ರೇಣುಕಾಚಾರ್ಯಗೆ ಬಿಗ್ ರಿಲೀಫ್ ನೀಡಿದ ಕೋರ್ಟ್, ಇತ್ತ ಡಿಕೆಶಿಗೆ ಮತ್ತೆ ಟೆನ್ಷನ್..!

By Suvarna News  |  First Published Jul 1, 2022, 2:24 PM IST

ಬಿಜೆಪಿ ಶಾಸಕ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ‌ ರೇಣುಕಾಚಾರ್ಯ ಮೇಲಿದ್ದ ಒಟ್ಟು ನಾಲ್ಕು ಕೇಸ್​ಗಳು ಖುಲಾಸೆಯಾಗಿದೆ, ಇದರಿಂದ ರೇಣುಕಾಚಾರ್ಯಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ. ಇನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಜಾಮೀನು ಅರ್ಜಿ ವಿಚಾರಣೆಯನ್ನು ಇಡಿ ವಿಶೇಷ ನ್ಯಾಯಾಲಯ ಮುಂದೂಡಿದೆ.


ಬೆಂಗಳೂರು, (ಜುಲೈ.01):  ಬಿಜೆಪಿ ಶಾಸಕ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ‌ ರೇಣುಕಾಚಾರ್ಯ ವಿರುದ್ಧ ಇದ್ದ 4 ಕೇಸ್​ಗಳು ಖುಲಾಸೆಯಾಗಿದೆ. ಮತ್ತೊಂದೆಡೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಜುಲೈ 30ಕ್ಕೆ ಮುಂದೂಡಿದೆ. ಈ ಎರಡು ಸುದ್ದಿಗಳ ವಿವರ ಈ ಕೆಳಗಿನಂತಿದೆ..

ರೇಣುಕಾಚಾರ್ಯ ಮೇಲಿದ್ದ ಕೇಸ್​ಗಳು ಖುಲಾಸೆ.
 ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ‌ ರೇಣುಕಾಚಾರ್ಯ ಮೇಲಿದ್ದ ಒಟ್ಟು ನಾಲ್ಕು ಕೇಸ್​ಗಳು ಖುಲಾಸೆ  ಮಾಡಿ, ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ಕೋರ್ಟ್​​ ತೀರ್ಪು ನೀಡಿದೆ. ಈ ಹಿನ್ನೆಲೆಯಲ್ಲಿ ರೇಣುಕಾಚಾರ್ಯ ನಿರಾಳರಾಗಿದ್ದಾರೆ.

Tap to resize

Latest Videos

 2018 ದಾಖಲಾದ ನಾಲ್ಕು ಪ್ರಕರಣಗಳಲ್ಲಿ ಸಾಕ್ಷ್ಯಾಧಾರದ ಕೊರತೆಯಿಂದಾಗಿ ಕೇಸ್​ ಖುಲಾಸೆಯಾಗಿದೆ. ಕೋರ್ಟ್​ನಲ್ಲಿ ಕೆಲ ಅಧಿಕಾರಿಗಳೇ ಉಲ್ಟಾ ಹೇಳಿಕೆ ನೀಡಿದ್ದು, ಇನ್ನೂ ಕೆಲ ಪ್ರಕರಣಗಳಲ್ಲಿ ಸಾಕ್ಷ್ಯಾಧಾರದ ಕೊರೆತೆ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲದ ನ್ಯಾಯ ಮೂರ್ತಿ ಜೆ.ಪ್ರೀತ್ ಪ್ರಕರಣಗಳನ್ನ ಖುಲಾಸೆ ಗೊಳಿಸಿ ಆದೇಶ ಹೊರಡಿಸಿದರು.

ಇ.ಡಿ. ಮೂಲಕ ನನಗೆ ಕೊಡಬಾರದ ಕಿರುಕುಳ: ಬಿಜೆಪಿ ವಿರುದ್ಧ ಡಿಕೆಶಿ ಕಿಡಿ

 2018 ಡಿಸೆಂಬರ್ 10ರಂದು ಅಕ್ರಮ ಮರಳು ಸಾಗಾಣಿಕೆ ಅಡ್ಡೆ ಮೇಲೆ ಪೊಲೀಸರ ದಾಳಿ ಮಾಡಿದ್ದು, ಪೊಲೀಸರ ಕಾರ್ಯಕ್ಕೆ ಅಡ್ಡಿ ಪಡಿಸಿದ ಆರೋಪವನ್ನ ರೇಣುಕಾಚಾರ್ಯ ಎದುರಿಸುತ್ತಿದ್ದರು.

ಮೇ 13, 2018 ವಿಧಾನಸಭೆ ಚುನಾವಣೆ ವೇಳೆ ಮುಷ್ಠಿ ಅಕ್ಕಿ ಅಭಿಯಾನದ ವೇಳೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿತ್ತು. ಅಕ್ರಮವಾಗಿ ಮರಳು ತುಂಬಿಕೊಂಡು ಹೋಗುವಂತೆ ಜನರಿಗೆ ಕರೆ ನೀಡಿದ್ದ ಆರೋಪವನ್ನು  ರೇಣುಕಾಚಾರ್ಯ ಎದುರಿಸುತ್ತಿದ್ದರು. ಒಟ್ಟು ನಾಲ್ಕು ಪ್ರಕರಣಗಳಲ್ಲಿ ರೇಣುಕಾಚಾರ್ಯ ಖುಲಾಸೆಯಾಗಿದೆ.

ಡಿಕೆ ಶಿವಕುಮಾರ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
ನವದೆಹಲಿ, (ಜುಲೈ.01): ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ (Money Laundering Case) ಡಿಕೆ ಶಿವಕುಮಾರ್ ಜಾಮೀನು ಅರ್ಜಿ ವಿಚಾರಣೆಯನ್ನು ಇಡಿ ವಿಶೇಷ ನ್ಯಾಯಾಲಯ ಜುಲೈ 30ಕ್ಕೆ ಮುಂದೂಡಿದೆ.

ಜಾಮೀನಿಗೆ ಆಕ್ಷೇಪ ಸಲ್ಲಿಸಲು ಇಡಿ (ಜಾರಿ ನಿರ್ದೇಶನಾಲಯ) ಸಮಯಾವಕಾಶ ಕೇಳಿತ್ತು. ಜುಲೈ 30ಕ್ಕೆ ಆಕ್ಷೇಪಣೆ ಸಲ್ಲಿಸಲು ಇಡಿ ಕೋರ್ಟ್​ (ED Court) ಅನುಮತಿ ನೀಡಿದೆ.

ದೆಹಲಿಯ ಇಡಿ ವಿಶೇಷ ಕೋರ್ಟ್​​ನಲ್ಲಿ ಡಿ.ಕೆ. ಶಿವಕುಮಾರ್​ ವಿಚಾರಣೆ ನಡೆದಿದ್ದು, ನ್ಯಾಯಮೂರ್ತಿ ವಿಕಾಸ್ ಧುಲ್ ಪೀಠದಿಂದ ವಿಚಾರಣೆ ನಡೆಸಲಾಗಿದೆ. ಹೈಕೋರ್ಟ್ ಡಿಕೆಶಿಗೆ ಜಾಮೀನು ನೀಡಿದ ಬಗ್ಗೆ ವಕೀಲರು ಮನವರಿಕೆ ಮಾಡಿಕೊಟ್ಟಿದ್ದು, ಇಡಿ ಪರ ವಕೀಲರು 20 ನಿಮಿಷ ವಿಚಾರಣೆ ಮುಂದೂಡುವಂತೆ ಮನವಿ ಮಾಡಿದರು. ಆದರೆ, ವಿಚಾರಣೆ ಮುಂದೂಡಲು ಡಿಕೆಶಿ ಪರ ವಕೀಲರಿಂದ ಆಕ್ಷೇಪ ವ್ಯಕ್ತವಾಯಿತು. ಡಿಕೆಶಿ ಜಾಮೀನು ನವೀಕರಿಸಲು ಇಡಿ ವಕೀಲರು ವಿರೋಧಿಸಿದರು.

ಡಿಕೆಶಿಗೆ ಹಿಂದೆ ಜಾಮೀನು​ ನೀಡಿರುವುದು ದೆಹಲಿ ಹೈಕೋರ್ಟ್, ಇಡಿ ವಿಶೇಷ ನ್ಯಾಯಾಲಯದಲ್ಲಿ ಅಲ್ಲ. ಈ ನ್ಯಾಯಾಲಯ ಜಾಮೀನನ್ನು ನಿರಾಕರಿಸಬೇಕು ಎಂದು ಇಡಿ ಪರ ವಕೀಲರು ಹೇಳಿದರು. ಇಡಿ ವಕೀಲರ ವಾದಕ್ಕೆ ಡಿಕೆಶಿ ಪರ ವಕೀಲರ ಆಕ್ಷೇಪ ವ್ಯಕ್ತವಾಯಿತು. ಇದೇ ಕೋರ್ಟ್ ಕಾರ್ತಿ ಚಿದಂಬರಂಗೆ ಜಾಮೀನು ನೀಡಿದೆ. ಹಾಗಾಗಿ, ಡಿಕೆಶಿಗೂ ಜಾಮೀನು ನೀಡಬಹುದು ಎಂದು ಡಿಕೆ ಶಿವಕುಮಾರ್ ಪರ ವಕೀಲರು ವಾದ ಮಂಡಿಸಿದರು.

ವಾದ-ಪ್ರತಿವಾದ ಆಲಿಸಿದ ಇ.ಡಿ ನ್ಯಾಯಾಲಯವು ಜಾಮೀನು ಅರ್ಜಿ ವಿಚಾರಣೆಯನ್ನು ಜುಲೈ 30ಕ್ಕೆ ಮುಂದೂಡಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಇ.ಡಿ.ಅಧಿಕಾರಿಗಳು ಇತ್ತೀಚೆಗಷ್ಟೇ ಜಾರ್ಜ್​ಶೀಟ್‌ ಸಲ್ಲಿಸಿದ್ದು, ಅದರಂತೆ ಡಿ.ಕೆ. ಶಿವಕುಮಾರ್‌ ಸೇರಿ ಐವರಿಗೆ ನ್ಯಾಯಾಲಯವು ಸಮನ್ಸ್‌ ಜಾರಿ ಮಾಡಿತ್ತು. ಈ ಸಂಬಂಧ ದೆಹಲಿಯ ರೋಸ್‌ ಅವೆನ್ಯೂ ಕೋರ್ಚ್‌ನಲ್ಲಿ ವಿಚಾರಣೆ ನಡೆದಿದೆ. 2018ರಲ್ಲಿ ದೆಹಲಿಯ ಸಪ್ಧರ್‌ಜಂಗ್‌ ಫ್ಲಾಟ್‌ನಲ್ಲಿ ಸಿಕ್ಕ ಹಣಕ್ಕೆ ಸಂಬಂಧಿಸಿ ಇ.ಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಈ ಸಂಬಂಧ 2019ರಲ್ಲಿ ಡಿ.ಕೆ. ಶಿವಕುಮಾರ್‌ ಅವರನ್ನು ಬಂಧಿಸಲಾಗಿತ್ತು.

ಏನಿದು ಪ್ರಕರಣ?:
2019ರಲ್ಲಿ ಅಕ್ರಮ ಹಣ ವರ್ಗಾವಣೆ ಕೇಸ್‌ನಲ್ಲಿ ಐಟಿ ಅಧಿಕಾರಿಗಳು ಡಿ.ಕೆ. ಶಿವಕುಮಾರ್ ಮನೆ ಮೇಲೆ ದಾಳಿ ಮಾಡಿದ್ದರು. ಈ ಸಂಬಂಧ ಎರಡೂವರೆ ವರ್ಷದ ಬಳಿಕೆ ಆರೋಪ ಪಟ್ಟಿ ತಯಾರಿಸಿದ ಇಡಿ ಅಧಿಕಾರಿಗಳು ದೆಹಲಿಯ ವಿಶೇಷ ನ್ಯಾಯಾಲಯ ರೋಸ್‌ ಅವೆನ್ಯೂ ಕೋರ್ಟ್‌ಗೆ ಆರೋಪ ಪಟ್ಟಿಯನ್ನು ಸಲ್ಲಿಸಿದ್ದಾರೆ. 2019ರಲ್ಲಿ ಡಿಕೆಶಿ ಹಾಗೂ ಆಪ್ತರ ನಿವಾಸಗಳ ಮೇಲೆ ಐಟಿ ದಾಳಿ ನಡೆದಿತ್ತು. ದಾಳಿ ವೇಳೆ 8 ಕೋಟಿ ರೂ. ನಗದು ಪತ್ತೆಯಾಗಿತ್ತು. ಬಳಿಕ ಡಿಕೆಶಿ ವಿರುದ್ಧ ಪ್ರಕರಣ ಇಡಿಗೆ ವರ್ಗಾವಣೆಗೊಂಡಿತ್ತು. ಇಡಿ ಅಧಿಕಾರಿಗಳು ಡಿಕೆಶಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದರು.

ಡಿ.ಕೆ ಶಿವಕುಮಾರ್ 800 ಬೇನಾಮಿ ಆಸ್ತಿ ಮಾಡಿದ್ದಾರೆ‌. ಕುಟುಂಬಸ್ಥರ ಹೆಸರಿನಲ್ಲಿ 200 ಕೋಟಿ ರೂ. ಠೇವಣಿ ಇದೆ. 20ಕ್ಕೂ ಅಧಿಕ ಬ್ಯಾಂಕ್, 317ಕ್ಕೂ ಹೆಚ್ಚು ಬ್ಯಾಂಕ್ ಅಕೌಂಟ್ ಮೂಲಕ ಅಕ್ರಮ ಹಣ ವರ್ಗಾವಣೆ.‌ ಮಗಳ ಹೆಸರಿನಲ್ಲಿ 108 ಕೋಟಿ ರೂ. ಅಕ್ರಮ ವ್ಯವಹಾರ ನಡೆಸಲಾಗಿದೆ. ಡಿಕೆಶಿ ಪುತ್ರಿಗೆ 48 ಕೋಟಿ ಸಾಲ‌ ಇದೆ, ಆದರೆ ಸಾಲದ ಮೂಲ ತಿಳಿಸಿಲ್ಲ ಎಂದು ಆರೋಪಿಸಲಾಗಿತ್ತು.

ದೆಹಲಿ ನಿವಾಸದ 8.59 ಕೋಟಿ ಹಣಕ್ಕೆ ಲೆಕ್ಕ ಕೊಟ್ಟಿಲ್ಲ. ಡಿ.ಕೆ ಶಿವಕುಮಾರ್ ಹೆಸರಲ್ಲಿ 24, ಸಂಸದ ಡಿಕೆ ಸುರೇಶ್ ಹೆಸರಲ್ಲಿ 27 , ತಾಯಿ ಹೆಸರಲ್ಲಿ 38 ಆಸ್ತಿಗಳಿವೆ. ಡಿಕೆಶಿ ಕುಟುಂಬದ ಬಳಿ ಒಟ್ಟು 300 ಆಸ್ತಿಗಳಿವೆ. ಡಿ.ಕೆ ಶಿವಕುಮಾರ್ ವ್ಯವಹಾರದಲ್ಲಿ ಅಕ್ರಮ ಆಸ್ತಿ ಗಳಿಕೆ ಮತ್ತು ಹವಾಲ ದಂಧೆ ನಡೆದಿರುವ ಅನುಮಾನಗಳಿವೆ ಎಂದು ಇಡಿ ಅಧಿಕಾರಿಗಳು ಡಿಕೆ ಶಿವಕುಮಾರ್ ಅವರ ಮೇಲೆ ಆರೋಪ ಮಾಡಿದ್ದರು.

click me!