ಹಾಲಿ, ಮಾಜಿ ಸಿಎಂಗಳು ಪುಡಿರೌಡಿಗಳಂತೆ ಮಾತಾಡ್ತಾರೆ; ಎಚ್.ವಿಶ್ವನಾಥ್

By Kannadaprabha News  |  First Published Feb 1, 2023, 7:53 AM IST

ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳು ಗಲ್ಲಿಯ ಪುಡಿ ರೌಡಿಗಳಂತೆ ಮಾತನಾಡುತ್ತಿರುವುದು, ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ ಎಂದು ವಿಪ ಸದಸ್ಯ ಎಚ್‌. ವಿಶ್ವನಾಥ್‌ ಅಸಮಾಧಾನ ವ್ಯಕ್ತಪಡಿಸಿದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.


ಹುಬ್ಬಳ್ಳಿ (ಫೆ.1) : ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳು ಗಲ್ಲಿಯ ಪುಡಿ ರೌಡಿಗಳಂತೆ ಮಾತನಾಡುತ್ತಿರುವುದು, ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ ಎಂದು ವಿಪ ಸದಸ್ಯ ಎಚ್‌. ವಿಶ್ವನಾಥ್‌ ಅಸಮಾಧಾನ ವ್ಯಕ್ತಪಡಿಸಿದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧಮ್‌ ಇದ್ದರೆ, ತಾಕತ್ತಿದ್ರೆ ಎನ್ನುವ ಮಾತುಗಳು, ರಾಜಕಾರಣಿಗಳು ನೈತಿಕ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ತೋರಿಸಿಕೊಡುತ್ತಿವೆ. ಹೀಗಿದ್ದಾಗ ಅವರು ಮತದಾರರ ಬಳಿ ಯಾವ ಮುಖ ಇಟ್ಟುಕೊಂಡು ಹೋಗುತ್ತಾರೆ? ಇವರ ಮಾತುಗಳು ಯುವಕರಿಗೆ, ಮತದಾರರಿಗೆ, ರಾಜಕಾರಣಕ್ಕೆ ಅಥವಾ ಆಡಳಿತಕ್ಕೆ ಆದರ್ಶವೇ? ಎಂದು ಪ್ರಶ್ನಿಸಿದರು.

Latest Videos

undefined

Shivamogga: ಶರಾವತಿ ಸಂತ್ರಸ್ತರ ಸಮಸ್ಯೆ ಬಗೆಹರಿಸಲು ಸಿಎಂ ತಾಕತ್ತು ಪ್ರದರ್ಶಿಸ​ಲಿ: ಮಧು ಬಂಗಾರಪ್ಪ

ಪಕ್ಷಕ್ಕಿಂತ ನಾಯಕ ಪ್ರಬಲ:

ಚುನಾವಣೆಗೆ ಸ್ಪರ್ಧಿಸಬೇಕೆಂದರೆ ಎಷ್ಟುಹಣ ಇದೆ ಎಂದು ಕೇಳುತ್ತಾರೆ. ಈಗ ಪಕ್ಷಕ್ಕಿಂತ, ಅದರ ನಾಯಕರು ಪ್ರಬಲರಾಗಿದ್ದಾರೆ. ಮುಂದೆ ನಡೆಯುವುದು ರಿಯಲ್‌ ಎಸ್ಟೇಟ್‌ ಉದ್ಯಮಿಗಳ ಚುನಾವಣೆ. ಅವರು ಟಿಕೆಟ್‌ಗಾಗಿ . 10 ಕೋಟಿ ನೀಡಲು ಸಹ ಸಿದ್ಧರಿದ್ದಾರೆ. ದುಡ್ಡಿನ ಮತ್ತು ಜಾತಿಯ ರಾಜಕಾರಣವೇ ವಿಜೃಂಭಿಸುತ್ತಿದೆ. ಹಿಂದಿನ ಹೋರಾಟ ಮತ್ತು ಚಳವಳಿಗಳನ್ನು ಸ್ವಾಮೀಜಿಗಳ ಕೈಗಳಿಗೆ ಕೊಟ್ಟಿದ್ದೇವೆ. ಮೀಸಲಾತಿ ಕುರಿತು ಸಹ ಅವರೇ ಚಳವಳಿ ಮಾಡುತ್ತಿದ್ದಾರೆ. ಇದು ಪ್ರಜಾತಂತ್ರ ವ್ಯವಸ್ಥೆಗೆ ಮಾರಕ ಎಂದು ಕಳವಳ ವ್ಯಕ್ತಪಡಿಸಿದರು.

ವಿರೋಧ ಪಕ್ಷ ಭ್ರಷ್ಟಾಚಾರದ ಬಗ್ಗೆ ಗುರುತರ ಆರೋಪ ಮಾಡಿದಾಗ, ಅದನ್ನು ಸರ್ಕಾರ ಗೌರವಯುತವಾಗಿ ವಿಚಾರಣೆ ನಡೆಸಬೇಕು. ಹಿಂದಿನಿಂದಲೂ ಹಾಗೆಯೇ ನಡೆದುಕೊಂಡು ಬಂದಿದೆ. ಆದರೆ, ಬಿಜೆಪಿ 40 ಪರ್ಸಟೆಂಜ್‌ ಆರೋಪ ಕುರಿತು ತೆಗೆದುಕೊಂಡ ನಿಲುವು ಖಂಡನಾರ್ಹ. ನೀವು ಮಾಡಿದ್ದೀರಿ, ನಾವು ಮಾಡುತ್ತಿದ್ದೇವೆ ಎಂದು ಪರೋಕ್ಷವಾಗಿ ಹೇಳುತ್ತಿದೆ. ಪರಸ್ಪರ ಆರೋಪ, ಪ್ರತ್ಯಾರೋಪ ಮಾಡುವ ಬದಲು ನ್ಯಾಯಯುತವಾಗಿ ಸಮಸ್ಯೆ ಪರಿಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಡಿ.ಕೆ. ಶಿವಕುಮಾರ ಅವರನ್ನು ಮುಗಿಸುವವರೆಗೂ ನಾನು ರಾಜಕೀಯದಿಂದ ನಿವೃತ್ತಿಯಾಗಲಾರೆ ಎಂದು ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ವಿಶ್ವನಾಥ್‌, ‘ಸಿ.ಡಿ. ಬಿಡುಗಡೆ ಮಾಡಿ ಆರೋಪಿಸುವುದು ರಾಜಕಾರಣವೇ? ಸಿಡಿ ಮೂಲಕ ಯಾರನ್ನೂ ಯಾರೂ ಮುಗಿಸಲು ಸಾಧ್ಯವಿಲ್ಲ. ಹಾಗೆ ಹೇಳಲೂ ಬಾರದು. ಮೇಲಕ್ಕೆ ಎತ್ತುವವರು, ಕೆಳಕ್ಕೆ ತುಳಿಯುವವರು ಮತದಾರರು ಮಾತ್ರ. ಅವರೇ ಏನಾದರೂ ಮಾಡಬಹುದು ಹೊರತು, ರಾಜಕಾರಣಿಗಳಿಂದ ಏನೂ ಮಾಡಲು ಸಾಧ್ಯವಿಲ್ಲ. ಈ ರೀತಿ ಮಾತನಾಡುವುದು ಜಾರಕಿಹೊಳಿ ಕುಟುಂಬಕ್ಕೆ ಗೌರವವಲ್ಲ. ಒಟ್ಟಾರೆ ರಾಜಕಾರಣ ಸಂಪೂರ್ಣ ಹೊಲಸೆದ್ದು ಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಏನೋ ಒಂದು ಬದಲಾವಣೆಯಾಗಬಹುದು ಎಂದು ಬಿಜೆಪಿ ಸೇರ್ಪಡೆಯಾಗಿದ್ದೆ. ಆದರೆ ಇವರಂಥ ಎಡವಟ್ಟು ಗಿರಾಕಿಗಳು ಯಾರೂ ಇಲ್ಲ. ಶಾಲೆಗೆ ಕೇಸರಿ ಬಣ್ಣ ಹೊಡೆಸುತ್ತಿದ್ದಾರೆ. ಶಾಲಾ, ಕಾಲೇಜುಗಳಲ್ಲಿ ಪರೀಕ್ಷೆ ಸರಿಯಾಗಿ ನಡೆಯುತ್ತಿಲ್ಲ. ಶಿಕ್ಷಣ ವ್ಯವಸ್ಥೆ ಹದಗೆಟ್ಟಿದೆ. ಎಲ್ಲ ಹುದ್ದೆಗಳ ಭರ್ತಿಗೆ ದುಡ್ಡು ಕೇಳುತ್ತಿದ್ದಾರೆ. ಇದನ್ನು ಸರ್ಕಾರ ಎನ್ನಲಾಗುತ್ತಿದೆಯೇ? ಎಂದು ಪ್ರಶ್ನಿಸಿದರು.

ಪ್ರಜಾಪ್ರಭುತ್ವದ ಆತ್ಮವೇ ಚುನಾವಣೆ. ಆದರೆ, ಎಲ್ಲ ಪಕ್ಷದ ಮುಖಂಡರು ಮ್ಯಾಜಿಕ್‌ ನಂಬರ್‌ ಹೇಳುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುತ್ತಿದ್ದಾರೆ. ಮ್ಯಾಜಿಕ್‌ ನಂಬರ್‌ ನಿರ್ಣಯಿಸುವವರು ಮತದಾರರು. ಆದರೆ, ಬಿಜೆಪಿ ತನಗೆ ಯಾರು ಮತ ನೀಡುವುದಿಲ್ಲವೋ, ಅವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆಯುವ ಕೆಲಸ ಮಾಡುತ್ತಿದೆ. ಇಂತಹ ಅಯೋಗ್ಯತನ ರಾಜಕೀಯವನ್ನು ನಾ ಜೀವನದಲ್ಲಿ ಕಂಡಿಲ್ಲ. ಮತದಾರರ ಹಕ್ಕನ್ನೇ ಕಸಿಯುವ ಕೆಲಸ ಮಾಡುತ್ತಿರುವುದು ನಾಚಿಕೆಗೇಡು. ಜನತಂತ್ರ ವ್ಯವಸ್ಥೆಗೆ ಮಾಡಿದ ದೊಡ್ಡ ಅಪಮಾನವಿದು ಎಂದು ಆಕ್ರೋಶ ಹೊರಹಾಕಿದರು.

ಒಕ್ಕಲಿಗ ಮೀಸಲಾತಿ ಹೋರಾಟದ ಮೂಲಕ ಸಿಎಂ ಆಸೆ ಬಿಚ್ಚಿಟ್ಟ ಡಿಕೆಶಿ

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ. ಆರ್ಥಿಕವಾಗಿ ಸ್ಥಿತಿವಂತನಲ್ಲ. ಸೇವಾ ರಾಜಕಾರಣದಲ್ಲಿ ಸಕ್ರಿಯವಾಗಿರುತ್ತೇನೆ ಎಂದು ಹೇಳಿದರು.

click me!