
ಹುಬ್ಬಳ್ಳಿ (ಏ.15): ಬಿಜೆಪಿ ಹೈಕಮಾಂಡ್ ತನಗೆ ಟಿಕೆಟ್ ನೀಡದೇ ಇದ್ದಲ್ಲಿ, ಕ್ಷೇತ್ರದ ಜನರ ಹಿತಕ್ಕಾಗಿ ಪಕ್ಷೇತರನಾಗಿ ಸ್ಪರ್ಧೆ ಮಾಡಲೂ ಸಿದ್ಧ. ಪ್ರಧಾನಿ ಮೋದಿ ಸೇರಿ ಎಲ್ಲರ ಮೇಲೂ ನನಗೆ ಅಪಾರ ಗೌರವಿದೆ. ನಾನು ಸ್ಪರ್ಧೆ ಮಾಡೋದು ನನ್ನ ಸ್ವಾಭಿಮಾನಕ್ಕಾಗಿ. ಅಧಿಕಾರದ ಆಸೆಗಾಗಿ ಎಂದೂ ಸ್ಪರ್ಧೆ ಮಾಡಿಲ್ಲ. ಬಿಎಸ್‌ವೈ ಸೇರಿದಂತೆ ಎಲ್ಲರೂ ನನಗೆ ಬೆಂಬಲ ನೀಡಿದ್ದಾರೆ. ಅಧಿಕಾರಕ್ಕಾಗಿ ನಾನೆಂದೂ ರಾಜಕೀಯ ಬಂದವನಲ್ಲ ಎಂದು ಹುಬ್ಬಳ್ಳಿ ಸೆಂಟ್ರಲ್‌ನ ಶಾಸಕ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ನಿಂದ ಈ ಬಾರಿ ಜಗದೀಶ್ ಶೆಟ್ಟರ್‌ಗೆ ಟಿಕೆಟ್ ನೀಡದೇ ಇರಲು ಬಿಜೆಪಿ ಹೈಕಮಾಂಡ್ ನಿರ್ಧಾರ ಮಾಡಿದೆ. ಇದರ ಸುಳಿವು ಸಿಗುತ್ತಲೇ ಅಸಮಾಧಾನ ತೋಡಿಕೊಂಡಿರುವ ಜಗದೀಶ್ ಶೆಟ್ಟರ್ ಈಗಾಗಲೇ ಒಂದು ಬಾರಿ ದೆಹಲಿಗೆ ಭೇಟಿ ನೀಡಿ ಬಿಜೆಪಿ ಹೈಕಮಾಂಡ್‌ಅನ್ನೂ ಭೇಟಿಯಾಗಿದ್ದಾರೆ. ಶನಿವಾರ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಶೆಟ್ಟರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಆ ಬಳಿಕ ಬೆಂಬಲಿಗರು ಹಾಗೂ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಶೆಟ್ಟರ್, ಭಾಷಣ ಮುಕ್ತಾಯದ ವೇಳೆಗೆ ಭಾವುಕರಾದರು. ಅದರೊಂದಿಗೆ ಹುಬ್ಬಳ್ಳಿ-ಸೆಂಟ್ರಲ್ ಕ್ಷೇತ್ರದಿಂದ ಟಿಕೆಟ್ ಸಿಗವ ಭರವಸೆ ಈಗಲೂ ಇದೆ ಎಂದಿರುವ ಶೆಟ್ಟರ್, ಕಾದು ನೋಡುವ ತಂತ್ರಕ್ಕೆ ಮುಂದಾಗಿದ್ದಾರೆ.
ಯಡಿಯೂರಪ್ಪ, ಅನಂತಕುಮಾರ್ ನಾಯಕತ್ವದಲ್ಲಿ ಬಿಜೆಪಿ ಕಟ್ಟಿ ಬೆಳೆಸಲು ನನ್ನದೇ ಆದ ಪ್ರಯತ್ನ ಮಾಡಿದ್ದು ನಿಮಗೆ ಗೊತ್ತಿದೆ. ರಾಜ್ಯದಲ್ಲಿ ಬಿಜೆಪಿ ಇವತ್ತು ಒಂದು ಶಕ್ತಿಯುತವಾದ ಪಕ್ಷವಾಗಿ ಬೆಳೆದಿದೆ. ಬಿಜೆಪಿ ನನಗೆ ಎಲ್ಲ ರೀತಿಯ ಸ್ಥಾನಮಾನ ಕೊಟ್ಟಿದೆ. ಬಿಜೆಪಿಗೆ ನಾನು ಯಾವತ್ತೂ ಚಿರ ಋಣಿ ಆಗಿರುತ್ತೇನೆ. ನಿಮ್ಮೆಲ್ಲರ ಸಹಕಾರವನ್ನು ಜೀವನದಲ್ಲಿ ಎಂದೂ ಮರೆಯಲು ಸಾಧ್ಯವಿಲ್ಲ. ಹುಬ್ಬಳ್ಳಿ ಜನರ ಪ್ರೀತಿ ವಿಶ್ವಾಸದಿಂದ ರಾಜ್ಯ ಮಟ್ಟದ ನಾಯಕನಾಗಿ ಬೆಳೆದಿದ್ದೇನೆ. ಈ ಸಲ ಅತ್ಯಂತ ಐತಿಹಾಸಿಕ ದಾಖಲೆಯಲ್ಲಿ ನಿಮ್ಮನ್ನು ಆಯ್ಕೆ ಮಾಡ್ತೇವೆ ಅಂತಾ ಕ್ಷೇತ್ರದ ಜನರು ತೀರ್ಮಾನ ಮಾಡಿದ್ದರು. ಆದರೆ, ಜಗದೀಶ್ ಶೆಟ್ಟರ್ ಹೆಸರು ಮೊದಲ, ಎರಡನೆಯ ಪಟ್ಟಿಯಲ್ಲಿ ಬರಲಿಲ್ಲಾ ಅನ್ನೋ ಚಿಂತೆ ಜನರಲ್ಲಿದೆ ಎಂದು ಅಭಿಮಾನಿಗಳನ್ನು ಉದ್ದಶಿಸಿ ಮಾತನಾಡಿದ್ದಾರೆ.
ಯಾಕೆ ಇನ್ನೂ ಟಿಕೆಟ್ ಯಾಕೆ ಆಗಿಲ್ಲಾ ಅನ್ನೋ ಪ್ರಶ್ನೆ ಬರುತ್ತಿದೆ. ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರು ದೆಹಲಿಗೆ ನನ್ನನ್ನು ಕರೆಸಿ ಮಾತನಾಡಿದ್ದರು. ನನ್ನ ಗುರಿ, ಅಭಿಲಾಷೆ ಏನಿದೆ ಅಂತಾ ಅವರಿಗೆ ಹೇಳಿದ್ದೇನೆ. ಯಾವುದೇ ಆಸೆ ಇಟ್ಕೊಂಡು ರಾಜಕೀಯಕ್ಕೆ ನಾನು ಬಂದಿಲ್ಲ. ಜನರ ಅಭಿಪ್ರಾಯವೇನು ಅನ್ನೋದನ್ನು ನಾನು ವರಿಷ್ಠರ ಗಮನಕ್ಕೆ ತಂದಿದ್ದೇನೆ. ಪ್ರಲ್ಹಾದ್ ಜೋಶಿ, ಶಂಕರ್ ಪಾಟೀಲ್, ನಡ್ಡಾಜಿ ಇವತ್ತು ಕೂಡ ನನ್ನ ಜೊತೆ ಮಾತಾಡಿದ್ದಾರೆ. ಬಿಜೆಪಿ ಟಿಕೆಟ್ ಸಿಗುತ್ತದೆ ಎನ್ನುವ ಭರವಸೆ ಇಂದಿಗೂ ಕೂಡ ನನಗಿದೆ. ನಾನು ಈವರೆಗೆ ವಿಶ್ವಾಸ ಕಳೆದುಕೊಂಡಿಲ್ಲ. ಜನಾಭಿಪ್ರಾಯ, ಭಾವನೆಗೆ ಬಿಜೆಪಿ ವರಿಷ್ಠರು ಆದ್ಯತೆ ಕೊಡುತ್ತಾರೆ ಅನ್ನೋ ವಿಶ್ವಾಸವಿದೆ. ಶೆಟ್ಟರ್ ರಾಜಕೀಯದಲ್ಲಿ ಇರಬೇಕು ಅಂತಾ ಯಡಿಯೂರಪ್ಪ ಹೇಳಿದ್ದರು. ಜನಾಶಿರ್ವಾದ ನನ್ನ ಜೊತೆ ಇದೆ ನಿಮ್ಮೆಲ್ಲರ ಕಾರಣ ನಾನು ಹೀರೋ ಆಗಿದ್ದೇನೆ, ಇಲ್ಲದಿದ್ದರೆ ಜೀರೋ ಇದ್ದೆ ಎಂದು ಹೇಳಿದ್ದಾರೆ.
Party Rounds: ಬಿಜೆಪಿಗೆ ಬಂಡಾಯದ ಬೇಗುದಿ, ಶೆಟ್ಟರ್‌ಗೆ ಸಿಗುತ್ತಾ ಟಿಕೆಟ್ ಹಾದಿ!
ನನಗೆ ಸಿಎಂ ಹಾಗೂ ಸ್ಪೀಕರ್ ಸ್ಥಾನಗಳನ್ನು ಬಿಜೆಪಿ ನೀಡಿದೆ. ಕೆಳ ಹಂತದಿಂದ ಪಕ್ಷವನ್ನು ಕರ್ನಾಟಕದಲ್ಲಿ ಕಟ್ಟಿದ್ದೇವೆ. ನಾಮಪತ್ರ ಸಲ್ಲಿಸಲು ಇನ್ನೂ ಮೂರು ದಿನ ಬಾಕಿ ಇದೆ. ಈ ಭಾಗದ ಜನರ ಸ್ವಾಘಿಮಾನಕ್ಕೆ ಹೈಕಮಾಂಡ್ ಗೌರವ ನೀಡಲಿದೆ ಎನ್ನುವ ವಿಶ್ವಾಸ ನನಗೀಗಳು ಇದೆ. ಟಿಕೆಟ್ ಸಿಗದೇ ಇದ್ದರೆ, ಏನು ಮಾಡಬೇಕು ಅನ್ನೋದನ್ನ ಮುಂದೆ ತೀರ್ಮಾನ ಮಾಡೋಣ ಎಂದು ಅವರು ಹೇಳಿದರು.
ದೆಹಲಿಯಲ್ಲಿ ಟಿಕೆಟ್‌ಗಾಗಿ ಮಾಜಿ ಸಿಎಂ ಶೆಟ್ಟರ್ ಅಲೆದಾಟ, ಜೋಶಿ ಬಳಿಕ ಜೆಪಿ ನಡ್ಡಾ ಮನೆಗೆ ತೆರಳಿ ಚರ್ಚೆ!
ಭಾಷಣ ಮುಗಿಸಿ ಕುರ್ಚಿಯಲ್ಲಿ ಕುಳಿತುಕೊಂಡ ಜಗದೀಶ್ ಶೆಟ್ಟರ್, ಕಿಸೆಯಲ್ಲಿದ್ದ ಕರ್ಚೀಫ್ ತೆಗೆದು ಕಣ್ಣಲ್ಲಿ ತುಂಬಿದ್ದ ನೀರನ್ನು ಒರೆಸಿಕೊಂಡರು. ಒಟ್ಟಾರೆಯಾಗಿ, ಇಡೀ ಭಾಷಣದ ವೇಳೆ ಪಕ್ಷ ನಮ್ಮನ್ನು ನಡೆಸಿಕೊಂಡಿರುವ ರೀತಿಗೆ ಅವರಲ್ಲಿ ಬೇಸರ ಇರುವುದು ಎದ್ದು ಕಾಣುತ್ತಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.