ಕಾರ್ಯಕರ್ತರೇ ನಿಜವಾದ ರಾಜಾಹುಲಿ, ಮರಿಹುಲಿಗಳು: ಡಾ.ಅರುಣ್‌ ಸೋಮಣ್ಣ

Published : Mar 16, 2023, 09:39 AM ISTUpdated : Mar 16, 2023, 12:25 PM IST
ಕಾರ್ಯಕರ್ತರೇ ನಿಜವಾದ ರಾಜಾಹುಲಿ, ಮರಿಹುಲಿಗಳು: ಡಾ.ಅರುಣ್‌ ಸೋಮಣ್ಣ

ಸಾರಾಂಶ

ಸೋಮಣ್ಣ ಅವರು ಹಿಂದೆ 2013ರಲ್ಲಿ ಕೆಜೆಪಿ ಪಕ್ಷಕ್ಕೆ (ಯಡಿಯೂರಪ್ಪ ನೇತೃತ್ವದ) ಸೇರ್ಪಡೆಯಾಗಲಿಲ್ಲ ಎನ್ನುವುದು ಆಗ ದೊಡ್ಡ ಚರ್ಚೆಗೆ ಕಾರಣವಾಯಿತು. ಅದೇ ರೀತಿ ಬಸವರಾಜ ಬೊಮ್ಮಾಯಿ, ಮುರುಗೇಶ್‌ ನಿರಾಣಿ, ಉಮೇಶ್‌ ಕತ್ತಿ ಮೊದಲಾದವರೂ ಸೇರಲಿಲ್ಲ. ಆದರೆ, ಅಲ್ಲಿಂದ ಸೋಮಣ್ಣ ಅವರ ಮೇಲೆ ಗದಾ ಪ್ರಹಾರ ಆರಂಭವಾಯಿತು.

ವಿಜಯ್‌ ಮಲಗಿಹಾಳ

ಬೆಂಗಳೂರು(ಮಾ.16): ರಾಜ್ಯ ರಾಜಕಾರಣದಲ್ಲಿ ಈಗ ಆಡಳಿತಾರೂಢ ಬಿಜೆಪಿಯ ಹಿರಿಯ ನಾಯಕ ಹಾಗೂ ವಸತಿ-ಮೂಲಸೌಕರ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ ಅವರದ್ದೇ ಸುದ್ದಿ. ಇತ್ತೀಚೆಗೆ ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಕ್ಷೇತ್ರದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಪಾಲ್ಗೊಂಡಿದ್ದ ವಿಜಯ ಸಂಕಲ್ಪ ಯಾತ್ರೆಯ ಉದ್ಘಾಟನಾ ಸಮಾರಂಭಕ್ಕೆ ಗೈರು ಹಾಜರಾಗುವ ಮೂಲಕ ಸೋಮಣ್ಣ ಅವರು ದಿಢೀರನೆ ತಮ್ಮ ಮುನಿಸನ್ನು ಹೊರಹಾಕಿದರು. ಅದರ ಬೆನ್ನಲ್ಲೇ ಅವರು ಬಿಜೆಪಿ ತೊರೆದು ಕಾಂಗ್ರೆಸ್‌ ಪಕ್ಷಕ್ಕೆ ವಾಪಸ್‌ ಹೋಗುತ್ತಾರೆ ಎಂಬ ವದಂತಿಯೂ ದಟ್ಟವಾಗಿ ಹಬ್ಬಿತು. ಅವರ ಮುನಿಸಿಗೆ ಈಗಿನ ವಿಜಯ ಸಂಕಲ್ಪ ಯಾತ್ರೆಯೊಂದೇ ಕಾರಣವಲ್ಲ. ಅದಕ್ಕೆ ಹಲವಾರು ಕಾರಣಗಳ ಇತಿಹಾಸವೇ ಇದೆ ಎನ್ನುವ ಅಂಶ ನಿಧಾನವಾಗಿ ಹೊಗೆಯಾಡತೊಡಗಿದೆ. 

ಸಚಿವ ಸೋಮಣ್ಣ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನಡುವಿನ ಬಾಂಧವ್ಯ ಹಳಸಿರುವುದೂ ಒಂದು ಪ್ರಮುಖ ಕಾರಣ. ಆದರೆ, ಸೋಮಣ್ಣ ಅವರ ಇತ್ತೀಚಿನ ಮುನಿಸಿನ ಕೇಂದ್ರ ಬಿಂದು ಅವರ ಪುತ್ರ, ರಾಜ್ಯ ಬಿಜೆಪಿ ಯುವ ಮೋರ್ಚಾದ ಮಾಜಿ ಉಪಾಧ್ಯಕ್ಷ ಡಾ.ಅರುಣ್‌ ಸೋಮಣ್ಣ. ಈ ಹಿನ್ನೆಲೆಯಲ್ಲಿ ಅರುಣ್‌ ಅವರೊಂದಿಗೆ ‘ಮುಖಾಮುಖಿ’ಯಾದಾಗ..

ಸಂದರ್ಶನದ ಪೂರ್ಣಪಾಠ ಹೀಗಿದೆ:

ಸೋಮಣ್ಣ ಅವರು ಏಕಾಏಕಿ ತಮ್ಮ ಪಕ್ಷದ ವಿರುದ್ಧ ಮುನಿಸಿಕೊಂಡಿದ್ದು ಯಾಕೆ?

ಮುನಿಸಿಕೊಂಡಿದ್ದು ಎಂದು ಹೇಳುವುದಕ್ಕಿಂತ ಬೇಸರಗೊಂಡಿದ್ದಾರೆ ಎಂದರೆ ಸರಿಯಾದೀತು. ಮಲೆಮಹದೇಶ್ವರ ಕ್ಷೇತ್ರದ ಮಾದಪ್ಪ ಸೋಮಣ್ಣ ಅವರ ಮನೆದೇವರು. ಆ ಕ್ಷೇತ್ರದೊಂದಿಗೆ ಭಾವನಾತ್ಮಕ ಸಂಬಂಧವಿದೆ. ಆ ಕ್ಷೇತ್ರದಿಂದ ಆರಂಭಗೊಂಡ ವಿಜಯ ಸಂಕಲ್ಪ ಯಾತ್ರೆಗೆ ಅವರನ್ನು ಕಡೆಗಣಿಸಿದ್ದರಿಂದ ಅವರಿಗೆ ನೋವಾಗಿರಬಹುದು. ಅವರ ಸಾಮರ್ಥ್ಯಕ್ಕೆ ತಕ್ಕಂತೆ ಸೂಕ್ತ ಸ್ಥಾನಮಾನ, ಗೌರವ ನೀಡಬೇಕು. ಅವರನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು.

ಸೋಮಣ್ಣ ಕಾಂಗ್ರೆಸ್‌ಗೆ ಬರ್ತೀನಿ ಅಂದಿಲ್ಲ, ನಾನೂ ಕರೆದಿಲ್ಲ: ಡಿಕೆಶಿ

ಅವರ ಮುನಿಸಿಗೆ ಅಥವಾ ಬೇಸರಕ್ಕೆ ಈ ವಿಜಯ ಸಂಕಲ್ಪ ಯಾತ್ರೆಯೊಂದೇ ಕಾರಣವೇ ಅಥವಾ ಇತಿಹಾಸ ಏನಾದರೂ ಇದೆಯೇ?

ಇದು ಅನೇಕರಿಗೆ ಗೊತ್ತಿರುವ ವಿಚಾರ. ಸೋಮಣ್ಣ ಅವರು ಹಿಂದೆ 2013ರಲ್ಲಿ ಕೆಜೆಪಿ ಪಕ್ಷಕ್ಕೆ (ಬಿ.ಎಸ್‌.ಯಡಿಯೂರಪ್ಪ ನೇತೃತ್ವದ) ಸೇರ್ಪಡೆಯಾಗಲಿಲ್ಲ ಎನ್ನುವುದು ಆಗ ದೊಡ್ಡ ಚರ್ಚೆಗೆ ಕಾರಣವಾಯಿತು. ಅದೇ ರೀತಿ ಬಸವರಾಜ ಬೊಮ್ಮಾಯಿ, ಮುರುಗೇಶ್‌ ನಿರಾಣಿ, ಉಮೇಶ್‌ ಕತ್ತಿ ಮೊದಲಾದವರೂ ಸೇರಲಿಲ್ಲ. ಆದರೆ, ಅಲ್ಲಿಂದ ಸೋಮಣ್ಣ ಅವರ ಮೇಲೆ ಗದಾ ಪ್ರಹಾರ ಆರಂಭವಾಯಿತು.

ಸೋಮಣ್ಣ ಅವರು ಆಗ ಇತರ ಬಿಜೆಪಿ ನಾಯಕರನ್ನೂ ಕೆಜೆಪಿಗೆ ಹೋಗದಂತೆ ತಡೆದರು ಎಂಬ ಆಕ್ರೋಶ ಯಡಿಯೂರಪ್ಪ ಪಾಳೆಯದಲ್ಲಿದೆಯಂತೆ?

ಯಡಿಯೂರಪ್ಪ ಅಷ್ಟುದೊಡ್ಡ ನಾಯಕರಾಗಿ ಹೊಸ ಪಕ್ಷ ಸ್ಥಾಪನೆ ಮಾಡಿದ ಮೇಲೆ ಹೋಗಲು ಇಷ್ಟಪಟ್ಟಿದ್ದ ನಾಯಕರನ್ನು ತಡೆಯಲು ಸೋಮಣ್ಣ ಅವರು ಯಡಿಯೂರಪ್ಪ ಅವರಿಗಿಂತ ದೊಡ್ಡವರೇ? ಹೋಗಲೇಬೇಕು ಎಂದುಕೊಂಡಿದ್ದರೆ ಅಂಥವರು ಕೆಜೆಪಿಗೆ ಹೋಗುತ್ತಿದ್ದರು ಅಷ್ಟೆ. ಸೋಮಣ್ಣ ಅವರ ಮಾತನ್ನು ಕೇಳಿ ಆ ನಾಯಕರು ಯಡಿಯೂರಪ್ಪ ಅವರನ್ನು ಧಿಕ್ಕರಿಸಲು ಸಾಧ್ಯವೇ ಹೇಳಿ.

ಅದಕ್ಕೂ ಮೊದಲು ಅಂದರೆ, 2013ಕ್ಕೂ ಮುಂಚೆ ಯಡಿಯೂರಪ್ಪ ಮತ್ತು ಸೋಮಣ್ಣ ಅವರ ನಡುವಿನ ಬಾಂಧವ್ಯ ಚೆನ್ನಾಗಿತ್ತೆ?

ಸೋಮಣ್ಣ ಅವರನ್ನು ಬಿಜೆಪಿಗೆ ಕರೆತಂದಿದ್ದೇ ಯಡಿಯೂರಪ್ಪ. ಸಿದ್ದಗಂಗಾ ಶ್ರೀಗಳ ಮುಂದೆ ಬಹಳಷ್ಟುಬಾರಿ ಮಾತುಕತೆ ನಡೆದ ಬಳಿಕ ನಿರ್ಧಾರವಾಗಿತ್ತು. ಆ ವೇಳೆ ಸೋಮಣ್ಣ ಅವರಿಗೇನೂ ಬಿಜೆಪಿಯ ಅಗತ್ಯ ಇರಲಿಲ್ಲ. ಅನಿವಾರ್ಯತೆ ಇದ್ದದ್ದು ಯಡಿಯೂರಪ್ಪ ಅವರಿಗೆ. ಕರೆದುಕೊಂಡು ಬಂದು ಮಂತ್ರಿ ಮಾಡಿ ಯಾವುದೋ ಒಂದು ಖಾತೆ ನೀಡಿದರು. ಆಗ ನಡೆದ ಉಪಚುನಾವಣೆಯಲ್ಲಿ ನಾನು ಸ್ಪರ್ಧಿಸಬೇಕಾಗಿತ್ತು. ಅವರು ಮೈಸೂರು-ಚಾಮರಾಜನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಅಭ್ಯರ್ಥಿಯಾಗಬೇಕಿತ್ತು. ನಂತರ ಸೋಮಣ್ಣ ಅವರನ್ನೇ ಉಪಚುನಾವಣೆಗೆ ಕಣಕ್ಕಿಳಿಸಲಾಯಿತು.

ಈಗ ಸೋಮಣ್ಣ ಅವರ ಮುನಿಸಿನ ಕೇಂದ್ರ ಬಿಂದು ನೀವು. ನಿಮಗೆ ಟಿಕೆಟ್‌ ನೀಡಬೇಕು ಎಂಬ ಪಟ್ಟು ಹಿಡಿದಿದ್ದಾರಂತೆ?

ನಾನು ಯಾವತ್ತೂ ಅವರಿಗೆ ಪಕ್ಷದ ಟಿಕೆಟ್‌ ಕೊಡಿಸಿ ಎಂದು ಕೇಳಿಲ್ಲ. ನನಗೆ ಗೊತ್ತಿರುವ ಒಬ್ಬ ನಾಯಕ ಎಂದರೆ ಅದು ಸೋಮಣ್ಣ. ನನ್ನ ತಂದೆ ಮನೆಗೆ ಹೋಗಿ ಬರುತ್ತೇನೆಯೇ ಹೊರತು ಬೇರೆಯವರ ಮನೆಗಲ್ಲ. ಕಳೆದ ಜುಲೈ 22ರಂದು ನಾನು ತಂದೆಯವರನ್ನು ಭೇಟಿ ಮಾಡಿದ ವೇಳೆ ‘ದೇವರು ನನಗೆ ಟಿಕೆಟ್‌ ಕೊಡಬೇಕು ಎಂದಿದ್ದರೆ ಕೊಡ್ತಾನೆ. ನಾನು ಮತ್ತೊಮ್ಮೆ ಟಿಕೆಟ್‌ ಕೇಳಲ್ಲ. ನನ್ನ ಪರವಾಗಿ ನೀವು ಯಾರ ಬಳಿಯೂ ಟಿಕೆಟ್‌ ಕೇಳುವುದು ಬೇಡ. ನಿಮ್ಮ ನೆರಳಲ್ಲಿ ಆರಾಮಾಗಿ ಮುಂದೆ ಹೋಗುತ್ತೇನೆ. ನನಗಿನ್ನೂ ವಯಸ್ಸಿದೆ. ಮುಂದೆ ನೋಡೋಣ. ನೀವು ತಲೆ ಕೆಡಿಸಿಕೊಳ್ಳಬೇಡಿ’ ಎಂದು ನಾನು ನಂಬುವ ರಾಘವೇಂದ್ರ ಸ್ವಾಮಿ ಮೇಲೆ ಹಾಗೂ ಮಕ್ಕಳ ಮೇಲೆ ಪ್ರಮಾಣ ಮಾಡಿ ಸ್ಪಷ್ಟಪಡಿಸಿದ್ದೆ.

ಹಾಗಾದರೆ ನಿಮಗೆ ಚುನಾವಣೆಗೆ ಸ್ಪರ್ಧಿಸುವ ಆಸೆ ಇಲ್ಲವೇ?

ಟಿಕೆಟ್‌ ಕೊಟ್ಟರೆ ಸ್ಪರ್ಧಿಸುವೆ. ಆದರೆ, ನನ್ನ ತಂದೆಯನ್ನು ಬಲಿಪಶು ಮಾಡಿ ರಾಜಕಾರಣ ಮಾಡುವುದಿಲ್ಲ. ಅವರನ್ನು ಇಕ್ಕಟ್ಟಿಗೆ ಸಿಲುಕಿಸುವ ಉದ್ದೇಶ ನನಗಿಲ್ಲ. ಅವರಿಗೆ ಹೆಚ್ಚುಕಮ್ಮಿ ಆಗುತ್ತದೆ ಎಂದರೆ ನಾನು ಪ್ರಾಣ ತ್ಯಾಗ ಮಾಡುತ್ತೇನೆಯೇ ಹೊರತು ಅವರಿಗೆ ಎಳ್ಳಷ್ಟೂನೋವಾಗಲು ಅವಕಾಶ ನೀಡುವುದಿಲ್ಲ.

ವೈರಲ್‌ ಆಗಿರುವ ನಿಮ್ಮ ವೀಡಿಯೋದಲ್ಲಿ ನೀವು ಪ್ರಸ್ತಾಪ ಮಾಡಿದ ಆ ‘ಮಹಾಪುರುಷ’ ಯಾರು?

ಅದು ಮುಂದೆ ಗೊತ್ತಾಗಲಿದೆ. ಅದಕ್ಕೆ ಸಮಯ ಬರುತ್ತದೆ. ಕಾಲಘಟ್ಟಬಂದಾಗ ಎಲ್ಲವೂ ಗೊತ್ತಾಗುತ್ತದೆ. ವಿಷಯಕ್ಕೆ ಸಂಬಂಧಿಸಿದಂತೆ ಉದಾಹರಣೆ ನೀಡುವಾಗ ಇದನ್ನು ಪ್ರಸ್ತಾಪಿಸಿದೆ.

ನಿಮ್ಮ ಮತ್ತು ಬಿ.ವೈ.ವಿಜಯೇಂದ್ರ ಅವರ ನಡುವಿನ ಬಾಂಧವ್ಯ ಹೇಗಿದೆ?

2020ರ ಏಪ್ರಿಲ್‌ವರೆಗೆ ಚೆನ್ನಾಗಿಯೇ ಇತ್ತು. ನಂತರ ಸಂಪರ್ಕ ಕಡಮೆಯಾಯಿತು. ನಾನು ಯುವಮೋರ್ಚಾ ಉಪಾಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದ ವೇಳೆ ಅವರು ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡರು. ಜೊತೆ ಜೊತೆಯಲ್ಲಿ ಬೆಳೆಯೋಣ ಎಂದಿದ್ದರು. ನಂತರ ಬದಲಾಯಿತು. ಅವರ ದಾರಿ ಅವರಿಗೆ. ನನ್ನ ದಾರಿ ನನಗೆ.

ಬಿಜೆಪಿಯಲ್ಲಿ ಯುವನಾಯಕರ ಪೈಕಿ ವಿಜಯೇಂದ್ರ ಅವರೊಬ್ಬರಿಗೆ ಮಾತ್ರ ಹೆಚ್ಚು ಪ್ರಾಶಸ್ತ್ಯ ಸಿಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ?

ನೀವೇ ಪಕ್ಷದ ಸಂಘಟನೆಯನ್ನು ವಿಭಾಗವಾರು, ಜಿಲ್ಲಾವಾರು ನೋಡಿಕೊಂಡು ಬನ್ನಿ. ಯಾರನ್ನು ಬೆಳೆಸಲಾಗುತ್ತಿದೆ ಎಂಬುದು ಗೊತ್ತಾಗುತ್ತದೆ. ಅವಕಾಶಗಳನ್ನು ಒಂದು ವರ್ಗಕ್ಕೆ ಅಥವಾ ಒಬ್ಬ ವ್ಯಕ್ತಿಗೆ ಸೀಮಿತಗೊಳಿಸಿದರೆ ಹೇಗೆ ಸರಿ ಹೇಳಿ. ಎಲ್ಲರಿಗೂ ಸಮಾನ ಅವಕಾಶ ನೀಡುವಂತಾಗಬೇಕು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಿಮಗೆ ಟಿಕೆಟ್‌ ನೀಡುವ ಭರವಸೆ ನೀಡಲಾಗಿತ್ತಲ್ಲವೇ?

2018ರ ಚುನಾವಣೆಯಲ್ಲಿ ಯಡಿಯೂರಪ್ಪ ಅವರು ರಾಜ್ಯಾಧ್ಯಕ್ಷರಾಗಿದ್ದ ವೇಳೆ ಅವರ ಮನೆಗೆ ಕರೆದು ಅರಸೀಕೆರೆಯಿಂದ ಸ್ಪರ್ಧಿಸಲು ಕೆಲಸ ಆರಂಭಿಸು ಎಂಬ ಸೂಚನೆ ನೀಡಿದ್ದರು. ಅವರ ಆಶೀರ್ವಾದ ತೆಗೆದುಕೊಂಡು ಅಲ್ಲಿ ಹೋಗಿ ಕೆಲಸ ಆರಂಭಿಸಿದ 15 ದಿನಗಳಲ್ಲೇ ಒಂದಿಬ್ಬರು ಬಂದು ‘ದೊಡ್ಡವರು’ ಹೇಳಿ ಕಳುಹಿಸಿದ್ದಾರೆ ಎಂದರು. ಇಡೀ ಪಕ್ಷಕ್ಕೆ ರಾಜ್ಯಾಧ್ಯಕ್ಷರಾಗಿದ್ದ ಯಡಿಯೂರಪ್ಪ ಬಿಟ್ಟು ಬೇರೆ ಯಾರು ದೊಡ್ಡವರು ಇರಲು ಸಾಧ್ಯ ಎಂಬುದು ಗೊತ್ತಿರುವ ವಿಚಾರ.

ಕುಟುಂಬ ರಾಜಕಾರಣಕ್ಕೆ ಕಡಿವಾಣ ಹಾಕುವ ಬಗ್ಗೆ ಬಿಜೆಪಿ ವರಿಷ್ಠರು ಪದೇ ಪದೇ ಹೇಳುತ್ತಿದ್ದಾರೆ. ಎಲ್ಲರಿಗೂ ಒಂದೇ ನೀತಿ ಅನ್ವಯವಾಗಲಿ ಎಂಬ ಮಾತನ್ನು ಸೋಮಣ್ಣ ಹೇಳಿದ್ದಾರೆ?

ಒಬ್ಬ ವ್ಯಕ್ತಿಗೆ ಸಾಮರ್ಥ್ಯವಿದೆಯೇ? ಆತ ವಿಶ್ವಾಸಾರ್ಹನೇ? ಕೊಟ್ಟಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾನೆಯೇ ಎಂಬುದನ್ನು ಪರಿಗಣಿಸಬೇಕು. ಆದರೆ, ಒಂದು ನಿರ್ದಿಷ್ಟವಿಷಯಕ್ಕೆ ಸಂಬಂಧಿಸಿದಂತೆ ಪಕ್ಷ ಒಂದು ನೀತಿ ಮಾಡಿಕೊಂಡಲ್ಲಿ ಅದು ಎಲ್ಲರಿಗೂ ಅನ್ವಯವಾಗಬೇಕು. ಟಿಕೆಟ್‌ ಹಂಚಿಕೆಗೆ ಸಂಬಂಧಿಸಿದಂತೆ ಒಬ್ಬರಿಗೊಂದು ಮಾನದಂಡ, ಮತ್ತೊಬ್ಬರಿಗೊಂದು ಮಾನದಂಡ ಅನುಸರಿಸುವುದು ತಪ್ಪಾಗುತ್ತದೆ. ಒಬ್ಬ ನಾಯಕರ ಮನೆಯಲ್ಲಿ ಈಗಾಗಲೇ ಒಬ್ಬರು ಸಂಸದರಾಗಿದ್ದಾರೆ. ಈಗ ಮತ್ತೊಬ್ಬರಿಗೆ ವಿಧಾನಸಭಾ ಟಿಕೆಟ್‌ ನೀಡಿದರೆ ಒಂದು ಕುಟುಂಬಕ್ಕೆ ಎರಡು ಟಿಕೆಟ್‌ ನೀಡಿದಂತಾಗುತ್ತದೆ. ಒಂದು ಕುಟುಂಬ ಎಲ್ಲರಿಗಿಂತ ದೊಡ್ಡದು, ಉಳಿದವರು ಆ ಕುಟುಂಬದ ಅಧೀನದಲ್ಲಿ ಇರಬೇಕು ಎನ್ನುವುದು ಇಂದಿನ ಪರಿಸ್ಥಿತಿಯಲ್ಲಿ ಸರಿಯಲ್ಲ.

ಸೋಮಣ್ಣ, ಪುತ್ರಗೆ ಸ್ಥಾನ: ಅಮಿತ್‌ ಶಾ ಭರವಸೆ

ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿಬೆಳೆಸಿದ ಮಾಜಿ ಸಿಎಂ ಯಡಿಯೂರಪ್ಪ ಅವರೇ ಪಕ್ಷದಲ್ಲಿ ಅಂತಿಮ. ಅವರನ್ನು ಬಿಟ್ಟರೆ ಬೇರಾರೂ ಇಲ್ಲ ಎಂಬ ವಾತಾವರಣವಿದೆ?

ಪಕ್ಷ ಕಟ್ಟಿದವರಲ್ಲಿ ಯಡಿಯೂರಪ್ಪ ಅವರೊಬ್ಬರೇ ಅಲ್ಲ, ಬಿ.ಬಿ.ಶಿವಪ್ಪ ಅವರೂ ಇದ್ದರು. ಅನಂತಕುಮಾರ್‌ ಕೂಡ ಇದ್ದರು. ಯಡಿಯೂರಪ್ಪ ಅವರ ಕೊಡುಗೆಯನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಹಾಗಂತ ಇತರ ಮುಖಂಡರ ಕೊಡುಗೆ, ತ್ಯಾಗ ಇಲ್ಲ ಎಂದರೆ ಹೇಗೆ? ಪಕ್ಷ ಮತ್ತು ದೇಶ ಒಬ್ಬರಿಂದಲೇ ಕಟ್ಟುವುದಕ್ಕೆ ಆಗುವುದಿಲ್ಲ. ಪಕ್ಷ ಅಂದರೆ ಕಟ್ಟಕಡೆಯ ಕಾರ್ಯಕರ್ತನೂ ಬೇಕಾಗುತ್ತದೆ. ಕೇವಲ ದಂಡನಾಯಕನೊಬ್ಬರನ್ನು ಕೂಡಿಸಿ ಸೈನಿಕರೇ ಇಲ್ಲ ಎಂದರೆ ಯುದ್ಧ ಹೇಗೆ ಮಾಡುತ್ತಾರೆ? ಪ್ರತಿಯೊಬ್ಬ ಮುಖಂಡರು, ಅದಕ್ಕಿಂತಲೂ ಹೆಚ್ಚಾಗಿ ಪ್ರತಿಯೊಬ್ಬ ಕಾರ್ಯಕರ್ತ ಮುಖ್ಯ. ಕೇವಲ ಒಬ್ಬ ವ್ಯಕ್ತಿಯಿಂದ ಒಂದು ಪಕ್ಷ ಕಟ್ಟಲು ಸಾಧ್ಯವಿಲ್ಲ, ಒಂದು ಮನೆಯನ್ನೂ ಕಟ್ಟಲು ಸಾಧ್ಯವಿಲ್ಲ.

ಈಗಿನ ಬಿಜೆಪಿಯಲ್ಲಿ ರಾಜಾಹುಲಿ, ಮರಿಹುಲಿಯ ಮಾತೇ ನಡೆಯುತ್ತದೆ ಎಂಬ ಪ್ರತೀತಿಯಿದೆ?

ನೋಡಿ, ಯಾರನ್ನಾದರೂ ರಾಜಾಹುಲಿ, ಮರಿಹುಲಿ ಎಂಬಿತ್ಯಾದಿ ಕರೆಯುವುದರಿಂದ ಏನೂ ಆಗುವುದಿಲ್ಲ. ನಿಜವಾಗಿಯೂ ಪ್ರಾಣ ಒತ್ತೆ ಇಟ್ಟು ರಾಮಮಂದಿರ ನಿರ್ಮಾಣಕ್ಕಾಗಿ ಹೋರಾಟ ಮಾಡಿದ ಕರಸೇವಕರು, ಕಾರ್ಯಕರ್ತರು ನಿಜವಾದ ರಾಜಾಹುಲಿಗಳು, ಮರಿಹುಲಿಗಳು ಎನ್ನುವುದನ್ನು ಯಾರೂ ಮರೆಯಬಾರದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ