ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಜೆಡಿಎಸ್ ಮುನ್ನಡೆ| ಪಶ್ಚಿಮ ಪದವೀಧರ, ಬೆಂಗಳೂರು ಶಿಕ್ಷಕ, ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಜಯ| ಕಾಂಗ್ರೆಸ್ ಬಲ 27ಕ್ಕೆ, ಜೆಡಿಎಸ್ 13ಕ್ಕೆ ಕುಸಿತ| ಪರಿಷತ್ ಸಭಾಪತಿ ಬದಲಾವಣೆಗೆ ಇದು ನಾಂದಿ|
ಬೆಂಗಳೂರುನ.11): ವಿಧಾನಸಭೆ ಚುನಾವಣೆಯಲ್ಲಿ ಸಾಧಿಸಿದ್ದ ಗೆಲುವನ್ನು ಪರಿಷತ್ ಚುನಾವಣೆಯಲ್ಲೂ ಬಿಜೆಪಿ ಮುಂದುವರಿಸಿದೆ. ವಿಧಾನಪರಿಷತ್‌ನ ನಾಲ್ಕು ಕ್ಷೇತ್ರಗಳಿಗೆ ನಡೆದ ಚುನಾವಣೆಯ ಪೈಕಿ ಮೂರು ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿದ್ದು, ಮೂರು ಕ್ಷೇತ್ರದಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ. ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಜೆಡಿಎಸ್ ಮುನ್ನಡೆ ಸಾಧಿಸಿದ್ದು, ಬುಧವಾರ ಸ್ಪಷ್ಟಫಲಿತಾಂಶ ಬರಲಿದೆ. ಪಶ್ಚಿಮ ಪದವೀಧರ , ಬೆಂಗಳೂರು ಶಿಕ್ಷಕರ ಮತ್ತು ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಆಗ್ನೇಯ ಪದವೀಧರ:
ಆಗ್ನೇಯ ಪದವೀಧರ ಕ್ಷೇತ್ರದ ಮತ ಎಣಿಕೆ ತಡರಾತ್ರಿಯೂ ಮುಂದುವರಿದಿದೆ. ಜೆಡಿಎಸ್‌ನ ಚೌಡರೆಡ್ಡಿ ತೂಪಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ, ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಪತಿ ಶ್ರೀನಿವಾಸ್‌ಗಿಂತ ಸುಮಾರು 300 ಮತದಿಂದ ಮುಂದಿದ್ದಾರೆ. ಇಲ್ಲಿ ಬಿಜೆಪಿ ಚಿದಾನಂದಗೌಡ 3 ಹಾಗೂ ಕಾಂಗ್ರೆಸ್‌ನ ರಮೇಶ್ ಬಾಬು 4ನೇ ಸ್ಥಾನದಲ್ಲಿದ್ದಾರೆ. ಮೊದಲ ಸುತ್ತಿನಲ್ಲಿ ತೂಪಲ್ಲಿಗೆ 3810, ಶ್ರೀನಿವಾಸ್‌ಗೆ 3496, ಗೌಡಗೆ 3118, ರಮೇಶ್‌ಬಾಬುಗೆ 1411 ಮತ ಬಂದಿವೆ.
ಪುಟ್ಟಣ್ಣಗೆ ಜಯ:
ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದ ಪುಟ್ಟಣ್ಣ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಜಯಗಳಿಸಿ ನಾಲ್ಕನೇ ಬಾರಿಗೆ ಮೇಲ್ಮನೆಗೆ ಪುನರಾಯ್ಕೆಯಾಗಿದ್ದಾರೆ. ಪುಟ್ಟಣ್ಣ ಅವರು ತಮ್ಮ ಪ್ರತಿಸ್ಪರ್ಧಿ ಜೆಡಿಎಸ್ ಅಭ್ಯರ್ಥಿ ಎ.ಪಿ.ರಂಗನಾಥ್ ವಿರುದ್ಧ 2,228 ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ಪುಟ್ಟಣ್ಣ ಅವರು 7335 ಮತ, ಜೆಡಿಎಸ್‌ನ ರಂಗನಾಥ್ 5107 ಮತಗಳನ್ನು ಗಳಿಸಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಪ್ರವೀಣ್ ಪೀಟರ್ 782 ಮತಗಳನ್ನು ಪಡೆದಿದ್ದಾರೆ. ಕ್ಷೇತ್ರದಲ್ಲಿ ಒಟ್ಟು 22261 ಮತದಾರರ ಪೈಕಿ 14,538 ಜನರು ಮತ ಚಲಾಯಿಸಿದ್ದಾರೆ. 1251 ಮತಗಳು ತಿರಸ್ಕೃತಗೊಂಡಿವೆ. ಒಟ್ಟು 13,287 ಮತಗಳನ್ನು ಪರಿಗಣಿಸಲಾಗಿದೆ.
ಪರಿಷತ್ ಚುನಾವಣೆ: ಜೆಡಿಎಸ್‌ನಿಂದ ಬಿಟ್ಟು ಬಿಜೆಪಿಯಿಂದ ಗೆದ್ದ ಪುಟ್ಟಣ್ಣ..!
ಸಂಕನೂರು ಪುನರಾಯ್ಕೆ:
ಪಶ್ಚಿಮ ಪದವೀಧರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಎಸ್.ವಿ.ಸಂಕನೂರು ಎರಡನೇ ಬಾರಿಗೆ ಪುನರಾಯ್ಕೆಯಾಗಿದ್ದಾರೆ. ಒಟ್ಟು 75781 ಮತದಾರರ ಪೈಕಿ 52,041 ಮತಗಳ ಚಲಾವಣೆಯಾಗಿದೆ. ಇದರಲ್ಲಿ ಸಂಕನೂರು ಅವರು 23,857 ಮತ ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್‌ನ ಆರ್.ಎಂ.ಕುಬೇರಪ್ಪ ಅವರು 12,448 ಮತಗಳನ್ನು ಪಡೆದು ಸೋಲನುಭವಿಸಿದ್ದಾರೆ. ಅಂತಿಮ ಕ್ಷಣದಲ್ಲಿ ಜೆಡಿಎಸ್ ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ಅವರಿಗೆ ಬೆಂಬಲ ಸೂಚಿಸಿತ್ತು. ಗುರಿಕಾರ ಅವರಿಗೆ 6188 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಚುನಾವಣೆಯಿಂದ ಜೆಡಿಎಸ್ ಅಭ್ಯರ್ಥಿ ನಿವೃತ್ತಿ: ಕಾರಣ..?
ಈಶಾನ್ಯದಲ್ಲಿ ಮತ್ತೆ ನಮೋಶಿ:
ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶಶಿಲ್ ನಮೋಶಿ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಶರಣಪ್ಪ ಮಟ್ಟೂರ್ ವಿರುದ್ಧ 3,130 ಮತಗಳ ಅಂತರದಲ್ಲಿ ಜಯಗಳಿಸಿ ನಾಲ್ಕನೇ ಬಾರಿ ಪರಿಷತ್ ಪ್ರವೇಶಿಸಲಿದ್ದಾರೆ. ಮೇಲ್ಮನೆಗೆ ಪುನರಾಯ್ಕೆ ಬಯಸಿ ಸ್ಪರ್ಧಿಸಿದ್ದ ಶರಣಪ್ಪ ಮಟ್ಟೂರ್ ಅವರು 7,082 ಮತಗಳನ್ನು ಪಡೆದು ಸೋಲನುಭವಿಸಿದ್ದಾರೆ. ಶಶಿಲ್ ನಮೋಶಿ ಅವರು 9,797 ಮತಗಳನ್ನು ಪಡೆದು ವಿಜಯದ ನಗೆ ಬೀರಿದ್ದಾರೆ. ಜೆಡಿಎಸ್ ಅಭ್ಯರ್ಥಿ ತಿಮ್ಮಯ್ಯ ಪುರ್ಲೆ 3,812 ಮತ ಗಳಿಸಿದ್ದಾರೆ.
ಈಶಾನ್ಯ ಶಿಕ್ಷಕರ ಕ್ಷೇತ್ರ: ಮತದಾರರ ಪಟ್ಟಿಗೆ ಹೆಸ್ರು ಸೇರಿಸಿ, ವಯಸ್ಸಿಗಿಂತ ಶಿಕ್ಷಣ ಮುಖ್ಯ
ಪರಿಷತ್‌ನಲ್ಲಿ ಬಿಜೆಪಿ ಬಲ 30ಕ್ಕೇರಿಕೆ
ವಿಧಾನಪರಿಷತ್‌ನ ನಾಲ್ಕು ಕ್ಷೇತ್ರಗಳಿಗೆ ನಡೆದ ಚುನಾವಣೆ ಪೈಕಿ ಫಲಿತಾಂಶ ಪ್ರಕಟವಾದ ಮೂರು ಕ್ಷೇತ್ರಗಳನ್ನು ಬಿಜೆಪಿ ತನ್ನ ತೆಕ್ಕೆಗೆ ಹಾಕಿಕೊಂಡು ಹಿರಿಯರ ಮನೆಯಲ್ಲಿ ತನ್ನ ಬಲ ವೃದ್ಧಿಸಿಕೊಂಡಿದೆ. ಕಾಂಗ್ರೆಸ್ ವಶದಲ್ಲಿದ್ದ ಈಶಾನ್ಯ ಶಿಕ್ಷಕರ ಕ್ಷೇತ್ರ, ಜೆಡಿಎಸ್ ತೆಕ್ಕೆಯಲ್ಲಿದ್ದ ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಜಯಗಳಿಸಿದೆ. ಪಶ್ಚಿಮ ಪದವೀಧರ ಕ್ಷೇತ್ರವನ್ನು ಉಳಿಸಿಕೊಂಡಿದೆ. ಆಗ್ನೇಯ ಪದವೀಧರ ಕ್ಷೇತ್ರದ ಮತ ಎಣಿಕೆ ತಡವಾಗಿ ಆರಂಭವಾದ ಹಿನ್ನೆಲೆಯಲ್ಲಿ ಬುಧವಾರ ಮಧ್ಯಾಹ್ನದ ಹೊತ್ತಿಗೆ ಫಲಿತಾಂಶ ಹೊರಹೊಮ್ಮಲಿದೆ.
ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವುದರಿಂದ 75 ಸದಸ್ಯರು ಇರುವ ಮೇಲ್ಮನೆಯಲ್ಲಿ ಬಿಜೆಪಿಯ ಬಲ ಇನ್ನು ಮುಂದೆ 30 (ಈವರೆಗೆ 27 ಇತ್ತು) ಕ್ಕೆ ಹೆಚ್ಚಾಗಿದ್ದು, ಕಾಂಗ್ರೆಸ್ 27 (ಈವರೆಗೆ 28) ಹಾಗೂ ಜೆಡಿಎಸ್ ಬಲ 13ಕ್ಕೆ ಇಳಿದಿದೆ. ಉಳಿದಂತೆ ಸಭಾಪತಿ ಹಾಗೂ ಒಬ್ಬರು ಪಕ್ಷೇತರ ಸದಸ್ಯರಿದ್ದಾರೆ.
ಈವರೆಗೆ ಸತತವಾಗಿ ಜೆಡಿಎಸ್‌ನಿಂದ ಮೂರು ಬಾರಿ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಪುಟ್ಟಣ್ಣ ನಾಲ್ಕನೇ ಬಾರಿಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಚುನಾಯಿತರಾಗಿದ್ದಾರೆ. ಅದೇ ರೀತಿ ಈಶಾನ್ಯ ಪದವೀಧರ ಕ್ಷೇತ್ರದಿಂದ ಈವರೆಗೆ ಸದಸ್ಯರಾಗಿದ್ದ ಕಾಂಗ್ರೆಸ್‌ನ ಶರಣಪ್ಪ ಮಟ್ಟೂರು ಅವರನ್ನು ಸೋಲಿಸುವ ಮೂಲಕ ಶಶಿಲ್ ನಮೋಶಿ ಮತ್ತೇ ಮೇಲ್ಮನೆ ಪ್ರವೇಶಿಸಿದ್ದಾರೆ. ಶಶಿಲ್ ನಮೋಶಿ ಅವರು ನಾಲ್ಕನೇಯ ಬಾರಿ ಪರಿಷತ್ ಸದಸ್ಯರಾದಂತಾಗಿದೆ. ಇನ್ನು ಪಶ್ಚಿಮ ಪದವೀಧರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಪ್ರೊ.ಎಸ್.ವಿ. ಸಂಕನೂರು ಎರಡನೇ ಬಾರಿ ಪುನರಾಯ್ಕೆಯಾಗಿದ್ದಾರೆ.
ಸಭಾಪತಿ ಬದಲಿಗೆ ನಾಂದಿ:
ಬಿಜೆಪಿ ಸಂಖ್ಯಾಬಲ ಹೆಚ್ಚಿರುವ ಹಿನ್ನೆಲೆಯಲ್ಲಿ ಸಭಾಪತಿ ಸ್ಥಾನ ಬದಲಾಯಿಸುವ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಈ ಹಿಂದೆ ಜೆಡಿಎಸ್ ಹಾಗೂ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಪ್ರತಾಪಚಂದ್ರಶೆಟ್ಟಿಅವರನ್ನು ಸಭಾಪತಿಯಾಗಿ, ಜೆಡಿಎಸ್‌ನ ಧರ್ಮೇಗೌಡ ಅವರು ಉಪಸಭಾಪತಿಯಾಗಿ ಆಯ್ಕೆ ಮಾಡಲಾಗಿತ್ತು.ಆದರೆ ಸಮ್ಮಿಶ್ರ ಸರ್ಕಾರ ಪತನದ ನಂತರ ಉಭಯ ಪಕ್ಷಗಳ ನಡುವೆ ಸಂಬಂಧ ಹಳಸಿ ಹೋಗಿದೆ. ಈಗ ಜೆಡಿಎಸ್ ಹಾಗೂ ಬಿಜೆಪಿ ನಡುವೆ ಹೊಸದಾಗಿ ಸ್ನೇಹ ಚಿಗುರಿದೆ.
ಕಳೆದ ಅಧಿವೇಶನದ ವೇಳೆ ಸರ್ಕಾರದ ಪ್ರಮುಖ ವಿಧೇಯಕಗಳ ಮಂಡನೆ, ಅನುಮೋದನೆ ವಿಷಯದಲ್ಲಿ ಪಕ್ಷಪಾತ ಮಾಡಿದ್ದಾರೆಂದು ಬಿಜೆಪಿ ಸದಸ್ಯರು ಪಕ್ಷದ ಹಿರಿಯ ನಾಯಕರಲ್ಲಿ ದೂರಿದ್ದರು. ಹೀಗಾಗಿ ಸಭಾಪತಿ ಪ್ರತಾಪಚಂದ್ರಶೆಟ್ಟಿಅವರನ್ನು ಕೆಳಗಿಳಿಸಿ ಬಿಜೆಪಿ ಸದಸ್ಯರನ್ನು ಸಭಾಪತಿ ಮಾಡುವ ಹಾಗೂ ಉಪಸಭಾಪತಿಯಾಗಿರುವ ಧರ್ಮೇಗೌಡ ಅವರನ್ನು ಅದೇ ಸ್ಥಾನದಲ್ಲಿ ಮುಂದುವರೆಸುವ ಲಕ್ಷಣವಿದೆ.