ಪರಿಸ್ಥಿತಿ ತಿಳಿಗೊಳಿಸಲುವ ಕೆಲಸ ಮಾಡಿದ್ದೇನೆ. 45 ವರ್ಷ ದುಡಿದು ಕಾಂಗ್ರೆಸ್‌ ಪಕ್ಷವನ್ನು ಕ್ಷೇತ್ರದಲ್ಲಿ ಉಳಿಸಿ ಬೆಳೆಸಿದ ಸ್ಥಳೀಯನಾದ ನನಗೆ ಪಕ್ಷದ ವರಿಷ್ಠರಿಂದ ಟಿಕೆಟ್‌ ಹಂಚಿಕೆಯಲ್ಲಿ ಅನ್ಯಾಯವಾಗಿದೆ. ಕ್ಷೇತ್ರದ ಜನರು, ಮುಖಂಡರು ಹಾಗೂ ಹಿತೈಷಿಗಳ ಅಭಿಪ್ರಾಯ ಪಡೆದು ನನ್ನ ಮುಂದಿನ ರಾಜಕೀಯ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಮನೋಹರ ತಹಶೀಲ್ದಾರ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. ಹಾನಗಲ್ಲ ಕ್ಷೇತ್ರದಲ್ಲಿ ಸ್ವಾಭಿಮಾನಿ ಬಣ ಎಂಬ ಪ್ರತ್ಯೇಕ ಗುಂಪು ಮಾಡಿಕೊಂಡು ಸ್ಥಳೀಯರಿಗೇ ಟಿಕೆಟ್‌ ನೀಡುವಂತೆ ಒತ್ತಾಯ ಮಾಡುತ್ತಿದ್ದ ಮನೋಹರ ತಹಶೀಲ್ದಾರ್‌ ಮುಂದಿನ ನಡೆ ಏನು ಎಂಬುದನ್ನು ಕಾದು ನೋಡಬೇಕಿದೆ.

ಶಿಗ್ಗಾಂವಿ: ಕೈಗೆ ಖಾದ್ರಿ ಕಗ್ಗಂಟು : ಸಿಎಂ ಬೊಮ್ಮಾಯಿ ಕಟ್ಟಿಹಾಕಲು ಕಾಂಗ್ರೆಸ್‌ ನಡೆಸುತ್ತಿರುವ ತಂತ್ರಕ್ಕೆ ಬಗ್ಗದ ಅಜ್ಜಂಪೀರ

ಕಾಂಗ್ರೆಸ್‌ ಪಕ್ಷ ಈ ಸಲ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿರುವುದರಿಂದ ಆಕಾಂಕ್ಷಿಗಳು ಹೆಚ್ಚಿದ್ದರು. ಟಿಕೆಟ್‌ ಘೋಷಣೆಯಿಂದ ಆರಂಭದಲ್ಲಿ ಅಸಮಾಧಾನ ಆಗುವುದು ಸಹಜ. ಆದರೆ, ಇದನ್ನು ಪಕ್ಷದ ನಾಯಕರು ಸರಿಪಡಿಸಲಿದ್ದಾರೆ. ಎಲ್ಲರೂ ಒಂದಾಗಿ ಚುನಾವಣೆ ಎದುರಿಸುತ್ತೇವೆ.

ಎಂ.ಎಂ. ಹಿರೇಮಠ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ

ಪಕ್ಷದ ನಾಯಕರು ನನ್ನ ಮೇಲೆ ವಿಶ್ವಾಸವಿಟ್ಟು ಟಿಕೆಟ್‌ ನೀಡಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಉತ್ತಮ ವಾತಾವರಣವಿದೆ. ಸಣ್ಣಪುಟ್ಟಅಸಮಾಧಾನವಿದ್ದರೂ ವಿಶ್ವಾಸಕ್ಕೆ ತೆಗೆದುಕೊಂಡು ಒಂದಾಗಿ ಚುನಾವಣೆ ಮಾಡುತ್ತೇವೆ. ಈ ಸಲ ಕ್ಷೇತ್ರದ ಮತದಾರರು ನನ್ನನ್ನು ಬೆಂಬಲಿಸುವ ವಿಶ್ವಾಸವಿದೆ.

ರುದ್ರಪ್ಪ ಲಮಾಣಿ ಹಾವೇರಿ ಕ್ಷೇತ್ರದ ಅಭ್ಯರ್ಥಿ

click me!