Asianet Suvarna News Asianet Suvarna News

ಉತ್ತರ ಪ್ರದೇಶದಲ್ಲಿ ಒಳಗೊಳಗೇ ಏನಾಗುತ್ತಿದೆ?: ಮೋದಿ, ಅಮಿತ್‌ ಶಾ, ಯೋಗಿ, ಯುಪಿ ಆಟ

ಕಾಂಗ್ರೆಸ್ ಇರಲಿ,ಬಿಜೆಪಿ ಇರಲಿ, ಸ್ಥಳೀಯ ಜನಪ್ರಿಯ ನಾಯಕರು ಅಂದರೆ ದಿಲ್ಲಿ ನಾಯಕರಿಗೆ ಆಗುವುದಿಲ್ಲ. ನಿಜಲಿಂಗಪ್ಪ, ಅರಸ್, ವೀರೇಂದ್ರ ಪಾಟೀಲ್‌ರಿಂದ ಹಿಡಿದು ಯಡಿಯೂರಪ್ಪವರೆಗೆ ರಾಜ್ಯದಲ್ಲಿ ಚುನಾವಣೆ ಗೆಲ್ಲಿಸಿಕೊಡುವ ನಾಯಕರು ಎಂದರೆ ತಳಮಳ. ಮೈದಾನದಲ್ಲಿ ಆಡುವವರಿಗಿಂತ ಆಟದ ಬಗ್ಗೆ ಉಪನ್ಯಾಸ ಕೊಡುವವರ ಮೇಲೇ ಏಕೆ ವಿಶ್ವಾಸ ಜಾಸ್ತಿ?

Whats going on inside Uttar Pradesh Modi Amit Shah Yogi UP game Prashant Natu coloumn here gvd
Author
First Published Jul 21, 2024, 11:30 AM IST | Last Updated Jul 22, 2024, 10:11 AM IST

ಪ್ರಶಾಂತ್ ನಾತು, ಏಷ್ಯಾನೆಟ್ ಸುವರ್ಣ ನ್ಯೂಸ್

ಬದುಕು ಇರಲಿ ಅಥವಾ ರಾಜಕಾರಣ ಇರಲಿ ಆತ್ಮವಿಶ್ವಾಸ ಒಳ್ಳೆಯದು. ಆದರೆ, ಅಹಂಕಾರ ಅಲ್ಲ. ಅದೇರೀತಿ ಬದುಕಿಗೆ ಭದ್ರತೆ ಬೇಕು ಅನ್ನೋದು ಸರಿ, ಆದರೆ ಅಭದ್ರತೆ ಶುರುವಾದರೆ ಮತ್ತೊಬ್ಬರ ಎತ್ತರ ಕಡಿಮೆ ಮಾಡುವುದು ಹೇಗೆ ಎಂಬ ಆಟ ತನ್ನಿಂದ ತಾನೇ ಶುರುವಾಗುತ್ತದೆ. ಇವತ್ತು ಲೋಕಸಭಾ ಚುನಾವಣೆಯ ನಂತರ ಉತ್ತರ ಪ್ರದೇಶದಲ್ಲಿ ಶುರುವಾ ಗಿರುವ ಒಳಜಗಳಗಳಲ್ಲಿ ಸ್ಥಳೀಯ ಕಾರಣಗಳಿಗಿಂತ ಹೆಚ್ಚಾಗಿ ನರೇಂದ್ರ ಮೋದಿಯವರ ಉತ್ತರಾಧಿಕಾರಿ ಯಾರಾಗಬೇಕು ಎಂಬ ಶೀತಲ ಸಮರದ ಕಾರಣ ಜಾಸ್ತಿ ಇದೆ ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತಿದೆ. ಈಗಿನ ಮಟ್ಟಿಗೆ ಮೋದಿ ಸಾಹೇಬರ ನಂತರ ಯಾರು ಎನ್ನುವ ಚರ್ಚೆ ಬಂದಾಗ ಕೇವಲ ಎರಡು ಹೆಸರುಗಳ ಪ್ರಸ್ತಾಪ ಬರುತ್ತದೆ. ಮೊದಲನೆಯದು ನಿಸ್ಸಂದೇಹವಾಗಿ ಮೋದಿ ಅವರ man friday ಅಮಿತ್ ಶಾ ಮತ್ತು ಎರಡನೆಯದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ. 

ಬಿಜೆಪಿಯ ಭವಿಷ್ಯದ ರಾಜಕಾರಣ ನೋಡಿದಾಗ ಮುಂದಿನ ದಿನಗಳಲ್ಲಿ ಈ ರಾಷ್ಟ್ರೀಯ ಪಕ್ಷ ಎರಡು ಪ್ರಶ್ನೆಗಳ ನಿರ್ಣಯಗಳನ್ನು ಹೇಗೆ ಸುಸೂತ್ರವಾಗಿ ತೆಗೆದುಕೊಳ್ಳಬಹುದು ಎಂಬ ಕುತೂಹಲ ಇದೆ. ಜೊತೆಗೆ ಅದಕ್ಕೆ ರಾಜಕೀಯ ಮಹತ್ವವೂ ಇದೆ. ಒಂದು - ಬಿಜೆಪಿಯ ಮುಂದಿನ ರಾಷ್ಟ್ರೀಯ ಅಧ್ಯಕ್ಷರು ಯಾರಾಗುತ್ತಾರೋ ಅವರ ಬಳಿ ಮೋದಿ, ಅಮಿತ್ ಶಾ ಅವರದ್ದೇ ಮಾತು ನಡೆಯುತ್ತಾ ಅಥವಾ ಆರ್‌ಎಸ್‌ಎಸ್‌ ವೀಟೊ ಮಾಡುತ್ತಾ ಎನ್ನುವುದು. ಎರಡು-ಮೋದಿ ಅವರಿಗೆ 75 ವರ್ಷ ತುಂಬಿದಾಗ ಅಮಿತ್ ಶಾ ಸಹಜ ಆಯ್ಕೆಯಾಗುತ್ತಾರಾ ಅಥವಾ ಅಲ್ಲಿಯೂ ಕೂಡಯೋಗಿಹೊರಹೊಮ್ಮುತ್ತಾರಾಎಂಬುದು. ಈಗಮೋದಿ ಉತ್ತರಾಧಿಕಾರಿ ಯಾರು ಎಂಬ ಪರಿಪ್ರೇಕ್ಷದಲ್ಲಿ ಉತ್ತರ ಪ್ರದೇಶದ ಆಂತರಿಕ ಕಿತ್ತಾಟದ ಬೆಳವಣಿ ಗೆಗಳನ್ನು ನೋಡಬೇಕು. ಆಗ ಯೋಗಿ ಆದಿತ್ಯನಾಥರ ವಿರುದ್ಧ ಯಾಕೆ ಅಮಿತ್ ಶಾ ಪರಮಾಪ್ತರಾದ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ ಮೌರ್ಯ ಮತ್ತು ಬ್ರಜೇಶ್ ಪಾಠಕ್ ಬಂಡಾಯದ ಸ್ವರಗಳನ್ನು ಹಚ್ಚುವ ಪ್ರಯತ್ನ ಮಾಡುತ್ತಿದ್ದಾರೆ ಅನ್ನುವುದು ಸ್ಪಷ್ಟವಾಗಿ ಅರ್ಥವಾಗುತ್ತದೆ.

ಬಿಜೆಪಿ ಅಂದುಕೊಂಡಷ್ಟು ರಾಮಮಂದಿರ ಪರಿಣಾಮ ಬೀರಿಲ್ಲವೇ?: ಮೋದಿ ಏಕ್‌ದಂ ಅಗ್ರೆಸಿವ್ ಆಗಿದ್ದು ಏಕೆ?

2017ರಿಂದ ಇಲ್ಲಿಯವರೆಗೆ ಆಗಿದ್ದೇನು?
ಉತ್ತರಪ್ರದೇಶದಲ್ಲಿ ಎರಡು ಸಮಿಕರಣಗಳು ಚುನಾವಣೆಯ ದಿಕ್ಕನ್ನು ನಿರ್ಧಾರ ಮಾಡುತ್ತವೆ. ಒಂದು ಜಾತಿ, ಎರಡು ಧರ್ಮ, ಜಾತಿ ಓಡಿದಾಗ ಒಮ್ಮೊಮ್ಮೆ ಮುಲಾಯಂ, ಇನ್ನೊಮ್ಮೆ ಮಾಯಾವತಿಗೆ ಲಾಭ. ಆದರೆ, ಧರ್ಮ ಅಂತ ಬಂದರೆ ಬಿಜೆಪಿಗೆ ಲಾಭ ಆಗಿದ್ದೇ ಜಾಸ್ತಿ. 2014ರಲ್ಲಿ 80ರಲ್ಲಿ 73 ಗೆದ್ದು, 2017ರಲ್ಲಿ ಯು.ಪಿ. ವಿಧಾನಸಭೆಯನ್ನು ಗೆದ್ದಾಗ ಅಮಿತ್ ಶಾ ಬಳಿ ಎರಡು ಹೆಸರುಗಳು ಇದ್ದವು. ಒಂದು ಆಗಿನ ಬಿಜೆಪಿ ರಾಜ್ಯಾಧ್ಯಕ್ಷ ಕೇಶವ್ ಪ್ರಸಾದ ಮೌರ್ಯ, ಇನ್ನೊಂದು ಮನೋಜ್ ಸಿನ್ಹಾ. ಆದರೆ, ಆರ್‌ಎಸ್‌ಎಸ್‌ಗೆ ಒಬ್ಬ ಹಿಂದೂ ಪೋಸ್ಟರ್‌ಬಾಯ್ ಬೇಕಿತ್ತು. ಮೋದಿಯವರಿಗೆ ಅನ್ನಿಸಿದ್ದು ಇಷ್ಟೊಂದು ದೊಡ್ಡ ರಾಜ್ಯವನ್ನು ಆಳಿ ಗೆಲ್ಲಬೇಕಾದರೆ ಜಾತಿಯ ನಾಯಕ ಆದರೆ ಲಾಭವಿಲ್ಲ. ಹಿಂದುತ್ವದ ಕ್ಲೀನ್ ಇಮೇಜ್ ಮತ್ತು ಅಭಿವೃದ್ಧಿಯನ್ನು ಜೋಡಿಸಿ ತೋರಿಸಬಲ್ಲ ಮುಖಬೇಕು ಎಂದು. 

ಹೀಗಾಗಿ ಅಮಿತ್ ಶಾ ಅವರಿಗೆ ಇಷ್ಟವಿಲ್ಲದೇ ಹೋದರೂ ಮೋದಿ ಮತ್ತು ಆರ್‌ಎಸ್‌ಎಸ್ ಸೇರಿ ಯೋಗಿ ಆದಿತ್ಯನಾಥರನ್ನು ಆಯ್ಕೆ ಮಾಡಿ ಕೊಂಡರು. ಆದರೆ ಮೊದಲ ದಿನದಿಂದಲೇ ಯೋಗಿ ಮತ್ತು ಅಮಿತ್‌ ಶಾ ಆಪ್ತರಾದ ಆಗಿನ ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಸುನೀಲ ಬನ್ಸಲ್ ನಡುವೆ ಸಂಬಂಧಗಳು ಕೆಡಲು ಶುರುವಾದವು. ಸಂಘಟನೆಯಲ್ಲಿ ಸುನೀಲ್ ಬನ್ಸಲ್ ಯೋಗಿಯ ಒಂದು ಮಾತನಡೆಯಲು ಬಿಡುತ್ತಿರಲಿಲ್ಲ. ಸರ್ಕಾರದಲ್ಲಿ ಯೋಗಿ ಬನ್ನಲ್ ಮಾತಿಗೆ ಕ್ಯಾರೇ ಅನ್ನುತ್ತಿರಲಿಲ್ಲ. ಗೋರಖ್‌ಪುರದಲ್ಲಿ ಯೋಗಿಯ ಕಡು ವೈರಿಗಳಾಗಿದ್ದ ಶಿವಪ್ರತಾಪ್ ಶುಕ್ಲರನ್ನು ಮಂತ್ರಿ ಮಾಡಿ, ಇನ್ನೊಬ್ಬ ವೈರಿ ರಾಧಾಮೋಹನ ದಾಸ ಅಗರ್ವಾಲ್ ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಾಡಲಾಯಿತು. ಅಷ್ಟೇ ಅಲ್ಲ, ಮೋದಿ ನಂತರದ ಜನಪ್ರಿಯತೆ ಇದ್ದರೂ ಕೂಡ ಯೋಗಿ ಆದಿತ್ಯನಾಥರನ್ನು ಸಂಸದೀಯ ಮಂಡಳಿಗೆ ತರುವ ಮನಸ್ಸು ಮೋದಿ ಮತ್ತು ಅಮಿತ್ ಶಾ ಇಬ್ಬರೂ ಮಾಡಲಿಲ್ಲ. ಸ್ವತಃ ಮುಖ್ಯಮಂತ್ರಿ ಆಗಿದ್ದರೂ ಕೂಡ ವಿಧಾನಸಭೆ ಮತ್ತು ಲೋಕಸಭೆ ಟಿಕೆಟ್‌ ಹಂಚಿಕೆಯಲಿ ಯೋಗಿ ಹೇಳಿದ ವ್ಯಕಿಗಳಿಗೆ ಟಿಕೆಟ್ ಕೊಟ್ಟಿರಲಿಲ. 

ಅಷ್ಟೇ ಅಲ್ಲ, ಏಕಾಏಕಿ ಪ್ರಧಾನ ಮಂತ್ರಿ ಕಾರ್ಯಾಲಯದ ಒಬ್ಬ ಅಧಿಕಾರಿ ಅರವಿಂದ ಶರ್ಮರನ್ನು ವಿಧಾನ ಪರಿಷತ್ ಸದಸ್ಯ ಮಾಡಿದಾಗ ಇನ್ನು ಯೋಗಿ ಅವರದ್ದು ಏನೂ ನಡೆಯೋದಿಲ್ಲ ಅನ್ನುವ ಸುದ್ದಿಗಳು ಹರಿದಾಡತೊಡಗಿದವು. 2022ರ ಚುನಾವಣೆ ಗೆದ್ದ ನಂತರ ಯೋಗಿ ಮರ್ಜಿಗೆ ವಿರುದ್ಧವಾಗಿ ಸ್ವತಃ ಚುನಾವಣೆಯಲ್ಲಿ ಸೋತ ಕೇಶವ್ ಪ್ರಸಾದ ಮೌರ್ಯರನ್ನು ಉಪಮುಖ್ಯಮಂತ್ರಿ ಮಾಡಲಾ ಯಿತು. ಅಷ್ಟೇ ಅಲ್ಲ, ಬಿಎಸ್‌ಪಿಯಿಂದ ಆಗಷ್ಟೇ ಬಂದಿದ್ದ ಬ್ರಜೇಶ್ ಪಾಠಕ್ ರನ್ನು ಯೋಗಿಗೆ ವಿರುದ್ಧ ಅಂತಲೇ ಉಪ ಮುಖ್ಯಮಂತ್ರಿ ಮಾಡಲಾಯಿತು. ಇದೆಲ್ಲ ನೋಡುತ್ತಿದ್ದ ರಜಪೂತರು ಈ ಬಾರಿ ಸ್ವತಃ ಯೋಗಿ ಮುಖ್ಯಮಂತ್ರಿ ಆಗಿದ್ದರೂ ಕೂಡ ಬಿಜೆಪಿಯಿಂದ ದೂರ ಸರಿದರು. ಇನ್ನೊಂದು ಕಡೆ ಯಾದವೇತರ ಹಿಂದುಳಿದ ವರ್ಗಗಳ ಸರಾಸರಿ 15% ವೋಟು ಪೂರ್ತಿ ದೂರ ಉಳಿಯಿತು. ವಿಪರ್ಯಾಸ ನೋಡಿ, ಮೋದಿ ನಂತರ ಯಾರು ಎಂಬ ಪೈಪೋ ಟಿಗೆ ಬಿದ್ದು ಸ್ವತಃ ಮೋದಿ ಅವರೇ ಬಿಜೆಪಿ ನಾಯಕರ ಕಿತ್ತಾಟದಲ್ಲಿ ವೋಟು ಮತ್ತು ಸೀಟು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಯಿತು. 4 ಚುನಾವಣೆ ಗೆದ್ದಾಗ ಮೋದಿ ಮೊದಲು, ಆಮೇಲೆ ಶಾ, ಅನಂತರ ಯೋಗಿ ಕಾರಣ ಎಂಬ ಕ್ರೆಡಿಟ್ ಕೊಡಲಾಗುತ್ತಿತ್ತು. ಆದರೆ ಈಗ ಸೋಲಿಗೆ ಯೋಗಿಯೇ ಕಾರಣ, ಅವರನ್ನು ಬದಲಿಸಬೇಕು ಎಂಬ ಒತ್ತಾಯವನ್ನು ದಿಲ್ಲಿಗೆ ಹತ್ತಿರ ಇರುವ ನಾಯ ಕರೇ ಲಿಖಿತ ರೂಪದಲ್ಲಿ ಮಾಡುತ್ತಿದ್ದಾರೆ. ಅದಕ್ಕೇ ಹೇಳುವುದು, ಗೆಲುವಿಗೆ ನೂರಾರು ಅಪ್ಪಂದಿರು, ಸೋಲು ಅನಾಥ ಎಂದು. 

ಯುಪಿಯ ವೋಟ್ ಬ್ಯಾಂಕ್ ಪಾಲಿಟಿಕ್ಸ್
ಉತ್ತರ ಪ್ರದೇಶದ ರಾಜಕಾರಣ ನೋಡಿದರೆ ಹೆಚ್ಚು ಕಡಿಮೆ ಐದು ವೋಟು ಬ್ಯಾಂಕ್‌ಗಳು ನೋಡಲು ಸಿಗುತ್ತವೆ. ಒಂದು ಯಾದವರದು, ಎರಡನೆಯದು ದಲಿತರದು, ಮೂರನೆಯದು ಮುಂದುವರಿದ ಜಾತಿಗಳು. ಅದರಲ್ಲಿ ಬ್ರಾಹ್ಮಣರು, ರಜಪೂತರು, ಬನಿಯಗಳುಹಾಗೂನಾಲ್ಕನೇಯದಾಗಿಯಾದವ ಹೊರತುಪಡಿಸಿದ ಹಿಂದುಳಿದ ವರ್ಗಗಳು ಮತ್ತು ಕೊನೆಯದಾಗಿ ಮುಸ್ಲಿಮ ರದು. ಅಲ್ಲಿ ಯಾರೇ ಚುನಾವಣೆ ಗೆಲ್ಲಬೇಕಾದರೂ ಕೂಡ ಕನಿಷ್ಠ ಮೂರು ವೋಟ್‌ ಬ್ಯಾಂಕ್‌ಗಳು ಜೊತೆಗೆ ಬರಬೇಕು. 2007ರಲ್ಲಿ ದಲಿತರು, ಬ್ರಾಹ್ಮಣರು, ಮುಸ್ಲಿಮರು ಒಟ್ಟಿಗೆ ಬಂದು ಮಾಯಾವತಿ ಗೆದ್ದರು. 2012ರಲ್ಲಿ ಯಾದವರು, ಮುಸ್ಲಿಮರು ಮತ್ತು ರಜಪೂತರು ಒಟ್ಟಿಗೆ ಬಂದು ಮರಳಿ ಮುಲಾಯಂ ಮತ್ತು ಅಖಿಲೇಶ್ ಯಾದವ್ ಗೆದರು. ಆದರೆ, ಯಾವಾಗ ಮೇಲಿನಿಂದ ಕೆಳಗಿನವರೆಗೆ

ಯಾದವರು ಮತ್ತು ಮುಸ್ಲಿಮರ ತುಷ್ಟಿಕರಣ ಜಾಸ್ತಿ ಆಯಿತೋ ಆಗ 2014, 2017, 2019, 2022ರಲ್ಲಿ ನಾಲ್ಕು ಬಾರಿ ಹಿಂದುತ್ವದ ಛತ್ರಿ ಅಡಿಯಲ್ಲಿ ಮುಂದುವರಿದ ಜಾತಿಗಳು ಮತ್ತು ಪೂರಾ ಹಿಂದುಳಿದ ವರ್ಗಗಳ ಜೊತೆಗೆ ಜಾಗ ಬಿಟ್ಟು ಉಳಿದ ದಲಿತರು ಒಟ್ಟಾಗಿ ಬಂದು ಬಿಜೆಪಿಯನ್ನು ಮತ್ತು ಮೋದಿಯನ್ನು ಗೆಲ್ಲಿಸಿದರು. ಆದರೆ ಈ ಬಾರಿ ಹಿಂದುಳಿದವರ್ಗಗಳಲ್ಲಿ ಮೌರ್ಯ, ಕುರ್ಮಿಗಳು ಹೋಗಿ ಸಮಾಜವಾದಿ ಪಾರ್ಟಿಯನ್ನು ಅಪ್ಪಿಕೊಂಡು, ದಲಿತ ಮತಗಳು ಖರ್ಗೆ ಕಾರಣದಿಂದ ಕಾಂಗ್ರೆಸ್ ಕಡೆ ವಾಲಿದ್ದರಿಂದ ಬಿಜೆಪಿ 8 ಪ್ರತಿಶತ ವೋಟ್ ಬ್ಯಾಂಕ್ ಕಳೆದುಕೊಂಡಿತು. ಈಗ ಕೇಶವ ಪ್ರಸಾದ ಮೌರ್ಯ ಹೇಳುತ್ತಿರುವುದು ಏನೆಂದರೆ, ಯೋಗಿ ಆದಿತ್ಯನಾಥರನ್ನೇ ಮುಂದುವರೆಸಿದರೆ ಉತ್ತರಪ್ರದೇಶದಲ್ಲಿ ಬಿಜೆಪಿ ಬರೀ ಮುಂದುವರಿದ ಜಾತಿಯ ಪಕ್ಷವಾಗಿಬಿಡಬಹುದು, ಅದಕ್ಕಾಗಿ ಹಿಂದುಳಿದ ಜಾತಿಗಳಿಗೆ ಮುಖ್ಯಮಂತ್ರಿ ಸ್ಥಾನ ಕೊಡಬೇಕು. ಆದರೆ, ಬಿಜೆಪಿ ಈ ಜಾತಿ ಸಮೀಕರಣದ ತರ್ಕವನ್ನು ಒಪ್ಪಿಕೊಂಡು ಯೋಗಿಯನ್ನು ಬದಲಿಸುವುದು ಅಷ್ಟು ಸುಲಭ ಇದೆ ಅನ್ನಿಸುತ್ತಿಲ್ಲ.

ಜನಪ್ರಿಯ ನಾಯಕರ ವಿರುದ್ಧ ಹೈಕಮಾಂಡ್‌ಗಳು
ಕಾಂಗ್ರೆಸ್ ಇರಲಿ, ಬಿಜೆಪಿ ಇರಲಿ, ಸ್ಥಳೀಯವಾಗಿ ಜನಪ್ರಿಯ ನಾಯಕರು ಅಂದರೆ ದಿಲ್ಲಿ ನಾಯಕರಿಗೆ ಆಗಿಯೇ ಬರುವುದಿಲ್ಲ. ನಿಜಲಿಂಗಪ್ಪ, ದೇವರಾಜ್ ಅರಸ್, ವೀರೇಂದ್ರ ಪಾಟೀಲ್‌ರಿಂದಹಿಡಿದುಯಡಿಯೂರಪ್ಪವರೆಗೆ ರಾಜ್ಯದಲ್ಲಿ ಚುನಾವಣೆ ಗೆಲ್ಲಿಸಿಕೊಡುವನಾಯಕರು ಎಂದರೆ ಹೈಕಮಾಂಡ್‌ನಲ್ಲಿ ಅದೇಕೋ ಅನುಮಾನಯುಕ್ತ ತಳಮಳ, ದಿಲ್ಲಿಯಲ್ಲಿ ಕುಳಿತುಕೊಳ್ಳುವ ನಾಯಕರಿಗೆ ಯಾವತ್ತೂ ಮೈದಾನದಲ್ಲಿ ನಿಂತು ಬ್ಯಾಟ್ ಬೀಸುವವರಿಗಿಂತ ಟೇಬಲ್ ಮೇಲೆ ಕುಳಿತು ಬ್ಯಾಟ್ ಬೀಸುವುದು ಹೇಗೆ ಎಂದು ಉಪನ್ಯಾಸ ಕೊಡುವವರ ಬಗ್ಗೆ ವಿಶ್ವಾಸ ಜಾಸ್ತಿ. 90ರ ದಶಕದಲ್ಲಿ ಅಟಲ್ ಬಿಹಾರಿ ವಾಜಪೇಯಿಗೂ, ಕಲ್ಯಾಣ ಸಿಂಗ್ ಅವರಿಗೂ ಶುರುವಾದ ತಿಕ್ಕಾಟ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ 15 ವರ್ಷದ ವನವಾಸ ತೋರಿಸಿತು. ಅಟಲ್ ಅವರು ರಾಜನಾಥ ಸಿಂಗ್, ಲಾಲ್‌ಜಿ ಟಂಡನ್ ಅವರ ಮಾತು ಕೇಳಿಯೇ ಕಲ್ಯಾಣ ಸಿಂಗ್ ಅವರನ್ನು ಬದಲಿಸಿದ್ದು. ಇದೇ ಲಾಲ್‌ಜಿ ಮಾತು ಕೇಳಿ ಬಿಜೆಪಿಯು ಮಾಯಾವತಿ ಜೊತೆ ಕೈ ಜೋಡಿಸಿ 10 ವರ್ಷ ಉತ್ತರ ಪ್ರದೇಶದಲ್ಲಿ ಅಸ್ತಿತ್ವವನ್ನೇ ಕಳೆದುಕೊಳ್ಳುವ ಹಂತಕ್ಕೆ ಹೋಗಿತ್ತು. ಈಗ ಅಮಿತ್ ಶಾ ಮತ್ತು ಯೋಗಿ ನಡುವೆ ಬಿರುಕು ಬಹಿರಂಗವಾಗಿ ಕಾಣಿಸಿಕೊಳ್ಳತೊಡಗಿದೆ. ಬಹುಶಃ ಬಿಜೆಪಿಯ ಭವಿಷ್ಯದ ರಾಜಕಾರಣ ಈ ಬಿರುಕಿನ ಭವಿಷ್ಯ ದ ಮೇಲೆ ಅವಲಂಬಿತವಾಗಿದೆ.

ಮಂದಿರ ಹೋರಾಟದ ಕಿಚ್ಚು ಹಚ್ಚಿದವರು: ಈ ಐದು ಮಂದಿ ಇಲ್ಲದಿದ್ದರೆ ಇಂದು ಅಯೋಧ್ಯೆಯಲ್ಲಿ ರಾಮಮಂದಿರ ಎದ್ದುನಿಲ್ಲುತ್ತಿರಲಿಲ್ಲ!

ಸಾಮರ್ಥ್ಯಗಳು-ದೌರ್ಬಲ್ಯಗಳು
ಬಿಜೆಪಿಯ ಭವಿಷ್ಯದ ರಾಜಕಾರಣ ಮೋದಿ, ಅಮಿತ್ ಶಾ ಮತ್ತು ಯೋಗಿ ಎಂಬ ಮೂವರು ಆಟಗಾರರ ಸುತ್ತ ಸುತ್ತಲಿದೆ. ಮುಂದೆ ಕಪ್ಪು ಕುದುರೆಯಾಗಿ ಶಿವರಾಜ್ ಸಿಂಗ್‌ ಚೌಹಾಣ್ ಹೊರಹೊಮ್ಮಬಹುದು. ಆದರೆ, ಇವತ್ತು ಅಂಥದ್ದು ಏನೂ ಕಾಣುತ್ತಿಲ್ಲ. ಮೋದಿ, ಅಮಿತ್ ಶಾ ಮತ್ತು ಯೋಗಿ ಅವರ ಸಾಮ್ಯತೆ ಎಂದರೆ ಮೂವರೂ ಕಟ್ಟಾ ಹಿಂದುತ್ವವಾದಿಗಳು. ಅದರಲ್ಲಿ ರಾಜಿ ಮಾಡಿಕೊಳ್ಳುವ ಜಾಯಮಾನದವರಲ್ಲ. ಮೋದಿ ಸಾಮರ್ಥ್ಯ ಎಂದರೆ ತಳ ಮಟ್ಟದಿಂದ ಬಂದು ಸರ್ಕಾರದಲ್ಲಿ ಒಳ್ಳೆಯ ಆಡಳಿತ ಕೊಟ್ಟು ಜನಪ್ರಿಯರಾ ಗಿದ್ದಾರೆ. ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಂಘಟನೆ ಮೇಲೆ ಅಪರಿಮಿತ ಹಿಡಿತವಿದೆ. ಇದೆಲ್ಲದರ ಜೊತೆಗೆ ರಾಜಕೀಯ ನಿರ್ವಹಣೆಯಲ್ಲಿ ಎತ್ತಿದ ಕೈ. ಅದೇ ಅಮಿತ್ ಶಾ ಅವರನ್ನು ತೆಗೆದುಕೊಂಡರೆ ರಾಜಕೀಯ ಪ್ರಬಂಧನ, ಸಂಕಷ್ಟ ಪ್ರಬಂಧನ, ಸಂಘಟನೆ ಮತ್ತು ವ್ಯಕ್ತಿಗಳ ಮೇಲೆ ಒಳ್ಳೆ ಹಿಡಿತವಿದೆ. ಆದರೆ, ತನ್ನ ಹೆಸರಿನ ಮೇಲೆ ಚುನಾವಣೆ ಗೆಲ್ಲಿಸುವಷ್ಟು ಜನಪ್ರಿಯತೆ ಕಾಣುವುದಿಲ್ಲ. ಅದೇ ಯೋಗಿ ಆದಿತ್ಯನಾಥ ಅವರು ಒಳ್ಳೆ ಆಡಳಿತಗಾರ, ಕ್ಲೀನ್ ಇಮೇಜ್ ಇದೆ. ಉತ್ತರ ಪ್ರದೇಶದಲ್ಲಿ ಕೆಲಸ ಮಾಡಿ ತೋರಿಸಿದ್ದಾರೆ. ಆದರೆ, ಸಂಘಟನೆ ಕೈಗೆ ತೆಗೆದುಕೊಂಡು, ವ್ಯಕ್ತಿಗಳ ಮೇಲೆ ಹಿಡಿತ ತೆಗೆದುಕೊಂಡು ರಾಜಕೀಯ ನಿರ್ವಹಣೆ ಮಾಡಿ ತೋರಿಸಲು ಆಗುತ್ತಿಲ್ಲ. ಒಟ್ಟಾರೆ ಸಾರಾಂಶ ಏನು ಎಂದರೆ, ಅಮಿತ್‌ ಶಾ ದೌರ್ಬಲ್ಯವೇ ಯೋಗಿ ಆದಿತ್ಯನಾಥರ ಸಾಮರ್ಥ್ಯವಾದರೆ, ಯೋಗಿ ಆದಿತ್ಯನಾಥರ ದೌರ್ಬಲವೇ ಅಮಿತ್ ಶಾ ಅವರ ಸಾಮರ್ಥ.!

Latest Videos
Follow Us:
Download App:
  • android
  • ios