ಜಯಮುತ್ತು ಸರ್ವಾಧಿಕಾರಿ ಧೋರಣೆ ಜೆಡಿಎಸ್‌ಗೇ ಕುತ್ತು: ಸಿ.ಪಿ.ಯೋಗೇಶ್ವರ್‌

By Kannadaprabha News  |  First Published Jan 28, 2023, 8:02 PM IST

ಜೆಡಿಎಸ್‌ ತಾಲೂಕು ಅಧ್ಯಕ್ಷ ಎಚ್‌.ಸಿ.ಜಯಮುತ್ತು ಸರ್ವಾಧಿಕಾರಿ ಧೋರಣೆ ಜೆಡಿಎಸ್‌ ಪಕ್ಷಕ್ಕೆ ಮುಳುವಾಗಲಿದೆ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಎಚ್ಚರಿಕೆ ನೀಡಿದರು. 


ಚನ್ನಪಟ್ಟಣ (ಜ.28): ಜೆಡಿಎಸ್‌ ತಾಲೂಕು ಅಧ್ಯಕ್ಷ ಎಚ್‌.ಸಿ.ಜಯಮುತ್ತು ಸರ್ವಾಧಿಕಾರಿ ಧೋರಣೆ ಜೆಡಿಎಸ್‌ ಪಕ್ಷಕ್ಕೆ ಮುಳುವಾಗಲಿದೆ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಎಚ್ಚರಿಕೆ ನೀಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಯಮುತ್ತು ಗೂಂಡಾಗಿರಿ, ದಬ್ಬಾಳಿಕೆ ಜಾಸ್ತಿಯಾಗುತ್ತಿದೆ. ಅವರ ಪಕ್ಷದವರೇ ಅವರ ಈ ಪ್ರವೃತ್ತಿಯನ್ನು ಒಪ್ಪುತ್ತಿಲ್ಲ. ಮುಂದಿನ ದಿನಗಳಲ್ಲಿ ಅದು ಜೆಡಿಎಸ್‌ಗೆ ವ್ಯತಿರಿಕ್ತವಾಗಿ ಪರಿಣಮಿಸಲಿದೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಜಯಮುತ್ತು ಸೇರಿಕೊಂಡು ನನ್ನ ಮೇಲೆ ಮೊಟ್ಟೆ, ಕಲ್ಲು ಹೊಡೆಸಿದರು. 

ಅಂದಿನ ಗಲಭೆಗೆ ಜಯಮುತ್ತುನೇ ಪ್ರೇರಣೆ. ಅವರ ವರ್ತನೆಗೆ ಮಾಹಿತಿ ಕೊರತೆಯೋ, ವಿದ್ಯಾಭ್ಯಾಸದ ಕೊರತೆಯೋ ಅಥವಾ ದೌರ್ಜನ್ಯ ಪ್ರವೃತ್ತಿಯೋ ಗೊತ್ತಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಅದರ ಪರಿಣಾಮ ಮಾತ್ರ ಜೆಡಿಎಸ್‌ ಎದುರಿಸಬೇಕಾಗುತ್ತದೆ. ನಾನು ಏನು ಮಾಡಲು ಹೋದರೂ ಎಚ್‌ಡಿಕೆ, ಜಯಮುತ್ತು ತಡೆಯಲು ಬರ್ತಾರೆ. ಬಮೂಲ್‌ ಸಹಕಾರ ತತ್ವದ ಮೇಲೆ ಕಾರ‍್ಯನಿರ್ವಹಿಸುತ್ತದೆಯೇ ಆಥವಾ ಅವರ ಖಾಸಗಿ ಆಸ್ತಿಯೇ ಎಂದು ಪ್ರಶ್ನಿಸಿದರು. ಪ್ರತಿ ಹಾಲು ಉತ್ಪಾದಕರಿಂದ ಬಮೂಲ್‌ ಒಂದು ಲೀಟರ್‌ ಹಾಲಿಗೆ 25 ಪೈಸೆ ಸಂಗ್ರಹಿಸುತ್ತಿದ್ದು, ಒಂದು ದಿನಕ್ಕೆ ತಾಲೂಕಿನ ಹೈನುಗಾರಿಂದ 4 ಲಕ್ಷ ರು. ಸಂಗ್ರಹಿಸುತ್ತಿದೆ. 

Tap to resize

Latest Videos

ಯಾದಗಿರಿಯಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಬಸ್‌ಯಾತ್ರೆ: ಬಿಜೆಪಿ ವಿರುದ್ಧ ಸಿದ್ದು-ಡಿಕೆಶಿ ವಾಗ್ದಾಳಿ

ವರ್ಷಕ್ಕೆ 15 ಕೋಟಿ ರು. ಸಂಗ್ರಹಿಸುತ್ತಿರುವ ಹಣದಲ್ಲಿ ಅವ್ಯವಹಾರವಾಗಿದೆ. ಇದರ ಕುರಿತು ತನಿಖೆ ನಡೆಸುವಂತೆ ನಾನು ಸಹಕಾರ ಇಲಾಖೆಗೆ ಪತ್ರ ಬರೆದಿದ್ದೇನೆ. ಬಮೂಲ್‌ ಟ್ರಸ್ಟ್‌ ಹಣದಲ್ಲಿ ಉತ್ಸವ ನಡೆಸುವ ಮೂಲಕ ಹೈನುಗಾರರ ಹಣವನ್ನು ಜೆಡಿಎಸ್‌ ಪ್ರಚಾರಕ್ಕೆ ಬಳಸುವ ಹುನ್ನಾರ ನಡೆಸಲಾಗಿದೆ. ರೈತರ ಬೆವರಿನ ಹಣ ಒಂದು ಪಕ್ಷದ ಪ್ರಚಾರಕ್ಕೆ ಬಳಸುವುದು ಬೇಡ ಎಂಬ ಉದ್ದೇಶದಿಂದ ಪತ್ರ ಬರೆದಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಗೌರವ ನೀಡಬೇಕು: ಸರ್ಕಾರ ಲಿಂಗೇಶ್‌ಕುಮಾರ್‌ ಅವರನ್ನು ಬಮೂಲ್‌ ನಿರ್ದೇಶಕರಾಗಿ ನಾಮನಿರ್ದೇಶನ ಮಾಡಿದೆ. ಹೈನುಗಾರರ ಕುರಿತು ಜಯಮುತ್ತುಗೆ ನಿಜವಾದ ಕಾಳಜಿ ಇದ್ದಲ್ಲಿ ಕಚೇರಿಗೆ ಬಂದ ಅವರನ್ನು ಹೂಗುಚ್ಛ ನೀಡಿ ಸ್ವಾಗತಿಸಬೇಕಿತ್ತು. ಇಬ್ಬರು ಸೇರಿ ಜೋಡೆತ್ತುಗಳಂತೆ ತಾಲೂಕಿನಗ ಹೈನುಗಾರರ ಅಭಿವೃದ್ಧಿಗೆ ದುಡಿಯಬೇಕಿತ್ತು. ಆದರೆ, ಜಯಮುತ್ತು ಅವರ ಈ ರೀತಿಯ ವರ್ತನೆ ಪ್ರಜಾಪ್ರಭುತ್ವದ ವ್ಯವಸ್ಥೆಗೆ ಮಾರಕ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಮೂಲ್‌ ಉತ್ಸವ ಯಾರಿಂದಲೂ ತಡೆಯಲು ಆಗುವುದಿಲ್ಲ ಎಂಬ ಜಯಮುತ್ತು ಸವಾಲಿಗೆ ಪ್ರತಿಕ್ರಿಯಿಸಿದ ಸಿಪಿವೈ, ಯಾರೋ ಹುಡುಗ ಹಾಕಿದ ಸವಾಲಿಗೆಲ್ಲ ನಾನು ಪ್ರತಿಕ್ರಿಯಿಸಲ್ಲ. ನಾನು ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದರಿಂದಲೇ ಇಂದು ತಾಲೂಕು ಹೈನೋದ್ಯಮದಲ್ಲಿ ಚೇತರಿಕೆ ಕಂಡಿದೆ. ಇದರಿಂದಾಗಿಯೇ ಇವರೆಲ್ಲ ಇಂದು ರಾಜಕೀಯ ಮಾಡುತ್ತಿದ್ದಾರೆ. ಇಂತಹ ಹುಡುಗರ ಸವಾಲುಗಳಿಗೆಲ್ಲ ನಾನು ಉತ್ತರಿಸಲ್ಲ ಎಂದರು.

ಅಶೋಕ್‌ ಪಕ್ಷದ ಹಿರಿಯ ನಾಯಕರು: ಅಶೋಕ್‌ ನಮ್ಮ ಪಕ್ಷದ ಹಿರಿಯ ನಾಯಕರು. ಹಾಗಾಗಿ ಪಕ್ಷ ಅವರಿಗೆ ಮಂಡ್ಯ ಉಸ್ತುವಾರಿ ಜವಾಬ್ದಾರಿ ಕೊಟ್ಟಿದೆ ಎಂದು ವಿಧಾನ ಪರಿಷತ್‌ ಸದಸ್ಯ ಯೋಗೇಶ್ವರ್‌ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಮಂಡ್ಯದಲ್ಲಿ ಮೂರ್ನಾಲ್ಕು ಕ್ಷೇತ್ರದಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಅಶೋಕ್‌ ಪ್ರಯತ್ನ ಮಾಡುತ್ತಿದ್ದಾರೆ. ಸಚಿವ ಗೋಪಾಲಯ್ಯಗೆ ಎರಡು ಕಡೆ ಉಸ್ತುವಾರಿ ಇತ್ತು. ಹಾಗಾಗಿ ಆರ್‌.ಅಶೋಕ್‌ಗೆ ಮಂಡ್ಯ ಉಸ್ತುವಾರಿ ನೀಡಿದ್ದಾರೆ. ಕೆಲ ಸಣ್ಣ ಪುಟ್ಟ ಭಿನಾಭಿಪ್ರಾಯ ಇರುತ್ತೆ. ಆದರೂ ಹಿರಿಯ ನಾಯಕರಾದ ಅವರ ವಿರುದ್ಧ ಪೋಸ್ಟರ್‌ ಅಂಟಿಸೋದು ತಪಗಪು ಎಂದು ಹೇಳಿದರು.

ರಾಮ​ನ​ಗ​ರ ಕ್ಷೇತ್ರ​ದ​ಲ್ಲೀಗ ಗುದ್ದಲಿಪೂಜೆಗೆ ಪೈಪೋಟಿ: ಒಂದೇ ಕಾಮ​ಗಾ​ರಿಗೆ 3 ಬಾರಿ ಭೂಮಿಪೂಜೆ!

ಮದ್ದೂರಿನಿಂದ ಸ್ಪರ್ಧೆ ಮಾಜಿ ಸಿಎಂ ಕುಮಾರಸ್ವಾಮಿ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಅವರದು ಸ್ವಂತ ಪಕ್ಷ 224 ಕ್ಷೇತ್ರಕ್ಕು ಅವರೇ ಬಿ ಫಾರಂ ಕೊಡುತ್ತಾರೆ. ಅವರು ಎಲ್ಲಿಂದ ಬೇಕಿದ್ದರೂ ಸ್ಪರ್ಧಿಸಬಹುದು. ಅದು ಅವರ ಇಚ್ಚೆಗೆ ಬಿಟ್ಟಿದ್ದು. ನಮ್ಮ ಹಾಗೆ ರಾಷ್ಟ್ರೀಯ ಪಕ್ಷ ಆಗಿದ್ದರೆ ಅವರು ಎಲ್ಲಿ ಹೇಳುತ್ತಾರೋ ಅಲ್ಲಿ ಸ್ಪರ್ಧೆ ಮಾಡಬೇಕಾಗುತ್ತೆ. ಕುಮಾರಸ್ವಾಮಿ ಸ್ವಾಮಿ ಪಕ್ಷ ಉಳಿಸಬೇಕು. ಹಾಗಾಗಿ ಎಲ್ಲೆಲ್ಲಿ ತೊಂದರೆ ಇದೆಯೋ ಅಲ್ಲಲಿ ಅವರೇ ಸ್ಪರ್ಧೆ ಮಾಡಿ ಪಕ್ಷ ಉಳಿಸುತ್ತೇನೆ ಅಂತ ಅವರೇ ಹೇಳಿದ್ದಾರೆ. ಕುಮಾರಸ್ವಾಮಿ ಕೊಕ್ಕರೆ ಇದ್ದಂಗೆ. ಎಲ್ಲೆಲ್ಲಿ ಕೆರೆಯಲ್ಲಿ ಮೀನಿದೆಯೋ ಅಲ್ಲಲ್ಲಿ ಹೋಗ್ತಾ ಇರ್ತಾರೆ. ಆದರೆ ನನಗೆ ಕರ್ಮಭೂಮಿ ಚನ್ನಪಟ್ಟಣ. ನಾನು ಇಲ್ಲಿಂದಲೇ ಸ್ಪರ್ಧಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.

click me!