ತರೀಕೆರೆ ಕದನ: ತರೀಕೆರೆಯಲ್ಲಿ ಪಕ್ಷಕ್ಕಿಂತ ಜಾತಿ ಗೆಲುವೇ ಪ್ರತಿಷ್ಠೆಯ ಪ್ರಶ್ನೆ

By Kannadaprabha News  |  First Published Apr 15, 2023, 12:45 PM IST

ಸಾಂಪ್ರದಾಯಿಕವಾಗಿ ತರೀಕೆರೆ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆ. ಆದರೆ, ಕಳೆದ ಬಾರಿ ಕಾಂಗ್ರೆಸ್‌ನ ಈ ಭದ್ರಕೋಟೆಯನ್ನು ಭೇದಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದ್ದು, ಬಿಜೆಪಿಯಿಂದ ಸ್ಪರ್ಧಿಸಿದ್ದ ಡಿ.ಎಸ್‌.ಸುರೇಶ್‌, ಗೆಲುವಿನ ನಗೆ ಬೀರಿದ್ದರು. ಹಾಲಿ ಶಾಸಕ ಡಿ.ಎಸ್‌.ಸುರೇಶ್‌ಗೆ ಈ ಬಾರಿಯೂ ಬಿಜೆಪಿ ಟಿಕೆಟ್‌ ನೀಡಿದೆ. ಕ್ಷೇತ್ರದಲ್ಲಿ ಈಗಾಗಲೇ ಅವರು ಪ್ರಚಾರ ಆರಂಭಿಸಿದ್ದು, ಈ ಬಾರಿಯೂ ಕಾಂಗ್ರೆಸ್‌ನ್ನು ಮಣಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.


ಆರ್‌.ತಾರಾನಾಥ್‌

ಚಿಕ್ಕಮಗಳೂರು(ಏ.15):  ರಾಜಕೀಯ ಪಕ್ಷಗಳಿಗಿಂತ ಲಿಂಗಾಯಿತ ಮತ್ತು ಕುರುಬ ಸಮುದಾಯಗಳಿಗೆ ಪ್ರತಿಷ್ಠೆಯ ಕ್ಷೇತ್ರವಾಗಿದೆ ಚಿಕ್ಕಮಗಳೂರಿನ ತರೀಕೆರೆ ವಿಧಾನಸಭಾ ಕ್ಷೇತ್ರ. 1952ರಿಂದ ಈವರೆಗೆ ನಡೆದಿರುವ 15 ವಿಧಾನಸಭಾ ಚುನಾವಣೆ, ಒಂದು ಉಪ ಚುನಾವಣೆಯ ಫಲಿತಾಂಶಗಳ ಪುಟ ತಿರುವಿ ಹಾಕಿದಾಗ ಕಾಣ ಸಿಗುವ ನೋಟವಿದು. ಇಲ್ಲಿ ಒಮ್ಮೆ ಲಿಂಗಾಯಿತ ಸಮುದಾಯದವರು ಗೆದ್ದರೆ, ಮತ್ತೊಮ್ಮೆ, ಕುರುಬ ಸಮುದಾಯಕ್ಕೆ ಮತದಾರರು ಅವಕಾಶ ನೀಡಿದ್ದಾರೆ. ಪ್ರತಿ ಚುನಾವಣೆಯಲ್ಲೂ ಈ ಸಮುದಾಯಗಳಿಗೆ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸುವುದು ಪ್ರತಿಷ್ಠೆಯ ವಿಷಯವಾಗಿದೆ.

Latest Videos

undefined

ಸಾಂಪ್ರದಾಯಿಕವಾಗಿ ತರೀಕೆರೆ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆ. ಆದರೆ, ಕಳೆದ ಬಾರಿ ಕಾಂಗ್ರೆಸ್‌ನ ಈ ಭದ್ರಕೋಟೆಯನ್ನು ಭೇದಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದ್ದು, ಬಿಜೆಪಿಯಿಂದ ಸ್ಪರ್ಧಿಸಿದ್ದ ಡಿ.ಎಸ್‌.ಸುರೇಶ್‌, ಗೆಲುವಿನ ನಗೆ ಬೀರಿದ್ದರು. ಹಾಲಿ ಶಾಸಕ ಡಿ.ಎಸ್‌.ಸುರೇಶ್‌ಗೆ ಈ ಬಾರಿಯೂ ಬಿಜೆಪಿ ಟಿಕೆಟ್‌ ನೀಡಿದೆ. ಕ್ಷೇತ್ರದಲ್ಲಿ ಈಗಾಗಲೇ ಅವರು ಪ್ರಚಾರ ಆರಂಭಿಸಿದ್ದು, ಈ ಬಾರಿಯೂ ಕಾಂಗ್ರೆಸ್‌ನ್ನು ಮಣಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.

ದಿನಕೊಂದು ತೀರ್ಮಾನ, ಕ್ಷಣಕೊಂದು ಹೇಳಿಕೆ: ಅತಂತ್ರ ಸ್ಥಿತಿಯಲ್ಲಿ ಜೆಡಿಎಸ್‌ ಘೋಷಿತ ಅಭ್ಯರ್ಥಿಗಳು

ಇನ್ನು ಕಾಂಗ್ರೆಸ್‌, ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಪ್ರಕಟಿಸಿದರೂ, ತರೀಕೆರೆ ಕ್ಷೇತ್ರಕ್ಕೆ ಅಭ್ಯರ್ಥಿಯ ಹೆಸರನ್ನು ಘೋಷಿಸಿಲ್ಲ. ಕಾಂಗ್ರೆಸ್‌ನಿಂದ ಇಲ್ಲಿ ಟಿಕೆಟ್‌ ಕೋರಿ 13 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ, ಟಿಕೆಟ್‌ ಘೋಷಣೆಯಾದ ಕೂಡಲೇ ಟಿಕೆಟ್‌ ವಂಚಿತರು ಬಂಡಾಯ ಏಳುವ ಸಾಧ್ಯತೆ ಹೆಚ್ಚು. ಈ ಕಾರಣಕ್ಕಾಗಿ ಕೊನೆಯವರೆಗೂ ಕಾದು ನೋಡುವ ತಂತ್ರವನ್ನು ಕಾಂಗ್ರೆಸ್‌ ಅನುಸರಿಸುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಜೆಡಿಎಸ್‌, ಜಿಲ್ಲೆಯ 5 ಕ್ಷೇತ್ರಗಳ ಪೈಕಿ 4 ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ತರೀಕೆರೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನಲ್ಲಿ ಟಿಕೆಟ್‌ ಸಿಗದೆ ಇದ್ದವರಿಗೆ ಗಾಳ ಹಾಕುವ ಸಾಧ್ಯತೆ ಹೆಚ್ಚಿದೆ.

ಸದ್ಯದ ಪರಿಸ್ಥಿತಿ ಅವಲೋಕಿಸಿದರೆ ತರೀಕೆರೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಟಿಕೆಟ್‌ಗಾಗಿ ಮಾಜಿ ಶಾಸಕ ಜಿ.ಎಚ್‌. ಶ್ರೀನಿವಾಸ್‌ ಹಾಗೂ ಗೋಪಿಕೃಷ್ಣ ನಡುವೆ ಬಿಗ್‌ ಫೈಟ್‌ ನಡೆಯುತ್ತಿದೆ. ಶ್ರೀನಿವಾಸ್‌ ಅವರು ಕುರುಬ ಸಮುದಾಯಕ್ಕೆ ಸೇರಿದವರು. ಗೋಪಿಕೃಷ್ಣ ಅವರು ಮಡಿವಾಳ ಸಮುದಾಯಕ್ಕೆ ಸೇರಿದವರು. 2018ರ ಚುನಾವಣೆಯಲ್ಲಿ ಬಿಜೆಪಿಗೆ ಅವಕಾಶ ಕೊಟ್ಟಮತದಾರರು, ಈ ಬಾರಿ ಕಾಂಗ್ರೆಸ್‌ನ ಕೈ ಹಿಡಿತಾರಾ ಅಥವಾ ಮತ್ತೆ ಬಿಜೆಪಿಯನ್ನು ಗೆಲ್ಲಿಸುತ್ತಾರಾ ಎಂಬ ಕುತೂಹಲ ಎಲ್ಲರದು.

ಕ್ಷೇತ್ರದ ಹಿನ್ನೆಲೆ:

ತರೀಕೆರೆ, ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತಾದರೂ, ಕಳೆದ ಬಾರಿ ಬಿಜೆಪಿ ಗೆಲುವು ಸಾಧಿಸಿದೆ. 1952ರಿಂದ ಈವರೆಗೆ 15 ವಿಧಾನಸಭಾ ಚುನಾವಣೆ, ಒಂದು ಉಪ ಚುನಾವಣೆ ನಡೆದಿದ್ದು, 9 ಬಾರಿ ಕಾಂಗ್ರೆಸ್‌ ಗೆದ್ದಿದೆ. ಬಿಜೆಪಿ 2 ಬಾರಿ ಗೆದ್ದಿದೆ. ಉಳಿದಂತೆ, ಪಕ್ಷೇತರ ಅಭ್ಯರ್ಥಿ, ಪ್ರಜಾ ಸೋಷಿಯಾಲಿಸ್ಟ್‌ ಪಾರ್ಟಿ ಹಾಗೂ ಜನತಾ ಪಾರ್ಟಿಗಳು ತಲಾ ಒಮ್ಮೆ ಗೆದ್ದಿವೆ. ಆದರೆ, ಕ್ಷೇತ್ರದಲ್ಲಿ ಮೊದಲ ಬಾರಿಗೆ 1952ರಲ್ಲಿ ಖಾತೆ ತೆರೆದಿದ್ದು ಕಿಸಾನ್‌ ಮಜ್ದೂರ್‌ ಪ್ರಜಾ ಪಾರ್ಟಿ.

ಕಡೂರು ಜೆಡಿಎಸ್‌ ಟಿಕೆಟ್‌: ಧನಂಜಯಗೆ ಕೊಕ್‌, ದತ್ತಾಗೆ ಫೈನಲ್‌

ಜಾತಿ ಲೆಕ್ಕಾಚಾರ:

ಕ್ಷೇತ್ರದಲ್ಲಿನ ಒಟ್ಟು ಮತದಾರರ ಸಂಖ್ಯೆ 1,91,445. ಆ ಪೈಕಿ ಲಿಂಗಾಯಿತರು 32 ಸಾವಿರ, ಕುರುಬ ಸಮುದಾಯದವರು 30 ಸಾವಿರ, ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡದವರು ಸುಮಾರು 50 ಸಾವಿರ, ಮುಸ್ಲಿಮರು 13,000, ದೇವಾಂಗರು 12,000, ಬ್ರಾಹ್ಮಣರು, ಜೈನರು ಸೇರಿದಂತೆ ಇತರ ಸಮುದಾಯದವರು 90,000 ಇದ್ದಾರೆ. ಲಿಂಗಾಯಿತರು ಮತ್ತು ಕುರುಬರ ಮತಗಳು ನಿರ್ಣಾಯಕ.

ಡಿ.ಎಸ್‌. ಸುರೇಶ್‌ (ಬಿಜೆಪಿ)
ಜಿ.ಎಚ್‌. ಶ್ರೀನಿವಾಸ್‌ (ಕಾಂಗ್ರೆಸ್‌)
ಗೋಪಿಕೃಷ್ಣ (ಕಾಂಗ್ರೆಸ್‌)

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!