ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ-ವನ್ಯಜೀವಿ ಸಂಘರ್ಷ ತಡೆಯಲು ವನ್ಯಪ್ರಾಣಿಗಳು ನಾಡಿಗೆ ಬರದಂತೆ ವೈಜ್ಞಾನಿಕ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಹಾಗೂ ಅರಣ್ಯ ಒತ್ತುವರಿ ತೆರವು ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬೆಂಗಳೂರು (ಸೆ.06): ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ-ವನ್ಯಜೀವಿ ಸಂಘರ್ಷ ತಡೆಯಲು ವನ್ಯಪ್ರಾಣಿಗಳು ನಾಡಿಗೆ ಬರದಂತೆ ವೈಜ್ಞಾನಿಕ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಹಾಗೂ ಅರಣ್ಯ ಒತ್ತುವರಿ ತೆರವು ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮಂಗಳವಾರ ಗೃಹ ಕಚೇರಿಯಲ್ಲಿ ವನ್ಯಜೀವಿ-ಮಾನವ ಸಂಘರ್ಷ ತಡೆಯುವ ಸಂಬಂಧ ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ ಹಾಗೂ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಭಾರೀ ಪ್ರಮಾಣದಲ್ಲಿ ಅರಣ್ಯ ಭೂಮಿ ಒತ್ತುವರಿಯಾಗಿರುವ ಪ್ರಕರಣಗಳನ್ನು ಪತ್ತೆ ಹಚ್ಚಿ ತೆರವುಗೊಳಿಸಲು ಸೂಚಿಸಿದರು.
ರಾಜ್ಯದಲ್ಲಿ ಕಳೆದ 15 ದಿನಗಳ ಅವಧಿಯಲ್ಲಿ 11 ಜನರು ಆನೆ ದಾಳಿಗೆ ಬಲಿಯಾಗಿದ್ದಾರೆ. ಅದೇ ರೀತಿ ಸೋಮವಾರ ನಾಗರಹೊಳೆ ಅರಣ್ಯ ಪ್ರದೇಶದ ಹೆಗ್ಗಡದೇವನಕೋಟೆ ತಾಲ್ಲೂಕಿನ ಗ್ರಾಮದಲ್ಲಿ ಕೃಷ್ಣನಾಯಕ್ ಎಂಬ ಬಾಲಕನನ್ನು ಹುಲಿ ಹೊತ್ತೊಯ್ದಿರುವ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು. ಹಾಸನದಲ್ಲಿ ಆನೆಗಳ ಅರಿವಳಿಕೆ ತಜ್ಞ ವೆಂಕಟೇಶ್ ಅವರು ಆನೆ ತುಳಿತದಿಂದ ಸಾವಿಗೀಡಾಗಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಗಾಯಾಳು ಆನೆಗೆ ಚಿಕಿತ್ಸೆ ನೀಡುವಾಗ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿತ್ತೇ ಎಂದು ಖಾರವಾಗಿ ಪ್ರಶ್ನಿಸಿ, ಈ ಬಗ್ಗೆ ಹಾಸನ ಡಿಎಫ್‌ಒ ಅವರಿಗೆ ಕಾರಣ ಕೇಳಿ ನೊಟೀಸ್ ನೀಡುವಂತೆ ನಿರ್ದೇಶನ ನೀಡಿದರು.
ಸಿದ್ದರಾಮಯ್ಯಗೆ ಬಡವರ ಮಕ್ಕಳು ಉದ್ಧಾರವಾಗಬಾರದು: ಪ್ರತಾಪ್ ಸಿಂಹ ವಾಗ್ದಾಳಿ
ಸಚಿವ ಈಶ್ವರ ಖಂಡ್ರೆ ಮಾತನಾಡಿ, ಆನೆಗಳು ಜನವಸತಿ ಪ್ರದೇಶಗಳ ಕಡೆಗೆ ಬರುವುದನ್ನು ತಡೆಯಲು ರೈಲ್ವೆ ಹಳಿಯ ತಡೆಗೋಡೆ ನಿರ್ಮಿಸಲು ಈ ವರ್ಷ 100 ಕೋಟಿ ರು. ಒದಗಿಸಲಾಗಿದೆ. ಈ ಪೈಕಿ 54 ಕೋಟಿ ರು. ಪಾವತಿಸಬೇಕಾಗಿದೆ. ಉಳಿದ ಮೊತ್ತದಲ್ಲಿ ಕೇವಲ 50 ಕಿ.ಮೀ. ತಡೆಗೋಡೆ ಮಾತ್ರ ನಿರ್ಮಿಸಲು ಸಾಧ್ಯ. ಇನ್ನಷ್ಟುಹೆಚ್ಚಿನ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿದರು. ಸಚಿವರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಬಾಕಿ ಇರುವ 54 ಕೋಟಿ ರು. ಜತೆಗೆ 100 ಕೋಟಿ ರು. ನೀಡಲಿದ್ದು, (ಒಟ್ಟು 154 ಕೋಟಿ ರು.) ವೆಚ್ಚ ಮಾಡುವಂತೆ ಸೂಚಿಸಿದರು. ಅರಣ್ಯ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಜಾವೇದ್ ಅಖ್ತರ್ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.
ನಮಗೇ ನೀರಿಲ್ಲ, ತಮಿಳುನಾಡಿಗೆ ನೀರು ಬಿಡಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
ಮಾನವ-ವನ್ಯಜೀವಿ ಸಂಘರ್ಷಕ್ಕೆ ಕಳವಳ: 15 ದಿನದಲ್ಲಿ 11 ಜನರು ಆನೆ ದಾಳಿಗೆ ಬಲಿಯಾಗಿದ್ದಾರೆ. ಒಬ್ಬ ಹುಡುಗನನ್ನು ಹುಲಿ ಹೊತ್ತೊಯ್ದಿದೆ. ಇದೆಲ್ಲ ಕಳವಳಕಾರಿ ವಿಚಾರ. ಹೆಚ್ಚುತ್ತಿರುವ ಮಾನವ ಹಾಗೂ ವನ್ಯಜೀವಿ ಸಂಘರ್ಷ ತಡೆಯಲು ವೈಜ್ಞಾನಿಕ ಕ್ರಮ ಕೈಗೊಳ್ಳಬೇಕು. ಅರಣ್ಯ ಒತ್ತುವರಿ ತೆರವುಗೊಳಿಸಬೇಕು.