ವಾಲ್ಮೀಕಿ ನಿಗಮದ ಅಧಿಕಾರಿ ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದರು.
ಶಿವಮೊಗ್ಗ (ಮೇ.31): ವಾಲ್ಮೀಕಿ ನಿಗಮದ ಅಧಿಕಾರಿ ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ ಎಂಬುದಕ್ಕೆ ಚಂದ್ರಶೇಖರನ್ ಅವರ ಆತ್ಮಹತ್ಯೆ ಪ್ರಕರಣವೇ ಉತ್ತಮ ಉದಾಹರಣೆಯಾಗಿದೆ. ವಾಲ್ಮೀಕಿ ನಿಗಮದಲ್ಲಿದ್ದ ಕೋಟ್ಯಾಂತರ ಹಣ ಅವ್ಯವಹಾರವಾಗಿದೆ. ಇದರಲ್ಲಿ ಸುಮಾರು 25 ಕೋಟಿ ರು.ಹಣವನ್ನು ಪಕ್ಕದ ರಾಜ್ಯ ತಮಿಳುನಾಡಿಗೆ ವರ್ಗಾವಣೆ ಮಾಡಲಾಗಿದೆ. ಇದಕ್ಕಾಗಿ ಹೊಸ ಅಕೌಂಟನ್ನೇ ತೆರೆಯಲಾಗಿದೆ.
ಕಾಂಗ್ರೆಸ್ ಸರ್ಕಾರ ಚುನಾವಣೆಗಾಗಿ ಎಟಿಎಂ ರೀತಿಯಲ್ಲಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು. ಸರ್ಕಾರ ತನ್ನ ಬಂಡತನ ಬಿಟ್ಟು ಚಂದ್ರಶೇಖರನ್ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು. ಸಿಐಡಿ, ಸಿಐಟಿಗಳಿಂದ ನ್ಯಾಯ ಸಿಗುವುದಿಲ್ಲ. ಸಮಯ ವ್ಯರ್ಥ ಮಾಡಬಾರದು. ಇದಕ್ಕಾಗಿ ಒಂದು ವಾರದ ಗಡುವು ನೀಡುತ್ತೇವೆ. ವಾರದೊಳಗೆ ಇದನ್ನು ಸಿಬಿಐಗೆ ಒಪ್ಪಿಸದಿದ್ದರೆ ಬಿಜೆಪಿಯಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಚುನಾವಣೆಯ ಸಂದರ್ಭದಲ್ಲಿ ಅನಧೀಕೃತವಾಗಿ ಖಾತೆ ತೆರೆದು ಹೊರರಾಜ್ಯಕ್ಕೆ ಹಣ ಹೋಗಿದೆ ಎಂದರೆ ಇದರಲ್ಲಿ ರಾಜ್ಯ ಸರ್ಕಾರದ ಪಿತೂರಿ ಇರುತ್ತದೆ. ಮುಖ್ಯವಾಗಿ ಇಲಾಖೆಗೆ ಸಂಬಂಧಪಟ್ಟ ಸಚಿವ ನಾಗೇಂದ್ರ ಅವರ ಪಾತ್ರವೂ ಇದೆ. ಕೇವಲ ಅಧಿಕಾರಿಗಳನ್ನು ಮಾತ್ರ ಹೊಣೆಯಾಗಿ ಮಾಡಿದರೆ ಸಾಕಾಗುವುದಿಲ್ಲ. ಚಂದ್ರಶೇಖರನ್ ಅವರು ಬರೆದಿಟ್ಟ ಡೆತ್‍ನೋಟ್‍ನಲ್ಲಿ ಸ್ಪಷ್ಟವಾಗಿ ಸಚಿವರ ಕಚೇರಿಯಿಂದ ಕರೆ ಬಂದಿದ್ದು, ಸಚಿವರು ಮೌಖಿಕವಾಗಿ ಆದೇಶ ನೀಡಿದ್ದರು ಎಂದು ಬರೆದಿಟ್ಟಿದ್ದಾರೆ. ಹಾಗಾಗಿ ಈ ಭ್ರಷ್ಟಾಚಾರ ನಡೆದಿರುವುದು ಖಂಡಿತವಾಗಿದೆ ಎಂದು ತಿಳಿಸಿದರು.
ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣ, ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ನೀಡಲಿ: ಅಶ್ವತ್ಥ ನಾರಾಯಣ್
ಚಂದ್ರಶೇಖರನ್ ಆತ್ಮಹತ್ಯೆಯ ಪ್ರಕರಣ ಹಿನ್ನೆಲೆಯಲ್ಲಿ ಸಚಿವರು ರಾಜೀನಾಮೆ ನೀಡಬೇಕು. ಮೃತ ಚಂದ್ರಶೇಖರನ್ ಕುಟುಂಬಕ್ಕೆ 25 ಲಕ್ಷ ರು. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಸ್.ಎನ್.ಚನ್ನಬಸಪ್ಪ, ಹರತಾಳು ಹಾಲಪ್ಪ, ಡಿ.ಎಸ್.ಅರುಣ್, ರುದ್ರೇಗೌಡರು, ಭಾರತೀಶೆಟ್ಟಿ, ದತ್ತಾತ್ರಿ, ಟಿ.ಡಿ.ಮೇಘರಾಜ್, ಗಾಯಿತ್ರಿ ಮಲ್ಲಪ್ಪ, ಹರಿಕೃಷ್ಣ, ಶಿವರಾಜ್, ನಾಗರಾಜ್, ಚಂದ್ರಶೇಖರ್, ಅಶೋಕ್ ನಾಯಕ್, ಮೋಹನ್‍ರೆಡ್ಡಿ, ಕೆ.ವಿ. ಅಣ್ಣಪ್ಪ ಮತ್ತಿತರರಿದ್ದರು.