ಲಿಂಗಾಯತರನ್ನು ಕೆಣಕದಿರಿ, ಒಕ್ಕಲಿಗರ ಜತೆ ಚೆನ್ನಾಗಿರಿ : ಸಿದ್ದು, ಡಿಕೆಶಿಗೆ ಕಾಂಗ್ರೆಸ್‌ ಮತೋಪದೇಶ!

By Kannadaprabha NewsFirst Published Jul 1, 2022, 6:58 AM IST
Highlights
  • ವಿಧಾನಸಭೆ ಚುನಾವಣೆಗೆ ನಡೆಸಿದ ಆಂತರಿಕ ಸಮೀಕ್ಷೆಯಲ್ಲಿ ಹಲವು ಸಂದೇಶ
  • ಅದನ್ನೇ ಆಧರಿಸಿ ರಾಜ್ಯ ನಾಯಕತ್ವಕ್ಕೆ ರಾಹುಲ್‌ರಿಂದಲೂ ಇದೇ ಸೂಚನೆ
  • ಯಡಿಯೂರಪ್ಪ ಮುಂದಿನ ನಡೆ ಬಗ್ಗೆ ನಿಗಾ ಇಡಿ
  • ಒಕ್ಕಲಿಗ ನಾಯಕರಿಂದ ಟೀಕೆ ಬಂದರೆ 2ನೇ ಹಂತದ ನಾಯಕರಿಂದ ಉತ್ತರ ಕೊಡಿಸಿ: ರಾಹುಲ್‌ ಸಲಹೆ

ವರದಿ: ಎಸ್‌.ಗಿರೀಶ್‌ ಬಾಬು

ಬೆಂಗಳೂರು (ಜು.1):‘ಲಿಂಗಾಯತ ಸಮುದಾಯವನ್ನು ಕೆಣಕಬೇಡಿ. ಅನ್ಯ ಪಕ್ಷದ ಒಕ್ಕಲಿಗ ನಾಯಕತ್ವದೊಂದಿಗೆ ಮೇಲಾಟ ನಡೆಸಬೇಡಿ. ಅಲ್ಪಸಂಖ್ಯಾತ ಸಮುದಾಯ ಎಸ್‌ಡಿಪಿಐನತ್ತ ವಾಲದಂತೆ ತಂತ್ರ ರೂಪಿಸಿ, ದಲಿತ ಹಾಗೂ ಹಿಂದುಳಿದ ಸಮುದಾಯ ಕೈ ಜಾರದಂತೆ ಎಚ್ಚರ ವಹಿಸಿ.’

Latest Videos

ಮುಂಬರುವ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕಾಗಿ ಎಸ್‌ಡಬ್ಲ್ಯುಓಟಿ (ಸಾಮರ್ಥ್ಯ, ದೌರ್ಬಲ್ಯ, ಅವಕಾಶಗಳು ಹಾಗೂ ಆತಂಕಗಳು) ವರದಿ ರೂಪಿಸಿರುವ ಕಾಂಗ್ರೆಸ್‌ ರಾಜಕೀಯ ತಂತ್ರಜ್ಞ ಸುನೀಲ್‌ ಕನ್ನಗೋಲು ಅವರ ತಂಡ, ಕಾಂಗ್ರೆಸ್‌ ನಾಯಕತ್ವ ರಾಜ್ಯದ ಪ್ರಮುಖ ಸಮುದಾಯಗಳ ಜೊತೆ ಹೇಗೆ ವರ್ತಿಸಬೇಕು ಎಂದು ಸಲ್ಲಿಸಿರುವ ವರದಿಯಲ್ಲಿ ನೀಡಿರುವ ಸೂಚನೆಗಳಿವು.

ಕಾಂಗ್ರೆಸ್‌ ಹೈಕಮಾಂಡ್‌ಗೆ ಸಲ್ಲಿಸಿರುವ ಈ ಎಸ್‌ಡಬ್ಲ್ಯುಓಟಿ ವರದಿಯಲ್ಲಿ ನಾಡಿನ ಪ್ರಮುಖ ಸಮುದಾಯಗಳಾದ ಲಿಂಗಾಯತ, ಒಕ್ಕಲಿಗ, ಅಲ್ಪಸಂಖ್ಯಾತ, ದಲಿತ ಹಾಗೂ ಹಿಂದುಳಿದ ವರ್ಗಗಳನ್ನು ಕಾಂಗ್ರೆಸ್‌ ನಾಯಕತ್ವ ಹೇಗೆ ನಡೆಸಿಕೊಳ್ಳುತ್ತಿದೆ? ಮಾಡುತ್ತಿರುವ ತಪ್ಪುಗಳೇನು? ಯಾವ್ಯಾವ ಸುಧಾರಣೆ ಮಾಡಿಕೊಳ್ಳಬೇಕು ಮತ್ತು ಚುನಾವಣೆ ದೃಷ್ಟಿಯಿಂದ ಈ ಸಮುದಾಯಗಳ ಬಗ್ಗೆ ಕಾಂಗ್ರೆಸ್‌ ಯಾವ ರೀತಿ ವರ್ತಿಸಬೇಕು ಎಂದು ಕೂಲಂಕಷವಾಗಿ ವರದಿ ನೀಡಲಾಗಿದೆ.

ಸಿದ್ದರಾಮೋತ್ಸವ ನಾನಲ್ಲ ಮಾಡ್ತಿರೋದು: ಸಿದ್ದು

ಈ ವರದಿಯನ್ನು ಮುಂದಿಟ್ಟುಕೊಂಡು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರೊಂದಿಗೆ ಇತ್ತೀಚೆಗೆ ದೆಹಲಿಯಲ್ಲಿ ವಿಸ್ತೃತ ಚರ್ಚೆ ನಡೆಸಿದ ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ಅವರು, ಕೆಲ ಸ್ಪಷ್ಟಸೂಚನೆಗಳನ್ನು ನೀಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಅದು-ಲಿಂಗಾಯತ ಸಮುದಾಯವನ್ನು ಕೆಣಕುವ ವಿಚಾರಗಳನ್ನು ಎತ್ತಬಾರದು. ವಿಶೇಷವಾಗಿ ಧರ್ಮ ವಿಭಜನೆ ವಿಚಾರದಲ್ಲಿ ಮುಗುಂ ಆಗಿ ಉಳಿಯಬೇಕು. ಬಿಜೆಪಿಯ ವರಿಷ್ಠ ಯಡಿಯೂರಪ್ಪ ಅವರ ಮುಂದಿನ ನಡೆಯನ್ನು ಸೂಕ್ಷ್ಮವಾಗಿ ಗಮನಿಸಬೇಕು. ಬಿಜೆಪಿ ಯಡಿಯೂರಪ್ಪ ಅವರನ್ನು ಕೆಟ್ಟದಾಗಿ ನಡೆಸಿಕೊಂಡರೆ ಆಗ ದೊಡ್ಡ ಪ್ರಮಾಣದಲ್ಲಿ ಲಿಂಗಾಯತ ಸಮುದಾಯ ಬಿಜೆಪಿಯಿಂದ ವಿಮುಖವಾಗಬಹುದು. ಅದನ್ನು ಪಕ್ಷ ಬಳಸಿಕೊಳ್ಳಲು ಅಗತ್ಯ ವೇದಿಕೆ ಸಿದ್ಧಪಡಿಸಬೇಕು.

ಹಳೆ ಮೈಸೂರು ಭಾಗದಲ್ಲಿ ದುರ್ಬಲಗೊಳ್ಳುತ್ತಿರುವ ಜೆಡಿಎಸ್‌ನಿಂದ ಒಕ್ಕಲಿಗ ಸಮುದಾಯ ವಿಮುಖವಾಗುವ ಲಕ್ಷಣಗಳಿವೆ. ಈ ಸಮುದಾಯ ಬಿಜೆಪಿಯತ್ತ ಸಾಗದಂತೆ ಎಚ್ಚರ ವಹಿಸಬೇಕು. ಇದಕ್ಕೆ ಮುಖ್ಯವಾಗಿ ಅನ್ಯ ಪಕ್ಷದ ಒಕ್ಕಲಿಗ ನಾಯಕತ್ವವನ್ನು (ಜೆಡಿಎಸ್‌ ವರಿಷ್ಠ ರಾದ ಎಚ್‌.ಡಿ. ದೇವೇಗೌಡ ಹಾಗೂ ಕುಮಾರಸ್ವಾಮಿ) ಕೆಣಕುವಂತಹ ಹೇಳಿಕೆಯನ್ನು ಪ್ರಮುಖ ನಾಯಕರಾದ ಸಿದ್ದರಾಮಯ್ಯ ಹಾಗೂ ಶಿವಕುಮಾರ್‌ ನೀಡಬಾರದು.

ಒಂದ ವೇಳೆ ಅನ್ಯ ಪಕ್ಷದ ಒಕ್ಕಲಿಗ ನಾಯಕರು ಕಾಂಗ್ರೆಸ್‌ ನಾಯಕರ ವಿರುದ್ಧ ಟೀಕಾ ಪ್ರಹಾರ ಅಥವಾ ಕೆಣಕುವ ಹೇಳಿಕೆ ನೀಡಿದರೆ ಅದಕ್ಕೆ ಪಕ್ಷದ ಎರಡನೇ ಹಂತದ ನಾಯಕರಿಂದ ಉತ್ತರ ಕೊಡಿಸಬೇಕೇ ಹೊರತು ಪಕ್ಷದ ಮೊದಲ ಹಂತದ ನಾಯಕರು ಮೇಲಾಟಕ್ಕೆ ನಿಲ್ಲಬಾರದು.

ಕಾಂಗ್ರೆಸ್‌ ಈಗ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದೆ: ಲಕ್ಷ್ಮೀ ಹೆಬ್ಬಾಳಕರ

ಎಸ್‌ಡಿಪಿಐ ಸವಾಲಿಗೆ ಕಾರ್ಯತಂತ್ರ ಇರಲಿ: ಅಲ್ಪಸಂಖ್ಯಾತ ಸಮುದಾಯ ಕಾಂಗ್ರೆಸ್‌ ಪರ ನಿಂತಿದ್ದರೂ, ಕರಾವಳಿ ಸೇರಿದಂತೆ ರಾಜ್ಯದ ಕೆಲಭಾಗಗಳಲ್ಲಿ ಎಸ್‌ಡಿಪಿಐನಂತಹ ಕೆಲ ಸಂಘಟನೆಗಳು ಸಮುದಾಯವನ್ನು ಸೆಳೆಯುವ ಲಕ್ಷಣಗಳಿವೆ. ಹೀಗಾಗಿ ಸ್ಥಳೀಯ ನಾಯಕರು ಸವಾಲನ್ನು ಎದುರಿಸುವಂತಹ ಕಾರ್ಯತಂತ್ರ ರೂಪಿಸಬೇಕು.

ದಲಿತ ನಾಯಕರನ್ನು ಚೆನ್ನಾಗಿ ನಡೆಸಿಕೊಳ್ಳಿ: ದಲಿತ ಸಮುದಾಯದ ಜತೆ ಕಾಂಗ್ರೆಸ್‌ ಇದೆ ಎಂಬ ಸಂದೇಶ ಸ್ಪಷ್ಟವಾಗಿ ರವಾನಿಸಬೇಕು. ಈ ಸಮುದಾಯದ ನಾಯಕರನ್ನು ಪಕ್ಷ ಉತ್ತಮವಾಗಿ ನಡೆಸಿಕೊಳ್ಳಬೇಕು. ದಲಿತ ಸಮುದಾಯದ ಕೆಲ ಜಾತಿಗಳು ಬಿಜೆಪಿಯತ್ತ ತೋರುತ್ತಿರುವ ಒಲವು ಆತಂಕಕಾರಿಯಾಗಿದೆ. ಬಿಜೆಪಿ ಹೇಗೆ ದಲಿತ ವಿರೋಧಿ ಎಂಬುದನ್ನು ಸಮರ್ಪಕವಾಗಿ ಮನದಟ್ಟು ಮಾಡಿಕೊಡುವ ಮೂಲಕ ಈ ಜಾತಿ ಸಮುದಾಯಗಳನ್ನು ಸೆಳೆಯಬೇಕು.

ಸಣ್ಣಪುಟ್ಟಜಾತಿಗಳ ಬಗ್ಗೆ ಇರಲಿ ಎಚ್ಚರ: ಹಿಂದುಳಿದ ವರ್ಗದ ಕೆಲ ಪ್ರಮುಖ ಜಾತಿಗಳು ಕಾಂಗ್ರೆಸ್‌ ಪರ ಗಟ್ಟಿಯಾಗಿ ನಿಂತಿದ್ದರೂ, ಸಣ್ಣಪುಟ್ಟಜಾತಿಗಳು ಆತಂಕಗಳನ್ನು ಹೊಂದಿವೆ. ಈ ಸಣ್ಣಪುಟ್ಟಜಾತಿಗಳು ಬಿಜೆಪಿಯತ್ತ ಒಲವು ತೋರುತ್ತಿರುವ ಲಕ್ಷಣಗಳಿವೆ. ಇದನ್ನು ತಡೆಯಬೇಕು. ಸಮಗ್ರ ಹಿಂದುಳಿದ ವರ್ಗಗಳ ಪರ ನಿಲುವನ್ನು ಪಕ್ಷ ಪ್ರದರ್ಶಿಸಬೇಕು ಎಂದು ರಾಹುಲ್‌ಗಾಂಧಿ ಅವರು ಸೂಚನೆ ನೀಡಿದರು ಎನ್ನುತ್ತವೆ ಮೂಲಗಳು.

click me!