Channapatna Byelection: ಚನ್ನಪಟ್ಟಣ ಸೋತ್ರೆ ಕುಮಾರಸ್ವಾಮಿಗೆ ಹಿನ್ನಡೆ, ಯೋಗೇಶ್ವರ್‌

By Kannadaprabha NewsFirst Published Sep 5, 2024, 11:43 AM IST
Highlights

ನನ್ನನ್ನು ಬಿಟ್ಟು ಬೇರೆ ಯಾರಾದರೂ ಎನ್‌ಡಿಎ ಅಭ್ಯರ್ಥಿಯಾಗಿ ಗೆಲ್ಲುತ್ತಾರೆ ಎಂದರೆ ಅವರಿಗೇ ಟಿಕೆಟ್ ಕೊಡಿ. ನನ್ನದೇನೂ ತಕರಾರಿಲ್ಲ. ಆದರೆ, ನಮ್ಮಿಬ್ಬರ ಕಿತ್ತಾಟ, ಗೊಂದಲದಿಂದ ಕೈತಪ್ಪಿ ಕಾಂಗ್ರೆಸ್‌ಗೆ ಅನುಕೂಲ ಆಗುವುದು ಬೇಡ. ಯಾವುದೇ ಕಾರಣಕ್ಕೂ ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್ ಕೈಸೇರಬಾರದು ಅಷ್ಟೇ. ಈ ಭಾವನೆಯನ್ನು ನಾನು ಬೇರೆ ಬೇರೆ ರೀತಿ ವ್ಯಕ್ತಪಡಿಸುತ್ತಿದ್ದೇನೆ. ಕುಮಾರಸ್ವಾಮಿ ಅವರು ವಿವೇಚನೆಯಿಂದ ತೀರ್ಮಾನ ಕೈಗೊಳ್ಳುತ್ತಾರೆ ಎಂಬ ವಿಶ್ವಾಸವಿದೆ:   ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ 

ವಿಜಯ್‌ ಮಲಗಿಹಾಳ

ಬೆಂಗಳೂರು(ಸೆ.05):  ರಾಜ್ಯ ರಾಜಕಾರಣದಲ್ಲಿ ಈಗ ತೀವ್ರ ಕುತೂಹಲ ಮೂಡಿಸಿರುವುದು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಎನ್‌ಡಿಎ ಒಕ್ಕೂಟದಿಂದ ಯಾರು ಕಣಕ್ಕಿಳಿಯಲಿದ್ದಾರೆ ಎಂಬುದು. ಬಿಜೆಪಿಯ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಅವರಿಗೆ ಟಿಕೆಟ್ ಸಿಗುತ್ತದೆಯೋ ಅಥವಾ ಇಲ್ಲವೋ ಎಂಬ ಬಗ್ಗೆ ಬಿರುಸಿನ ಚರ್ಚೆ ನಡೆದಿದೆ. ಟಿಕೆಟ್ ಸಿಗದಿದ್ದರೆ ಪಕ್ಷೇತರನಾಗಿಯೂ ಸ್ಪರ್ಧಿಸಲು ಸಿದ್ಧ ಎಂದು ಖಡಕ್ಕಾಗಿ ಹೇಳಿದ್ದ ಅವರು ಕಳೆದ ವಾರ ದೆಹಲಿಗೆ ಹೋಗಿ ಬಂದ ನಂತರ ಮೆತ್ತಗಾಗಿದ್ದಾರೆ. ಬಿಜೆಪಿಯ ಚಿಹ್ನೆ ಅಲ್ಲದಿದ್ದರೆ ಜೆಡಿಎಸ್ ಚಿಹ್ನೆಯಿಂದಲೂ ಸ್ಪರ್ಧಿಸುವೆ. ಟಿಕೆಟ್‌ ಇಲ್ಲ ಎಂದರೂ ಪಕ್ಷದ ವಿರುದ್ಧ ಹೋಗುವುದಿಲ್ಲ ಎಂದಿದ್ದಾರೆ. ಒಟ್ಟಾರೆ ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆ ಹಿನ್ನೆಲೆ ಯೋಗೇಶ್ವರ್ ಅವರು ‘ಕನ್ನಡಪ್ರಭ’ಕ್ಕೆ ‘ಮುಖಾಮುಖಿ’ಯಾಗಿದ್ದು ಹೀಗೆ..

Latest Videos

*ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಮುಂಬರುವ ಉಪಚುನಾವಣೆ ಕುತೂಹಲದ ಕಣವಾಗಿ ಮಾರ್ಪಟ್ಟಿದೆಯಲ್ಲ?

-ನಾವು ಈಗ ಹಳೆಯ ಕಹಿ ಮರೆತು ಜೆಡಿಎಸ್‌ ಜತೆಗೆ ರಾಷ್ಟ್ರಮಟ್ಟದಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ಇದಕ್ಕೆ ಪೀಠಿಕೆ ಹಾಕಿದ್ದೇ ನಾನು. ಕಾಂಗ್ರೆಸ್‌ ಯಾಕೋ ಸರಿಯಾಗಿ ನಡೆದುಕೊಳ್ಳುತ್ತಿಲ್ಲ ಎಂದು ಅನಿಸಿದ್ದರಿಂದ ಆ ಪಕ್ಷವನ್ನು ಎದುರಿಸಲು ಜೆಡಿಎಸ್ ಜತೆಗೆ ಕೈಜೋಡಿಸಿದೆವು. ಕಳೆದ ಲೋಕಸಭಾ ಚುನಾವಣೆಯಲ್ಲಿ ಇದು ಯಶಸ್ವಿಯೂ ಆಯಿತು. ಉಪಚುನಾವಣೆಯಲ್ಲಿ ಯಾರಿಗೆ ಟಿಕೆಟ್ ಕೊಡಬೇಕು ಎಂಬುದರ ಬಗ್ಗೆ ನಾವು ಸ್ಪಷ್ಟವಾಗಿದ್ದೇವೆ. ನಾನು ಹಿಂದೆ ಎರಡು ಬಾರಿ ಜೆಡಿಎಸ್‌ನ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಸ್ಪರ್ಧಿಸಿ ಕಡಮೆ ಮತಗಳ ಅಂತರದಿಂದ ಸೋಲುಂಡಿದ್ದೇನೆ. ಬೇರೆ ಬೇರೆ ಕಾರಣಗಳಿಂದಾಗಿ ಅವರು ಲೋಕಸಭಾ ಚುನಾವಣೆ ಗೆದ್ದಿರುವುದರಿಂದ ಎನ್‌ಡಿಎ ಮೈತ್ರಿಕೂಟದಿಂದ ನನಗೆ ಬಿಟ್ಟುಕೊಡಿ ಎಂದು ಕೇಳಿದ್ದೇನೆ. ಅಂತಿಮವಾಗಿ ಅವರು ಒಪ್ಪಿಕೊಳ್ಳುವ ವಿಶ್ವಾಸವಿದೆ.

ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆ: ಯೋಗೇಶ್ವರ್‌ ಹೇಳಿಕೆಗೆ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅಸಮಾಧಾನ

*ನಿಮಗೇ ಯಾಕೆ ಟಿಕೆಟ್ ನೀಡಬೇಕು ಹೇಳಿ?

-ಕ್ಷೇತ್ರದ ಜನಸಾಮಾನ್ಯರ ಆಶಯ ಕೂಡ ನಾನೇ ಸ್ಪರ್ಧೆ ಮಾಡಬೇಕು ಎಂಬುದಾಗಿದೆ. ದಿನನಿತ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸುವಂಥ ಸ್ಥಳೀಯ ನಾಯಕ ಬೇಕು ಎಂಬ ಅಭಿಪ್ರಾಯ ಜನರು ವ್ಯಕ್ತಪಡಿಸುತ್ತಿದ್ದಾರೆ. ಯಾವುದೇ ಸಮೀಕ್ಷೆ ನಡೆಸಿದರೂ ಮತ್ತೆ ನಾನು ಆಯ್ಕೆಯಾಗಬೇಕು ಎಂದು ಜನರು ಬಯಸಿದ್ದಾರೆ. ಹೀಗಿರುವಾಗ ನನಗೆ ಟಿಕೆಟ್ ತಪ್ಪಿಸುವುದು ಸರಿಯಲ್ಲ. ನಾನು ನಮ್ಮ ಪಕ್ಷದ ವರಿಷ್ಠರು ಹೇಳಿದರೆ ಯಾವುದೇ ಚಿಹ್ನೆಯಿಂದ ಸ್ಪರ್ಧಿಸಲು ಸಿದ್ಧನಾಗಿದ್ದೇನೆ. ಅಂದರೆ, ಬಿಜೆಪಿ ಅಥವಾ ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿದ್ಧನಿದ್ದೇನೆ. ಒಟ್ಟಿನಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಬೇಕು ಎಂಬುದು ನನ್ನ ಉದ್ದೇಶ.

*ಅಂದರೆ, ನಿಮ್ಮನ್ನು ಬಿಟ್ಟರೆ ಎನ್‌ಡಿಎ ಒಕ್ಕೂಟದಿಂದ ಸಮರ್ಥ ಅಭ್ಯರ್ಥಿಗಳೇ ಇಲ್ಲವೇ

-ನನ್ನನ್ನು ಬಿಟ್ಟು ಬೇರೆ ಯಾರಾದರೂ ಎನ್‌ಡಿಎ ಅಭ್ಯರ್ಥಿಯಾಗಿ ಗೆಲ್ಲುತ್ತಾರೆ ಎಂದರೆ ಅವರಿಗೇ ಟಿಕೆಟ್ ಕೊಡಿ. ನನ್ನದೇನೂ ತಕರಾರಿಲ್ಲ. ಆದರೆ, ನಮ್ಮಿಬ್ಬರ ಕಿತ್ತಾಟ, ಗೊಂದಲದಿಂದ ಕೈತಪ್ಪಿ ಕಾಂಗ್ರೆಸ್‌ಗೆ ಅನುಕೂಲ ಆಗುವುದು ಬೇಡ. ಯಾವುದೇ ಕಾರಣಕ್ಕೂ ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್ ಕೈಸೇರಬಾರದು ಅಷ್ಟೇ. ಈ ಭಾವನೆಯನ್ನು ನಾನು ಬೇರೆ ಬೇರೆ ರೀತಿ ವ್ಯಕ್ತಪಡಿಸುತ್ತಿದ್ದೇನೆ. ಕುಮಾರಸ್ವಾಮಿ ಅವರು ವಿವೇಚನೆಯಿಂದ ತೀರ್ಮಾನ ಕೈಗೊಳ್ಳುತ್ತಾರೆ ಎಂಬ ವಿಶ್ವಾಸವಿದೆ.

*ಚನ್ನಪಟ್ಟಣ ಜೆಡಿಎಸ್‌ನಿಂದ ತೆರವಾದ ಕ್ಷೇತ್ರ. ಬಿಜೆಪಿಗೆ ಯಾಕೆ ಬಿಟ್ಟು ಕೊಡಬೇಕು ಹೇಳಿ?

-ತೊಂದರೆಯಿಲ್ಲ. ಇಲ್ಲಿ ಜೆಡಿಎಸ್‌, ಬಿಜೆಪಿ ಎಂಬ ವಿಚಾರ ಮುಖ್ಯವಲ್ಲ. ನಾವು ಮೈತ್ರಿ ಮಾಡಿಕೊಂಡಿರುವುದೇ ಗೆಲ್ಲಬೇಕು, ಕಾಂಗ್ರೆಸ್ ಪಕ್ಷವನ್ನು ಮಣಿಸಬೇಕು ಎಂಬ ಕಾರಣಕ್ಕಾಗಿ. ಗೆಲುವೇ ಮಾನದಂಡ ಆಗಬೇಕು. ಜೆಡಿಎಸ್‌ ಇಲ್ಲಿ ಗೆಲ್ಲುತ್ತದೆ ಎಂಬುದು ನಿಶ್ಚಿತವಿದ್ದರೆ ಅವರೇ ಸ್ಪರ್ಧಿಸಲಿ.

*ಅಂದರೆ, ಜೆಡಿಎಸ್‌ನಲ್ಲಿ ಗೆಲ್ಲುವ ಅಭ್ಯರ್ಥಿ ಇಲ್ಲ ಎನ್ನುತ್ತೀರಾ?

-ನನಗೆ ಗೊತ್ತಿಲ್ಲ. ಅವರೇ ಸಮೀಕ್ಷೆ ಮಾಡಿಸಲಿ. ಗೆಲ್ಲುವ ಅಭ್ಯರ್ಥಿ ಇದ್ದರೆ ಅವರಿಗೇ ಟಿಕೆಟ್ ಕೊಡಲಿ. ಕುಮಾರಸ್ವಾಮಿ ಅವರ ಅನುಪಸ್ಥಿತಿಯಲ್ಲಿ ಮತ್ತೊಬ್ಬರು ಹೇಗೆ ಹುಟ್ಟುತ್ತಾರೆ ಹೇಳಿ.

*ಅವರ ಪುತ್ರ ನಿಖಿಲ್‌ ಕುಮಾರಸ್ವಾಮಿ ಇದ್ದಾರಲ್ಲ?

-ಆಯ್ತು. ನಿಖಿಲ್‌ ಅವರಿಗೇ ಟಿಕೆಟ್ ಕೊಡಲಿ. ನಾನು ಬೆಂಬಲಿಸುತ್ತೇನೆ. ಆದರೆ, ಏನೇನೋ ಪ್ರಯೋಗ ಮಾಡಲು ಹೋಗಿ ಕ್ಷೇತ್ರವನ್ನು ಕಳೆದುಕೊಳ್ಳುವಂತೆ ಆಗಬಾರದು. ಡಿ.ಕೆ.ಶಿವಕುಮಾರ್ ಹಲವು ದಿನಗಳಿಂದ ಸಾಕಷ್ಟು ತಂತ್ರಗಾರಿಕೆ ಮಾಡುತ್ತಿದ್ದಾರೆ. ಹೀಗಿರುವಾಗ ಅವರನ್ನು ಮತ್ತೆ ಬೆಳೆಯಲು ಅವಕಾಶ ಕಲ್ಪಿಸಬಾರದು ಎಂಬುದು ನನ್ನ ಭಾವನೆ.

*ಟಿಕೆಟ್‌ ಬಗ್ಗೆ ಕುಮಾರಸ್ವಾಮಿ ಅವರ ಬಳಿ ನೀವೇ ನೇರವಾಗಿ ಮಾತನಾಡಬಹುದಿತ್ತಲ್ಲ?

-ನಾನೇ ಖುದ್ದಾಗಿ ಮಾತನಾಡಿದ್ದೆ. ಅವರು ಕೂಡ ಒಪ್ಪಿದ್ದರು. ಈಗ ಅವರ ಪಕ್ಷದ ಮುಖಂಡರ ಹಾಗೂ ಕಾರ್ಯಕರ್ತರ ಒತ್ತಡ ಎದುರಾಗಿರಬಹುದು. ಆದರೆ, ಜೆಡಿಎಸ್‌ನ ಬಹುತೇಕ ಕಾರ್ಯಕರ್ತರು ನನ್ನನ್ನು ಬೆಂಬಲಿಸುತ್ತಾರೆ. ಕಾರ್ಯಕರ್ತರಲ್ಲಿ ಹೆಚ್ಚು ಗೊಂದಲವಿಲ್ಲ. ಗೆಲ್ಲುವುದಾದರೆ ಜೆಡಿಎಸ್‌ ಸ್ಪರ್ಧಿಸಲಿ. ಸೋಲುವುದಕ್ಕೆ ಯಾಕೆ ಟಿಕೆಟ್ ತೆಗೆದುಕೊಳ್ಳುತ್ತೀರಿ? ಗೆಲ್ಲುವುದಾದರೆ ನಾನೇ ಜೆಡಿಎಸ್‌ ಜತೆಗಿರುತ್ತೇನೆ.

*ಜೆಡಿಎಸ್‌ನಿಂದ ಬೇರೊಬ್ಬರು ಸ್ಪರ್ಧಿಸಿದರೆ ನೀವು ಅವರ ಪರವಾಗಿ ಕೆಲಸ ಮಾಡಿ ಗೆಲ್ಲಿಸಬಹುದಲ್ಲವೇ

-ಪ್ರಜಾಪ್ರಭುತ್ವದಲ್ಲಿ ಬೇರೊಬ್ಬರನ್ನು ಗೆಲ್ಲಿಸುತ್ತೇನೆ ಎಂದು ಯಾರೂ ಹೇಳುವುದಕ್ಕೆ ಆಗುವುದಿಲ್ಲ. ನಾನೂ ಹಾಗೆ ಹೇಳುವುದಿಲ್ಲ. ಜನರು ತೀರ್ಮಾನಿಸಬೇಕು. ನಾನು ಅಭ್ಯರ್ಥಿಯಾದರೆ ಬೆಂಬಲಿಸುತ್ತೇನೆ ಎನ್ನುವ ಜನ ನಾನು ಹೇಳಿದವರನ್ನು ಬೆಂಬಲಿಸುತ್ತಾರೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆ ಕುಮಾರಸ್ವಾಮಿ ಅವರಿಗೆ ಮುಖ್ಯವಾದದ್ದು. ಅವರು ಲೋಕಸಭೆಯಲ್ಲಿ 2 ಸ್ಥಾನ ಗೆದ್ದು ಕೇಂದ್ರದಲ್ಲಿ ಸಚಿವರಾಗಿ ಪ್ರಬಲ ಖಾತೆಯನ್ನು ಪಡೆದಿದ್ದಾರೆ. ಈಗ ಚನ್ನಪಟ್ಟಣ ಸೋತಲ್ಲಿ ಕುಮಾರಸ್ವಾಮಿ ಅವರಿಗೆ ದೊಡ್ಡ ಹಿನ್ನಡೆಯಾಗಲಿದೆ. ಇದನ್ನು ಅವರು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು. ಅವರ ತಪ್ಪು ನಿರ್ಣಯದಿಂದ ದೊಡ್ಡ ಡ್ಯಾಮೇಜ್ ಆಗಬಾರದು.

*ಟಿಕೆಟ್‌ಗಾಗಿ ನೀವು 2-3 ಬಾರಿ ದೆಹಲಿಗೆ ದಂಡಯಾತ್ರೆ ಹೋಗಿಬಂದರೂ ಫಲ ಸಿಕ್ಕಂತಿಲ್ಲ?

-ಹಿಂದೆ ಎರಡು ಬಾರಿ ದೆಹಲಿಗೆ ಹೋದಾಗ ಕುಮಾರಸ್ವಾಮಿ ಅವರೊಂದಿಗೆ ನಮ್ಮ ಪಕ್ಷದ ನಾಯಕರ ಸಭೆ ನಡೆದಿರಲಿಲ್ಲ. ಕಳೆದ ವಾರ ಕುಮಾರಸ್ವಾಮಿ ಅವರೊಂದಿಗೆ ನಮ್ಮ ನಾಯಕರು ಸಮಾಲೋಚನೆ ನಡೆಸಿದರು. ಸಂಡೂರಿನಲ್ಲಿ, ಶಿಗ್ಗಾವಿಯಲ್ಲಿ ಎನ್‌ಡಿಎ ಗೆಲ್ಲುವುದು ಅಷ್ಟು ಸುಲಭವಿಲ್ಲ. ಆದರೆ, ಸುಲಭವಾಗಿ ಗೆಲ್ಲುವ ಅವಕಾಶ ಇರುವ ಚನ್ನಪಟ್ಟಣ ಬಿಟ್ಟುಕೊಡುವುದು ಬೇಡ ಎಂಬ ಅಭಿಪ್ರಾಯವನ್ನು ಹೇಳಿದ್ದೇವೆ.

*ಟಿಕೆಟ್‌ ಸಿಗದಿದ್ದರೆ ಪಕ್ಷ ತೊರೆಯಲೂ ಸಿದ್ಧರಾಗಿದ್ದ ನೀವು ಕಳೆದ ವಾರ ದೆಹಲಿಗೆ ಹೋಗಿ ಬಂದ ಮೇಲೆ ನಿಮ್ಮ ವರಸೆಯೇ ಬದಲಾಗಿದೆಯಲ್ಲ?

-ಟಿಕೆಟ್‌ಗಾಗಿ ಪಕ್ಷ ತೊರೆಯುವ ಯೋಚನೆ ಮಾಡಿದ್ದು ನಿಜ. ಆದರೆ, ನಮ್ಮದು ರಾಷ್ಟ್ರೀಯ ಪಕ್ಷ. ನಾನೇ ಎಲ್ಲ ಅಲ್ಲವಲ್ಲ. ಉಭಯ ಪಕ್ಷಗಳು ಗೊಂದಲವಿಲ್ಲದೆ ಒಟ್ಟಾಗಿ ಹೋಗಬೇಕು ಎಂದು ಪಕ್ಷದ ಹಿರಿಯರು ಸಲಹೆ ನೀಡಿದಾಗ ಕೇಳಬೇಕಾಗುತ್ತದೆ. ಒಬ್ಬರೇ ತೀರ್ಮಾನ ಮಾಡಲು ಆಗುವುದಿಲ್ಲ. ಒನ್‌ ವೇ ಹೋಗುವುದು ಸರಿಯಲ್ಲ ಎಂದರು. ಹೀಗಾಗಿ, ನಾನು ನನ್ನ ನಿಲುವನ್ನು ಬದಲಿಸಿಕೊಂಡೆ. ತಪ್ಪಾಗಿದ್ದರೆ ವಿಷಾದ ವ್ಯಕ್ತಪಡಿಸುವೆ. ತಿದ್ದಿಕೊಳ್ಳುವೆ ಎಂದೂ ಹೇಳಿದೆ.

*ಟಿಕೆಟ್ ಅಂತಿಮಗೊಳಿಸಲು ನೀವು ತುಂಬಾ ಅವಸರ ಮಾಡುತ್ತಿರುವುದು ಯಾಕೆ?

-ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದವರು ತುಂಬಾ ಅಗ್ರೆಸಿವ್‌ ಆಗಿ ಹೋಗುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ವಾರದಲ್ಲಿ 2 ದಿನ ಚನ್ನಪಟ್ಚಣಕ್ಕೆ ಭೇಟಿ ನೀಡುತ್ತಿದ್ದಾರೆ. ಅವರ ಅನುಪಸ್ಥಿತಿಯಲ್ಲೂ ಸತತವಾಗಿ ಭರ್ಜರಿ ತಯಾರಿ ನಡೆಯುತ್ತಿದೆ. ಒಬ್ಬೊಬ್ಬ ಶಾಸಕರು ಒಂದೊಂದು ಜಿಲ್ಲಾ ಪಂಚಾಯ್ತಿಗೆ ಭೇಟಿ ನೀಡಿ ಸರ್ಕಾರದ ಯೋಜನೆಗಳು, ನೆರವಿನ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ. ಹೀಗಿರುವಾಗ ನಾವು ಹಿಂದೆ ಬೀಳುವಂತಾಗಬಾರದು. ಬರಿ ಟಿಕೆಟ್‌ ಗೊಂದಲದಲ್ಲೇ ಇದ್ದರೆ ಹೇಗೆ? ಬೇಗನೆ ಅಭ್ಯರ್ಥಿ ಅಂತಿಮಗೊಳಿಸಬೇಕು. ಚುನಾವಣೆ ಘೋಷಣೆಗೂ ಮೊದಲೇ ಅಭ್ಯರ್ಥಿ ಘೋಷಣೆ ಮಾಡಬೇಕು ಎಂಬುದು ನನ್ನ ಉದ್ದೇಶ ಅಷ್ಟೇ.

*ನೀವು ಬೇಕಾದರೆ ಕಾಂಗ್ರೆಸ್ ಪಕ್ಷಕ್ಕೆ ಹೋಗಿ ಸುಲಭವಾಗಿ ಚುನಾವಣೆಗೆ ಸ್ಪರ್ಧಿಸಬಹುದಲ್ಲವೇ?

-ಹೋಗಬಹುದು. ಆದರೆ, ನನಗೆ ಹೋಗುವ ಮನಸ್ಸಿಲ್ಲ. ಹಿಂದೆ ಸುಮಾರು 10 ವರ್ಷಗಳಿಗೂ ಹೆಚ್ಚು ಕಾಲ ಕಾಂಗ್ರೆಸ್ ಪಕ್ಷದಲ್ಲಿದ್ದೆ. ಈಗ ಮತ್ತೆ ಆ ಪಕ್ಷಕ್ಕೆ ಹೋದರೆ ‘ಜಂಪಿಂಗ್ ಸ್ಟಾರ್‌’ ಎಂದು ಲೇವಡಿ ಮಾಡುತ್ತಾರೆ. ಹಾಗಾಗಿ ಇಲ್ಲೇ ಇದ್ದರಾಯಿತು. ಮುಂದೆ ಅವಕಾಶ ಸಿಕ್ಕೇ ಸಿಗುತ್ತದೆ ಎಂಬ ನಿಲುವಿಗೆ ಬಂದಿದ್ದೇನೆ.

*ಒಟ್ಟಿನಲ್ಲಿ ಈ ಉಪಚುನಾವಣೆಯ ಕೇಂದ್ರ ಬಿಂದು ನೀವಾಗಿದ್ದೀರಿ?

-ಇದು ನನ್ನ ಚುನಾವಣೆಯಲ್ಲ. ನೇರವಾಗಿ ಕುಮಾರಸ್ವಾಮಿ ಮತ್ತು ಶಿವಕುಮಾರ್ ನಡುವಿನ ಚುನಾವಣೆ. ಈ ಗೆಲುವು ಕೇವಲ ಕುಮಾರಸ್ವಾಮಿ ಅವರ ಗೆಲುವಾಗುವುದಿಲ್ಲ. ಅದು ಕಾಂಗ್ರೆಸ್ ಸರ್ಕಾರದ ವಿರುದ್ಧದ ಗೆಲುವೂ ಆಗಲಿದೆ. ನಾನು ನೆಪ ಮಾತ್ರ ಅಷ್ಟೇ. ಯಾರು ಗೆಲ್ಲಬೇಕು ಎನ್ನುತ್ತಾರೋ ಅವರು ನನ್ನನ್ನು ಉಪಯೋಗಿಸಿಕೊಳ್ಳುತ್ತಾರೆ. ಗೆಲ್ಲಬಾರದು ಎನ್ನುವವರು ನನ್ನನ್ನು ಬಳಸಿಕೊಳ್ಳದೆ ಕೈಬಿಡುತ್ತಾರೆ. ಗೆಲ್ಲುವುದಕ್ಕೆ ನಾನು ಉಪಯೋಗಕ್ಕೆ ಬರುತ್ತೇನೆ. ಯಾಕೆಂದರೆ, ನನ್ನ ಪರವಾಗಿ ಜನಾಭಿಪ್ರಾಯ ಇದೆ. ಬೇಡ ಎಂದರೆ ಬಿಡಲಿ. ನಾನು ಒಳ್ಳೆಯ ಟೈಮ್ ಬರುವವರೆಗೆ ಕಾಯುತ್ತೇನೆ. ಪಕ್ಷ ಹೇಳಿದಂತೆ ಕೇಳಿಕೊಂಡು ಇರುತ್ತೇನೆ.

*ನಿಮ್ಮ ಪರವಾಗಿ ಟಿಕೆಟ್‌ ಕೇಳುವ ವಿಷಯದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಟಸ್ಥರಾದಂತೆ ಕಾಣುತ್ತಿದೆ?

-ವಿಜಯೇಂದ್ರ ಅವರು ನನಗೆ ನೇರವಾಗಿ ಮಾತಾಡಿದ್ದಾರೆ. ನನ್ನ ಪರವಾಗಿದ್ದಾರೆ. ಮೇಲಾಗಿ ಈ ವಿಷಯದಲ್ಲಿ ವಿಜಯೇಂದ್ರ ಅವರೇ ಫೈನಲ್ ಅಲ್ಲ. ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ.

*ನಿಮಗೆ ಈ ಬಾರಿ ಅವಕಾಶ ನೀಡಿದರೆ ಗಟ್ಟಿಯಾಗಿ ಅಂಟಿಕೊಡುಬಿಡುತ್ತೀರಿ. ತಮಗೆ ಮುಂದೆ ಅವಕಾಶ ಕೈತಪ್ಪಿ ಹೋಗುತ್ತದೆ ಎಂಬ ಆತಂಕ ಜೆಡಿಎಸ್ ಮುಖಂಡರಿಗೆ ಇದ್ದಂತಿದೆ?

-ನಾವು ಲೋಕಸಭಾ ಚುನಾವಣೆಯಲ್ಲಿ ಡಿ.ಕೆ.ಸುರೇಶ್ ಅವರನ್ನು ಸೋಲಿಸಿ ಕಳುಹಿಸಿದ್ದೇವೆ. ಈಗ ಮತ್ತೆ ಅವರಿಗೆ ಪುನರ್ಜನ್ಮ ನೀಡುವ ತಪ್ಪು ಯಾಕೆ ಮಾಡಬೇಕು? ನಮ್ಮ ಮೇಲಿನ ಕೋಪಕ್ಕೆ, ಸಣ್ಣ ಪುಟ್ಟ ವ್ಯತ್ಯಾಸಗಳಿಗೆ ಡಿಕೆ ಸಹೋದರರನ್ನು ತಂದು ಕೂರಿಸಿದರೆ ಬೇರು ಸಮೇತ ಅಲ್ಲಾಡಿಸಿಬಿಡುತ್ತಾರೆ. ಆಯ್ತು. ನನಗೆ ಚನ್ನಪಟ್ಟಣದಿಂದ ಅವಕಾಶ ಸಿಗದಿದ್ದರೆ ಅಥವಾ ಬಾಗಿಲು ಮುಚ್ಚಿದರೆ ಮುಂದೆ ದೇವರು ಮತ್ತೊಂದು ಬಾಗಿಲು ತೆರೆಯುತ್ತಾನೆ. ನಾನು ಇನ್ನೂ 15-20 ವರ್ಷ ರಾಜಕಾರಣ ಮಾಡಬೇಕು ಎಂದುಕೊಂಡಿದ್ದೇನೆ. ರಾಮನಗರ ಕ್ಷೇತ್ರಕ್ಕೆ ಹೋಗಿ ಸ್ಪರ್ಧಿಸುತ್ತೇನೆ. ಚನ್ನಪಟ್ಟಣ ನನ್ನ ಕ್ಷೇತ್ರ ಎಂಬ ಕಾರಣಕ್ಕಾಗಿ ಇಲ್ಲಿ ಸಕ್ರಿಯವಾಗಿರಲು ಬಯಸುತ್ತಿದ್ದೇನೆ. ಇಲ್ಲಿ ಇಲ್ಲ ಎಂದಾದರೆ ಸುಮ್ಮನಿರುವುದಿಲ್ಲ. ನಾನು ಹುಟ್ಟಿ ಬೆಳೆದಿದ್ದೆ ರಾಮನಗರದಲ್ಲಿ. ನನ್ನ ವಹಿವಾಟು ಇರುವುದೇ ರಾಮನಗರ ತಾಲೂಕಿನಲ್ಲಿ. ಅಲ್ಲಿಯ ಇಂಚಿಂಚೂ ಮಾಹಿತಿ ನನಗಿದೆ.

*ರಾಜ್ಯ ಬಿಜೆಪಿಯಲ್ಲಿ ಏನಾಗುತ್ತಿದೆ? ನೀವು ಪಕ್ಷದಿಂದ ತುಸು ಅಂತರ ಕಾಪಾಡಿಕೊಳ್ಳುತ್ತಿದ್ದೀರಿ?

ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಹಲವು ಹಗರಣಗಳಿಂದಾಗಿ ತೊಂದರೆಯಲ್ಲಿ ಸಿಲುಕಿದೆ ಎಂದು ಅನಿಸುತ್ತಿದೆ. ನಾವು ಅಸ್ಥಿರಗೊಳಿಸುವ ಪ್ರಯತ್ನ ಮಾಡದೆ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದೇವೆ. ಕೇವಲ ಒಂದೂವರೆ ವರ್ಷ ಪೂರೈಸುವ ಮೊದಲೇ ಕಾಂಗ್ರೆಸ್ ಸರ್ಕಾರ ಜನರಿಗೆ ಬೇಸರ ಉಂಟು ಮಾಡಿದೆ. ನಮ್ಮ ಪಾತ್ರ ವಿರೋಧ ಪಕ್ಷವಾಗಿ ಮಾಡಬೇಕೆ ಹೊರತು ಬೇರೆ ಏನೂ ಇಲ್ಲ. ಹೈಕಮಾಂಡ್‌ಗೆ ಕೂಡ ಸರ್ಕಾರ ಅಸ್ಥಿರಗೊಳಿಸುವ ಬಗ್ಗೆ ಆಸಕ್ತಿ ಇಲ್ಲ. ಜನರು ನಮಗೆ ವಿರೋಧ ಪಕ್ಷದ ಸ್ಥಾನ ನೀಡಿದ್ದಾರೆ. ಅದನ್ನು ನಿಭಾಯಿಸಬೇಕು ಎಂಬುದು ವರಿಷ್ಠರ ಸ್ಪಷ್ಟ ಆಶಯ ಆಗಿದೆ. ನನಗೆ ಪಕ್ಷದಲ್ಲಿ ಯಾವುದೇ ಜವಾಬ್ದಾರಿ ಇಲ್ಲದೇ ಇದ್ದುದರಿಂದ ನಮ್ಮಷ್ಟಕ್ಕೆ ನಾವು ಎಂಬಂತೆ ಇದ್ದೇನೆ.

*ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿರುವುದರಿಂದ ನೀವು ಪಕ್ಷದ ಸಂಘಟನೆಯಿಂದ ದೂರ ಉಳಿದಿದ್ದೀರಂತೆ?

-ಹಾಗೇನೂ ಇಲ್ಲ. ಆದರೆ, ಅವರು ಒಂದು ತಂಡ ಕಟ್ಟಿಕೊಂಡಿದ್ದಾರೆ. ಆ ತಂಡ ಎಷ್ಟರಮಟ್ಟಿಗೆ ಜನರ ವಿಶ್ವಾಸ ಗಳಿಸಲಿದೆ ಎಂಬುದು ಪ್ರಶ್ನೆ ಈಗ. ವಿಜಯೇಂದ್ರ ಅವರು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಯಾವ ರೀತಿ ಸಮನ್ವಯತೆ ಸಾಧಿಸಿ ಜನಸಾಮಾನ್ಯರ ಆಶಯಕ್ಕೆ ತಕ್ಕಂತೆ ಕೆಲಸ ಮಾಡುತ್ತಾರೆ ಎಂಬುದು ನಮ್ಮ ಮುಂದಿರುವ ಪ್ರಶ್ನೆ. ಅವರು ಹೆಚ್ಚು ಸಮನ್ವಯದೊಂದಿಗೆ ಸಾಗಿದರೆ ಇನ್ನೂ ಬಲಿಷ್ಠರಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಅವರು ಯುವಕರು. ಆದರೆ, ಅನುಭವವೂ ಮುಖ್ಯವಾಗುತ್ತದೆ. ಅವರು ಮೊದಲನೇ ಬಾರಿ ಶಾಸಕರಾಗಿದ್ದಾರೆ. ಹಲವು ಏಳು ಬೀಳುಗಳನ್ನು ಕಂಡ ಅನೇಕ ಮುಖಂಡರು ಪಕ್ಷದಲ್ಲಿದ್ದಾರೆ. ಅವರ ಮಾರ್ಗದರ್ಶನ ಪಡೆದು ಒಟ್ಟಿಗೆ ನಡೆದರೆ ಬಿಜೆಪಿ ಪ್ರಬಲ ವಿರೋಧಪಕ್ಷವಾಗಿ ಬೆಳೆಯಲು ಸಹಾಯವಾಗುತ್ತದೆ. ಇಲ್ಲದಿದ್ದರೆ ಮುಂದೆ ಯಾರು ಯಾವ ಯಾವ ದಿಕ್ಕಿನಲ್ಲಿ ಹೋಗುತ್ತಾರೆ ಎಂಬುದನ್ನು ಅಲೋಚನೆ ಮಾಡಬೇಕು.

ಚನ್ನಪಟ್ಟಣ ರಣಾಂಗಣ: ಮಿತ್ರರ ಮಧ್ಯದಲ್ಲೇ ನಡೀತಿದೆಯಾ ಟಿಕೆಟ್ ಫೈಟ್?

*ವಿಜಯೇಂದ್ರ ಅವರು ತಂಡ ಕಟ್ಟಿಕೊಂಡಿದ್ದಾರೆ ಎಂದರೆ ಅದು ಪಕ್ಷದ ತಂಡ ಅಲ್ಲವೇ?

-ರಾಜ್ಯಾಧ್ಯಕ್ಷರು ಸಮತೋಲನ ಇರುವ ತಂಡ ಕಟ್ಟಬೇಕಿತ್ತು. ಆದರೆ, ಅವರ ಅಣತಿಯಂತೆ ಕೆಲಸ ಮಾಡುವವರ ತಂಡ ಮಾಡಿದ್ದಾರೆ. ಪಕ್ಷವನ್ನು ಒಟ್ಟಾರೆಯಾಗಿ ತೆಗೆದುಕೊಂಡು ಹೋಗುವ ತಂಡ ಆಗಬೇಕಾಗಿತ್ತು. ಇದು ನನ್ನ ವೈಯಕ್ತಿಕ ಅಭಿಪ್ರಾಯ. ಈಗ ಆ ಬಗ್ಗೆ ನನ್ನದೇನೂ ತಕರಾರಿಲ್ಲ. ಎಲ್ಲರನ್ನೂ ಒಗ್ಗಟ್ಟಿನಿಂದ ಹೋಗಬೇಕು.

*ವಿಜಯೇಂದ್ರ ವಿರುದ್ಧದ ಪಕ್ಷದಲ್ಲಿನ ಮುಖಂಡರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆಯಲ್ಲ?

-ರಾಜಕೀಯವಾಗಿ ಪಕ್ಷದ ವರಿಷ್ಠರು ಒಂದು ಅವಕಾಶವನ್ನು ನೀಡಿದ್ದಾರೆ. ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕಿತ್ತು. ಹಾಗಂತ ಪಕ್ಷದಲ್ಲಿ ತುಂಬಾ ಒಡಕು ಇದೆ, ಭಿನ್ನಾಭಿಪ್ರಾಯವಿದೆ ಎಂದು ಹೇಳುತ್ತಿಲ್ಲ. ಹಳೆಯದನ್ನೇ ಪುನರಾವರ್ತನೆ ಮಾಡಿಕೊಂಡು ಹೋಗುವ ಬದಲು ಭವಿಷ್ಯದ ದೃಷ್ಟಿಯಿಂದ ಪಕ್ಷದ ಸಂಘಟನೆ ಗಟ್ಟಿಗೊಳಿಸಬೇಕು. ಸ್ವಂತ ಬಲದ ಮೇಲೆ ಅಧಿಕಾರದ ಚುಕ್ಕಾಣಿ ಹಿಡಿಯುವಂತಾಗಬೇಕು. ನಾವು ವಿಜಯೇಂದ್ರ ಅವರಿಗೆ ಸಲಹೆ ಕೊಡುವ ಹಂತದಲ್ಲಿ ಇಲ್ಲ. ಎಲ್ಲರನ್ನೂ ಒಳಗೊಂಡು ಹೋದರೆ ವಿಜಯೇಂದ್ರ ಅವರಿಗೆ ಭವಿಷ್ಯವಿದೆ. ಅದನ್ನು ಬಿಟ್ಟು ಅವರು ಎಲ್ಲರನ್ನೂ ಸೈಡ್‌ಲೈನ್ ಮಾಡುತ್ತೇನೆ, ತುಳಿಯುತ್ತೇನೆ ಎಂದು ಹೊರಟರೆ ಅದು ಆಗದ ಮಾತು.

click me!