ವಿಧಾನಸಭಾ ಚುನಾವಣೆ ಹಿನ್ನೆಲೆ: 230 ರೌಡಿಶೀಟರ್​ಗಳ ಮನೆ ಮೇಲೆ ಪೊಲೀಸರ ದಾಳಿ: 67 ಮಂದಿಯ ಬಂಧನ

By Kannadaprabha News  |  First Published Apr 21, 2023, 5:59 AM IST

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಧಾನಿಯ 230ಕ್ಕೂ ಹೆಚ್ಚಿನ ರೌಡಿಗಳ ಮನೆಗಳಿಗೆ ಗುರುವಾರ ಪೊಲೀಸರು ದಿಢೀರ್‌ ಭೇಟಿ ನೀಡಿ ಬಿಸಿ ಮುಟ್ಟಿಸಿದ್ದಾರೆ.


ಬೆಂಗಳೂರು (ಏ.21): ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಧಾನಿಯ 230ಕ್ಕೂ ಹೆಚ್ಚಿನ ರೌಡಿಗಳ ಮನೆಗಳಿಗೆ ಗುರುವಾರ ಪೊಲೀಸರು ದಿಢೀರ್‌ ಭೇಟಿ ನೀಡಿ ಬಿಸಿ ಮುಟ್ಟಿಸಿದ್ದಾರೆ. ದಕ್ಷಿಣ, ಉತ್ತರ ಹಾಗೂ ಪಶ್ಚಿಮ ವಿಭಾಗಗಳ ವ್ಯಾಪ್ತಿಯಲ್ಲಿ ರೌಡಿಗಳ ಮನೆಗಳ ಪರಿಶೀಲನೆ ನಡೆದಿದ್ದು, ಈ ವೇಳೆ ಅಪರಾಧ ಪ್ರಕರಣಗಳಲ್ಲಿ ನ್ಯಾಯಾಲಯದ ವಿಚಾರಣೆಗೆ ಗೈರಾಗಿದ್ದರಿಂದ ಜಾಮೀನು ರಹಿತ ವಾರೆಂಟ್‌ ಜಾರಿಗೊಂಡಿದ್ದ 77 ಮಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಈ ಮೂರು ವಿಭಾಗಗಳ ವ್ಯಾಪ್ತಿಯಲ್ಲಿ ಬೆಳಗ್ಗೆ 7ರಿಂದ 10ರವರೆಗೆ ರೌಡಿಗಳ ಮನೆಗಳಿಗೆ ಅರೆಸೇನಾ ಪಡೆಗಳ ಜತೆ ಪೊಲೀಸರು ಹಠಾತ್‌ ಭೇಟಿ ತಪಾಸಣೆ ನಡೆಸಿ ವಿಧಾನಸಭಾ ಚುನಾವಣೆಯಲ್ಲಿ ಅಕ್ರಮ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ಎಚ್ಚರಿಕೆ ನೀಡಿದ್ದಾರೆ.

Tap to resize

Latest Videos

ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಅಂತ್ಯ: ಒಟ್ಟು 3632 ಮಂದಿ ಕಣಕ್ಕೆ

ದಕ್ಷಿಣದಲ್ಲಿ 100 ರೌಡಿಗಳಿಗೆ ಪೊಲೀಸರ ಬಿಸಿ: ಗಿರಿನಗರ, ಜಯನಗರ, ಹನುಮಂತನಗರ, ಸಿದ್ದಾಪುರ, ಬನಶಂಕರಿ, ಜೆ.ಪಿ.ನಗರ, ಸುಬ್ರಹ್ಮಣ್ಯಪುರ ಹಾಗೂ ಚನ್ನಮ್ಮನೆಕೆರೆ ಅಚ್ಚುಕಟ್ಟು ಸೇರಿದಂತೆ ದಕ್ಷಿಣ ವಿಭಾಗದ ವ್ಯಾಪ್ತಿಯಲ್ಲಿ ಸುಮಾರು 100 ರೌಡಿಗಳ ಮನೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಲಾಗಿದೆ. ಈ ವೇಳೆ ನ್ಯಾಯಾಲಯದ ವಾರೆಂಟ್‌ ಹಿನ್ನೆಲೆಯಲ್ಲಿ 10 ಮಂದಿಯನ್ನು ಬಂಧಿಸಲಾಗಿದೆ. ಸಿದ್ದಾಪುರದಲ್ಲಿ ಸರಗಳ್ಳತನ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಇಮ್ರಾನ್‌ ಪಾಷ ಸಿಕ್ಕಿಬಿದ್ದಿದ್ದಾನೆ. ದಾಳಿ ವೇಳೆ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಬನಶಂಕರಿಯಲ್ಲಿ ರೌಡಿಯೊಬ್ಬನನ್ನು ವಶಕ್ಕೆ ಪಡೆಯಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣಕಾಂತ್‌ ತಿಳಿಸಿದರು.

ಪಶ್ಚಿಮದಲ್ಲಿ 80 ರೌಡಿಗಳಿಗೆ ಎಚ್ಚರಿಕೆ: ಪಶ್ಚಿಮ ವಿಭಾಗದಲ್ಲಿ 80 ರೌಡಿಗಳ ಮನೆಗಳಿಗೆ ಪೊಲೀಸರ ದಾಳಿ ನಡೆಸಿದ್ದಾರೆ. ನಿದ್ರಾವಸ್ಥೆಯಲ್ಲಿ ಕೆಲ ರೌಡಿಗಳಿಗೆ ಪೊಲೀಸರು ಶಾಕ್‌ ನೀಡಿದ್ದಾರೆ. ಚುನಾವಣೆಯಲ್ಲಿ ಅಕ್ರಮದಲ್ಲಿ ತೊಡಗಿದರೆ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುತ್ತದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. 80 ರೌಡಿಗಳ ಪೈಕಿ ನ್ಯಾಯಾಲಯದ ವಾರೆಂಟ್‌ ಹಿನ್ನೆಲೆಯಲ್ಲಿ 67 ಮಂದಿಯನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಲಕ್ಷ್ಮಣ್‌ ನಿಂಬರಗಿ ತಿಳಿಸಿದ್ದಾರೆ.

ಡಿಕೆಶಿ ವಿರುದ್ಧದ ಐಟಿ, ಇಡಿ ತನಿಖೆ ಬಗ್ಗೆ ಆತಂಕ: ಡಿಕೆಶಿ ನಾಮಪತ್ರ ಓಕೆ ಆದರೆ ಡಿಕೆಸು ವಾಪಸ್‌?

ಉತ್ತರದ 52 ರೌಡಿಗಳಿಗೆ ಖಾಕಿ ಕ್ಲಾಸ್‌: ಉತ್ತರ ವಿಭಾಗದ ನಂದಿನಿ ಲೇಔಟ್‌ ಹಾಗೂ ರಾಜಗೋಪಾಲನಗರ ಠಾಣಾ ವ್ಯಾಪ್ತಿಯಲ್ಲಿ 52 ರೌಡಿಗಳ ಮನೆಗಳಲ್ಲಿ ದಿಢೀರ್‌ ಭೇಟಿ ನೀಡಿ ತಪಾಸಣೆ ನಡೆಸಲಾಗಿದೆ. ಚುನಾವಣೆ ವೇಳೆ ಶಾಂತಿಭಂಗಕ್ಕೆ ಯತ್ನಿಸಿದರೆ ಅಥವಾ ಅಕ್ರಮ ಕೃತ್ಯಗಳಲ್ಲಿ ತೊಡಗಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿರುವುದಾಗಿ ಡಿಸಿಪಿ ಶಿವಪ್ರಕಾಶ್‌ ದೇವರಾಜ್‌ ತಿಳಿಸಿದ್ದಾರೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!