ಸಿದ್ದರಾಮಯ್ಯ ಸರ್ಕಾರದಿಂದ ದಲಿತರ ಹಣ ಲೂಟಿ: ಆರ್.ಅಶೋಕ್ ಟೀಕೆ

By Kannadaprabha News  |  First Published Jul 22, 2024, 11:34 PM IST

ಈ ಸರ್ಕಾರ ಪಾಪರ್‌ ಆಗಿದೆ. ಇವರ ಬಳಿ ಸರ್ಕಾರ ನಡೆಸಲು ಹಣ ಇಲ್ಲ. ಹಾಗಾಗಿ ದಲಿತರ ಹಣ ಲೂಟಿ ಮಾಡಿ ರಾಜ್ಯ ಸರ್ಕಾರ ನಡೆಸಲಾಗುತ್ತಿದೆ. ಇದರ ಪರಿಣಾಮವೇ ವಾಲ್ಮೀಕಿ ನಿಗಮದ ಹಗರಣ, ಮುಡಾ ಹಗರಣ ನಡೆದಿದ್ದು ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸರ್ಕಾರವನ್ನು ಟೀಕಿಸಿದರು. 


ಹಾಸನ (ಜು.22): ಈ ಸರ್ಕಾರ ಪಾಪರ್‌ ಆಗಿದೆ. ಇವರ ಬಳಿ ಸರ್ಕಾರ ನಡೆಸಲು ಹಣ ಇಲ್ಲ. ಹಾಗಾಗಿ ದಲಿತರ ಹಣ ಲೂಟಿ ಮಾಡಿ ರಾಜ್ಯ ಸರ್ಕಾರ ನಡೆಸಲಾಗುತ್ತಿದೆ. ಇದರ ಪರಿಣಾಮವೇ ವಾಲ್ಮೀಕಿ ನಿಗಮದ ಹಗರಣ, ಮುಡಾ ಹಗರಣ ನಡೆದಿದ್ದು ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸರ್ಕಾರವನ್ನು ಟೀಕಿಸಿದರು. ತಾಲೂಕಿನಲ್ಲಿ ಮಳೆ ಹಾನಿ ಹಿನ್ನೆಲೆಯಲ್ಲಿ ಕೊಲ್ಲಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ ೭೫ರ ತಡೆಗೋಡೆ ಕುಸಿತ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಅಹಿಂದಾ ಹೆಸರು ಹೇಳಿಕೊಂಡು ದಲಿತರಿಗೇ ಮೋಸ ಮಾಡುತ್ತಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಲೂಟಿ ಮಾಡಿ ಚುನಾವಣೆಗೆ ಬಳಸಿದರು. 

ಹುಡಾದಲ್ಲಿ ದಲಿತರ ಜಮೀನನ್ನು ಹೊಡೆದುಕೊಂಡು ತಮ್ಮ ಪತ್ನಿ ಹೆಸರಿಗೆ ನಿವೇಶನಗಳನ್ನು ಪಡೆದು ದಲಿತರಿಗೆ ಮೋಸ ಮಾಡಿದರು. ಎಸ್ಸಿ, ಎಸ್ಟಿ ಅನುದಾನವನ್ನೂ ಅನ್ಯ ಉದ್ದೇಶಗಳಿಗೆ ಬಳಸಿದರು. ಹೀಗೆ ಸರ್ಕಾರ ನಡೆಸಲು ಹಣ ಇಲ್ಲದ ಕಾರಣಕ್ಕೆ ದಲಿತರ ಹಣವನ್ನೆಲ್ಲಾ ಬಳಸಿಕೊಂಡು ದಲಿತರಿಗೆ ಮೋಸ ಮಾಡುತ್ತಿರುವ ಇವರು ಅಹಿಂದಾ ಹೆಸರಲ್ಲಿ ದಲಿತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಇಂತಹ ಜಾತಿಯವರು ಭ್ರಷ್ಟಾಚಾರ ಮಾಡಬಹುದು ಎಂದು ಇವರು ಕಾನೂನು ತಿದ್ದುಪಡಿ ಮಾಡಿಬಿಡಲಿ ಆಗ ನಾವು ಪ್ರಶ್ನಿಸುವುದಿಲ್ಲ. ಪ್ರಶ್ನಿಸಿದರೆ ಜಾತಿ ಹುಡುಕುತ್ತಾರೆ ಎಂದು ವ್ಯಂಗವಾಡಿದರು.

Latest Videos

undefined

ಕೆ‌ಆರ್‌ಎಸ್-ಕಬಿನಿ ಜಲಾಶಯಗಳಿಂದ ನೀರು ಬಿಡುಗಡೆ: ಕೊಳ್ಳೇಗಾಲದಲ್ಲಿ ನದಿಪಾತ್ರದ ಗ್ರಾಮಗಳಿಗೆ ಪ್ರವಾಹ ಭೀತಿ

ಸಂವಿಧಾನದಲ್ಲಿ ಯಾರೇ ತಪ್ಪು ಮಾಡಿದರೂ ಅವರಿಗೆ ಶಿಕ್ಷೆ ಆಗಬೇಕು ಎಂದು ಕಾನೂನು ರೂಪಿಸಲಾಗಿದೆ. ಈ ಸರ್ಕಾರ ಇದನ್ನ ತಿದ್ದುಪಡಿ ಮಾಡಿ ಈ ಜಾತಿಯವರು ತಪ್ಪು ಮಾಡಬಹುದು ಎಂದು ಕಾನೂನು ಮಾಡಲಿ. ಈ ಸರ್ಕಾರ ಒಂದು ರೀತಿ ಕೋಮಾ ಸ್ಟೇಜ್‌ನಲ್ಲಿದೆ. ನಿಮಗೆ ಯಾವ್ಯಾವ ಜಾತಿ ಬೇಕು, ಸಂವಿಧಾನ ಬದಲಾವಣೆ ಮಾಡಿ ಬಿಡೋಣ. ಇಂತಹ ಜಾತಿಯವರು ಲೂಟಿ ಹೊಡೆದರೆ, ಅಕ್ರಮ ಮಾಡಿದರೆ, ಕಳ್ಳತನ ಮಾಡಿದರೆ ಯಾವುದೇ ಕ್ರಮ ತೆಗೆದುಕೊಳ್ಳುವಂತಿಲ್ಲ ಎಂದು ಕಾನೂನು ಮಾಡಿಬಿಡಿ ಎಂದು ಕುಟಕಿದರು.

ಈ ಜಾತಿಯವನಾದರೆ ಕಳ್ಳತನ ಮಾಡಬಹುದು, ಈ ಜಾತಿಯವನಾದರೆ ಕಳ್ಳತನ ಮಾಡಬಾರದು ಎಂದು ಸಂವಿಧಾನದಲ್ಲಿ ಇದೆಯಾ? ಎಂದು ಪ್ರಶ್ನಿಸಿದರು. ಸರ್ಕಾರ ಸತ್ತು ಹೋಗಿದೆ ಹಾಗಾಗಿ ಇವರು ವಿರೋಧ ಪಕ್ಷದ ಬಗ್ಗೆ ಟೀಕಿಸುತ್ತಾರೆ. ವಾಲ್ಮೀಕಿ ಹಗರಣದಲ್ಲಿ ಪ್ರಮುಖ ಆರೋಪಿಗಳು ಹೆಸರು ಡೆತ್‌ನೋಟ್‌ನಲ್ಲಿ ಇದ್ದರೂ ಇವರು ಸದನದಲ್ಲಿ ಡೆತ್‌ನೋಟ್‌ ಓದುವಾಗ ಶಾಸಕರ ಹೆಸರು ಬಿಟ್ಟು ಓದುತ್ತಾರೆ. ಇದನ್ನು ನಾವು ಸದನದಲ್ಲಿ ಧ್ವನಿ ಎತ್ತಿದರೆ ನಮ್ಮ ಬಗ್ಗೆ ಇಲ್ಲ ಸಲ್ಲದನ್ನ ಹೇಳುತ್ತಾರೆ ಎಂದರು.

ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು: ವಾಲ್ಮೀಕಿ ನಿಗಮದ ಹಗರಣದಲ್ಲಿ ಬಗ್ಗೆ ಸಿದ್ದರಾಮಯ್ಯ ಸದನದಲ್ಲಿ ಮಾತನಾಡುವಾಗ ಡೆತ್‌ನೋಟ್‌ ಓದಿದರೂ ಅದರಲ್ಲಿ ಸಚಿವರು, ಎಂಎಲ್‌ಎ, ವಾಲ್ಮೀಕಿ ನಿಗಮದ ಅಧಕ್ಷರ ಹೆಸರನ್ನು ಬಿಟ್ಟು ಓದುತ್ತಾರೆ. ಹಾಗಾಗಿ ಇದರಲ್ಲಿ ಅವರ ಸಹಭಾಗಿತ್ವ ಇದೆ ಎನ್ನುವುದು ಅರ್ಥವಾಗುತ್ತದೆ. ಹಾಗಾಗಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.

ಹಣಕಾಸು ಖಾತೆಯನ್ನು ತಮ್ಮ ಬಳಿಯೇ ಇಟ್ಟುಕೊಂಡಿರುವ ಸಿದ್ದರಾಮಯ್ಯ ಅವರ ಒಪ್ಪಿಗೆ ಇಲ್ಲದೆ ಇದ್ಯಾವುದೂ ಆಗಿಲ್ಲ. ಒಂದು ನಿಗಮಕ್ಕೆ ಒಂದೇ ಬ್ಯಾಂಕ್‌ ಖಾತೆ ಇರಬೇಕು. ಆದರೆ, ವಾಲ್ಮೀಕಿ ನಿಗಮಕ್ಕೆ ಎರಡು ಖಾತೆ ಇದ್ದವು. ಒಂದು ಖಾತೆಯ ಹಣವನ್ನು ನೆರೆಯ ತೆಲಂಗಾಣಕ್ಕೆ ವರ್ಗಾಯಿಸಿ ಅಲ್ಲಿ ಡ್ರಾ ಮಾಡಲಾಗಿದೆ. ಇದಕ್ಕೆ ಹಣಕಾಸು ಖಾತೆ ಇಟ್ಟುಕೊಂಡಿರುವ ಸಿದ್ದರಾಮಯ್ಯ ಅವರ ಒಪ್ಪಿಗೆ ಇಲ್ಲದೆ ಏನೂ ನಡೆದಿಲ್ಲ. ಹಾಗಾಗಿ ಅವರೇ ಈ ಪ್ರಕರಣದ ಪ್ರಮುಖ ಆರೋಪಿ ಎಂದು ಆರೋಪಿಸಿದರು.

ಈ ಸರ್ಕಾರ ಪಾಪರ್ ಆಗಿದೆ: ಅವರ ಬಳಿ ದುಡ್ಡಿಲ್ಲ. ಅಂದಾಜು ವೆಚ್ಚ ತಯಾರಿಸದೇ ಗ್ಯಾರಂಟಿ ಯೋಜನೆ ತಂದಿದ್ದಾರೆ. ಅದಕ್ಕೇ ಈಗ ದಲಿತರ ಹಣ ಹುಡುಕುತ್ತಿದ್ದಾರೆ. ಒಕ್ಕಲಿಗರ ನಿಗಮ, ಬ್ರಾಹ್ಮಣರು, ಲಿಂಗಾಯತರ ನಿಗಮದ ಹಣ ಇದೆ. ಎಲ್ಲವನ್ನೂ ಬಳಸಿಕೊಳ್ಳಿ. ಇಲ್ಲವಾದರೆ ನಿಮ್ಮ ಬಾಳು ಬೀದಿಗೆ ಬರುತ್ತದೆ ಎಂದು ನಾನೇ ಹೇಳಿದ್ದೇನೆ. ಈ ಸರ್ಕಾರ ಹಗರಣಗಳಲ್ಲಿ ಸಿಲುಕಿಕೊಂಡಿದೆ. ಹೊರಗಡೆ ಬರಲು ಆಗುತ್ತಿಲ್ಲ. ದಾರಿ ಕಾಣದೆ ದಲಿತರ ಹಣ ಉಪಯೋಗಿಸಿಕೊಳ್ಳುತ್ತಿದ್ದಾರೆ. ವಾಲ್ಮೀಕಿ ಹಗರಣ, ಮುಡಾದಲ್ಲೂ ದಲಿತರ ಹಣವೇ ಲೂಟಿಯಾಗಿದೆ. ದಲಿತರ ತಲೆ ಮೇಲೆ ಚಪ್ಪಡಿ ಎಳೆಯುವ ಕೆಲಸವನ್ನು ಈ ಸರ್ಕಾರ ಮಾಡಿದೆ. ರಾಜ್ಯ ಸರ್ಕಾರಕ್ಕೆ ಮರ್ಯಾದೆ ಇಲ್ಲ, ತಪ್ಪಿಸಿಕೊಳ್ಳುವ ಏನೇನೋ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕುಟುಕಿದರು.

ಮುಂಗಾರು ಮಳೆ ಅಬ್ಬರಕ್ಕೆ ಕಾಫಿನಾಡಿನಲ್ಲಿ 100 ಕೋಟಿಗೂ ಅಧಿಕ ನಷ್ಟ: ಮುಳ್ಳಯ್ಯನಗಿರಿ ಪ್ರದೇಶಕ್ಕೆ ನಿಷೇಧ ಮುಂದುವರಿಕೆ

೧೮೭ ಕೋಟಿ ರು.. ಅಧಿಕಾರಿಗಳೇ ತಿನ್ನಲು ಆಗುತ್ತಾ?: ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದುಳಿದ ವರ್ಗದ ನಾಯಕ ಎಂಬ ಕಾರಣಕ್ಕೆ ವಿಧಾನಸಭೆಯಲ್ಲಿ ಮಾತನಾಡಲು ಬಿಡುತ್ತಿಲ್ಲ ಎಂಬ ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿಕೆಗೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದರು. ಜನರಿಗೆ ತಪ್ಪು ಮಾಹಿತಿ ಹೋಗಬಾರದು. ಸಿಎಂ ಅವರು ಹಗರಣದಲ್ಲಿ ಯಾರೂ ಭಾಗಿಯಾಗಿಲ್ಲ. ಅಧಿಕಾರಿಗಳೇ ಎಲ್ಲವನ್ನು ತಿಂದು ಹಾಕಿದ್ದಾರೆ ಅಂತ ಹೇಳಿದರೆ ೧೮೭ ಕೋಟಿ ರು.. ಅಧಿಕಾರಿಗಳೇ ತಿನ್ನಲು ಆಗುತ್ತಾ? ಅದರ ಹಿಂದೆ ದೊಡ್ಡ ತಿಮಿಂಗಿಲಗಳೇ ಇರುವುದರಿಂದ ತಿಂದಿದ್ದಾರೆ. ಅಧಿಕಾರಿಗಳು ಅಲ್ಲಿ ಇಲ್ಲಿ ಬಿದ್ದಿದ್ದನ್ನು ತಿಂದಿದ್ದಾರೆ ಅಷ್ಟೇ ಎಂದರು.

click me!