ಇಂಡಿಯಾ ಕೂಟವು ಪ್ರಧಾನಿ ಮೋದಿಯವರನ್ನು ಮಾನಸಿಕವಾಗಿ ಸೋಲಿಸಿದ್ದು, ಅವರು ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ನವದೆಹಲಿ (ಸೆ.5): ಇಂಡಿಯಾ ಕೂಟವು ಪ್ರಧಾನಿ ಮೋದಿಯವರನ್ನು ಮಾನಸಿಕವಾಗಿ ಸೋಲಿಸಿದ್ದು, ಅವರು ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಜಮ್ಮು-ಕಾಶ್ಮೀರದ ರಾಮ್‌ಬನ್ ಜಿಲ್ಲೆಯಲ್ಲಿ ಚುನಾವಣೆಯ ಪ್ರಯುಕ್ತ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ರಾಹುಲ್, ‘ತಮಗೆ ಭಗವಂತನೊಂದಿಗೆ ನೇರ ಸಂಬಂಧವಿದೆ ಎಂದಿದ್ದ ಮೋದಿ ತಮ್ಮನ್ನು ತಾವು ದೈವಿಕ ಸ್ವರೂಪಿ ಎಂದು ಕರೆದುಕೊಂಡಿದ್ದರು. ಆದರೆ ಈ ಚುನಾವಣೆಯಲ್ಲಿ ಭಗವಂತ ಜನರ ಇಚ್ಛೆಯಂತೆ ನಡೆದುಕೊಳ್ಳುತ್ತೇನೆ ಎಂಬ ಸಂದೇಶವನ್ನು ಅವರಿಗೆ ನೀಡಿದ್ದಾರೆ’ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಅವರ ತಂದೆ ರಾಜೀವ್ ಗಾಂಧಿಗಿಂತ ಹೆಚ್ಚು ಬುದ್ಧಿವಂತ: ಸ್ಯಾಮ್ ಪಿತ್ರೋಡಾ
ಈ ವೇಳೆ ಬಿಜೆಪಿ ನಡೆಸಲು ಹಿಂಜರಿಯುತ್ತಿರುವ ಜಾತಿಗಣತಿಗೆ ಅದರ ಸೈದ್ಧಾಂತಿಕ ಸಂಸ್ಥೆಯಾದ ಆರ್‌ಎಸ್‌ಎಸ್ ಬೆಂಬಲ ಸೂಚಿಸಿರುವುದನ್ನೂ ಉಲ್ಲೇಖಿಸಿದ್ದಾರೆ. ಜೊತೆಗೆ ‘ಸಂಸತ್ತಿನಲ್ಲಿ ನಾನು ಮೋದಿಯವರ ಎದುರು ಕೂರುತ್ತಿದ್ದಂತೆ ಅವರ ವಿಶ್ವಾಸ ಕ್ಷೀಣಿಸುತ್ತದೆ. ದೇಶದ ಜನತೆಯಿಂದ ಅವರು ಭಯಭೀತರಾಗಿದ್ದಾರೆ. ಬಿಜೆಪಿ ಹಾಗೂ ನರೇಂದ್ರ ಮೋದಿ ಇನ್ನು ಕೆಲ ಸಮಯ ಮಾತ್ರ ಅಧಿಕಾರದಲ್ಲಿರುತ್ತಾರೆ’ ಎಂದು ವ್ಯಂಗ್ಯವಾಡಿದ್ದಾರೆ.
ಈ ವೇಳೆ ಜಮ್ಮು-ಕಾಶ್ಮೀರಕ್ಕೆ ರಾಜ್ಯದ ಸ್ಥಾನ ಮರಳಿಸಲು ಇಂಡಿಯಾ ಕೂಟ ಎಲ್ಲಾ ರೀತಿಯ ಪ್ರಯತ್ನ ಮಾಡಲಿದೆ ಎಂದು ರಾಹುಲ್ ಭರವಸೆ ನೀಡಿದ್ದಾರೆ.