ಉಚ್ಛಾಟನೆಗೆ ಏನೂ ಬೆಲೆ ಇಲ್ಲ, ಕಾಂಗ್ರೆಸ್‌ ಸಂಸ್ಕೃತಿ ಬಿಜೆಪಿಯಲ್ಲೂ ಪಾಲನೆ: ಕೆ.ಎಸ್‌.ಈಶ್ವರಪ್ಪ

By Kannadaprabha News  |  First Published May 31, 2024, 9:28 PM IST

ಉಚ್ಛಾಟನೆಗೆ ಬಿಜೆಪಿಯಲ್ಲಿ ಏನೂ ಬೆಲೆ ಇಲ್ಲ. ಕಾಂಗ್ರೆಸ್‌ ಸಂಸ್ಕೃತಿ ಬಿಜೆಪಿಯಲ್ಲೂ ಪಾಲನೆ ಆಗ್ತಾ ಇದೆ. ಪಕ್ಷವನ್ನು ಶುದ್ಧೀಕರಣ ಮಾಡುವ ಉದ್ದೇಶ ಹೊಂದಲಾಗಿದೆ. ಇದಕ್ಕೆ ಪ್ರತಿಯೊಬ್ಬ ಕಾರ್ಯಕರ್ತರು ಸಹಕರಿಸಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಕರೆ ನೀಡಿದರು. 


ಚಿಕ್ಕಮಗಳೂರು (ಮೇ.31): ಉಚ್ಛಾಟನೆಗೆ ಬಿಜೆಪಿಯಲ್ಲಿ ಏನೂ ಬೆಲೆ ಇಲ್ಲ. ಕಾಂಗ್ರೆಸ್‌ ಸಂಸ್ಕೃತಿ ಬಿಜೆಪಿಯಲ್ಲೂ ಪಾಲನೆ ಆಗ್ತಾ ಇದೆ. ಪಕ್ಷವನ್ನು ಶುದ್ಧೀಕರಣ ಮಾಡುವ ಉದ್ದೇಶ ಹೊಂದಲಾಗಿದೆ. ಇದಕ್ಕೆ ಪ್ರತಿಯೊಬ್ಬ ಕಾರ್ಯಕರ್ತರು ಸಹಕರಿಸಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಕರೆ ನೀಡಿದರು. ನೈರುತ್ಯ ಪದವೀಧರರ ಕ್ಷೇತ್ರದಿಂದ ಸ್ಪರ್ಧೆ ಮಾಡಿರುವ ರಘುಪತಿ ಭಟ್‌ ಪರವಾಗಿ ಪ್ರಚಾರ ನಡೆಸಲು ಚಿಕ್ಕಮಗಳೂರಿಗೆ ಗುರುವಾರ ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಅವರು ಕಾಂಗ್ರೆಸ್ ಪಕ್ಷದಿಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದಾಗ ಅವರನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡಲಾಗಿತ್ತು. 

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅವರನ್ನು ಮತ್ತೆ ಪಕ್ಷಕ್ಕೆ ಕರೆದುಕೊಂಡು ಬಂದು ಟಿಕೆಟ್‌ ಕೊಟ್ಟರು ಎಂದು ಹೇಳಿದರು. ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಚುನಾವಣಾ ಪ್ರಚಾರ ಮಾಡಿದರೆ ಉಚ್ಛಾಟನೆ ಮಾಡುತ್ತಾರೆಂಬ ಆತಂಕ ಯಾರಿಗೂ ಬೇಡ. ಹಿಂದೂತ್ವ, ವಿಚಾರ ಹಾಗೂ ಸಿದ್ಧಾಂತ ಇಟ್ಟು ಕೊಂಡಿರುವ ಕಾರ್ಯಕರ್ತರು ನಿಷ್ಟಾವಂತ ಕಾರ್ಯಕರ್ತ ರಘುಪತಿ ಭಟ್‌ ಪರವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಬೇಕು ಎಂದು ಕರೆ ನೀಡಿದರು.

Tap to resize

Latest Videos

undefined

ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣ, ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ನೀಡಲಿ: ಅಶ್ವತ್ಥ ನಾರಾಯಣ್

ಬಿಜೆಪಿ ಕಾರ್ಯಕರ್ತರು ತುಂಬಾ ನೋವಿನಲ್ಲಿದ್ದಾರೆ. ರಘುಪತಿ ಭಟ್‌ ಅವರಿಗೆ ಪಕ್ಷದ ಟಿಕೆಟ್‌ ನೀಡದೆ, ಇತ್ತೀಚೆಗೆ ಬಂದಿರುವ ವ್ಯಕ್ತಿಗೆ ಪದವೀಧರರ ಕ್ಷೇತ್ರದ ಟಿಕೆಟ್‌ ನೀಡಲಾಗಿದೆ. ಇದು, ತುಂಬಾ ಬೇಸರದ ಸಂಗತಿ, ಈ ವಿಷಯವನ್ನು ಹಲವು ಮಂದಿ ಪಕ್ಷದ ಮುಖಂಡರು, ಕಾರ್ಯಕರ್ತರು ನಮ್ಮ ಬಳಿ ಹೇಳಿಕೊಂಡಿದ್ದಾರೆ ಎಂದ ಅವರು, ರಘುಪತಿ ಪರವಾಗಿ ಕೆಲವರು ನೇರವಾಗಿ ಪ್ರಚಾರದಲ್ಲಿ ತೊಡಗಿದ್ದರೆ ಮತ್ತೆ ಕೆಲವರು ಪರೋಕ್ಷವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.

ಹಿಂದುತ್ವದ ಬಗ್ಗೆ ಕಲ್ಪನೆ ಇಲ್ಲದ, ಹರ್ಷ ಕೊಲೆಯಾಗಿದ್ದ ಸಂದರ್ಭದಲ್ಲಿ ನಕ್ಸಲೀಯರನ್ನು ಬೆಂಬಲಿಸಿದ ಸಂಘಟನೆ ನೇತೃತ್ವದಲ್ಲಿ ಶಿವಮೊಗ್ಗದಲ್ಲಿ ನಡೆದಿದ್ದ ಪ್ರತಿಭಟನೆಗೆ ನೇರವಾಗಿ ಬೆಂಬಲ ಸೂಚಿಸಿದ್ದ ವ್ಯಕ್ತಿಗೆ ಟಿಕೆಟ್‌ ನೀಡಲಾಗಿದೆ. ಬಿ.ಎಸ್‌. ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರ ಪ್ರಭಾವದಿಂದ ಟಿಕೆಟ್‌ ಪಡೆಯುವುದರಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ನಿಷ್ಟಾವಂತರಿಗೆ ನೋವಾಗಿದೆ ಎಂದು ಹೇಳಿದರು.

ಹಿಂದೆ ಪಕ್ಷದಲ್ಲಿ ಸಾಮಾಜಿಕ ನ್ಯಾಯ ಇತ್ತು, ವಿಧಾನಸಭೆ, ವಿಧಾನಪರಿಷತ್‌, ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪಕ್ಷದ ಹಿರಿಯ ನಾಯಕರು, ಚರ್ಚಿಸಿ ಟಿಕೆಟ್‌ ನೀಡುತ್ತಿದ್ದರು. ಆದರೆ, ಇದೀಗ ಈ ಸಂಪ್ರದಾಯ ಇಲ್ಲವಾಗಿದೆ. ಪಕ್ಷ ತಂದೆ ಮಕ್ಕಳ ಕೈಯಲ್ಲಿ ಸಿಲುಕಿದೆ. ಕಾಂಗ್ರೆಸ್‌ ಪಕ್ಷ ಸೋನಿಯಾಗಾಂಧಿ ಹಾಗೂ ರಾಹುಲ್‌ಗಾಂಧಿಯವರ ಕೈಯಲ್ಲಿದೆ. ಈ ಸಂಪ್ರದಾಯ ಬಿಜೆಪಿಯಲ್ಲೂ ಪಾಲನೆ ಆಗ್ತಾ ಇದೆ. ಪಕ್ಷದಲ್ಲಿ ಸಾಮೂಹಿಕ ನಾಯಕತ್ವ ಇಲ್ಲಂದಾಗಿದೆ. ಇದರಿಂದ ಮುಕ್ತ ಮಾಡಬೇಕು ಎಂಬುದು ಕಾರ್ಯಕರ್ತರ ಅಪೇಕ್ಷೆಯಾಗಿದೆ ಎಂದರು.

ಸಂಗೋಳ್ಳಿ ರಾಯಣ್ಣ ಬ್ರಿಗೇಡ್‌ ಕಟ್ಟುವ ಸಂದರ್ಭದಲ್ಲಿ ಯಡಿಯೂರಪ್ಪ ತೀವ್ರವಾಗಿ ವಿರೋಧಿಸಿದ್ದರು. ಈ ವಿಷಯವನ್ನು ವರಿಷ್ಟರ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದರು. ನನಗೂ ಕೂಡ ವರಿಷ್ಟರು ಕರೆಸಿದ್ದರು. ರಾಯಣ್ಣ ಬ್ರಿಗೇಡ್‌ ಸ್ಥಾಪನೆ ಯಾಗುವುದನ್ನು ತಡೆಯುವಲ್ಲಿ ಯಡಿಯೂರಪ್ಪ ಯಶಸ್ವಿಯಾದರು ಎಂದ ಅವರು, ಈ ಸಂಘಟನೆ ಹುಟ್ಟಿಕೊಂಡಿದ್ದರೆ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವಷ್ಟು ಬಹುಮತ ಬರುತ್ತಿರಲಿಲ್ಲ. ಬಿಜೆಪಿ ಈ ಮಟ್ಟದಲ್ಲಿ ಕುಸಿಯುತ್ತಿರಲಿಲ್ಲ ಎಂದು ಹೇಳಿದರು.

ಮೈತ್ರಿಕೂಟದ ಅಭ್ಯರ್ಥಿ ರಿಯಲ್ ಎಸ್ಟೇಟ್ ಉದ್ಯಮಿ: ಸಚಿವ ಚಲುವರಾಯಸ್ವಾಮಿ ಲೇವಡಿ

ವರಿಷ್ಟರ ಭ್ರಮೆ: ಯಡಿಯೂರಪ್ಪ ಅವರು ಹೇಳಿದಂತೆ ಕೇಳುವ ಭ್ರಮೆಯಲ್ಲಿ ಪಕ್ಷದ ವರಿಷ್ಟರು ಇದ್ದಾರೆ. ತಾವೊಬ್ಬರೆ ಲಿಂಗಾಯಿತ ಸಮುದಾಯದ ನಾಯಕರೆಂದು ಬಿಂಬಿಸಿಕೊಂಡಿದ್ದಾರೆ. ಬಸನಗೌಡ ಪಾಟೀಲ್‌ ಯತ್ನಾಳ್‌ ಲಿಂಗಾಯಿತ ಸಮುದಾಯ ದವರು ಇಲ್ವಾ, ಸಿ.ಟಿ. ರವಿ ಒಕ್ಕಲಿಗ ನಾಯಕರು. ಯಡಿಯೂರಪ್ಪ ಹೇಳಿದ್ದೆ ಸರಿ ಎಂಬ ಭ್ರಮೆಯಿಂದ ವರಿಷ್ಟರು ಹೊರಗೆ ಬರಬೇಕು ಎಂದರು. ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡುವ ಉದ್ದೇಶದಿಂದ ವಿಧಾನಸಭೆ ಪ್ರತಿಪಕ್ಷದ ನಾಯಕರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ತುಂಬಲು ಸುಮಾರು 6 ತಿಂಗಳು ಸತಾಯಿಸಿದರು ಎಂದು ಆರೋಪಿಸಿದ ಅವರು, ಬಿಜೆಪಿ ನನ್ನ ತಾಯಿ, ಸಾಯುವವರೆಗೆ ಪಕ್ಷದ ಸಿದ್ಧಾಂತಕ್ಕಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.

click me!