ಮತ್ತೊಂದು ಚುನಾವಣೆ: ಇಂದಿನಿಂದ ನಾಮಪತ್ರ ಸಲ್ಲಿಕೆ, ಡಿ.1ರಂದು ಮತದಾನ

By Kannadaprabha NewsFirst Published Nov 11, 2020, 10:08 AM IST
Highlights

ಅಶೋಕ್‌ ಗಸ್ತಿ ನಿಧನದಿಂದ ತೆರವಾದ ಸ್ಥಾನ| ನಾಮಪತ್ರ ಸಲ್ಲಿಕೆ ವೇಳೆ ಗರಿಷ್ಠ ಇಬ್ಬರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ| ಚುನಾವಣಾಧಿಕಾರಿಯ ಕಚೇರಿ ಸಂಪರ್ಕಿಸುವವರು ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು| ಸ್ಯಾನಿಟೈಸರ್‌ನಿಂದ ಕೈಗಳನ್ನು ಸ್ವಚ್ಛಗೊಳಿಸುವ ವ್ಯವಸ್ಥೆ ಮಾಡಲಾಗುವುದು, ಸಾಮಾಜಿಕ ಅಂತರ ಪಾಲನೆ ಕಡ್ಡಾಯ| 

ಬೆಂಗಳೂರುನ.11):  ರಾಜ್ಯಸಭಾ ಸದಸ್ಯ ಅಶೋಕ್‌ ಗಸ್ತಿ ನಿಧನದಿಂದಾಗಿ ತೆರವಾಗಿರುವ ಸ್ಥಾನಕ್ಕೆ ಡಿ.1ರಂದು ಉಪಚುನಾವಣೆ ನಡೆಯಲಿದ್ದು, ಇಂದಿನಿಂದ(ಬುಧವಾರ) ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ ಎಂದು ವಿಧಾನಸಭೆ ಕಾರ್ಯದರ್ಶಿ ಹಾಗೂ ಚುನಾವಣಾಧಿಕಾರಿ ಎಂ.ಕೆ.ವಿಶಾಲಾಕ್ಷಿ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬುಧವಾರ ಚುನಾವಣೆಗೆ ನೋಟಿಫಿಕೇಷನ್‌ ಹೊರಡಿಸಲಾಗುತ್ತದೆ. ನ.18ರವರೆಗೆ ನಾಮಪತ್ರಗಳ ಸಲ್ಲಿಸಬಹುದಾಗಿದೆ. ನ.19ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ನ.23ರಂದು ನಾಮಪತ್ರ ವಾಪಸ್‌ ಪಡೆಯಲು ಕೊನೆಯ ದಿನವಾಗಿದೆ. ಡಿ.1ರಂದು ಉಪಚುನಾವಣೆ ನಡೆಯಲಿದೆ. ವಿಧಾನಸೌಧದ ಮೊದಲ ಮಹಡಿಯ ಕೊಠಡಿ ಸಂಖ್ಯೆ 106ರಲ್ಲಿ ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದೆ. ವಿಧಾನಸಭೆಗೆ ಚುನಾಯಿತಗೊಂಡಿರುವ ಸದಸ್ಯರು ಮತದಾರರಾಗಿದ್ದಾರೆ ಎಂದು ತಿಳಿಸಿದರು.

ಕರ್ನಾಟಕದಲ್ಲಿ ಮತ್ತೊಂದು ಉಪ ಚುನಾವಣೆಗೆ ದಿನಾಂಕ ಪ್ರಕಟ

ಕೋವಿಡ್‌ ಹಿನ್ನೆಲೆಯಲ್ಲಿ ಚುನಾವಣೆ ಪ್ರಕ್ರಿಯೆ ಆರಂಭಗೊಂಡ ದಿನದಿಂದ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ನಾಮಪತ್ರ ಸಲ್ಲಿಕೆ ವೇಳೆ ಗರಿಷ್ಠ ಇಬ್ಬರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಇರುತ್ತದೆ. ಚುನಾವಣಾಧಿಕಾರಿಯ ಕಚೇರಿ ಸಂಪರ್ಕಿಸುವವರು ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಸ್ಯಾನಿಟೈಸರ್‌ನಿಂದ ಕೈಗಳನ್ನು ಸ್ವಚ್ಛಗೊಳಿಸುವ ವ್ಯವಸ್ಥೆ ಮಾಡಲಾಗುವುದು. ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲನೆ ಮಾಡಬೇಕು. ಅಲ್ಲದೇ, ನಾಮಪತ್ರ ಸಲ್ಲಿಕೆ ವೇಳೆ ಮಾಧ್ಯಮದವರಿಗೆ ಪ್ರವೇಶಕ್ಕೆ ಅವಕಾಶ ಇಲ್ಲ ಎಂದರು.

click me!