ಈವರೆಗೂ ಹಿಂದುಳಿದ ಜಿಲ್ಲೆಯಾಗಿರುವ ಬಳ್ಳಾರಿ: ಅಭಿವೃದ್ಧಿಗೆ ನಿರೀಕ್ಷಿತ ವೇಗ ನೀಡುವರೇ ನಾಗೇಂದ್ರ?

By Kannadaprabha News  |  First Published Jun 11, 2023, 1:21 PM IST

ನಿರೀಕ್ಷೆಯಂತೆಯೇ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಗ್ರಾಮೀಣ ಶಾಸಕ ನಾಗೇಂದ್ರ ನೇಮಕಗೊಂಡಿದ್ದಾರೆ. ಆದರೆ, ಮಂತ್ರಿಯಾಗಿ ಇಡೀ ಜಿಲ್ಲೆಯನ್ನು ಸಮಗ್ರ ಅಭಿವೃದ್ಧಿಯೆಡೆಗೆ ಕೊಂಡೊಯ್ಯಲು ಎಷ್ಟರಮಟ್ಟಿಗೆ ಸಚಿವ ನಾಗೇಂದ್ರ ಶ್ರಮಿಸಲಿದ್ದಾರೆ. ಸರ್ಕಾರದಲ್ಲಿ ಪಟ್ಟು ಹಿಡಿದು ಎಷ್ಟುಅನುದಾನ ತರಲಿದ್ದಾರೆ ಎಂಬ ಕುತೂಹಲವೂ ಇದೆ.


ಕೆ.ಎಂ. ಮಂಜುನಾಥ್‌

ಬಳ್ಳಾರಿ (ಜೂ.11) ನಿರೀಕ್ಷೆಯಂತೆಯೇ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ Naಗೇಂದ್ರ ನೇಮಕಗೊಂಡಿದ್ದಾರೆ. ಆದರೆ, ಮಂತ್ರಿಯಾಗಿ ಇಡೀ ಜಿಲ್ಲೆಯನ್ನು ಸಮಗ್ರ ಅಭಿವೃದ್ಧಿಯೆಡೆಗೆ ಕೊಂಡೊಯ್ಯಲು ಎಷ್ಟರಮಟ್ಟಿಗೆ ಸಚಿವ ನಾಗೇಂದ್ರ ಶ್ರಮಿಸಲಿದ್ದಾರೆ. ಸರ್ಕಾರದಲ್ಲಿ ಪಟ್ಟು ಹಿಡಿದು ಎಷ್ಟುಅನುದಾನ ತರಲಿದ್ದಾರೆ ಎಂಬ ಕುತೂಹಲವೂ ಇದೆ.

Tap to resize

Latest Videos

undefined

ವಾಲ್ಮೀಕಿ ಸಮಾಜದ ವರ್ಚಸ್ಸಿನ ಬಿಜೆಪಿ ಮುಖಂಡ ಶ್ರೀರಾಮುಲು ಅವರನ್ನು ಮಣಿಸಿದ ಬಿ. ನಾಗೇಂದ್ರ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಸಿಗುವುದು ಖಚಿತವಾಗಿತ್ತು. ಸಚಿವ ಸ್ಥಾನ ಸಿಗುತ್ತಿದ್ದಂತೆಯೇ ಜಿಲ್ಲಾ ಉಸ್ತುವಾರಿಯ ಹೊಣೆಯೂ ನಾಗೇಂದ್ರ ಅವರ ಹೆಗಲೇರಲಿದೆ ಎಂಬ ನಿರೀಕ್ಷೆಯೂ ಇತ್ತು. ಅಂತೆಯೇ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಆದರೆ, ಮಂತ್ರಿಯಾಗಿ ನಗರ ಸೇರಿದಂತೆ ಜಿಲ್ಲೆಯಲ್ಲಿ ಅರೆಬರೆಯಾಗಿರುವ ಅನೇಕ ಯೋಜನೆಗಳನ್ನು ಪೂರ್ಣಗೊಳಿಸಿ ಜನಾಶಯದಂತೆಯೇ ಕಾರ್ಯನಿರ್ವಹಿಸಬಲ್ಲರೇ ಎಂಬುದೇ ಸದ್ಯಕ್ಕಿರುವ ಕೌತುಕ.

ಗೆಲುವಿನ ಹರಕೆ ತೀರಿಸಿದ ಶಾಸಕ ನಾಗೇಂದ್ರ: ರಾಜಸ್ಥಾನದ ಅಜ್ಮೀರ ದರ್ಗಾಕ್ಕೆ ಭೇಟಿ

ಗಣಿ ಜಿಲ್ಲೆಯಲ್ಲಿ ಸಾಲುಸಾಲು ಸಮಸ್ಯೆಗಳು:

ಬಳ್ಳಾರಿ ನಗರದ ಪ್ರಮುಖ ಕೆಲವೊಂದು ರಸ್ತೆಗಳು ಬಿಟ್ಟರೆ ಉಳಿದವು ಡಾಂಬರು ಕಂಡಿಲ್ಲ. ಇದರಿಂದ ಬಳ್ಳಾರಿ ಧೂಳುಮುಕ್ತವಾಗಿಲ್ಲ. ಜನನಿಬಿಡ ಪ್ರದೇಶಗಳಲ್ಲಿಯೇ ರಸ್ತೆ ಅತಿಕ್ರಮಣವಾಗಿ ಸಂಚಾರಿ ದಟ್ಟಣೆ ಹೆಚ್ಚಾಗುತ್ತಿದೆ. ಭಾರೀ ವಾಹನಗಳ ಓಡಾಟದಿಂದ ನಗರದಲ್ಲಿ ನಿತ್ಯ ಅಪಘಾತ ಪ್ರಕರಣಗಳು ಹೆಚ್ಚುತ್ತಿವೆ. ಅವೈಜ್ಞಾನಿಕವಾಗಿ ನಿರ್ಮಿಸಿರುವ ಬಸ್‌ ಶೆಲ್ಟರ್‌ಗಳು ಜನಬಳಕೆಯಾಗುತ್ತಿಲ್ಲ. ಕುಡಿಯುವ ನೀರು, ಚರಂಡಿಗಳ ಪೈಪ್‌ಲೈನ್‌ ಬದಲಾಯಿಸಿಲ್ಲ. ಹಳೆಯ ಪೈಪ್‌ಗಳಿಂದಾಗಿ ಕುಡಿಯುವ ನೀರಲ್ಲಿ ಚರಂಡಿ ನೀರು ಮಿಶ್ರಣವಾಗಿ ಬರುತ್ತಿದೆ ಎಂದು ಸಾರ್ವಜನಿಕರು ಅಳಲು ತೋಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ.

ಬೇಸಿಗೆಯಲ್ಲಿ ನೀರಿನ ಅಭಾವ ನೀಗಿಸುವ ಕ್ರಮಗಳಾಗಿಲ್ಲ. ಮಳೆಗಾಲದಲ್ಲಿ ನಗರದ ಅನೇಕ ಕಾಲನಿಗಳು ಜಲಾವೃತಗೊಂಡು ನಿವಾಸಿಗಳು ತೀವ್ರ ತೊಂದರೆಗೆ ಈಡಾಗುತ್ತಿದ್ದು, ಅವರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವಾಗಿಲ್ಲ.

ಜೀನ್ಸ್‌ ಉದ್ಯಮ ಸಾವಿರಾರು ಕಾರ್ಮಿಕರಿಗೆ ಬದುಕು ರೂಪಿಸಿದ್ದು, ಉದ್ಯಮಿಗಳು ಎದುರಿಸುತ್ತಿರುವ ಹತ್ತಾರು ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವಾಗಿಲ್ಲ. ನಗರದ ಮೇಲ್ಸೇತುವೆಗಳು, ವಿಮಾನ ನಿಲ್ದಾಣ ನಿರ್ಮಾಣಕ್ಕೆ ಒತ್ತು ನೀಡಿಲ್ಲ. ನಗರದ ಉದ್ಯಾನಗಳು ಸಂಪೂರ್ಣ ಹಾಳಾಗಿದ್ದು, ಭಾಗಶಃ ಉದ್ಯಾನಗಳು ಬಳಕೆಯಲ್ಲಿಲ್ಲ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಪ್ರಗತಿಗೆ ವಿಪುಲ ಅವಕಾಶಗಳಿದ್ದು, ಈ ವರೆಗೆ ಯಾರೂ ಕಾಳಜಿಯ ಕ್ರಮಕೈಗೊಂಡಿಲ್ಲ. ಮೆಣಸಿನಕಾಯಿ ಮಾರುಕಟ್ಟೆಸ್ಥಾಪನೆಯ ಉದ್ದೇಶಕ್ಕೆ ಇನ್ನು ಚಾಲನೆ ಸಿಕ್ಕಿಲ್ಲ. ನಗರದ ಬೈಪಾಸ್‌ ರಸ್ತೆ ಪೂರ್ಣವಾಗಿಲ್ಲ.

ಹಳ್ಳಿಗಳಲ್ಲೂ ಸಂಕಷ್ಟ:

ಇನ್ನು ತಾಲೂಕು ಕೇಂದ್ರಗಳಲ್ಲಿನ ಆಸ್ಪತ್ರೆಗಳು ವೈದ್ಯಕೀಯ ಸಿಬ್ಬಂದಿ ಕೊರತೆ ಕಾಡುತ್ತಿದ್ದು, ಸಮರ್ಪಕ ಆರೋಗ್ಯ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ. ಹಳ್ಳಿಗಳ ರಸ್ತೆಗಳು ಸಂಚಾರ ಯೋಗ್ಯವಾಗಿಲ್ಲ. ಈ ಹಿಂದಿನ ಅನೇಕ ನೀರಾವರಿ ಯೋಜನೆಗಳು ಅನುಷ್ಠಾನಗೊಳ್ಳದೆ ಅರೆಬರೆಯಾಗಿವೆ. ಕಂಪ್ಲಿ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಒತ್ತು ನೀಡಬೇಕು ಎಂಬ ಕೂಗು ನಿರಂತರವಾಗಿದೆ. ಸರ್ಕಾರಿ ಕಚೇರಿಗಳ ಭ್ರಷ್ಟಾಚಾರಕ್ಕೆ ಜನರು ರೋಸಿ ಹೋಗಿದ್ದಾರೆ. ಖಾಸಗಿ ಆಸ್ಪತ್ರೆಗಳು ಹಾಗೂ ಖಾಸಗಿ ಶಾಲಾ-ಕಾಲೇಜುಗಳ ಹಣದಾಹಕ್ಕೆ ನಿಯಂತ್ರಣವಿಲ್ಲ. ಜಿಲ್ಲೆಯ ಅನೇಕ ಗ್ರಾಮಗಳಿಗೆ ಬಸ್‌ ಸೌಕರ್ಯವಿಲ್ಲ. ನಾನಾ ನೆಪವೊಡ್ಡಿ ಬಸ್‌ ಸಂಚಾರ ಸ್ಥಗಿತಗೊಂಡಿದ್ದು ವಿದ್ಯಾರ್ಥಿಗಳ ಪರದಾಟ ಮುಂದುವರಿದೆ.

ಅಧಿಕಾರಿಗಳ ನಿರ್ಲಕ್ಷ್ಯಗಳಿಂದಾಗಿ ಮಹತ್ವದ ಉದ್ಯೋಗ ಖಾತ್ರಿ ಯೋಜನೆ ಪರಿಣಾಮಕಾರಿ ಅನುಷ್ಠಾನವಾಗುತ್ತಿಲ್ಲ. ಪಂಚಾಯಿತಿ ಮಟ್ಟದಲ್ಲಾಗಬೇಕಾದ ಸಣ್ಣಪುಟ್ಟಕೆಲಸಗಳು ಸಹ ಹಿನ್ನಡೆ ಕಂಡಿದ್ದು, ಗ್ರಾಮೀಣರು ನಾನಾ ಸಮಸ್ಯೆ ಎದುರಿಸುವಂತಾಗಿದೆ. ಹೀಗೆ ಜಿಲ್ಲೆಯಲ್ಲಿ ಸಾಲುಸಾಲು ಸಮಸ್ಯೆಗಳು ಇದ್ದು, ಈ ಎಲ್ಲವನ್ನು ನೂತನ ಜಿಲ್ಲಾ ಸಚಿವರು ಹೇಗೆ ಸವಾಲಾಗಿ ಸ್ವೀಕರಿಸಿ, ಜಿಲ್ಲೆಯ ಅಭಿವೃದ್ಧಿಯ ಕಡೆ ಗಮನ ನೀಡುತ್ತಾರೆ. ದಕ್ಷ ಆಡಳಿತ ಜಾರಿಗೆ ಹೇಗೆ ಕ್ರಮ ವಹಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.

ಶ್ರೀರಾಮುಲು ಅವರಂತ ದೊಡ್ಡ ನಾಯಕನನ್ನು ಸೋಲಿಸಿರುವೆ, ನಾನು ಮಂತ್ರಿ ಆಕಾಂಕ್ಷಿ: ನಾಗೇಂದ್ರ

ಬಳ್ಳಾರಿ ಜಿಲ್ಲೆಯ ಅಭಿವೃದ್ಧಿಗೆ ಸಚಿವ ನಾಗೇಂದ್ರ ಏನು ಮಾಡಬಹುದು?

* ಈಗಾಗಲೇ ಚಾಲ್ತಿಯಲ್ಲಿರುವ ಅನೇಕ ಯೋಜನೆಗಳನ್ನು ಪೂರ್ಣಗೊಳಿಸುವ ಬದ್ಧತೆ ಪ್ರದರ್ಶಿಸಬೇಕು

* ಜನಕಲ್ಯಾಣ ವಿಚಾರದಲ್ಲಿ ರಾಜಕೀಯ ಮಾಡದೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕಡೆ ಗಮನ ನೀಡಬೇಕು

* ಜಿಲ್ಲೆಯ ಎಲ್ಲ ಶಾಸಕರ ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆಗಳ ಕಾರ್ಯಗತ ಮಾಡಬೇಕು

* ಅನುದಾನವಿಲ್ಲದೆ ಬಳಲುತ್ತಿರುವ ಯೋಜನೆ ಅಥವಾ ಇಲಾಖೆಗಳ ಕಡೆ ಹೆಚ್ಚು ಗಮನ ನೀಡಬೇಕು

* ಸಿಎಂ ಹಾಗೂ ವಿವಿಧ ಸಚಿವರ ಜತೆ ನಿರಂತರ ಸಂಪರ್ಕದಿಂದ ಜಿಲ್ಲೆಗೆ ಹೆಚ್ಚೆಚ್ಚು ಅನುದಾನ ತರಬೇಕು

* ಆಯಾಕಟ್ಟಿನ ಸ್ಥಳದಲ್ಲಿ ಬೇರೂರಿ ಕೆಲಸದಲ್ಲಿ ಕ್ಷಮತೆ ತೋರದ ಅಧಿಕಾರಿಗಳಿಗೆ ವರ್ಗಾವಣೆ ದಾರಿ ತೋರಿಸಬೇಕು

* ಜಿಲ್ಲೆಯ ಜನರು ಮೂಲ ಸೌಕರ್ಯದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು

click me!