ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್‌ ಸ್ವಾರ್ಥಕ್ಕೆ ಸಾಕ್ಷಿ: ಎಂ.ಪಿ.ರೇಣುಕಾಚಾರ್ಯ ವಾಗ್ದಾಳಿ

By Kannadaprabha News  |  First Published Jul 23, 2024, 12:24 AM IST

ರಾಜ್ಯದಲ್ಲಿ ಇರುವುದು ಭ್ರಷ್ಟ, ಅಭಿವೃದ್ಧಿ ಶೂನ್ಯ, ರೈತವಿರೋಧಿಯಾದ ಹಾಗೂ ಕೇವಲ ಕುರ್ಚಿಗಾಗಿ ಇರುವ ಸರ್ಕಾರವಾಗಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು. 


ಹೊನ್ನಾಳಿ (ಜು.23): ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಸ್ವಾರ್ಥದಿಂದ 5 ಗ್ಯಾರಂಟಿ ಯೋಜನೆಗಳನ್ನು ನೀಡಿದೆಯೇ ಹೊರತು, ನಿಜವಾದ ಜನಪರ ಕಾಳಜಿಯಿಂದಲ್ಲ. ರಾಜ್ಯದಲ್ಲಿ ಇರುವುದು ಭ್ರಷ್ಟ, ಅಭಿವೃದ್ಧಿ ಶೂನ್ಯ, ರೈತವಿರೋಧಿಯಾದ ಹಾಗೂ ಕೇವಲ ಕುರ್ಚಿಗಾಗಿ ಇರುವ ಸರ್ಕಾರವಾಗಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು. ತುಂಬಿ ಹರಿಯುತ್ತಿರುವ ತುಂಗಭದ್ರಾ ನದಿಗೆ ಬಿಜೆಪಿ ಕಾರ್ಯಕರ್ತರು, ಮಹಿಳೆಯರೊಂದಿಗೆ ತೆರಳಿ ಪೂಜೆ ಸಲ್ಲಿಸಿ, ನದಿಗೆ ಬಾಗಿನ ಅರ್ಪಿಸಿ ಅವರು ಮಾತನಾಡಿದರು.

ಕಳೆದೆರಡು ವರ್ಷದಲ್ಲಿ ಅನಾವೃಷ್ಟಿ ಕಾರಣ ತುಂಗಭದ್ರೆಗೆ ಬಾಗಿನ ಸಲ್ಲಿಸಿರಲಿಲ್ಲ. ಆದರೆ, ಈ ವರ್ಷ ಉತ್ತಮ ಮಳೆಯಾಗಿ ಇದೀಗ ನದಿ ತುಂಬಿ ಹರಿಯುತ್ತಿದೆ. ಇಂದು ನದಿಗೆ ಪೂಜೆ ಸಲ್ಲಿಸಿ, ಬಾಗಿನ ಸಮರ್ಪಿಸುತ್ತಿರುವುದು ತನಗೆ ಸಂತಸ ತಂದಿದೆ ಎಂದು ಹೇಳಿದರು. ಈ ಹಿಂದೆ ಬಿಜೆಪಿಯ ಬಿ.ಎಸ್. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರ ಕಾಲದಲ್ಲಿ ಅತಿವೃಷ್ಠಿಯಿಂದ ಸಂಪೂರ್ಣ ಮನೆ ಹಾನಿಗೆ ₹5 ಲಕ್ಷ, ಶೇ.50ರಷ್ಠು ಹಾನಿಯಾದ ಮನೆಗೆ ₹3 ಲಕ್ಷ ಹಾಗೂ ಭಾಗಶಃ ಹಾನಿಯಾದ ಮನೆಗೆ ₹50 ಸಾವಿರ ಪರಿಹಾರ ನೀಡಲಾಗಿದೆ. ಆದರೆ, ಇಂದಿನ ಕಾಂಗ್ರೆಸ್ ಸರ್ಕಾರ ಅತಿವೃಷ್ಟಿ ಪರಿಹಾರ ನೀಡುವಲ್ಲಿ ಮೀನ-ಮೇಷ ಎಣಿಸುತ್ತಿದೆ. 

Latest Videos

undefined

ಮುಂಗಾರು ಮಳೆ ಅಬ್ಬರಕ್ಕೆ ಕಾಫಿನಾಡಿನಲ್ಲಿ 100 ಕೋಟಿಗೂ ಅಧಿಕ ನಷ್ಟ: ಮುಳ್ಳಯ್ಯನಗಿರಿ ಪ್ರದೇಶಕ್ಕೆ ನಿಷೇಧ ಮುಂದುವರಿಕೆ

ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಕೂಡಲೇ ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಬೇಕು. ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸಿಕೊಡುವ ವ್ಯವಸ್ಥೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ಪ್ರಸ್ತುತ ಸರ್ಕಾರ ಎಸ್‌ಸಿ-ಎಸ್‌ಟಿ ನಿಗಮಗಳ ಕೋಟಿ ಕೋಟಿ ಹಣವನ್ನು ದುರುಪಯೋಗ ಮಾಡಿದೆ. ಇ.ಡಿ. ನೇತೃತ್ವದಲ್ಲಿ ಹಗರಣಗಳ ತನಿಖೆ ನಡೆಸುತ್ತಿದೆ. ಮೈಸೂರಿನಲ್ಲಿ ಮುಡಾ ನಿವೇಶನ ಹಗರಣವೂ ರಾಜ್ಯ ಸರ್ಕಾರದ ಭ್ರಷ್ಟತೆಗೆ ಹಿಡಿದ ಕೈಗನ್ನಡಿಯಾಗಿದೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಆದರೆ, ಮುಖ್ಯಮಂತ್ರಿ ಕುರ್ಚಿಗಾಗಿ ನಿತ್ಯ ಹಗ್ಗಜಗ್ಗಾಟ ನಡೆಯುತ್ತಿದೆ ಎಂದು ಟೀಕಿಸಿದರು.

ಅನ್ನಭಾಗ್ಯದಡಿಯಲ್ಲಿ ನೀಡುವ ಅಕ್ಕಿ ಕೂಡ ರಾಜ್ಯ ಸರ್ಕಾರದ್ದಲ್ಲ. ಇದು ಕೇಂದ್ರ ಸರ್ಕಾರದ ಯೋಜನೆಯಾಗಿದೆ. ರಾಜ್ಯ ಸರ್ಕಾರ ಕೇವಲ ₹170 ಕೊಡುತ್ತಿದೆ. ಲೋಕಸಭಾ ಚುನಾವಣೆ ಪೂರ್ವದಲ್ಲಿ 2 ತಿಂಗಳು ಗೃಹಲಕ್ಷ್ಮಿ ಯೋಜನೆಯಡಿ ₹2 ಸಾವಿರ ನೀಡಿದರು. ಬಳಿಕೆ ಫಲಾನುಭವಿಗಳ ಖಾತೆಗೆ ಯೋಜನೆ ಹಣವನ್ನೇ ಹಾಕುತ್ತಿಲ್ಲ ಎಂದು ಕಿಡಿಕಾರಿದರು. ಬಾಗಿನ ಅರ್ಪಣೆ ಸಂದರ್ಭ ಪುರಸಭೆ ಮಾಜಿ ಅಧ್ಯಕ್ಷ ಹೊಬಳದಾರ ಬಾಬು, ಮಂಜುಇಂಚರ, ರಂಗಪ್ಪ, ಮಹೇಶ್ ಹುಡೇದ್, ಬಿಜೆಪಿ ಜಿಲ್ಲಾ ಮುಖಂಡ ಶಾಂತರಾಜ್ ಪಾಟೀಲ್ ಬಲಮುರಿ, ಪೇಟೆ ಪ್ರಶಾಂತ, ಕೆ.ವಿ. ಶ್ರೀಧರ, ಸತೀಶ್ ವಕೀಲರಾದ ಉಮಾಕಾಂತ ಜೋಯ್ಸ್, ಪ್ರಕಾಶ್, ಪುರೋಹಿತರಾದ ಮನೋಹರ, ಅನೇಕ ಮಹಿಳೆಯವರು ಇದ್ದರು.

ಜೈಲಿನಲ್ಲಿ ದರ್ಶನ್ ಹಾಗೂ ವಿನೋದ್ ರಾಜ್ ಭೇಟಿ: ಬಾಚಿ ಅಪ್ಪಿಕೊಂಡು ಪರಸ್ಪರ ಕಣ್ಣೀರಿಟ್ಟರು!

ಹೊನ್ನಾಳಿ ಹಾಗೂ ನ್ಯಾಮತಿ ಅವಳಿ ತಾಲೂಕುಗಳಲ್ಲಿ ಸಾಕಷ್ಟು ಮೆಕ್ಕೆಜೋಳ ಸೇರಿದಂತೆ ಇತರೆ ಬೆಳೆಗಳು ಹಾನಿಗೀಡಾಗಿವೆ. ಜಿಲ್ಲಾ ಉಸ್ತುವಾರಿ, ಕೃಷಿ,ಕಂದಾಯ ಹಾಗೂ ಡಿಸಿಎಂ ಹಾಗೂ ಸಿ.ಎಂ. ಅವರಿಗೆ ಆಗ್ರಹಪೂರ್ವಕವಾಗಿ ಸಮರ್ಪಕ ಪರಿಹಾರ ಮಂಜೂರು ಮಾಡಬೇಕು
- ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ

click me!