ಚನ್ನಪಟ್ಟಣ, ಶಿಗ್ಗಾವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾದ ಬೆನ್ನಲ್ಲೇ ರಾಜಕೀಯ ಪಕ್ಷಗಳಿಗೆ ಟಿಕೆಟ್ ನೀಡುವುದು ತಲೆನೋವಾಗಿ ಪರಿಣಮಿಸಿದೆ. ಸಂಡೂರು, ಶಿಗ್ಗಾವಿ ಕ್ಷೇತ್ರಕ್ಕೆ ಎನ್‌ಡಿಎ ಸುಲಭವಾಗಿ ಅಭ್ಯರ್ಥಿ ಆಯ್ಕೆ ಮಾಡಿದ್ದರೆ ಚನ್ನಪಟ್ಟಣ ಕಗ್ಗಂಟಾಗಿದೆ. ಅತ್ತ ಕಾಂಗ್ರೆಸ್ಸಿಗೆ ಸಂಡೂರು, ಶಿಗ್ಗಾವಿಯಲ್ಲಿ ಆಕಾಂಕ್ಷಿಗಳು ಹೆಚ್ಚಿದ್ದರೆ, ಚನ್ನಪಟ್ಟಣಕ್ಕೆ ಯಾರು ಎಂಬ ಪ್ರಶ್ನೆ ಎದುರಾಗಿದೆ.
ಬೆಂಗಳೂರು (ಅ.21): ಶಿಗ್ಗಾವಿ ಮತ್ತು ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ಸುಗಮವಾಗಿ ಟಿಕೆಟ್ ಘೋಷಿಸಿದ ಎನ್‌ಡಿಎ ಕೂಟದ ಮಿತ್ರ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ಗೆ ಚನ್ನಪಟ್ಟಣ ಕ್ಷೇತ್ರ ಕಗ್ಗಂಟಾಗಿ ಪರಿಣಮಿಸಿದೆ. ತಮ್ಮ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಜೆಡಿಎಸ್ ನಾಯಕರು ಪ್ರಸ್ತಾಪ ಇರಿಸಿದರೂ ಅದನ್ನು ಬಿಜೆಪಿಯ ಪ್ರಬಲ ಆಕಾಂಕ್ಷಿಯಾಗಿರುವ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಒಪ್ಪುತ್ತಿಲ್ಲ. ತಾವು ಬಿಜೆಪಿಯಿಂದಲೇ ಸ್ಪರ್ಧೆ ಮಾಡುವುದಾಗಿ ಪಟ್ಟು ಹಿಡಿದಿರುವುದರಿಂದ ಈ ಕಗ್ಗಂಟು ಇನ್ನೂ ಎರಡು ದಿನಗಳ ಕಾಲ ಮುಂದುವರೆಯುವ ನಿರೀಕ್ಷೆಯಿದೆ.
ಶತಾಯಗತಾಯ ತಾವು ಈ ಬಾರಿ ಸ್ಪರ್ಧೆ ಮಾಡಿಯೇ ತೀರುತ್ತೇನೆ ಎಂದು ಯೋಗೇಶ್ವರ್ ಪಟ್ಟು ಹಿಡಿದಿರುವುದರಿಂದ ಉಭಯ ಪಕ್ಷಗಳ ನಾಯಕರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಒಂದು ಹಂತದಲ್ಲಿ ಯೋಗೇಶ್ವರ್ ಅವರನ್ನು ಮನವೊಲಿಸಿ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ತೀವ್ರ ಪ್ರಯತ್ನ ನಡೆದರೂ ಫಲ ನೀಡಲಿಲ್ಲ. ಹೀಗಾಗಿ, ಅಂತಿಮವಾಗಿ ಯೋಗೇಶ್ವರ್ ಅವರೇ ತಮ್ಮ ಪಕ್ಷದ ಅಭ್ಯರ್ಥಿಯಾಗಲಿ ಎಂಬ ಮಾತನ್ನು ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು ಎನ್ನಲಾಗಿದೆ.
ಬೈಎಲೆಕ್ಷನ್‌ನಿಂದ ಡಿಕೆಶಿಗೆ ಚನ್ನಪಟ್ಟಣ ನೆನಪಾಗ್ತಿದೆ: ಎಚ್.ಡಿ.ಕುಮಾರಸ್ವಾಮಿ
ಆದರೆ, ತಾವು ಸ್ಪರ್ಧಿಸುವುದಾದರೆ ಬಿಜೆಪಿ ಅಭ್ಯರ್ಥಿಯಾಗಿ ಮಾತ್ರ. ಏನೇ ಆದರೂ ಎನ್‌ಡಿಎ ಅಭ್ಯರ್ಥಿ ಗೆಲ್ಲಬೇಕು ಎಂಬ ಉದ್ದೇಶ ಇರುವಾಗ ನಾನು ಬಿಜೆಪಿಯಿಂದಲೇ ಸ್ಪರ್ಧಿಸಿದರೆ ಏನು ನಷ್ಟ ಎಂದು ಯೋಗೇಶ್ವರ್ ಅವರು ಜೆಡಿಎಸ್ ನಾಯಕರನ್ನು ಪ್ರಶ್ನಿಸಿದ್ದಾರೆ ಎಂದು ತಿಳಿದುಬಂದಿದೆ. ಚನ್ನಪಟ್ಟಣ ಕ್ಷೇತ್ರದ ಕಗ್ಗಂಟು ಬಿಡಿಸುವ ಸಂಬಂಧ ಬಿಜೆಪಿಯ ನಾಯಕರಾದ ಆರ್.ಅಶೋಕ್ ಮತ್ತು ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಸತತ ಸಂಪರ್ಕದಲ್ಲಿದ್ದಾರೆ.
ಯೋಗೇಶ್ವರ್ ಅವರ ಬೇಡಿಕೆಯಂತೆ ಬಿಜೆಪಿಯಿಂದಲೇ ಸ್ಪರ್ಧಿಸಲು ಒಪ್ಪಿಕೊಳ್ಳುವಂತೆ ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ನಡುವೆ ಯೋಗೇಶ್ವರ್ ನಡೆ ನೋಡಿಕೊಂಡು ಆಡಳಿತಾರೂಢ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಅಂತಿಮಗೊಳಿಸಲು ನಿರ್ಧರಿಸಿದೆ. ಇದನ್ನು ಅರಿತುಕೊಂಡಿರುವ ಜೆಡಿಎಸ್ ನಾಯಕರು ಆತಂಕಕ್ಕೆ ಒಳಗಾಗಿದ್ದಾರೆ ಎನ್ನಲಾಗುತ್ತಿದೆ.
ಜೆಡಿಎಸ್ ಸಭೆ ಮುಂದೂಡಿಕೆ: ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿ ಆಯ್ಕೆಗೆ ಪಕ್ಷದ ಮುಖಂಡರ ಸಭೆಯನ್ನು ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಕರೆದಿದ್ದರು. ಬಿಡದಿ ತೋಟದ ಮನೆಯಲ್ಲಿ ನಡೆಯಬೇಕಿದ್ದ ಈ ಸಭೆ ದಿಢೀರ್ ಮುಂದೂಡಿಕೆಯಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಚನ್ನಪಟ್ಟಣದಲ್ಲಿ ನಿಖಿಲ್ ಸ್ಪರ್ಧೆಗೆ ಒತ್ತಡ ಇದೆ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ
ಯೋಗೇಶ್ವರ್ ದೊಡ್ಡವರು. ಅವರು ಕಾಂಗ್ರೆಸ್ ನಾಯಕರ ಜೊತೆಯಲ್ಲಿ ಸಂಪರ್ಕದಲ್ಲಿದ್ದಾರೆ ಅಂತ ಚರ್ಚೆ ಆಗುತ್ತಿದೆ. ಪಕ್ಷೇತರರಾಗಿ ಸ್ಪರ್ಧಿಸುತ್ತಾರೆಂಬ ಸುದ್ದಿಯೂ ಇದೆ. ಅವರು ಏನು ಮಾಡುತ್ತಾರೋ ನನ್ನ ಬಳಿ ಏನು ಚರ್ಚಿಸಿಲ್ಲ. ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕೆಂಬುದು ನನ್ನ ಅಭಿಲಾಷೆ.
-ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ