ಕಾಂಗ್ರೆಸ್ ಪ್ರಣಾಳಿಕೆಯ ಬಜರಂಗದಳ ನಿಷೇಧ ವಿರುದ್ಧ ವಿಶ್ವ ಹಿಂದೂ ಪರಿಷತ್ ಬಜರಂಗ ದಳ ಸೇರಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಗುರುವಾರ ಸಂಜೆ 7ಕ್ಕೆ ನಗರದ ಶ್ರೀರಾಮ-ಆಂಜನೇಯ ಸೇರಿ ಹಲವು ದೇವಸ್ಥಾನಗಳಲ್ಲಿ ‘ಹನುಮಾನ್ ಚಾಲೀಸಾ’ ಪಠಿಸಿದರು.
ಬೆಂಗಳೂರು (ಮೇ.05): ಕಾಂಗ್ರೆಸ್ ಪ್ರಣಾಳಿಕೆಯ ಬಜರಂಗದಳ ನಿಷೇಧ ವಿರುದ್ಧ ವಿಶ್ವ ಹಿಂದೂ ಪರಿಷತ್ ಬಜರಂಗ ದಳ ಸೇರಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಗುರುವಾರ ಸಂಜೆ 7ಕ್ಕೆ ನಗರದ ಶ್ರೀರಾಮ-ಆಂಜನೇಯ ಸೇರಿ ಹಲವು ದೇವಸ್ಥಾನಗಳಲ್ಲಿ ‘ಹನುಮಾನ್ ಚಾಲೀಸಾ’ ಪಠಿಸಿದರು. ನಗರದ 20ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ಏಕಕಾಲಕ್ಕೆ ಹನುಮಾನ್ ಚಾಲೀಸಾ ಪಠಣ ಮಾಡಿದರು. ಮಲ್ಲೇಶ್ವರದ ರಾಮಮಂದಿರದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪಾಲ್ಗೊಂಡು ಹನುಮಾನ್ ಚಾಲೀಸಾ ಪಠಣ ಮಾಡಿದರು. ವಿಶ್ವ ಹಿಂದೂ ಪರಿಷತ್, ಬಜರಂಗ ದಳ, ರಾಷ್ಟ್ರೀಯ ಹಿಂದೂ ಪರಿಷತ್, ಯುವ ಬ್ರಿಗೇಡ್, ಬಿಜೆಪಿ ಮುಖಂಡರು ಪಾಲ್ಗೊಂಡು ಅಭಿಯಾನ ಬೆಂಬಲಿಸಿದರು.
ಕೋಡಿಗೆಹಳ್ಳಿ ಗುಂಡಾಂಜನೇಯ ದೇವಸ್ಥಾನದಲ್ಲಿ ಬೆಳಗ್ಗೆ 10.30ರಿಂದಲೇ ಹನುಮಾನ್ ಚಾಲೀಸಾ ಪಠಣ ಆರಂಭವಾಯಿತು. ಕೇಸರಿ ಶಾಲು ಧರಿಸಿ ಆಂಜನೇಯ ಸ್ವಾಮಿ ಭಾವಚಿತ್ರ ಹಿಡಿದು ಹನುಮಾನ್ ಚಾಲೀಸಾ ಪಠಿಸಿದರು. ಮೈಸೂರು ರಸ್ತೆ ಗಾಳಿ ಆಂಜನೇಯ ದೇವಸ್ಥಾನದಲ್ಲಿ ಆಡಳಿತ ಮಂಡಳಿಯವರು ದೇವಸ್ಥಾನ ಬಂದ್ ಮಾಡಿದ್ದರು. ಸ್ಥಳೀಯ ಕಾಂಗ್ರೆಸ್ ಶಾಸಕರು ದೇವಸ್ಥಾನ ಮುಚ್ಚಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಕಾರ್ಯಕರ್ತರು ದೇವಸ್ಥಾನ ಪಕ್ಕದಲ್ಲಿರುವ ಹನುಮಾನ್ ವಿಗ್ರಹದ ಎದುರು ಚಾಲೀಸಾ ಹಾಡಿದರು. ಉಳಿದಂತೆ ಸಂಜೆ 7 ಗಂಟೆಗೆ ಆರಂಭವಾಗಿ 8ಗಂಟೆವರೆಗೆ ಮುಂದುವರಿದಿತು.
ಜನರಿಗೆ ತೊಂದರೆ ಹಿನ್ನೆಲೆ: ಪ್ರಧಾನಿ ಮೋದಿ ರೋಡ್ ಶೋ 1 ದಿನ ಅಲ್ಲ, 2 ದಿನ
ಈ ವೇಳೆ ಮಾತನಾಡಿದ ಬಜರಂಗದಳ ಮುಖಂಡರು, ಹಿಂದೂ ವಿರೋಧಿ ಆಡಳಿತ ನಡೆಸಲು ಮುಂದಾಗಿರುವ ಕಾಂಗ್ರೆಸ್ ಪಿಎಫ್‌ಐ ಜೊತೆ ಹೋಲಿಸಿ ಬಜರಂಗದಳವನ್ನುಬ್ಯಾನ್ ಮಾಡಲು ಮುಂದಾಗಿದೆ. ಅನ್ಯರ ಓಲೈಕೆಗಾಗಿ ಅವರು ಪ್ರಣಾಳಿಕೆಯಲ್ಲಿ ಈ ಅಂಶವನ್ನು ಘೋಷಿಸಿದ್ದಾರೆ. ಹಿಂದೂಗಳು ಒಗ್ಗಟ್ಟಾಗಿದ್ದೇವೆ, ಬಜರಂಗದಳ ನಿಷೇಧಿಸಲು ಮುಂದಾದರೆ ತಕ್ಕ ಉತ್ತರ ನೀಡುತ್ತೇವೆ ಎಂದು ಸಂದೇಶ ರವಾನಿಸಲು ಅಭಿಯಾನ ನಡೆಸಲಾಗಿದೆ ಎಂದು ಹೇಳಿದರು. ಬಜರಂಗದಳದ ಗೋವರ್ಧನ್, ಶಿವಕುಮಾರ್, ಯುವ ಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆ, ಪ್ರಶಾಂತ ಸಂಬರಗಿ ಸೇರಿ ಹಲವರು ಪಾಲ್ಗೊಂಡಿದ್ದರು.
ಹುಬ್ಬಳ್ಳಿಯಲ್ಲೂ ಹನುಮಾನ್ ಚಾಲೀಸಾ ಪಠಣ: ಬಜರಂಗದಳವನ್ನು ನಿಷೇಧಿಸುತ್ತೇವೆ ಎಂದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಪ್ರಕಟಿಸಿರುವುದನ್ನು ವಿರೋಧಿಸಿ ಹಿಂದೂ ಸಂಘಟನೆಗಳು ಕರೆ ನೀಡಿದ್ದ ಹನುಮಾನ್ ಚಾಲೀಸಾ ಪಾರಾಯಣಕ್ಕೆ ಹುಬ್ಬಳ್ಳಿಯಲ್ಲೂ ವ್ಯಾಪಕ ಬೆಂಬಲ ವ್ಯಕ್ತವಾಯಿತು. ನಗರದ ನಾಗಶೆಟ್ಟಿಕೊಪ್ಪ, ವಿದ್ಯಾನಗರ ಸೇರಿದಂತೆ ಹಲವು ಭಾಗಗಳಲ್ಲಿ ಮಾರುತಿ ಮಂದಿರಗಳಲ್ಲಿ ಹನುಮಾನ್ ಚಾಲೀಸಾ ಪಾರಾಯಣ ಮಾಡುವ ಮೂಲಕ ಕಾಂಗ್ರೆಸ್ ಪಕ್ಷದ ಕ್ರಮ ಖಂಡಿಸಿದರು. ಇಲ್ಲಿನ ವಿದ್ಯಾನಗರದ ಗಣೇಶ ನಿಲಯದ ಹತ್ತಿರವಿರುವ ಬಾಲಘಂಟೆ ಆಂಜನೇಯ ದೇವಸ್ಥಾನದಲ್ಲಿ ಜೈ ಶ್ರೀ ಹನುಮಾನ್ ಯುವಕ ಮಂಡಳದ ವತಿಯಿಂದ ಹನುಮಾನ್ ಚಾಲೀಸ್ ಪಾರಾಯಣ ಹಮ್ಮಿಕೊಳ್ಳಲಾಯಿತು. ಈ ವೇಳೆ ಮಾತನಾಡಿದ ಬಿಜೆಪಿ ಮಾಧ್ಯಮ ಸಮಿತಿಯ ಸಹ ಸಂಚಾಲಕ ಎಸ್.ಕೆ. ಕೊಟ್ರೇಶ್ ಮಾತನಾಡಿ, ದೇಶಭಕ್ತ ಸಂಘಟನೆಯಾದ ಬಜರಂಗದಳವನ್ನ ದೇಶದ್ರೋಹಿ ಸಂಘಟನೆಯಾದ ಪಿಎಫ್‌ಐದೊಂದಿಗೆ ಹೋಲಿಸಿರುವುದು ಖಂಡನಾರ್ಹ.
ಸುರ್ಜೆವಾಲಾಗೆ ಹನುಮನ ತಂದೆ-ತಾಯಿ ಯಾರು ಗೊತ್ತಿಲ್ಲ: ಶೋಭಾ ಕರಂದ್ಲಾಜೆ ಕಿಡಿ
ಬಜರಂಗದಳ ಎನ್ನುವುದು ಯುವಕರಲ್ಲಿ ದೇಶಭಕ್ತಿ ಬೆಳೆಸುವುದು, ಸನಾತನ ಸಂಸ್ಕೃತಿ ಉಳಿಸಿ, ನಾಡಿಗೆ ಪರಿಚಯಿಸುವುದು, ದೇಶದಲ್ಲಿ ನಡೆಯುವ ದೇಶವಿರೋಧಿ ಕೃತ್ಯಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತದೆ. ಆದರೆ, ಪಿಎಫ್‌ಐ ದೇಶವಿರೋಧಿ ಸಂಘಟನೆಯಾಗಿದ್ದು, ಈಗಾಗಲೇ ಹಲವು ಪ್ರಕರಣಗಳಿಂದ ಸಾಬೀತಾಗಿದೆ. ಇಂತಹ ದೇಶವಿರೋಧಿ ಸಂಘಟನೆಗಳೊಂದಿಗೆ ಬಜರಂಗದಳ ಹೋಲಿಕೆ ಮಾಡಿರುವ ಕಾಂಗ್ರೆಸ್‌ನ ಮನಸ್ಥಿತಿ ಹೇಗಿದೆ ಎಂಬುದನ್ನು ತಿಳಿಸುತ್ತದೆ. ಕಾಂಗ್ರೆಸ್ ಹೊರಡಿಸಿರುವ ಈ ಪ್ರಣಾಳಿಕೆ ಅದರ ಅವನತಿಗೆ ಮುಖ್ಯ ಪಾತ್ರ ವಹಿಸುತ್ತದೆ ಎಂದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.