ಕಾರವಾರ: ಆನಂದ್ ಆಸ್ನೋಟಿಕರ್ ಕನ್‌ಫ್ಯೂಶನ್ ತಂತ್ರ, ಗೊಂದಲದಲ್ಲಿ ಪ್ರತಿಸ್ಪರ್ಧಿಗಳು..!

By Girish GoudarFirst Published Feb 1, 2023, 1:00 AM IST
Highlights

ಆನಂದ್ ಆಸ್ನೋಟಿಕರ್ ಮಾತ್ರ ತಾನಿನ್ನೂ ರಾಜಕೀಯ ನಿರ್ಧಾರ ಕೈಗೊಂಡಿಲ್ಲ ಅನ್ನೋ ಮೂಲಕ ಜನರನ್ನು ಹಾಗೂ ಪ್ರತಿಸ್ಪರ್ಧಿಗಳನ್ನು ಕನ್‌ಫ್ಯೂಸ್ ಮಾಡಲಾರಂಭಿಸಿದ್ದಾರೆ. 

ಭರತ್‌ ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಕಾರವಾರ(ಫೆ.01):  ಚುನಾವಣೆ ಹತ್ತಿರ ಬರುತ್ತಿದ್ದಂತೇ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಬೆಳೆವಣಿಗೆಗಳು ನಡೆಯುತ್ತಿವೆ. ಉತ್ತರಕನ್ನಡ ಜಿಲ್ಲೆಯಲ್ಲೂ ಹಾಲಿ ಶಾಸಕರು ಹಾಗೂ ಆಕಾಂಕ್ಷಿಗಳು ಕೊಂಚ ಕೊಂಚವೇ ಆಂತರಿಕ ಹಾಗೂ ಬಹಿರಂಗ ಪ್ರಚಾರದಲ್ಲಿ ತೊಡಗಿಸಿಕೊಳ್ಳಲಾರಂಭಿಸಿದ್ದಾರೆ. ಈ ನಡುವೆ ಜೆಡಿಎಸ್‌ನ ಮಾಜಿ ಸಚಿವ ಆನಂದ್ ಆಸ್ನೋಟಿಕರ್ ಮಾತ್ರ ತಾನಿನ್ನೂ ರಾಜಕೀಯ ನಿರ್ಧಾರ ಕೈಗೊಂಡಿಲ್ಲ ಅನ್ನೋ ಮೂಲಕ ಜನರನ್ನು ಹಾಗೂ ಪ್ರತಿಸ್ಪರ್ಧಿಗಳನ್ನು ಕನ್‌ಫ್ಯೂಸ್ ಮಾಡಲಾರಂಭಿಸಿದ್ದಾರೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ ನೋಡಿ...

2018ರಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್‌ನ ಮಾಜಿ ಸಚಿವ ಆನಂದ್ ಆಸ್ನೋಟಿಕರ್ ಹಾಗೂ ಮಾಜಿ ಶಾಸಕ ಸತೀಶ್ ಸೈಲ್ ಅವರನ್ನು ಸೋಲಿಸಿ ಆಶ್ಚರ್ಯವೆಂಬಂತೆ ಬಿಜೆಪಿಯಿಂದ ರೂಪಾಲಿ ನಾಯ್ಕ್ ಗೆದ್ದು ಬಂದಿದ್ದರು.  ಒಂದು ಬಾರಿ 2008ರಲ್ಲಿ ಕಾಂಗ್ರೆಸ್‌ನಿಂದ ವಿಧಾನಸಭೆಗೆ ಆಯ್ಕೆಯಾದ ಎರಡು ತಿಂಗಳಲ್ಲೇ ಆಪರೇಶನ್ ಕಮಲದ ಕಾರಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಬಿಜೆಪಿಯಿಂದ ಸ್ಪರ್ಧಿಸಿ ಪುನರಾಯ್ಕೆಯಾಗಿದ್ದರು. ಬಿಜೆಪಿ ಸರ್ಕಾರದಲ್ಲಿ ಅತ್ಯಂತ ಕಿರಿಯ ವಯಸ್ಸಿನ ಮಂತ್ರಿ ಎಂದು ಗುರುತಿಸಿಕೊಂಡಿದ್ದ ಆನಂದ್ ಆಸ್ನೋಟಿಕರ್, 2013ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಪಕ್ಪೇತರ ಅಭ್ಯರ್ಥಿ ಸತೀಶ್ ಸೈಲ್ ವಿರುದ್ಧ ಹೀನಾಯ ಸೋಲು ಕಂಡಿದ್ದರು. ನಂತರ ಬಿಜೆಪಿ ಮುಖಂಡರ ಜತೆ ಸಂಬಂಧ ಹಳಸಿಕೊಂಡ ಕಾರಣ ಆಸ್ನೋಟಿಕರ್ ಬಿಜೆಪಿ ಟಿಕೆಟ್ ಕಳೆದುಕೊಂಡಿದ್ದರು. ಅದಾಗಲೇ ಜೆಡಿಎಸ್‌ಗೆ ಜಂಪ್ ಮಾಡಿದ ಆಸ್ನೋಟಿಕರ್ 2018ರ ಸಾರ್ವತ್ರಿಕ ಚುನಾವಣೆಯಲ್ಲಿ ‌ಜೆಡಿಎಸ್ ನಿಂದ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ್ ಅವರ ವಿರುದ್ಧ ಕಡಿಮೆ ಅಂತರದ ಸೋಲು ಕಂಡಿದ್ದರು.

ಅಪ್ಪಟ ಹಿಂದು ಎನ್ನುವ ಸಿದ್ದರಾಮಯ್ಯ, ಗೋಹತ್ಯೆ ನಿಷೇಧ ಕಾಯ್ದೆ ತಂದಾಗ ಆರ್ಭಟಿಸಿದ್ದೇಕೆ: ಕೋಟ

ಬಳಿಕ 2019ರ ಲೋಕಸಭೆಯಲ್ಲಿ ಜೆಡಿಎಸ್ ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿಜೆಪಿಯ ಅನಂತ ಕುಮಾರ ಹೆಗಡೆ ಅವರ ವಿರುದ್ಧ ಸುಮಾರು ನಾಲ್ಕೂವರೆ ಲಕ್ಷ ಮತಗಳ ಅಂತರದಲ್ಲಿ ಹೀನಾಯ ಸೋಲು ಕಂಡಿದ್ದರು. ಸುಮಾರು ಹತ್ತು ವರ್ಷಗಳಿಂದ ಅಧಿಕಾರವಿಲ್ಲದೇ ಕುಳಿತುಕೊಂಡಿದ್ದ ಆಸ್ನೋಟಿಕರ್ ಸಾಕಷ್ಟು ಸಮಯಗಳಿಂದ ಮರೆಯಾಗಿದ್ದ ಚುನಾವಣೆ ಸಂದರ್ಭದಲ್ಲಿ ಮತ್ತೆ ಕಾಣಿಸಿಕೊಂಡಿದ್ದು, ಜೆಡಿಎಸ್‌ನಿಂದ ಮತ್ತೆ ಸ್ಪರ್ಧಿಸ್ತಾರೆ ಎನ್ನಲಾಗ್ತಿತ್ತು. ಆದ್ರೆ, ಸಾಮಾಜಿಕ ಜಾಲತಾಣದಲ್ಲಿ ತನ್ನ ಹೇಳಿಕೆಯ ವಿಡಿಯೋ ಹಾಕಿರುವ ಆಸ್ನೋಟಿಕರ್, ತಾನು ಯಾವುದೇ ರೇಸ್‌ನಲ್ಲಿಲ್ಲ, ತನ್ನ ರಾಜಕೀಯ ನಿರ್ಧಾರ ಇನ್ನೂ ಅಂತಿಮವಾಗಿಲ್ಲ ಎಂದು ಹೇಳುವ ಮೂಲಕ ತನ್ನ ಬೆಂಬಲಿಗರಿಗೆ ಕೊಂಚ ಶಾಕ್ ಹಾಗೂ ಪ್ರತಿಸ್ಪರ್ಧಿಗಳನ್ನು ಕನ್‌ಫ್ಯೂಸ್ ಮಾಡಲಾರಂಭಿಸಿದ್ದಾರೆ.

ಅಂದ ಹಾಗೆ, ಕಾರವಾರ- ಅಂಕೋಲಾ ಕ್ಷೇತ್ರದಲ್ಲಿ ಯಾವಾಗ ಕಾಂಗ್ರೆಸ್‌ನ ಮಾಜಿ ಶಾಸಕರು ಹಾಗೂ ಬಿಜೆಪಿಯ ಹಾಲಿ ಶಾಸಕರು ಕೆಲವು ಕಡೆಗಳಲ್ಲಿ ಎಡವುತಿದ್ದಾರೆ ಎಂದು ಆನಂದ್ ಆಸ್ನೋಟಿಕರ್ ಅರಿತರೋ ಒಂದೋ ಬಿಜೆಪಿ ಅಥವಾ ಕಾಂಗ್ರೆಸ್ ಮೂಲಕ ಮತ್ತೆ ಎಂಟ್ರಿ ಕೊಡೋಕೆ ಸಾಕಷ್ಟು ಪ್ರಯತ್ನ ನಡೆಸಿದ್ದರು. ಜಿಲ್ಲೆಯಲ್ಲಿ ಜೆಡಿಎಸ್‌ನ ಯಾವುದೇ ಚಾರ್ಮ್ ಇರದ ಕಾರಣ ಕಳೆದ ಬಾರಿ ಅದೇ ಪಕ್ಷದಲ್ಲಿ ನಿಂತು ಸೋಲುಂಡು ಅರಿತಿರುವ ಆಸ್ನೋಟಿಕರ್, ಈ ಅವಕಾಶವನ್ನು ಬಳಸಿಕೊಂಡು ಮುಂದಿನ  ಚುನಾವಣೆಯನ್ನು ಕಾಂಗ್ರೆಸ್ ಅಥವಾ ಬಿಜೆಪಿಯ ಮೂಲಕ ಎದುರಿಸಲು ಯೋಜನೆ ಹಾಕಿದ್ದರು. ಯಾಕಂದ್ರೆ ಕಾಂಗ್ರೆಸ್‌ನಿಂದ ದೊರೆತರೆ ದಲಿತ ಪರ ಹಾಗೂ ಬಿಜೆಪಿಯಿಂದ ದೊರೆತರೆ ಹಿಂದೂ ಪರ ಎಂದು ಗುರುತಿಸಿಕೊಂಡು ಗೆಲ್ಲುವುದು ಪಕ್ಕಾ.‌ ಯಾಕಂದ್ರೆ ಇವರದ್ದೇ ಆದ 30ರಿಂದ 35 ಸಾವಿರ ಮತಗಳ‌ನ್ನು ಹೊಂದಿದ್ದಾರೆ. ಈ ಕಾರಣಕ್ಕಾಗಿ ಅತ್ತ ಡಿಕೆಶಿ ಹಾಗೂ ಇತರ ಕಾಂಗ್ರೆಸ್ ಮುಖಂಡರ ಜತೆ ಮಾತನಾಡಿ ಸತೀಶ್ ಸೈಲ್ ಬದಲು ತಾನು ಟಿಕೆಟ್ ಪಡೆಯಲು ಯತ್ನಿಸಿದ್ದರಾದ್ರೂ ಪ್ರಯೋಜನವಾಗಿರಲಿಲ್ಲ. ಬಳಿಕ ಇತ್ತ ಬಿಜೆಪಿಯ ಜಿಲ್ಲೆಯ ಹಾಗೂ ರಾಜ್ಯದ ಉನ್ನತ ಮುಖಂಡರ ಸಂಪರ್ಕದ ಮೂಲಕ ಹಾಲಿ ಶಾಸಕರ ಬದಲು ಈ ಬಾರಿಯ ಟಿಕೆಟ್ ತಾನು ಪಡೆಯಲು ಪ್ರಯತ್ನಿಸಿದ್ದರು. 

Assembly election: ದೇಶದ ಏಳಿಗೆಗೆ ಮೋದಿ ಪರ ನಿಲ್ಲಿ; ರೂಪಾಲಿ ನಾಯ್ಕ್

ಈ ಯೋಜನೆ ಕೂಡಾ ವರ್ಕೌಟ್ ಆಗದಿದ್ರೂ ಬಿಜೆಪಿ ಪರ ಮಾತ್ರ ಹೆಚ್ಚಿನ ಒಲವು ಆನಂದ್ ಆಸ್ನೋಟಿಕರ್ ಹೊಂದಿದ್ದಾರೆ. ಕಾಂಗ್ರೆಸ್‌ಗೆ ಎಂಟ್ರಿಕೊಡಲು ಅತ್ತ ಸತೀಶ್ ಸೈಲ್ ಬಿಡಲ್ಲ, ಬಿಜೆಪಿಗೆ ಎಂಟ್ರಿ ಕೊಡಲು ಇತ್ತ ರೂಪಾಲಿ ನಾಯ್ಕ್ ಅಡ್ಡಿಯಾಗಿರುವುದರಿಂದ ಸದ್ಯ ಕೊಂಚ ಸೈಲೆಂಟಾಗಿರುವ ಆಸ್ನೋಟಿಕರ್, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಯೋಚನೆ ಕೂಡಾ ಹೊಂದಿದ್ದಾರೆ. ಕಾಂಗ್ರೆಸ್, ಬಿಜೆಪಿ ಅಥವಾ ಸ್ವತಂತ್ರ್ಯ ಅಭ್ಯರ್ಥಿ ಯಾವ ಕಡೆ ವಾಲುವುದು ಇನ್ನೂ ಸ್ಪಷ್ಟವಾಗದ ಕಾರಣ ಸದ್ಯ ಜೆಡಿಎಸ್‌ನಿಂದ ತಾನು ಸ್ಪರ್ಧಿಸುವುದಾಗಿ ಆನಂದ್ ಆಸ್ನೋಟಿರ್ ಹೇಳಿಕೊಳ್ಳುತ್ತಿಲ್ಲ. ತನ್ನ ಬೆಂಬಲಿಗರಿಗೂ ಇದೇ ಮಾತು ಹೇಳಿರುವ ಆಸ್ನೋಟಿಕರ್, ಅಭಿವೃದ್ಧಿ ಮಂತ್ರವೇ ತನ್ನ ಕನಸು ಎಂದು ಹೇಳಿಕೊಂಡಿದ್ದಾರೆ. 

ಒಟ್ಟಿನಲ್ಲಿ ಕಾರವಾರ- ಅಂಕೋಲಾ ಕ್ಷೇತ್ರದ ರಾಜಕಾರಣ ಸಂಬಂಧಿಸಿ ಪ್ರಮುಖ ಸ್ಪರ್ಧಿಯಾಗಿರುವ ಮಾಜಿ ಸಚಿವ ಆನಂದ್ ಆಸ್ನೋಟಿಕರ್ ತನ್ನ ನಿಲುವನ್ನು ಇನ್ನೂ ಸೀಕ್ರೆಟ್ ಆಗಿರಿಸಲು ಪ್ರಯತ್ನಿಸುತ್ತಿದ್ದಾರೆ. ಆಸ್ನೋಟಿಕರ್ ಜೆಡಿಎಸ್ ಅಥವಾ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದಲ್ಲಿ ಬಿಜೆಪಿಗೆ ಫೇವರ್, ಸ್ಪರ್ಧಿಸದಿದ್ದರೆ ಕಾಂಗ್ರೆಸ್‌ಗೆ ಫೇವರ್ ಎನ್ನಲಾಗಿದೆ. ಒಟ್ಟಿನಲ್ಲಿ ಆನಂದ್ ಆಸ್ನೋಟಿಕರ್ ರಾಜಕೀಯ ನಡೆ ಮಾತ್ರ ಕಾರವಾರ ಕ್ಷೇತ್ರದಲ್ಲಿ ಪ್ರಮುಖವಾಗಿರೋದ್ರಲ್ಲಿ ಎರಡು ಮಾತಿಲ್ಲ.

click me!