ಚನ್ನಪಟ್ಟಣ ಜೆಡಿಎಸ್‌ಗೆ ಬಿಟ್ಟುಕೊಡುವ ಸುಳಿವು ಕೊಟ್ಟ ವಿಜಯೇಂದ್ರ; ಎದ್ದು ಬಿದ್ದು ದೆಹಲಿಗೋಡಿದ ಸಿ.ಪಿ.ಯೋಗೇಶ್ವರ್

By Sathish Kumar KHFirst Published Jun 25, 2024, 8:44 PM IST
Highlights

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ಟಿಕೆಟ್‌ಗಾಗಿ ಭರ್ಝರಿ ಕಸರತ್ತು ಮಾಡುತ್ತಿರುವ ಸಿ.ಪಿ. ಯೋಗೇಶ್ವರ್‌ಗೆ ಬಿಜೆಪಿಯಿಂದ ಬಿಗ್ ಶಾಕ್ ಕೊಡಲಾಗಿದೆ. 

ಬೆಂಗಳೂರು (ಜೂ.25): ರಾಜ್ಯದಲ್ಲಿ ಲೋಕಸಭಾ ಚುನಾವಣೆ ಬಳಿಕ ತೆರವಾಗಿರುವ ಶಾಸಕ ಸ್ಥಾನಕ್ಕೆ ಉಪ ಚುನಾವಣೆ ಘೋಷಣೆಯಾಗದಿದ್ದರೂ, ಅದಕ್ಕೆ ತಯಾರಿ ಮಾತ್ರ ಸದ್ದಿಲ್ಲದೇ ನಡೀತಿದೆ. ಈ ಪೈಕಿ ಚನ್ನಪಟ್ಟಣ ಕ್ಷೇತ್ರ ಅತಿ ಹೆಚ್ಚು ಚರ್ಚೆಗೆ ಒಳಗಾಗಿದೆ. ಜೆಡಿಎಸ್ ಹಾಲಿ ಶಾಸಕರಿದ್ದ ಕ್ಷೇತ್ರದಲ್ಲಿ ಈ ಬಾರಿ ಯಾರು ಸ್ಪರ್ಧಿಸ್ತಾರೆ ಎಂಬುದೇ ಅತಿದೊಡ್ಡ ಪ್ರಶ್ನೆಯಾಗಿದೆ. ಅದರಲ್ಲಿಯೂ ಜೆಡಿಎಸ್-ಬಿಜೆಪೊಇ ಕ್ಷೇತ್ರದ ಟಿಕೆಟ್ ಮೇಲೆ ಕಣ್ಣಿಟ್ಟಿದ್ದ ಸಿ.ಪಿ. ಯೋಗೇಶ್ವರ್‌ಗೆ ದೊಡ್ಡ ಶಾಕ್ ಕೊಡಲಾಗಿದೆ.

ಸದ್ಯ ಕುಮಾರಸ್ವಾಮಿ ಸಂಸದರಾದ ಕಾರಣ ತೆರವಾದ ಚನ್ನಪಟ್ಟಣ ಕ್ಷೇತ್ರದ ಮೇಲೆ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಕಣ್ಣಿಟ್ಟಿದ್ದಾರೆ. ಕುಮಾರಸ್ವಾಮಿ ಮನವೊಲಿಸಿ ಬಿಜೆಪಿ ಟಿಕೆಟ್ ಪಡೆದು ಸ್ಪರ್ಧಿಸುವ ಆಸೆಯಲ್ಲಿದ್ದರು. ಆದರೆ, ನಿನ್ನೆ ಹಾಲಿ ಪರಿಷತ್ ಸದಸ್ಯ ಯೋಗೇಶ್ವರ್‌ಗೆ ಕರೆ ಮಾಡಿದ ವಿಜಯೇಂದ್ರ ಶಾಕ್ ಕೊಟ್ಟಿದ್ದಾರೆ. ನಾವು ಚನ್ನಪಟ್ಟಣ ಜೊತೆಗೆ ಶಿಗ್ಗಾಂವಿ ಹಾಗೂ ಸಂಡೂರು ಉಪಚುನಾವಣೆ ಮಾಡಬೇಕಿದೆ. ಆದರೆ, ಚನ್ನಪಟ್ಟಣ ಜೆಡಿಎಸ್ ಶಾಸಕರಿದ್ದ ಕ್ಷೇತ್ರವಾಗಿದೆ ಎಂದು ಹೇಳುವ ಮೂಲಕ ಯೋಗೇಶ್ವರ್‌ಗೆ ಶಾಕ್ ಕೊಟ್ಟಿದ್ದಾರೆ. ಜೊತೆಗೆ, ಚನ್ನಪಟ್ಟಣವನ್ನು ಮೈತ್ರಿ ಧರ್ಮ ಪಾಲನೆ ನಿಟ್ಟಿನಲ್ಲಿ ಜೆಡಿಎಸ್‌ಗೆ ಚನ್ನಪಟ್ಟಣ ಬಿಟ್ಟು ಕೊಡುವ ಸುಳಿವು ನೀಡಿದ್ದಾರೆ. ಈ ವೇಳೆ ಸಿ.ಪಿ ಯೋಗೇಶ್ವರ್ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಜೊತೆ ಹೆಚ್ಚು ಮಾತಾಡದ ಸರಿ ಎಂದೇಳಿ ಕರೆ ಕಟ್ ಮಾಡಿದ್ದಾರೆ.

Latest Videos

ಕಾಂಗ್ರೆಸ್‌ನಲ್ಲಿ ಡಿಸಿಎಂ ದಂಗಲ್ ; ಸಿದ್ದು ಬಣದವರ ಬಡಿದಾಟಕ್ಕೆ ಮೆತ್ತಗಾದ ಡಿಕೆಶಿ.. ಹೆಚ್ಚಾಗುತ್ತಾ ಡಿಸಿಎಂ ಸ್ಥಾನ?

ದೆಹಲಿಯಲ್ಲಿ ಸಿ.ಪಿ ಯೋಗೇಶ್ವರ್ ಲಾಬಿ: ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಜೊತೆ ಫೋನಿನಲ್ಲಿ ಮಾತಾಡಿ ಮುಗಿಸುತ್ತಿದ್ದಂತೆ ದೆಹಲಿ ಮಟ್ಟದಲ್ಲಿ ಲಾಬಿ ಶುರು ಮಾಡಿದ ಸಿ.ಪಿ ಯೋಗೇಶ್ವರ್ ಹೈಕಮಾಂಡ್ ನಾಯಕರ ಭೇಟಿಗೆ ತೆರಳಿದ್ದಾರೆ. ಆಪ್ತ ರಮೇಶ್ ಜಾರಕಿಹೊಳಿ ಜೊತೆ ದೆಹಲಿ ತಲುಪಿದ ಯೋಗೇಶ್ವರ್, ತಮಗೆ ಗೊತ್ತಿರುವ ದೆಹಲಿ ನಾಯಕರ ಮೂಲಕ ಕುಮಾರಸ್ವಾಮಿ ಮೇಲೆ ಒತ್ತಡ ಹೇರಲು ಪ್ರಯತ್ನಿಸ್ತಿದ್ದಾರೆ ಎನ್ನಲಾಗಿದೆ. ಇನ್ನು ರಾಜ್ಯದ ಮೂರು ವಿಧಾನಸಭೆ ಹಾಗೂ ವಿಧಾನ ಪರಿಷತ್ ಚುನಾವಣೆ ಸಂಬಂಧ ಹೈಕಮಾಂಡ್ ನಾಯಕರು ದೆಹಲಿಯಲ್ಲಿ ಮಹತ್ವದ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಕುಮಾರಸ್ವಾಮಿ ಭಾಗಿಯಾಗಲಿದ್ದು, ಚನ್ನಪಟ್ಟಣ ಯಾರಿಗೆ ಎಂಬ ಹೈವೋಲ್ಟೇಜ್ ಪ್ರಶ್ನೆಗೆ ಉತ್ತರ ಹುಡುಕಲಿದ್ದಾರೆ.

ಸಿ.ಪಿ ಯೋಗೇಶ್ವರ್‌ಗೆ ಜೆಡಿಎಸ್‌ನಿಂದ ಟಿಕೆಟ್? 
ಈಗಾಗಲೇ ದೆಹಲಿಯಲ್ಲಿರೋ ವಿಧಾನ ಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್ ತನಗೆ ಚನ್ನಪಟ್ಟಣ ಎಂಎಲ್‌ಎ ಟಿಕೆಟ್ ಬೇಕೇ ಬೇಕೆಂದು ಪಟ್ಟು ಹಿಡಿದಿದ್ದಾರೆ. ಜೆಡಿಎಸ್ ನಾಯಕರು ಹೊಸ ಸೂತ್ರವೊಂದನ್ನ ಮುಂದಿಡಲಿದ್ದಾರೆ ಎನ್ನಲಾಗಿದೆ. ಯೋಗೇಶ್ವರ್ ಸ್ಪರ್ಧಿಸೋದೇ ಆದ್ರೆ ಜೆಡಿಎಸ್ ಪಕ್ಷದ ಟಿಕೆಟ್‌ನಿಂದಲೇ ಸ್ಪರ್ಧಿಸಲಿ ಎಂಬ ಬೇಡಿಕೆ ಮುಂದಿಡಲಿದ್ದಾರೆ. ಆದರೆ, ಈ ಹೊಸ ಸೂತ್ರಕ್ಕೆ ಬಿಜೆಪಿ ಹಾಲಿ ವಿಧಾನ ಪರಿಷತ್ ಸದಸ್ಯರಾಗಿರುವ ಸಿ.ಪಿ ಯೋಗೇಶ್ವರ್ ಒಪ್ಪಿಗೆ ಸೂಚಿಸ್ತಾರಾ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಕುಮಾರಸ್ವಾಮಿ‌ ಚನ್ನಪಟ್ಟಣ ನೋಡೋ‌ ಮೊದಲು ನಾನು‌ ನೋಡಿದ್ದೇನೆ: ಡಿಕೆಶಿ

ಜೆಡಿಎಸ್‌ನಿಂದ ಸ್ಪರ್ಧಿಸಿದರೆ ಬಿಜೆಪಿ ಪರಿಷತ್ ಸ್ಥಾನಕ್ಕೆ ರಾಜೀನಾಮೆ:
ಚನ್ನಪಟ್ಟಣದ ಜೆಡಿಎಸ್ ನಾಯಕರ ಸೂತ್ರದಂತೆ ಸಿ.ಪಿ. ಯೋಗೇಶ್ವರ್ ತಾವು ಜೆಡಿಎಸ್ ಟಿಕೆಟ್ ಪಡೆದು ಸ್ಪರ್ಧೆ ಮಾಡಲು ಮುಂದಾದರೆ ತುಂಬಾ ಸಂಕಷ್ಟಗಳನ್ನು ಎದುರಿಸಬೇಕಾದ ಪರಿಸ್ಥಿತಿ ಉಂಟಾಗಲಿದೆ. ಏಕೆಂದರೆ ಬಿಜೆಪಿಯ ಹಾಲಿ ಪರಿಷತ್ ಸದಸ್ಯರಾಗಿರುವ ಸಿ.ಪಿ. ಯೋಗೇಶ್ವರ್ ಅವಧಿ 2026 ಜುಲೈ 21ರವರೆಗೆ ಚಾಲ್ತಿಯಲ್ಲಿದೆ. ಜೊತೆಗೆ, ಸಿಪಿ ಯೋಗೇಶ್ವರ್ ಅಧಿಕೃತ ಬಿಜೆಪಿ ಸದಸ್ಯರಾಗಿದ್ದಾರೆ. ಹೀಗಾಗಿ, ಚನ್ನಪಟ್ಟಣದಲ್ಲಿ ಜೆಡಿಎಸ್‌ನಿಂದ ಸ್ಪರ್ಧೆ ಮಾಡಬೇಕಾದರೆ, ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ ಕೊಡಬೇಕು. ಹೀಗೆ ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟರೆ ಅವರ ಹಾಲಿ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ. ಒಂದು ವೇಳೆ ಉಪಚುನಾವಣೆಯಲ್ಲಿ ಯೋಗೇಶ್ವರ್ ಸೋತರೆ, ಅತ್ತ ಶಾಸಕ ಸ್ಥಾನವೂ ಇಲ್ಲ.. ಇತ್ತ ಪರಿಷತ್ ಸ್ಥಾನವೂ ಇಲ್ಲ ಎಂಬಂತಾಗುತ್ತದೆ. ಹೀಗಾಗಿ ಶತಾಯಗತಾಯ ಬಿಜೆಪಿ ಟಿಕೆಟ್ ಪಡೆಯಲೇ ಯೋಗೇಶ್ವರ್ ಯತ್ನಿಸ್ತಿದ್ದಾರೆ ಎನ್ನಲಾಗಿದೆ.

ವರದಿ- ಶಿವರಾಜ್ ಸಿ, ಏಷ್ಯಾನೆಟ್ ಸುವರ್ಣ ನ್ಯೂಸ್.

click me!