
ಶಿವಮೊಗ್ಗ (ಆ.08): ಯಾರೇ ತಿಪ್ಪರಲಾಗ ಹೊಡೆದರೂ ಸಿದ್ದರಾಮಯ್ಯ ರಾಜೀನಾಮೆ ಕೊಡುವುದಿಲ್ಲ. ಅದು ಬಿಜೆಪಿಯವರ ಹಗಲುಗನಸು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂಡ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿ ಕೊಳ್ಳುತ್ತಿದ್ದಾರೆ ಎನಿಸುತ್ತಿದೆ. ಸರ್ಕಾರ ಅಸ್ಥಿರಗೊಳಿಸುವ ಹುನ್ನಾರ ರಾಜಭವನದಿಂದ ಆಗುತ್ತಿದೆ. ಆದರೆ, ಯಾರು ಏನೇ ಹೇಳಿದರು. ಸರ್ಕಾರ ಬೀಳಿಸಲು ಸಾಧ್ಯವಿಲ್ಲ. ಬಿಜೆಪಿಯ 67 ಸೀಟುಗಳು ಎಲ್ಲಿ ? ಕಾಂಗ್ರೆಸ್ಸಿನ 136 ಸೀಟುಗಳು ಎಲ್ಲಿ ? ಎಂದು ತಿರುಗೇಟು ನೀಡಿದರು.
ಬಿಜೆಪಿಯವರಿಗೆ ಹೊಟ್ಟೆ ಕಿಚ್ಚು ಆರಂಭವಾಗಿದೆ. ಇವರ ಜೊತೆಗೆ ಜೆಡಿಎಸ್‍ನವರು ಸೇರುತ್ತಿದ್ದಾರೆ. ಸಿ.ಎಂ.ರಾಜೀನಾಮೆಯ ಬಗ್ಗೆ ತೀರ್ಮಾನ ಮಾಡುವುದು ಸಿ.ಟಿ.ರವಿ, ನಾರಾಯಣಸ್ವಾಮಿ ಅಲ್ಲ, ಅದು ಪಕ್ಷದ ಹೈಕಮಾಂಡ್‍ನ ತೀರ್ಮಾನ ಎಂದರು. ವರ್ಗಾವಣೆ ದಂಧೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಡಿಡಿಪಿಐ, ಬಿಇಒ, ವರ್ಗಾವಣೆಗೆ ಲಂಚ ಪಡೆಯಲಾಗುತ್ತಿದೆ ಎಂಬ ದೂರುಗಳು ಸತ್ಯವಲ್ಲ. ನಮ್ಮಲ್ಲಿ ಯಾರೇ ಆಗಲಿ ಏಜೆಂಟೆ ಆಗಲಿ ಈ ರೀತಿಯ ಹಣ ಪಡೆದಿದ್ದರೆ ನಿರ್ದಾಕ್ಷಿಣ್ಯವಾಗಿ ಅವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಶಿವಮೊಗ್ಗದ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದವರು ಪ್ರಧಾನಿ ನರೇಂದ್ರ ಮೋದಿಯವರು. ಆದರೆ, ವಿಮಾನಗಳ ಹಾರಾಟ ನಮ್ಮ ಸರ್ಕಾರ ಬಂದ ಮೇಲೆ ಆಗಿದೆ. ಸಂಸದ ರಾಘವೇಂದ್ರ ಅವರು ಕೇಂದ್ರ ಸಚಿವ ಕುಮಾರಸ್ವಾಮಿಯವರಿಗೆ ನೈಟ್ ಲ್ಯಾಂಡಿಗೆ ಬಗ್ಗೆ ಮನವಿ ಕೊಟ್ಟಿದ್ದಾರೆ. ಅವರಿಗೆ ಯಾಕೆ ಮನವಿ ಕೊಟ್ಟಿದ್ದಾರೋ ಗೊತ್ತಿಲ್ಲ ಎಂದರು. ಗ್ಯಾರಂಟಿ ಯೋಜನೆಗಳ ಬಗ್ಗೆ ವಿಪಕ್ಷದವರು ಹಗುರವಾಗಿ ಮಾತನಾಡುತ್ತಿದ್ದಾರೆ. ಚುನಾವಣೆಗೂ ಮುನ್ನ ಎಲ್ಲಾ ಗ್ಯಾರಂಟಿಗಳ ಬಗ್ಗೆ ಕಾಂಗ್ರೆಸ್ ಮಾತುಕೊಟ್ಟಿತ್ತು. ಆ ಮಾತಿನಂತೆ ನಡೆದುಕೊಳ್ಳುತ್ತಿದ್ದೇವೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿಯೇ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಕಚೇರಿಯನ್ನು ತೆರೆಯುತ್ತಿದ್ದೇವೆ. ಕಾಂಗ್ರೆಸ್ ಸರ್ಕಾರ ಬಡವರ ಪರವಾಗಿಯೇ ಇದೆ ಎಂದರು.
ಜನರ ದಾರಿ ತಪ್ಪಿಸಲು ಬಿಜೆಪಿ ಹಾಗೂ ಜೆಡಿಎಸ್‌ನಿಂದ ರಾಜಕೀಯವಾಗಿ ಪಾದಯಾತ್ರೆ: ಸಚಿವ ಆರ್.ಬಿ.ತಿಮ್ಮಾಪೂರ
ವಿಜಯೇಂದ್ರನ ಸಾವಾಸದಿಂದ ಯಡಿಯೂರಪ್ಪ ಜೈಲಿಗೋದ್ರು!: ಬಿ.ವೈ.ರಾಘವೇಂದ್ರ, ಬಿ.ವೈ.ವಿಜಯೇಂದ್ರ ಅವರ ತಂದೆ ಅಧಿಕಾರಿದಲ್ಲಿದ್ದಾಗ ಎಷ್ಟು ಲಂಚ ಹೊಡೆದಿದ್ದಾರೆ ಎಂದು ಜನರೇ ಹೇಳುತ್ತಾರೆ. ಇದೇ ವಿಜಯೇಂದ್ರನ ಸಹವಾಸದಿಂದ ಯಡಿಯೂರಪ್ಪ ಜೈಲಿಗೆ ಹೋದರು. ನಮಗ್ಯಾಕೆ ಈ ಪ್ರಶ್ನೆ ಕೇಳುತ್ತೀರ, ನಿಮ್ಮ ಪಕ್ಷದ ನಾಯಕ ಯತ್ನಾಳ್ ಅವರಿಗೆ ಮೊದಲು ಇವರು ಉತ್ತರ ಕೊಡಿ, ಆಮೇಲೆ ನಮ್ಮನ್ನು ಕೇಳಿ. ಯತ್ನಾಳ್ ಹಿರಿಯರು ಎಂಬ ನೆಪ ಹೇಳುತ್ತಾರೆ. ಹಿರಿಯರ ಕೈಯಲ್ಲಿ ಬೈಯಸಿಕೊಳ್ಳಲು ಇವರಿಗೆ ನಾಚಿಕೆಯಾಗುವುದಿಲ್ಲವಾ? ಎಂದು ಕುಟುಕಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.