
ವಿಧಾನ ಪರಿಷತ್(ಜು.06): ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಕುರಿತು ನಿಲುವಳಿ ಸೂಚನೆ ಮಂಡನೆಗೆ ಅವಕಾಶ ನೀಡುವಂತೆ ಪರಿಷತ್ತಿನಲ್ಲಿ ಬುಧವಾರ ಬಿಜೆಪಿ ಸದಸ್ಯರು ಪುನಃ ಧರಣಿ ಆರಂಭಿಸಿದರಾದರೂ ಹೊಸ ನಿಲುವಳಿ ಪ್ರಸ್ತಾವನೆ ಮಂಡಿಸಿದರೆ ಅದನ್ನು ಪರಿಶೀಲಿಸಿ ನಿರ್ಧರಿಸುವುದಾಗಿ ಸಭಾಪತಿ ಬಸವರಾಜ ಹೊರಟ್ಟಿಅವರು ನೀಡಿದ ಭರವಸೆ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯರು ಧರಣಿ ಹಿಂಪಡೆದುಕೊಂಡರು.
ಬುಧವಾರ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಪೀಠದ ಮುಂದೆ ಧರಣಿ ಆರಂಭಿಸಿದರು. ಕೋಟ ಶ್ರೀನಿವಾಸ ಪೂಜಾರಿ ಅವರು, ಸಾರ್ವಜನಿಕ ಮಹತ್ವದ ವಿಷಯವನ್ನು ತುರ್ತಾಗಿ ಚರ್ಚಿಸಬೇಕಾಗಿರುವುದರಿಂದ ಅವಕಾಶ ನೀಡಬೇಕು ಎಂದು ಮನವಿ ಮಾಡಿಕೊಂಡರು.
ಎಚ್‌ಡಿಕೆ ಹೇಳಿದ 'ಅತೀಂದ್ರ ಶಕ್ತಿ' ಯಾರು? ಏನು?
ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ನಿಮ್ಮಿಂದ ಆಗಿಲ್ಲ. ಇಲ್ಲಿ ಧರಣಿ ಮಾಡುತ್ತಿದ್ದೀರಿ. ಪ್ರತಿಪಕ್ಷ ನಾಯಕರಿಲ್ಲದೇ ಕಲಾಪ ನಡೆದಿರುವುದು ಇದೇ ಮೊದಲು ಎಂದು ವ್ಯಂಗ್ಯವಾಡಿದರು. ಈ ಮಾತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕೋಟ ಶ್ರೀನಿವಾಸ ಪೂಜಾರಿ, ಸಚಿವರಾದವರು ಈ ರೀತಿ ಬೇಜವಾಬ್ದಾರಿಯಿಂದ ಮಾತನಾಡುವುದು ಸರಿಯಲ್ಲ. ಜನರಿಗೆ ಮೋಸ, ವಂಚನೆ ಮಾಡಿ ಮತ ಪಡೆದು ಅಧಿಕಾರಕ್ಕೆ ಬಂದಿದ್ದಿರಿ ಎಂದು ತಿರುಗೇಟು ನೀಡಿದರು. ಇದಕ್ಕೆ ಪ್ರತಿಯಾಗಿ ಆಡಳಿತ ಪಕ್ಷದ ಅನೇಕ ಸದಸ್ಯರು ಏಕ ಕಾಲದಲ್ಲಿ ಮಾತನಾಡಲು ಆರಂಭಿಸಿದ್ದರಿಂದ ಗದ್ದಲದ ವಾತಾವರಣ ಉಂಟಾಯಿತು. ಕೊನೆಗೆ ಸಭಾಪತಿಗಳು ಸದನವನ್ನು 10 ನಿಮಿಷಗಳ ಕಾಲ ಮುಂದೂಡಿದರು.
ಪುನಃ ಸದನ ಆರಂಭವಾಗುತ್ತಿದ್ದಂತೆ ಗುರುವಾರ ಹೊಸದಾಗಿ ನಿಲುವಳಿ ಸೂಚನೆ ಸಲ್ಲಿಸುತ್ತೇವೆ. ಪ್ರಸ್ತಾವನೆಗೆ ಅವಕಾಶ ನೀಡುವುದಾಗಿ ಸಭಾಪತಿಗಳು ಭರವಸೆ ನೀಡಿದರೆ ಧರಣಿ ಹಿಂಪಡೆಯುತ್ತೇವೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಆದರೆ ಈ ಮಾತಿಗೆ ಒಪ್ಪದ ಸಭಾಪತಿ ಷರತ್ತು ಹಾಕಿದರೆ ಆಗುವುದಿಲ್ಲ. ನಿಲುವಳಿ ಸೂಚನೆ ಸಲ್ಲಿಸಿದರೆ ಅದರ ಸಾಧಕ-ಬಾದಕ ಪರಿಶೀಲಿಸಿ ನಿರ್ಧರಿಸುತ್ತೇನೆ ಎಂದರು. ಈ ಮಾತಿಗೆ ಒಪ್ಪಿದ ಬಿಜೆಪಿ ಸದಸ್ಯರು ಧರಣಿ ಹಿಂಪಡೆದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.