
ವಿಜಯಪುರ(ಜೂ.11): ಕೋಮು ಭಾವನೆ ಕೆರಳಿಸುವ ಭಾಷಣ ಮಾಡುವ ಚಕ್ರವರ್ತಿ ಸೂಲಿಬೆಲೆ ಅವರಿಗೆ ಜೈಲಿಗೆ ಅಟ್ಟಲಾಗುವುದು ಎಂದು ಭಾರಿ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಅವರು ನೀಡಿದ ಹೇಳಿಕೆ ಸರಿಯಾಗಿದೆ. ಬಿಜೆಪಿಯವರು ಚಕ್ರವರ್ತಿ ಸೂಲಿಬೆಲೆ ದೇಶಭಕ್ತ ಎಂದು ಸಮರ್ಥನೆ ಮಾಡಿಕೊಂಡು ಸಚಿವ ಎಂ.ಬಿ.ಪಾಟೀಲ ವಿರುದ್ಧ ವಾಗ್ದಾಳಿ ನಡೆಸುತ್ತಿರುವುದು ಸರಿಯಲ್ಲ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಹಾಗೂ ಅಹಿಂದ ಮುಖಂಡ ಎಸ್.ಎಂ.ಪಾಟೀಲ ಗಣಿಹಾರ ಹೇಳಿದರು.
ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಕ್ರವರ್ತಿ ಸೂಲಿಬೆಲೆ ಅವರು ದ್ವೇಷ ಕಾರುವ ಭಾಷಣ ಮಾಡಬಾರದು. ಈ ರೀತಿ ದ್ವೇಷ ಬಿತ್ತಿದರೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಎಂ.ಬಿ.ಪಾಟೀಲ ಹೇಳಿರುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ಇದನ್ನೇ ದೇಶಭಕ್ತರಿಗೆ ಮಾಡುವ ಅವಮಾನ ಎಂದು ಬಿಜೆಪಿ ನಾಯಕರು ಹೇಳುತ್ತಿರುವುದು ಸರಿಯಲ್ಲ. ಕೇವಲ ದ್ವೇಷ ಬಿತ್ತಿ, ಸುಳ್ಳು ಭಾಷಣ ಮಾಡುವುದು ದೇಶಭಕ್ತಿ ಅಲ್ಲ ಎಂದರು.
ನನ್ನ ವಿದ್ಯಾರ್ಹತೆ ಮಾಹಿತಿ ಬೇಕಾ ಅಫಿಡವಿಟ್ ನೋಡ್ಕೊಳಿ: ಸಚಿವ ಪ್ರಿಯಾಂಕ ಖರ್ಗೆ ತಿರುಗೇಟು
ಈ ಹಿಂದೆ ಬುಲೆಟ್‌ಟ್ರೇನ್, ಕಪ್ಪುಹಣ, ಪ್ರತಿನಿತ್ಯ ಆಸ್ಪತ್ರೆಗಳ ವ್ಯವಸ್ಥೆಯನ್ನು ಮೋದಿ ಅವರು ಲ್ಯಾಪ್‌ಟಾಪ್ ಮೂಲಕ ಅವಲೋಕಿಸುತ್ತಿರುವ ಬಗ್ಗೆ ಹೇಳಿಕೆ ನೀಡಿ ನಗೆಪಾಟಲಿಗೆ ಈಡಾಗಿದ್ದು ಚಕ್ರವರ್ತಿ ಸೂಲಿಬೆಲೆ ಅವರ ಇತಿಹಾಸ ಹಾಗೂ ಹಾಗೂ ಅವರು ಸುಳ್ಳಿನ ಸರದಾರ ಎಂಬುದು ನಾಡಿನ ಜನತೆಗೆ ಗೊತ್ತಿದೆ ಎಂದರು.
ಮನುವಾದಿಗಳ ವಿಚಾರ, ಸಂಘ ಪರಿವಾರದ ವಿಚಾರಗಳನ್ನು ಪಠ್ಯಪುಸ್ತಕದಲ್ಲಿ ಸೇರ್ಪಡೆ ಮಾಡಲಾಗಿದ್ದು, ಕೂಡಲೇ ಅದನ್ನು ತೆಗೆದುಹಾಕಬೇಕು. ಪಠ್ಯಪುಸ್ತಕ ಪರಿಷ್ಕರಣೆಗೆ ಆರ್ಥಿಕ ಹೊರೆ ಆಗುತ್ತದೆ ಎಂದು ಹೇಳುವ ಬಿಜೆಪಿ ನಾಯಕರು ಕೇವಲ ಮೂಗಿನ ನೇರಕ್ಕೆ ಮಾತನಾಡುವುದನ್ನು ಚಾಳಿ ಮಾಡಿಕೊಂಡಿದ್ದಾರೆ ಎಂದು ಹೇಳಿದರು.
ಸರ್ಕಾರದ ಆರ್ಥಿಕ ಪರಿಸ್ಥಿತಿ ಹಾಳಾಗುತ್ತದೆ ಎಂದು ಗ್ಯಾರಂಟಿ ವಿರೋಧಿಸಿದ್ದ ಜನರೇ ಇಂದು ಗ್ಯಾರಂಟಿ ಕೊಡಿ, ಗ್ಯಾರಂಟಿ ಕೊಡಿ ಎಂದು ಕೇಳುತ್ತಿದ್ದಾರೆ. ಇಂದು ಅಧಿಕಾರ ಇಲ್ಲದ ಬಿಜೆಪಿ ನಾಯಕರ ಪರಿಸ್ಥಿತಿ ನೀರಿನಿಂದ ಹೊರಬಂದ ಮೀನಿನಂತೆ ವಿಲವಿಲ ಒದ್ದಾಡುವಂತಾಗಿದೆ ಎಂದು ವ್ಯಂಗ್ಯವಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.