ಲೋಕಸಭೆ ಚುನಾವಣೆ ವೇಳೆ ಮತ್ತು ನಂತರದ ಬೆಳವಣಿಗೆ ಬಗ್ಗೆ ಕಾರ್ಯಕರ್ತರಲ್ಲಿ ನಿರಾಸೆ ಮೂಡಿದ್ದು, ಜಿಲ್ಲೆಯ ಪಕ್ಷದ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ನೈತಿಕ ಸ್ಥೈರ್ಯ ತುಂಬಲು ಎಚ್.ಡಿ. ರೇವಣ್ಣ ನೇತೃತ್ವದಲ್ಲಿ ಶೀಘ್ರದಲ್ಲೇ ಬೃಹತ್ ಸಮಾವೇಶ ಮಾಡಲಾಗುವುದು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಹಾಸನ (ಜು.23): ಲೋಕಸಭೆ ಚುನಾವಣೆ ವೇಳೆ ಮತ್ತು ನಂತರದ ಬೆಳವಣಿಗೆ ಬಗ್ಗೆ ಕಾರ್ಯಕರ್ತರಲ್ಲಿ ನಿರಾಸೆ ಮೂಡಿದ್ದು, ಜಿಲ್ಲೆಯ ಪಕ್ಷದ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ನೈತಿಕ ಸ್ಥೈರ್ಯ ತುಂಬಲು ಎಚ್.ಡಿ. ರೇವಣ್ಣ ನೇತೃತ್ವದಲ್ಲಿ ಶೀಘ್ರದಲ್ಲೇ ಬೃಹತ್ ಸಮಾವೇಶ ಮಾಡಲಾಗುವುದು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ನಗರದ ರಿಂಗ್ ರಸ್ತೆ ಬಳಿ ಇರುವ ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ನಿವಾಸದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಇಲ್ಲಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕುಮಾರಣ್ಣ ಹಾಸನ ಜಿಲ್ಲೆಗೆ ಬರಬೇಕೆಂದು ಕಾರ್ಯಕರ್ತರು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಕಲಾಪ ಮುಗಿದ ನಂತರ ಹಾಸನದಲ್ಲಿ ರೇವಣ್ಣ ನೇತೃತ್ವದಲ್ಲಿ ಬೃಹತ್ ಸಮಾವೇಶ ಮಾಡಲು ಯೋಚಿಸಿದ್ದೇನೆ. ಕಳೆದ ಲೋಕಸಭಾ ಚುನಾವಣೆ ನಂತರ ಪ್ರಥಮ ಬಾರಿಗೆ ಹಾಸನ ಜಿಲ್ಲೆಯಲ್ಲಿ ಆಗಿರುವ ಪ್ರಕೃತಿ ವಿಕೋಪ ನೋಡಲು ಬಂದಿದ್ದೇನೆ. ಚುನಾವಣೆ ಫಲಿತಾಂಶದ ನಂತರ, ಚುನಾವಣೆ ಆಸುಪಾಸಿನಲ್ಲಿ ಕೆಲವು ಅಹಿತಕರ ಘಟನೆಗಳು ಪಕ್ಷದ ಕಾರ್ಯಕರ್ತರಲ್ಲಿ, ಮುಖಂಡರಲ್ಲಿ ನಿರಾಸೆ ಮೂಡಿಸಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಭದ್ರಾವತಿ ಕಾರ್ಖಾನೆ, ಎಚ್ಎಂಟಿ ಕಾರ್ಖಾನೆ ಪುನಶ್ಚೇತನ ನನ್ನ ಗುರಿ: ಎಚ್.ಡಿ.ಕುಮಾರಸ್ವಾಮಿ
ನೈತಿಕ ಸ್ಥೈರ್ಯ ತುಂಬುವೆ: ಮುಂದೆ ಹಾಸನ ಜಿಲ್ಲೆಯ ಕಾರ್ಯಕರ್ತರಿಗೆ ನೈತಿಕ ಸ್ಥೈರ್ಯ ತುಂಬಲು ಬರುತ್ತೇನೆ. ಹಾಸನದಲ್ಲಿ ಬೃಹತ್ ಸಮಾವೇಶ ಮಾಡುವಂತೆ ಶಾಸಕರ ಒತ್ತಾಯ ಇದೆ. ರೇವಣ್ಣ ಅವರ ನೇತೃತ್ವದಲ್ಲಿ ಶಾಸಕರನ್ನೊಳಗೊಂಡು ನಾನೂ ಸೇರಿ ಪಕ್ಷ ಸಂಘಟನೆ ಮಾಡುತ್ತೇವೆ. ಈ ಜಿಲ್ಲೆಯ ಜನರ ಋಣವನ್ನು ತೀರಿಸುತ್ತೇವೆ. ಈಗ ರೇವಣ್ಣ ಅವರ ಕುಟುಂಬದಲ್ಲಿ ಕೆಲವು ಸಮಸ್ಯೆಗಳಿವೆ. ಆದರೆ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಯಾರೂ ಮರೆಯುವಂತಿಲ್ಲ. ಎಲ್ಲರಿಗಿಂತ ಒಂದು ಹೆಜ್ಜೆ ಹೆಚ್ಚು ಅಭಿವೃದ್ಧಿ ಮಾಡಿದ್ದಾರೆ ಎಂದರು.
ದೊಡ್ಡ ಸಮಾವೇಶ: ನಾಳೆಯಿಂದ ಅಧಿವೇಶನ ಪ್ರಾರಂಭ ಆಗುತ್ತಿದ್ದು, ಮುಂದಿನ ದಿನ ಜಿಲ್ಲೆಯಲ್ಲಿ ರೇವಣ್ಣನವರ ನೇತೃತ್ವದಲ್ಲೇ ಒಂದು ದೊಡ್ಡ ಸಮಾವೇಶ ಮಾಡುತ್ತೇವೆ. ರೇವಣ್ಣನವರು ಜಿಲ್ಲೆಗೆ ನಮ್ಮೆಲ್ಲರಿಗಿಂತಲೂ ಹೆಚ್ಚು ಶ್ರಮ ಹಾಕಿ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಬೆಂಗಳೂರಿನ ಮದರ್ ಡೇರಿಯನ್ನೂ ಮೀರಿಸುವ ನಿಟ್ಟಿನಲ್ಲಿ ಹಾಸನದ ಡೇರಿ ಅಭಿವೃದ್ಧಿ ಮಾಡಿದ್ದು, ರೇವಣ್ಣನವರ ನೇತೃತ್ವದಲ್ಲೇ ಮುಂದಿನ ಹೋರಾಟ ಮಾಡುತ್ತೇವೆ. ನಾನೂ ಕೂಡ ಈ ಜಿಲ್ಲೆಗೆ ಹೆಚ್ಚು ಒತ್ತು ನೀಡಿ ಕೆಲಸ ಮಾಡುತ್ತೇನೆ. ನಮ್ಮ ತಾಯಿ ಮತ್ತು ತಂದೆಯವರು ಶಿವನ ಮೇಲೆ ಹೆಚ್ಚು ನಂಬಿಕೆ ಇಟ್ಟಿದ್ದಾರೆ. ಅವರ ಆಶೀರ್ವಾದದಿಂದ ನಾವು ಬೆಳೆದಿದ್ದೇವೆ. ನಮ್ಮ ಕುಟುಂಬವನ್ನು ಮುಗಿಸಲೇಬೇಕು ಎಂದು ಹೋದರು, ಆದ್ರೆ ಅವರ ಆಶೀರ್ವಾದ ನಮ್ಮನ್ನ ಕಾಪಾಡಿದೆ ಎಂದು ನೆನಪಿಸಿಕೊಂಡರು.
ಜವಾಬ್ದಾರಿ ನೀಡಿದ್ದಾರೆ: ನರೇಂದ್ರ ಮೋದಿಯವರ ನೇತೃತ್ವದಲ್ಲಿ ಹಲವಾರು ಯೋಜನೆಗಳನ್ನ ತರುವ ವ್ಯವಸ್ಥೆ ಆಗುತ್ತಿದೆ. ಕೇಂದ್ರದಲ್ಲಿ ನನಗೂ ಎರಡು ಜವಾಬ್ದಾರಿ ನೀಡಿದ್ದಾರೆ. ಆರ್ಥಿಕ ಸಮಿತಿ, ನೀತಿ ಆಯೋಗದ ಸದಸ್ಯನಾಗಿ ನೇಮಿಸಿದ್ದಾರೆ. ಇದೆಲ್ಲದರ ಜೊತೆ ನಾನು ಪ್ರಾಮಾಣಿಕವಾಗಿ ಜನರಿಗೆ ಕೆಲಸ ಮಾಡುತ್ತೇನೆ. ದೇವೇಗೌಡರ ಮೇಲಿನ ವಿಶ್ವಾಸ ಮತ್ತು ನಾನು ಮುಖ್ಯಮಂತ್ರಿ ಆಗಿ ಮಾಡಿದ ಕೆಲಸ ಗಮನಿಸಿ ಅಧಿಕಾರ ನೀಡಿದ್ದಾರೆ. ದೇವೇಗೌಡರ ನಿರೀಕ್ಷೆ ಮತ್ತು ರಾಜ್ಯದ ಜನರ ಒಳಿತಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಿರಾಸೆ ಉಂಟಾಗಿದೆ: ದೊಡ್ಡಮಟ್ಟದ ಮಳೆ ಹಿನ್ನೆಲೆ ಜಿಲ್ಲೆಯಲ್ಲಿ ಅನೇಕ ರೀತಿ ಅನಾಹುತ ಆಗಿದ್ದು, ಶಿರಾಡಿಘಾಟ್ ರಸ್ತೆಯಲ್ಲಿ ಅವೈಜ್ಞಾನಿಕ ಕಳಪೆ ಕಾಮಗಾರಿಯನ್ನ ಗಮನಿಸಿದ್ದೇನೆ. ಲೋಕಸಭೆ ಚುನಾವಣೆ ನಂತರ ಮೊದಲ ಬಾರಿಗೆ ಜಿಲ್ಲೆಗೆ ಬಂದಿದ್ದೇನೆ. ಚುನಾವಣೆ ಫಲಿತಾಂಶ ಮತ್ತು ನಂತರ ನಡೆದ ಅಹಿತಕರ ಘಟನೆಯಿಂದ ಜಿಲ್ಲೆಯ ಕಾರ್ಯಕರ್ತೆಲ್ಲಿ ಮತ್ತು ಜನರಲ್ಲಿ ನಿರಾಸೆ ಉಂಟಾಗಿದೆ. ದೇವೇಗೌಡರ ರಾಜಕೀಯದಲ್ಲಿ ಸಣ್ಣ ಹಳ್ಳಿಯಲ್ಲಿ ಹುಟ್ಟಿ ಕೆಂಪು ಕೋಟೆ ಮೇಲೆ ಬಾವುಟ ಹಾರಿಸುವ ಶಕ್ತಿ ಕೊಟ್ಟವರು ಹಾಸನದ ಜನತೆ. ನಮ್ಮ ಬದುಕು ಇರುವವರೆಗೂ ಅದನ್ನ ಮರೆಯೋದಕ್ಕೆ ಸಾಧ್ಯವಿಲ್ಲ.
ಈಗ ಆಗಿರೋ ಬೆಳವಣಿಗೆ ನಂತರ ಕುಮಾರಣ್ಣ ಜಿಲ್ಲೆಗೆ ಬರಬೇಕು ಎಂಬ ನಿರೀಕ್ಷೆ ಜನರು ಇಟ್ಟುಕೊಂಡಿದ್ದಾರೆ. ಇಂದು ನಾನು ಜಿಲ್ಲೆಯಲ್ಲಿ ಆಗಿರುವ ಅನಾಹುತಗಳ ವೀಕ್ಷಣೆಗೆ ಮಾತ್ರ ಬಂದಿದ್ದೇನೆ. ಕೇಂದ್ರ ಸಾರಿಗೆ ಸಚಿವರ ಜೊತೆಗೂಡಿ ಹಾಸನಕ್ಕೆ ಬರಬೇಕು ಎಂಬ ಉದ್ದೇಶ ಕೂಡ ಹೊಂದಿದ್ದೇನೆ. ಈ ರಸ್ತೆಯನ್ನ ಸುರಂಗ ಮಾರ್ಗದ ಮುಖಾಂತರ ಆಗಬೇಕು ಎಂಬ ಪ್ರಸ್ತಾಪ ಇತ್ತು. ಅರಣ್ಯ ಇಲಾಖೆಯ ತೊಡಕುಗಳು ಇವೆ ಅದರ ಬಗ್ಗೆಯೂ ಚರ್ಚಿಸುತ್ತೇನೆ ಎಂದರು. ಇದೆ ವೇಳೆ ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್, ಶ್ರವಣಬೆಳಗೊಳದ ಶಾಸಕ ಸಿ.ಎನ್. ಬಾಲಕೃಷ್ಣ, ಎ. ಮಂಜು, ಮಾಜಿ ಶಾಸಕ ಕೆ.ಎಸ್. ಲಿಂಗೇಶ್, ಲಕ್ಷ್ಮಣ್, ಮಾಧ್ಯಮ ವಕ್ತಾರ ಹೊಂಗೆರೆ ರಘು, ಸ್ವಾಮಿಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು
ಮುಂಗಾರು ಮಳೆ ಅಬ್ಬರಕ್ಕೆ ಕಾಫಿನಾಡಿನಲ್ಲಿ 100 ಕೋಟಿಗೂ ಅಧಿಕ ನಷ್ಟ: ಮುಳ್ಳಯ್ಯನಗಿರಿ ಪ್ರದೇಶಕ್ಕೆ ನಿಷೇಧ ಮುಂದುವರಿಕೆ
ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ: ಎಚ್.ಡಿ. ಕುಮಾರಸ್ವಾಮಿ ಅವರು, ಪಾಪ ಕನಕಪುರದವರು ಬ್ರಾಂಡ್ ಬೆಂಗಳೂರು ಮಾಡುವವರು ಹೇಳ್ತಾರೆ, ಕುಮಾರಸ್ವಾಮಿ ೩೯ ಸೀಟ್ ಗೆದ್ದರೂ ಮುಖ್ಯಮಂತ್ರಿ ಮಾಡಿದ್ವಿ. ದೇವೇಗೌಡರು ೧೬ ಸೀಟ್ ಗೆದ್ದರೂ ಪ್ರಧಾನಮಂತ್ರಿ ಮಾಡಲಾಯಿತು ಅಂತ ಹೇಳವ್ರೆ. ಆದರೆ ಸರ್ಕಾರವನ್ನು ತೆಗೆದವರು ಯಾರು ಎಂದು ಹೇಳಬೇಕಲ್ವಾ? ನಿಮ್ಮ ಮನೆ ಬಾಗಿಲಿಗೆ ನಾನು, ದೇವೇಗೌಡರು ಬಂದಿದ್ವಾ! ದೇವೇಗೌಡರನ್ನು ಪ್ರಧಾನಮಂತ್ರಿ ಮಾಡಿದ್ದು ಕಮ್ಯೂನಿಸ್ಟ್ ಹಾಗೂ ಇತರರು. ಒಬ್ಬ ಕನ್ನಡಿಗನನ್ನು ತೆಗೆದವರು ಯಾರು? ನಾನು ಏನು ತಪ್ಪು ಮಾಡಿದೆ ಅಂತ ಸರ್ಕಾರ ತೆಗೆದರು. ದಲಿತರು ಅಂತ ಕರೆಯಬೇಡಿ ಎಂದು ಚರ್ಚೆ ನಡೆದಿದೆ. ಅಹಿಂದ ಅಂತಾ ಎಷ್ಟು ವರ್ಷದಿಂದ ಹೆಸರು ಇಟ್ಟುಕೊಂಡಿದ್ದೀರಾ! ಅಹಿಂದ ಹೆಸರು ಇಟ್ಟುಕೊಂಡು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಅವಮಾನ ಮಾಡುತ್ತಿದ್ದೀರಾ, ಅವರಿಗೆ ಮೀಸಲಿಟ್ಟಿದ್ದ ಹಣ ಉಪಯೋಗಿಸಿಕೊಂಡಿದ್ದೀರಿ ಎಂದರು.