20 ದಿನದ ಸಭೆಗೂ ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ ಗೈರು ಆಗಿರೋದು ಕಂಡು ಬಂದಿತ್ತು. ಈ ಸಭೆಯಲ್ಲಿ ರಾಜ್ಯ ಬಿಜೆಪಿಯ ಪ್ರಮುಖ ನಾಯಕರು ಉಪಸ್ಥಿತರಿದ್ದರು.
ನವದೆಹಲಿ: ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಉತ್ತರ ಪ್ರದೇಶದ ರಾಜಕೀಯದಲ್ಲಿ ಪ್ರತಿನಿತ್ಯ ಬದಲಾವಣೆಗಳು ಕಂಡು ಬರುತ್ತಿವೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 35 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಕಂಡಿದ್ದರಿಂದ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧವೇ ಬಿಜೆಪಿಯ ಕೆಲ ನಾಯಕರು ಹೇಳಿಕೆ ನೀಡಲು ಶುರು ಮಾಡಿದ್ದರು. ಸಿಎಂ ಯೋಗಿ ಆದಿತ್ಯನಾಥ್ ಜನಪ್ರಿಯತೆ ಕಳೆದುಕೊಂಡಿರುವ ಕಾರಣ ಚುನಾವಣೆಯಲ್ಲಿ ಭದ್ರಕೋಟೆ ಅಂತಿರೋ ಕ್ಷೇತ್ರಗಳನ್ನು ಕಳೆದುಕೊಳ್ಳಬೇಕಾಯ್ತುನ ಎಂಬ ಚರ್ಚೆಗಳು ಬಿಜೆಪಿ ಅಂಗಳದಲ್ಲಿಯೇ ನಡೆದಿದ್ದವು. ಉತ್ತರ ಪ್ರದೇಶದ ಉಪಮುಖ್ಯಮಂತ್ರಿಗಳಾಗಿರುವ ಕೇಶವ್ ಪ್ರಸಾದ್ ಮೌರ್ಯ ಮತ್ತು ಬ್ರಿಜೇಶ್ ಪಠಾಕ್ ಬಹಿರಂಗವಾಗಿಯೇ ಸಿಎಂ ವಿರುದ್ಧ ಹೇಳಿಕೆಗಳನ್ನು ನೀಡುವ ಮೂಲಕ ಪಕ್ಷದೊಳಗೆ ಎಲ್ಲವೂ ಸರಿಯಿಲ್ಲ ಎಂಬ ಸುಳಿವನ್ನು ನೀಡಿದ್ದರು.
ಲೋಕಸಭಾ ಚುನಾವಣೆ ಸೋಲಿನ ಬಳಿಕ ಯೋಗಿ ಆದಿತ್ಯನಾಥ್ ರಾಜಕೀಯ ಸಾಮಾರ್ಥ್ಯದ ಬಗ್ಗೆ ಪ್ರಶ್ನೆಗಳು ಮೂಡಿದ್ದವು. ಉತ್ತರ ಪ್ರದೇಶದ ಬಿಜೆಪಿ ಘಟಕದಲ್ಲಿ ಸಿಎಂ ವಿರುದ್ಧ ಸಣ್ಣದೊಂದು ಅಸಮಾಧಾನದ ಅಲೆಯಿದ್ದರೂ, ಕೇಂದ್ರ ನಾಯಕರು ಯೋಗಿ ಆದಿತ್ಯನಾಥ್ ಪರವಾಗಿ ನಿಂತಿದ್ದಾರೆ. ಕೇಂದ್ರ ನಾಯಕರ ಬೆಂಬಲ ಸಿಎಂ ಯೋಗಿ ಆದಿತ್ಯನಾಥ್ ಅವರ ಆತ್ಮಸ್ಥೈರ್ಯವನ್ನು ಹೆಚ್ಚಳ ಮಾಡಿದೆ ಎನ್ನಲಾಗಿದೆ. ಇದೀಗ ಬಿಜೆಪಿ ಹೈಕಮಾಂಡ್ ಬೆಂಬಲ ನೀಡಿದ ಹಿನ್ನೆಲೆ ಎಲ್ಲಾ ಅಸಮಾಧಾನಗಳು ಸದ್ಯಕ್ಕೆ ದೂರವಾಗಿವೆ ಎಂದು ವರದಿಯಾಗಿದೆ.
ಯೋಗಿ ಆದಿತ್ಯನಾಥ ಬೆಂಬಲಕ್ಕೆ ನಿಂತಿರುವ ಹೈಕಮಾಂಡ್ ಸಿಎಂ ವಿರುದ್ಧ ಬಹಿರಂಗವಾಗಿ ಯಾರೂ ಹೇಳಿಕೆಯನ್ನು ನೀಡಕೂಡದು. ಏನೇ ಸಮಸ್ಯೆಗಳಿದ್ದರೂ ಪಕ್ಷದ ಆಂತರಿಕ ವೇದಿಕೆಯಲ್ಲಿಯೇ ಚರ್ಚೆ ಮಾಡಬೇಕು ಎಂಬ ಸಂದೇಶವನ್ನು ಉತ್ತರ ಪ್ರದೇಶದ ನಾಯಕರಿಗೆ ರವಾನಿಸಲಾಗಿದೆಯಂತೆ. ಅದರಲ್ಲಿಯೂ ವಿಶೇಷವಾಗಿ ಡಿಸಿಎಂಗಳಾದ ಕೇಶವ್ ಪ್ರಸಾದ್ ಮೌರ್ಯ ಮತ್ತು ಬ್ರಿಜೇಶ್ ಪಠಾಕ್ ಅವರಿಗೆ ಈ ಸೂಚನೆ ರವಾನಿಸಲಾಗಿದೆ ಎಂದು ವರದಿಯಾಗಿದೆ.
ದೆಹಲಿಯಲ್ಲಿ ಪರಿಶೀಲನಾ ಸಭೆ
ಲೋಕಸಭಾ ಚುನಾವಣೆ ಫಲಿತಾಂಶದ ಕುರಿತು ಚರ್ಚೆ ನಡೆಸಲು ಬಿಜೆಪಿಯ 13 ಸಿಎಂ ಹಾಗೂ 15 ಡಿಸಿಎಂಗಳನ್ನು ಹೈಕಮಾಂಡ್ ದೆಹಲಿಗೆ ಬರುವಂತೆ ಸೂಚನೆ ನೀಡಿತ್ತು. ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಸಭೆ ನಡೆದಿದ್ದು, ಚುನಾವಣೆ ಸೋಲಿನ ಬಗ್ಗೆ ಎಲ್ಲರೂ ಪ್ರತ್ಯೇಕ ವರದಿಗಳನ್ನು ಹೈಕಮಾಂಡ್‌ಗೆ ಸಲ್ಲಿಕೆ ಮಾಡಿದ್ದಾರೆ. ಈ ಸಭೆಯಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಪರವಾಗಿ ನಿಲ್ಲೋದಾಗಿ ಹೈಕಮಾಂಡ್ ಸ್ಪಷ್ಟಪಡಿಸಿದೆ ಎಂದು ತಿಳಿದು ಬಂದಿದೆ.
ಲೋಕಸಭಾ ಚುನಾವಣೆ ಸೋಲು ಬೆನ್ನಲ್ಲೇ ಉತ್ತರ ಪ್ರದೇಶ ಬಿಜೆಪಿಯಲ್ಲಿ ಬಂಡಾಯ? ಸಿಎಂ ಯೋಗಿ ವಿರುದ್ಧ ಅಸಮಾಧಾನ ಸ್ಫೋಟ!
ಉತ್ತರ ಪ್ರದೇಶದಿಂದ ಎರಡು ವರದಿ ಸಲ್ಲಿಕೆ
ಉತ್ತರ ಪ್ರದೇಶದ ಸೋಲಿನ ಬಗ್ಗೆ ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ ಹಾಗೂ ರಾಜ್ಯಾಧ್ಯಕ್ಷ ಭೂಪೇಂದ್ರ ಸಿಂಗ್ ಚೌಧರಿ ಅವರಿಂದ ಪ್ರತ್ಯೇಕ ವರದಿ ಸಲ್ಲಿಕೆಯಾಗಿತ್ತು. ಮೂಲಗಳ ಪ್ರಕಾರ, ಕೇಶವ್ ಪ್ರಸಾದ್ ಮೌರ್ಯ ತಮ್ಮ ವರದಿಯಲ್ಲಿ ಸಿಎಂ ಯೋಗಿ ಆದಿತ್ಯನಾಥರನ್ನ ದೂರಿದ್ದಾರಂತೆ. ಆದ್ರೆ ಭೂಪೇಂದ್ರ ಸಿಂಗ್, ಲೋಕಸಭೆ ಚುನಾವಣೆಯಲ್ಲಿ ಸೋತರೂ ಯೋಗಿ ಅವರ ಜನಪ್ರಿಯತೆ ಹಾಗೇ ಉಳಿದಿದೆ ಎಂದು ಹೇಳಿದ್ದಾರಂತೆ. ಪರಿಶೀಲನಾ ಸಭೆ ಬಳಿಕ ಸಾರ್ವಜನಿಕವಾಗಿ ಹೇಳಿಕೆ ನೀಡದಂತೆ ಕೇಶವ್ ಪ್ರಸಾದ್ ಮೌರ್ಯ ಮತ್ತು ಬ್ರಜೇಶ್ ಪಾಠಕ್‌ಗೆ ಖಡಕ್ ಎಚ್ಚರಿಕೆ ರವಾನಿಸಿದೆ ಎನ್ನಲಾಗಿದೆ.
ಸಿಎಂ ಕರೆದ ಸಭೆಗೆ ಕೇಶವ್ ಪ್ರಸಾದ್ ಮೌರ್ಯ ಗೈರು
ನೀತಿ ಆಯೋಗದ ಸಭೆಗೆ ತೆರಳುವ ಮುನ್ನ ಸಿಎಂ ಯೋಗಿ ಆದಿತ್ಯನಾಥ್ ಚುನಾವಣೆ ಸೋಲಿನ ಆತ್ಮಾವಲಕೋನ ಸಭೆಯನ್ನು ಕರೆದಿದ್ದರು. 20 ದಿನದ ಸಭೆಗೂ ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ ಗೈರು ಆಗಿರೋದು ಕಂಡು ಬಂದಿತ್ತು. ಈ ಸಭೆಯಲ್ಲಿ ರಾಜ್ಯ ಬಿಜೆಪಿಯ ಪ್ರಮುಖ ನಾಯಕರು ಉಪಸ್ಥಿತರಿದ್ದರು. ಚುನಾವಣೆ ಬಳಿಕ ನಡೆದ ಸಂಪುಟ ಸಭೆಗಳಿಗೂ ಮೌರ್ಯ ಗೈರಾಗುವ ಮೂಲಕ ತಮ್ಮ ಅಸಮಾಧಾನ ಹೊರಹಾಕುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಉತ್ತರ ಪ್ರದೇಶದಲ್ಲಿ ಒಳಗೊಳಗೇ ಏನಾಗುತ್ತಿದೆ?: ಮೋದಿ, ಅಮಿತ್ ಶಾ, ಯೋಗಿ, ಯುಪಿ ಆಟ