
ಬೆಂಗಳೂರು(ಆ.29): ಪ್ರತಿಪಕ್ಷ ಬಿಜೆಪಿ ತೊರೆದು ಆಡಳಿತಾರೂಢ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ವದಂತಿ ಹಬ್ಬಿರುವ ಯಶವಂತಪುರದ ಶಾಸಕ ಎಸ್.ಟಿ.ಸೋಮಶೇಖರ್ ಅವರು ತಮ್ಮ ಕ್ಷೇತ್ರದಲ್ಲಿ ರಾಜ್ಯ ಸರ್ಕಾರದ ಪ್ರತಿಷ್ಠಿತ ‘ಗೃಹ ಲಕ್ಷ್ಮಿ’ ಯೋಜನೆ ಅನುಷ್ಠಾನಕ್ಕೆ ಗಂಭೀರ ಹೆಜ್ಜೆ ಹಾಕಿದ್ದಾರೆ.
ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿನ 17 ಗ್ರಾಮ ಪಂಚಾಯಿತಿ ಹಾಗೂ ಬಿಬಿಎಂಪಿ ವಾರ್ಡ್‌ಗಳ ಮುಖಂಡರ ಸಭೆ ನಡೆಸಿದ ಅವರು, ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸುವ ಕುರಿತು ಚರ್ಚೆ ನಡೆಸಿದರು. ಕ್ಷೇತ್ರದಲ್ಲಿ ಈ ಯೋಜನೆಗೆ ಫಲಾನುಭವಿಗಳಾಗುವ ಅರ್ಹತೆ ಹೊಂದಿರುವ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಹೊಂದಿರುವ ಮಹಿಳೆಯರು ಎಷ್ಟು ಮಂದಿ ಇದ್ದಾರೆ ಎಂಬ ಮಾಹಿತಿ ಸಂಗ್ರಹಿಸುವ ಪ್ರಯತ್ನ ಮಾಡಿದರು.
ಸೋಮಶೇಖರ್ ಕಾಂಗ್ರೆಸ್ ಸೇರ್ಪಡೆ ಊಹಾಪೋಹ: ಆರ್.ಅಶೋಕ್
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೊಬ್ಬ ಜವಾಬ್ದಾರಿಯುತ ಶಾಸಕನಾಗಿ ಸರ್ಕಾರದ ಯೋಜನೆಯನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದೇನೆ. ಮುಂದೆ ನನ್ನ ಕ್ಷೇತ್ರದ ಜನರು ಸರ್ಕಾರದ ಯೋಜನೆ ಬಗ್ಗೆ ಕೇಳಿದರೆ ಅದು ಬೇರೆ ಸರ್ಕಾರದ ಯೋಜನೆ ಅಂತಾ ಹೇಳಲಿಕ್ಕೆ ಆಗುತ್ತದೆಯೇ? ಯಾವುದೇ ಸರ್ಕಾರ ಇದ್ದರೂ ಯೋಜನೆ ತಲುಪಿಸುವುದು ಒಬ್ಬ ಜವಾಬ್ದಾರಿಯುತ ಶಾಸಕನಾಗಿ ನನ್ನ ಕರ್ತವ್ಯ. ಈ ಬಗ್ಗೆ ಯಾರು ಏನೇ ಹೇಳಿದರೂ ನಾನು ಚಿಂತಿಸುವುದಿಲ್ಲ ಎಂದು ಖಡಕ್ಕಾಗಿ ಹೇಳಿದರು.
ನಾವು ಬಿಜೆಪಿ ಬಿಡೋದಿಲ್ಲ: ಎಸ್‌ಟಿಎಸ್, ಹೆಬ್ಬಾರ್, ಬೈರತಿ
‘ಕಾಂಗ್ರೆಸ್ ಸೇರ್ಪಡೆ ಕೇವಲ ಮಾಧ್ಯಮಗಳಲ್ಲಿ ಸುದ್ದಿ ಅಷ್ಟೇ’
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ನಾನು ಕಾಂಗ್ರೆಸ್ ಪಕ್ಷಕ್ಕೆ ವಾಪಸ್ ಹೋಗುವ ಬಗ್ಗೆ ಯಾರ ಹತ್ತಿರವೂ ಮಾತನಾಡಿಲ್ಲ. ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದೆ ಅಷ್ಟೇ. ಕಾಂಗ್ರೆಸ್ ಪಕ್ಷಕ್ಕೆ ನನ್ನ ಬೆಂಬಲಿಗರು ಅಷ್ಟೇ ಅಲ್ಲ, ಇತರ ವಿಧಾನಸಭಾ ಕ್ಷೇತ್ರಗಳಿಂದಲೂ ಹೋಗಿದ್ದಾರೆ. ಮುಂಬರುವ ಬಿಬಿಎಂಪಿ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸುವ ಇಚ್ಛೆ ಹೊಂದಿದವರು ಕಾಂಗ್ರೆಸ್ ಪಕ್ಷಕ್ಕೆ ಹೋಗಿದ್ದಾರೆ. ಯಾರು ಶಾಸಕರ ಜತೆ ಇರಬೇಕು ಎಂದುಕೊಂಡಿದ್ದಾರೋ ಅವರು ಉಳಿದಿದ್ದಾರೆ ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜತೆಗೂ ಮಾತುಕತೆ ಮಾಡಿದ್ದೇನೆ. ದುಡುಕಬೇಡ ಎಂಬ ಸಲಹೆ ನೀಡಿದ್ದಾರೆ. ನಾನು ದುಡುಕುತ್ತಿಲ್ಲ. ಪಕ್ಷದ ದೆಹಲಿ ನಾಯಕರು ನನ್ನ ಸಂಪರ್ಕಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.