
ವಿಜಯಪುರ (ಆ.08): ಬಿಜೆಪಿ ಹಾಗೂ ಜೆಡಿಎಸ್‌ನವರು ಏನಕ್ಕೆ ಪಾದಯಾತ್ರೆ ಮಾಡುತ್ತಿದಾರೋ ಗೊತ್ತಿಲ್ಲ. ಅವರು ಜನರ ದಾರಿ ತಪ್ಪಿಸಲು ರಾಜಕೀಯವಾಗಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಕಿಡಿಕಾರಿದರು. ನಗರದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಪರವಾದ ಕೆಲಸ ಮಾಡುವ ಸಿಎಂ ಸಿದ್ದರಾಮಯ್ಯನವರಿಗೆ ಕಳಂಕ ತರಲು ಸುಳ್ಳು ಆರೋಪ ಮಾಡುತ್ತಿದ್ದಾರೆ. ಇವರ ಪಾದಯಾತ್ರೆ ಜನರ ಅನುಕೂಲಕ್ಕಾಗಿ ಅಲ್ಲ. ದಿನಾಲು ಬೆಳಗ್ಗೆ ಎದ್ದಕೂಡಲೇ ರಾಜಕಾರಣ ಮಾಡುತ್ತಾರೆ. ಇದರಿಂದ ಅವರಿಗೆ ಭಾರೀ ಹಿನ್ನೆಡೆ ಆಗುತ್ತದೆ ಎಂದರು.
ಸಿದ್ದರಾಮಯ್ಯನವರನ್ನು ಕೆಳಗಿಳಿಸಿ ಡಿಕೆಶಿ ಸಿಎಂ ಆಗಲು ಹೀಗೆ ಮಾಡುತ್ತಿದ್ದಾರೆ ಎಂದು ಶಾಸಕ ಯತ್ನಾಳ ಆರೋಪ ವಿಚಾರಕ್ಕೆ ಪ್ರತಿಕ್ರಿಯಸಿದ ಅವರು, ಬಸನಗೌಡ ಪಾಟೀಲ ಯತ್ನಾಳ ಅವರಿಗೆ ನಮ್ಮ ಸಿಎಂ ಸಿದ್ದರಾಮಯ್ಯನವರ ಮೇಲೆ ಕಾಳಜಿ ಇರುವುದಕ್ಕೆ ತುಂಬಾ ಧನ್ಯವಾದಗಳು. ಇನ್ನು ತಮ್ಮ ಪಕ್ಷದ ಭ್ರಷ್ಟಾಚಾರದ ಬಗ್ಗೆ ಯತ್ನಾಳ ಅವರೇ ಮಾತನಾಡಿದ್ದಾರೆ, ಅವರು ಹಾಗೆ ಮಾತನಾಡುತ್ತಾರೆ ಎಂದರೆ ಅವರಿಗೆ ಬ್ರಷ್ಟಾಚಾರದ ಮಾಹಿತಿ ಇದೆಂದು ಅರ್ಥ. ಹಾಗಾಗಿ ಬಿಜೆಪಿ ಅಧಿಕಾರದಲ್ಲಿನ ಭ್ರಷ್ಟಾಚಾರದ ಬಗ್ಗೆ ತನಿಖೆಯಾಗಬೇಕು ಎಂದು ತಿಳಿಸಿದರು.
ಮುಡಾದಲ್ಲಿ ಏನು ತಪ್ಪಾಗಿದೆ ಕೋರ್ಟ್‌ಗೆ ಬಾಂಡ್‌ನಲ್ಲಿ ನೀಡಲಿ: ಸಚಿವ ಆರ್.ಬಿ.ತಿಮ್ಮಾಪೂರ
ಸಚಿವರ ಕಾರ್ಯವೈಖರಿ ಇಲ್ಲದಿದ್ದರೇ ಬದಲಾವಣೆ ವಿಚಾರದ ಬಗ್ಗೆ ಮಾತನಾಡಿ, ಸಚಿವರು ಸರಿಯಾಗಿ ಕೆಲಸ ಮಾಡದಿದ್ದರೆ ಬದಲಾವಣೆ ಮಾಡುತ್ತಾರೋ ಇಲ್ಲವೋ ಗೊತ್ತಿಲ್ಲ, ಅದನ್ನೆಲ್ಲ ಹೈಕಮಾಂಡ್ ನೋಡಿಕೊಳ್ಳುತ್ತೆ. ಸದ್ಯಕ್ಕೆ ಸಂಪುಟ ವಿಸ್ತರಣೆ, ಬದಲಾವಣೆ ಯಾವುದೂ ಇಲ್ಲ ಎಂದರು. ಯಾದಗಿರಿ ಪಿಎಸೈ ಅವರ ಸಾವಿನ ಕುರಿತು ಈಗಾಗಲೇ ಸಿಐಡಿ ತನಿಖೆಗೆ ಕೊಡಲಾಗಿದೆ. ತನಿಖೆ ಆಗುತ್ತಿದೆ, ತನಿಖೆ ಬಳಿಕ ತಪ್ಪಿತಸ್ತರ ಮೇಲೆ ಕ್ರಮ ಆಗುತ್ತದೆ. ಸಿಐಡಿ ರಿಪೋರ್ಟ್ ಬಂದಮೇಲೆ ಯಾರದ್ದು ತಪ್ಪುಕೇನು ವಿಚಾರ ಎಂಬುವುದು ಗೊತ್ತಾಗುತ್ತದೆ. ಅದು ಬಿಟ್ಟು ಶಾಸಕರೇ ಕೊಂದಿದ್ದಾರೆ ಎನ್ನುವ ರೀತಿಯಲ್ಲಿ ಬಿಜೆಪಿ ಮಾತನಾಡುವುದು ತಪ್ಪು. ತಪ್ಪು ಯಾರೇ ಮಾಡಿದ್ದರೂ ಕ್ರಮ ಆಗೆ ಆಗುತ್ತೆ ಎಂದರು.
ಕಾಲುವೆಗಳ ಕೊನೆ ಭಾಗದಲ್ಲಿನ ಕೆರೆಗಳನ್ನು ಮೊದಲ ಆದ್ಯತೆಯಲ್ಲಿ ತುಂಬಬೇಕೆಂದು ಈಗಾಗಲೇ ಆದೇಶಿಸಲಾಗಿದೆ. ಆದರೆ, ಕಾಲುವೆಗಳಿಗೆ ನೀರು ಬಿಟ್ಟಾಗ ಮಧ್ಯಭಾಗದ ರೈತರು ಕಾಲುವೆಗಳಿಗೆ ಪಂಪಸೆಟ್ ಅಳವಡಿಸದೇ ಮುಂದಿನ ಕಾಲುವೆಗಳ ಕೊನೆ ಭಾಗಕ್ಕೆ ನೀರು ಹೋಗಲು ಸಮೀಪದ ರೈತರು ಸಹಕಾರ ಮಾಡಬೇಕು. ಕೊನೆ ಭಾಗಕ್ಕೆ ನೀರು ಹೋಗಲು ಸಹಕರಿಸಬೇಕು ಎಂದು ಮನವಿ ಮಾಡಿದರು.
ನೂತ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದ ಸಚಿವ ತಿಮ್ಮಾಪುರ: ವಿಜಯಪುರ-ಬಾಗಲಕೋಟೆ ಹಾಲು ಒಕ್ಕೂಟದ ಅಧ್ಯಕ್ಷರ ಚುನಾವಣೆಯಲ್ಲಿ ಬಾಗಲಕೋಟೆ ಜಿಲ್ಲೆ ಬಾದಾಮಿಯ ಈರನಗೌಡ ಸಿದ್ಧನಗೌಡ ಕರಿಗೌಡರ ಅವರು ಅವಿರೋಧವಾಗಿ ಅಧ್ಯಕರಾಗಿ ಆಯ್ಕೆಯಾಗಿದ್ದಾರೆ. ಸಚಿವರಾದ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ, ಎಚ್.ವೈ.ಮೇಟಿ, ವಿಜಯಾನಂದ ಕಾಶಪ್ಪನವರ, ಭೀಮಸೇನ ಚಿಮ್ಮನಕಟ್ಟಿ, ಸಂಯುಕ್ತಾ ಪಾಟೀಲ ಸೇರಿದಂತೆ ಅವಳಿ ಜಿಲ್ಲೆಗಳ ಎಲ್ಲ ಶಾಸಕರು ಹಾಗೂ ಸಚಿವರು ಮತ್ತು ಎಲ್ಲರ ಒಕ್ಕೋರಲಿನಿಂದ ಆಯ್ಕೆ ಮಾಡಲಾಗಿದೆ. ಸೂಕ್ತ ಮಾರ್ಗದರ್ಶನ ನೀಡಿದ ಮುಖ್ಯಮಂತ್ರಿಗಳು ಹಾಗೂ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.
ಪ್ರವಾಹದಿಂದಾಗಿ ಉಂಟಾಗಿರುವ ಬೆಳೆ ಹಾನಿಗೂ ಸರ್ಕಾರದಿಂದ ಪರಿಹಾರ: ಸಚಿವ ಆರ್.ಬಿ.ತಿಮ್ಮಾಪೂರ
ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಮಾತನಾಡಿ, ಅವಳಿ ಜಿಲ್ಲೆಗಳ ಸಚಿವರು, ಶಾಸಕರ ಸಹಮತ ಹಾಗೂ ಸಹಾಯದಿಂದ ಈ ಬಾರಿ ಬಾದಾಮಿ ತಾಲೂಕಿಗೆ ಕೆಎಂಎಫ್ ಅಧ್ಯಕ್ಷ ಸ್ಥಾನ ಕೊಟ್ಟಿದ್ದಾರೆ. ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಅಬ್ದುಲ ಹಮೀದ್ ಮುಶ್ರಿಫ್, ಎಸ್.ಎಂ.ಪಾಟೀಲ್ ಗಣಿಹಾರ, ಸೋಮನಾಥ ಕಳ್ಳಿಮನಿ, ವಸಂತ ಹೊನಮೊಡೆ, ಜಮೀರ ಭಕ್ಷಿ, ಸಿದ್ದುಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.