ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ತುಳಿಯುವ ಕಾರ್ಯ ಯಾರೂ ಮಾಡುವುದಿಲ್ಲ ಎಂದು ಜವಳಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಹೇಳಿದರು.
ರಾಯಚೂರು (ಡಿ.15) : ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ತುಳಿಯುವ ಕಾರ್ಯ ಯಾರೂ ಮಾಡುವುದಿಲ್ಲ ಎಂದು ಜವಳಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಹೇಳಿದರು.
ನಗರದಲ್ಲಿ ಗುರುವಾರ ಮಾತನಾಡಿ,ರಾಜ್ಯದಲ್ಲಿ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿರುವ, ರಾಷ್ಟ್ರ ಮಟ್ಟದಲ್ಲಿ ಉನ್ನತ ಹುದ್ದೆಯನ್ನು ಹೊಂದಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರೇ ರಾಜ್ಯದಲ್ಲಿ ನಮ್ಮ ವರಿಷ್ಠರಾಗಿದ್ದು, ಅವರನ್ನು ತುಳಿಯುವ ಕಾರ್ಯ ಯಾರೂ ಮಾಡಲ್ಲ, ಮುಂದೆಯೂ ಮಾಡೋದಿಲ್ಲ. ಕರ್ನಾಟಕದಲ್ಲಿ ಪಕ್ಷವನ್ನು ಸಂಘಟಿಸಿ, ಬಲಿಷ್ಠಗೊಳಿಸಲು ಬಿಎಸ್‌ವೈ ಪಟ್ಟಂತಹ ಶ್ರಮ ಎಲ್ಲರಿಗೂ ತಿಳಿದ ವಿಚಾರವಾಗಿದೆ.
Chamarajanagar: ಬಿಎಸ್‌ವೈ ಫೋಟೋ ಇಲ್ಲದ್ದಕ್ಕೆ ಅಭಿಮಾನಿಗಳ ಆಕ್ರೋಶ
ರಾಜ್ಯದಾದ್ಯಂತ ಪ್ರವಾಸ ನಡೆಸಿ ಕಾರ್ಯರ್ತರನ್ನು ಸಂಘಟಿಸಿ ಪಕ್ಷವನ್ನು ತಳಮಟ್ಟದಲ್ಲಿ ಕಟ್ಟಿಬೆಳೆಸಿದ್ದಾರೆ. 1 ಸೀಟಿನಿಂದ 110 ರವರೆಗೆ ತೆಗೆದು ಕೊಂಡು ಹೋಗುವ ಕೆಲಸ ಬಿಎಸ್‌ವೈ ಮಾಡಿದ್ದಾರೆ. ಬಿಜೆಪಿಗೆ ತನ್ನದೇ ಆದಂತಹ ಸಿದ್ಧಾಂತವಿದೆ, ಪಕ್ಷದ ಜೊತೆ ಜೊತೆಗೆ ಎಲ್ಲರನ್ನು ತೆಗೆದುಕೊಂಡು ಹೋಗುವ ಕೆಲಸವನ್ನು ಹಿಂದಿನಿಂದಲೂ ಮಾಡುತ್ತಾ ಬಂದಿದೆ. ಪಕ್ಷದ ಯಾವ ಹಿರಿಯ ನಾಯಕರನ್ನು ದೂರವಿಡುವ ಕೆಲಸ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಬಳ್ಳಾರಿಯ ಜನಾರ್ಧನ ರೆಡ್ಡಿ ಹೊಸ ಪಕ್ಷ ಸ್ಥಾಪಿಸುವುದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವರು ರಾಜ್ಯದಲ್ಲಿ ಬಿಜೆಪಿ ಕಟ್ಟುವಲ್ಲಿ ಜನಾರ್ಧನ ರೆಡ್ಡಿ ಪಾತ್ರ ಗಣನೀಯವಾಗಿದ್ದು, ಈ ವಿಚಾರವಾಗಿ ಪಕ್ಷವು ಸರಿಯಾದ ಸಮಯಕ್ಕೆ ಒಳ್ಳೆಯ ತೀರ್ಮಾನವನ್ನೇ ತೆಗೆದುಕೊಳ್ಳುವ ವಿಶ್ವಾಸವಿದೆ ಎಂದರು.
ಕಬ್ಬು ಬೆಳೆಗಾರರಿಗೆ ರು.50 ನೆರವಿನಂತೆ 202 ಕೋಟಿ ಮೊದಲ ಕಂತಿನಲ್ಲಿ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿ ಆದೇಶಿಸಿದ್ದು, ತೂಕದಲ್ಲಾಗುತ್ತಿರುವ ಮೋಸವನ್ನು ತಡೆಯುವುದಕ್ಕಾಗಿ ಕಟ್ಟುನಿಟ್ಟಿನ ಕ್ರಮವನ್ನು ಜಾರಿಗೊಳಿಸಲಾಗಿದೆ ಎಂದು ಹೇಳಿದರು.
ಗುಜರಾತ್‌ನಲ್ಲಿ ಸಂಪುಟ ರಚನೆ, ಕೇಂದ್ರ ವೀಕ್ಷಕರಾಗಿ ತೆರಳಿದ್ದ ಬಿಎಸ್ ಯಡಿಯೂರಪ್ಪ!
ಮೆಗಾ ಟೆಕ್ಸ್‌ಟೈಲ್ ಪಾರ್ಕನ್ನು ವಿಜಯಪುರಕ್ಕೆ ನೀಡುವ ನಿರ್ಧಾರ ಇನ್ನು ಅಂತಿಮಗೊಂಡಿಲ್ಲ. ರಾಯಚೂರು ಜಿಲ್ಲೆಯಲ್ಲಿ ಒಂದು ಸಾವಿರ ಎಕರೆ ಜಮೀನು ಒದಗಿಸಿಕೊಟ್ಟಲ್ಲಿ ಮೆಗಾ ಟೆಕ್ಸ್‌ಟೈಲ್ ಪಾರ್ಕ್ ನಿರ್ಮಿಸಲು ಯಾವುದೇ ಅಡ್ಡಿಯಿಲ್ಲ. ಈಗಾಗಲೇ ಸಾವಿರ ಎಕರೆ ಭೂಮಿ ಗುರುತಿಸುವಂತೆ ಸೂಚನೆಯನ್ನು ಸಹ ನೀಡಲಾಗಿದೆ. ಈಗಾಗಲೇ 15 ಎಕರೆಯಲ್ಲಿ ಜವಳಿ ಪಾರ್ಕ್ ಸ್ಥಾಪಿಸಲಾಗುತ್ತಿದ್ದು ಅದಕ್ಕೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೇ ಪ್ರಗತಿಯಲ್ಲಿದೆ. ಈ ಪಾರ್ಕಿನಿಂದ ಜಿಲ್ಲೆ ಜನರಿಗೆ ಸಾಕಷ್ಟುಅನುಕೂಲವಾಗಿದೆ ಎಂದರು.