ಕಾಂಗ್ರೆಸ್‌ ಶಾಸಕರಿಗೆ ಮುಳುವಾದ ಬಿಬಿಎಂಪಿ ಚುನಾವಣೆ ಮುಂದೂಡಿಕೆ

By Kannadaprabha News  |  First Published Apr 15, 2023, 12:36 PM IST

ಬಿಬಿಎಂಪಿ ಚುನಾವಣೆ ನಡೆಯದಿದ್ದರೂ ಹಲವು ಕ್ಷೇತ್ರಗಳಲ್ಲಿ ಮಾಜಿ ಕಾರ್ಪೋರೇಟರ್‌ಗಳು ತಮ್ಮ ನಾಯಕರ ವಿರುದ್ಧ ಬಂಡಾಯ ಎದ್ದಿದ್ದು, ವಿಧಾನಸಭಾ ಚುನಾವಣೆ ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡಲು ಪ್ರಯತ್ನ ನಡೆಸಿದ್ದಾರೆ.


ಬೆಂಗಳೂರು(ಏ.15):  ವಿಧಾನಸಭಾ ಚುನಾವಣೆಗೂ ಮುನ್ನ ಬಿಬಿಎಂಪಿ ಚುನಾವಣೆ ನಡೆದರೆ ಟಿಕೆಟ್‌ ವಂಚಿತರಿಂದ ಬಂಡಾಯದ ಬಿಸಿ ಎದುರಿಸಬೇಕಾಗುತ್ತದೆ ಎಂಬ ಶಾಸಕರ ಲೆಕ್ಕಾಚಾರ ಉಲ್ಟಾಹೊಡೆದಿದೆ. ಬಿಬಿಎಂಪಿ ಚುನಾವಣೆ ನಡೆಯದಿದ್ದರೂ ಹಲವು ಕ್ಷೇತ್ರಗಳಲ್ಲಿ ಮಾಜಿ ಕಾರ್ಪೋರೇಟರ್‌ಗಳು ತಮ್ಮ ನಾಯಕರ ವಿರುದ್ಧ ಬಂಡಾಯ ಎದ್ದಿದ್ದು, ವಿಧಾನಸಭಾ ಚುನಾವಣೆ ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡಲು ಪ್ರಯತ್ನ ನಡೆಸಿದ್ದಾರೆ.

ಬಿಬಿಎಂಪಿ ಚುನಾಯಿತ ಪ್ರತಿನಿಧಿಗಳ ಅವಧಿ 2020ರ ಸೆಪ್ಟೆಂಬರ್‌ನಲ್ಲಿ ಮುಕ್ತಾಯಗೊಂಡಿತ್ತು. ಅಷ್ಟರೊಳಗೆ ಚುನಾವಣೆ ಘೋಷಣೆಯಾಗಿ, ಹೊಸ ಕೌನ್ಸಿಲ್‌ನ ಆಯ್ಕೆ ಮಾಡಬೇಕಿತ್ತು. ಅದರೆ, ರಾಜ್ಯ ಸರ್ಕಾರ ಬಿಬಿಎಂಪಿಗೆ ಹೊಸ ಕಾಯ್ದೆ ಜಾರಿ ಹಾಗೂ 198 ವಾರ್ಡ್‌ಗಳ ಮರುವಿಂಗಡಣೆ ಪ್ರಕ್ರಿಯೆ ಆರಂಭಿಸಿದ್ದರಿಂದಾಗಿ ಚುನಾವಣೆ ನಡೆಯದಂತಾಗಿತ್ತು. ಅದಾದ ನಂತರ ಸುಪ್ರೀಂಕೋರ್ಟ್‌ ಮತ್ತು ಹೈಕೋರ್ಟ್‌ ಚುನಾವಣೆ ನಡೆಸುವಂತೆ ಸೂಚಿಸಿದರೂ ಒಂದಿಲ್ಲೊಂದು ನೆಪವೊಡ್ಡಿ ಚುನಾವಣೆ ಮುಂದೂಡುವ ಪ್ರಯತ್ನ ಮಾಡಲಾಗಿತ್ತು. ಬಿಬಿಎಂಪಿ ವ್ಯಾಪ್ತಿಯ ಎಲ್ಲ 27 ಶಾಸಕರೂ ವಿಧಾನಸಭೆ ಚುನಾವಣೆ ಮುಗಿಯುವವರೆಗೆ ಬಿಬಿಎಂಪಿ ಚುನಾವಣೆ ನಡೆಸದಂತೆ ಪರೋಕ್ಷವಾಗಿ ತಂತ್ರ ರೂಪಿಸಿ ಯಶಸ್ವಿಯಾಗಿದ್ದಾರೆ ಆದರೆ, ಈ ತಂತ್ರವೇ ಕೆಲ ಶಾಸಕರಿಗೆ ತಿರುಗುಬಾಣವಾಗಿದ್ದು ಮಾಜಿ ಕಾರ್ಪೋರೇಟರ್‌ಗಳು ಅತ್ತ ಬಿಬಿಎಂಪಿ ಸದಸ್ಯರಾಗದೆ, ವಿಧಾನಸಭಾ ಚುನಾವಣೆಗೆ ಸ್ಪಧಿರ್ಸಲು ಟಿಕೆಟ್‌ ಸಿಗದೆ ಪಕ್ಷ ಹಾಗೂ ತಮ್ಮ ನಾಯಕರ ವಿರುದ್ಧವೇ ಬಂಡಾಯ ಏಳುವಂತಾಗಿದೆ.

Tap to resize

Latest Videos

ಗೆಲ್ಲೋವರೆಗೆ ಹಾರ ಹಾಕಿಸಿಕೊಳ್ಳಲ್ಲ: ಸವದಿ ಶಪಥ

ಟಿಕೆಟ್‌ ಘೋಷಣೆಗೂ ಮುನ್ನವೇ ನಾಮಪತ್ರ

ಕೆಪಿಸಿಸಿ ಕಾಯರ್ಧ್ಯಕ್ಷ, ಶಾಸಕ ರಾಮಲಿಂಗಾರೆಡ್ಡಿ ಆಪ್ತ ಮಲ್ಲಿಕಾರ್ಜುನ ಅವರ ಪತ್ನಿ ಮಾಜಿ ಮೇಯರ್‌ ಗಂಗಾಂಬಿಕೆ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಕಾಂಗ್ರೆಸ್‌ನಿಂದ ಇನ್ನೂ ಚಿಕ್ಕಪೇಟೆ ಕ್ಷೇತ್ರದ ಅಭ್ಯಥಿರ್ಯಯನ್ನು ಪ್ರಕಟಿಸಿಲ್ಲ. ಆದರೂ, ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ  ಬಿಬಿಎಂಪಿ ಮಾಜಿ ಸದಸ್ಯರ ಸಮ್ಮುಖದಲ್ಲಿ ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ. ಪಕ್ಷ ತಮಗೆ ಟಿಕೆಟ್‌ ನೀಡುತ್ತದೆ ಎಂಬ ವಿಶ್ವಾಸದಲ್ಲಿ ನಾಮಪತ್ರ ಸಲ್ಲಿಸಿದ್ದೇನೆ ಎಂದು ಗಂಗಾಂಬಿಕೆ ತಿಳಿಸಿದ್ದಾರೆ. ಒಂದು ವೇಳೆ ಪಕ್ಷದಿಂದ ಟಿಕೆಟ್‌ ದೊರೆಯದಿದ್ದರೆ, ಕ್ಷೇತ್ರದಲ್ಲಿ ಬಂಡಾಯ ಅಭ್ಯಥಿರ್ಯಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.

ಪ್ರಚಾರ ಮಾಡಿದ್ದವರೀಗ ರೆಬೆಲ್‌

ರಾಜಾಜಿ ನಗರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದ ಮಾಜಿ ಉಪಮೇಯರ್‌ ಪುಟ್ಟರಾಜು ಕಳೆದ ಮೂರ್ನಾಲ್ಕು ತಿಂಗಳ ಹಿಂದಿನಿಂದಲೂ ಕ್ಷೇತ್ರದಲ್ಲಿ ಪ್ರಚಾರ ಕಾಯರ್ ಆರಂಭಿಸಿದ್ದರು. ಪಕ್ಷದ ಹಿರಿಯ ನಾಯಕರು ನೀಡಿದ್ದ ಟಿಕೆಟ್‌ ಆಶ್ವಾಸನೆ ಮೇರೆಗೆ ಮತದಾರರ ಬಳಿ ತೆರಳಿ ತಮಗೇ ಮತ ಚಲಾಯಿಸುವಂತೆಯೂ ಕೋರಿದ್ದರು. ಆದರೆ, ಕಾಂಗ್ರೆಸ್‌ನಿಂದ ಪುಟ್ಟಣ್ಣ ಅವರಿಗೆ ಟಿಕೆಟ್‌ ಘೋಷಿಸಲಾಗಿದೆ. ಇದರಿಂದ ಅಸಮಧಾನಗೊಂಡಿರುವ ಪುಟ್ಟರಾಜು, ಪಕ್ಷದ ಯಾವುದೇ ಕಾರ್ಯದಲ್ಲಿ ತೊಡಗಿಕೊಳ್ಳುತ್ತಿಲ್ಲ. ಇದು ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗುವ ಎಲ್ಲ ಸಾಧ್ಯತೆಗಳಿವೆ.

ಲಕ್ಷ್ಮಣ ಸವದಿ ಬಂಡಾಯ: ಕಾಂಗ್ರೆಸ್‌ಗೆ ಸಿಗುತ್ತಾ ಲಾಭ?

10ಕ್ಕೂ ಹೆಚ್ಚು ಕಡೆ ಬಂಡಾಯ

ಹೀಗೆ ಎಲ್ಲ ಪಕ್ಷಗಳಲ್ಲೂ 10ಕ್ಕೂ ಹೆಚ್ಚಿನ ಮಾಜಿ ಕಾರ್ಪೋರೇಟರ್‌ಗಳು ತಮ್ಮ ಶಾಸಕರು, ನಾಯಕರ ವಿರುದ್ಧ ಅಸಮಾಧಾನ ಹೊರಹಾಕುತ್ತಲಿದ್ದಾರೆ. ಇದು ಚುನಾವಣೆಯಲ್ಲಿ ತಮಗೆ ಬೆಂಬಲವಾಗಿ ನಿಲ್ಲುತ್ತಾರೆ ಎಂಬ ನಂಬಿಕೆಯಲ್ಲಿದ್ದ ಶಾಸಕರಿಗೆ ಭಯವನ್ನುಂಟು ಮಾಡಿದೆ. ಅಲ್ಲದೆ, ಕೆಲ ಮಾಜಿ ಕಾರ್ಪೋರೇಟರ್‌ಗಳು ತಮ್ಮ ನಾಯಕರ ವಿರುದ್ಧವೇ ಬಂಡಾಯ ಅಭ್ಯಥಿರ್ಯಾಗಿ ಕಣಕ್ಕಿಳಿಯುವ ಬೆದರಿಕೆಯನ್ನೂ ಹಾಕಿದ್ದಾರೆ. ಹೀಗಾಗಿ ಮಾಜಿ ಕಾರ್ಪೋರೇಟರ್‌ಗಳು ಸಿಟ್ಟನ್ನು ತಣಿಸಲು ನಾಯಕರು ಹರಸಾಹಸ ಪಡಬೇಕಾದ ಪರಿಸ್ಥಿತಿ ನಿಮಾರ್ಣವಾಗಿದೆ.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!