ಬರಗಾಲದ ಜತೆಗೆ ರೈತರ ಪಂಪ್‌ಸೆಟ್‌ಗೆ ಅಸಮರ್ಪಕ ವಿದ್ಯುತ್‌ನಿಂದಾಗಿ ರೈತರ ಸಂಕಷ್ಟದ ಸ್ಥಿತಿಯಲ್ಲಿ ಶಾಸಕನಾಗಿ ಸ್ಪಂದಿಸಬೇಕಾಗಿದ್ದು ಜವಾಬ್ದಾರಿ ಹಾಗೂ ಕರ್ತವ್ಯ ಎಂದರಿತು ತೆಲಂಗಾಣದ ಪ್ರವಾಸ ಮೊಟಕುಗೊಳಿಸಿ ಧಾವಿಸಿ ಹೋರಾಟಕ್ಕೆ ಇಳಿದಿರುವುದಾಗಿ ತಿಳಿಸಿದ ಶಾಸಕ ಬಿ.ವೈ. ವಿಜಯೇಂದ್ರ
ಶಿಕಾರಿಪುರ(ಆ.27): ರಾಜ್ಯ, ರಾಷ್ಟ್ರಮಟ್ಟದ ರೈತ ನಾಯಕನಿಗೆ ಜನ್ಮ ನೀಡಿದ ತಾಲೂಕು ಎಂಬ ಹೆಗ್ಗಳಿಕೆಯನ್ನು ಶಿಕಾರಿಪುರ ಹೊಂದಿದ್ದು, ಇದೀಗ ಭ್ರಷ್ಟ, ದುಷ್ಟ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ನಿಲುವನ್ನು ಬದಲಾಯಿಸಿಕೊಳ್ಳದಿದ್ದಲ್ಲಿ ಸರ್ಕಾರದ ವಿರುದ್ಧದ ಹೋರಾಟದ ಕಿಚ್ಚು ತಾಲೂಕಿನ ಮೂಲಕ ರಾಜ್ಯಕ್ಕೆ ವ್ಯಾಪಿಸಲಿದೆ ಎಂದು ಕ್ಷೇತ್ರದ ಶಾಸಕ ಬಿ.ವೈ. ವಿಜಯೇಂದ್ರ ಎಚ್ಚರಿಸಿದರು.
ಶನಿವಾರ ಪಟ್ಟಣದ ತಾಲೂಕು ಕಚೇರಿ ಮುಂಭಾಗ ತಾಲೂಕು ಬಿಜೆಪಿ ವತಿಯಿಂದ ರೈತರ ಪಂಪ್‌ಸೆಟ್‌ಗೆ ಸಮರ್ಪಕ ವಿದ್ಯುತ್, ಮಧ್ಯಂತರ ವಿಮೆ ಪರಿಹಾರ, ಜತೆಗೆ ಬರಪೀಡಿತ ತಾಲೂಕು ಎಂದು ಘೋಷಿಸುವಂತೆ ಆಗ್ರಹಿಸಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
NAMO BRIGADE 2.0: ನಾಳೆಯಿಂದ ಶಿವಮೊಗ್ಗದಲ್ಲಿ 3ದಿನ ಚಕ್ರವರ್ತಿ ಸೂಲಿಬೆಲೆ ಉಪನ್ಯಾಸ ಕಾರ್ಯಕ್ರಮ
ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ರೈತ ವಿರೋಧಿ ಸರ್ಕಾರ ಪುನಃ ಅಸ್ತಿತ್ವಗಳಿಸಿ 3 ತಿಂಗಳಾಗಿದ್ದು, ಕುಂಭಕರ್ಣನ ನಿದ್ರೆಯಲ್ಲಿದೆ. ರಾಜ್ಯದಲ್ಲಿ ದಟ್ಟ ಬರಗಾಲ ಆವರಿಸಿದ್ದು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಬರಗಾಲ ನಿಶ್ಚಿತ ಎಂಬುದು ಪುನಃ ಸಾಬೀತಾಗಿದೆ ಎಂದು ತಿಳಿಸಿದರು.
ಬರಗಾಲದ ಜತೆಗೆ ರೈತರ ಪಂಪ್‌ಸೆಟ್‌ಗೆ ಅಸಮರ್ಪಕ ವಿದ್ಯುತ್‌ನಿಂದಾಗಿ ರೈತರ ಸಂಕಷ್ಟದ ಸ್ಥಿತಿಯಲ್ಲಿ ಶಾಸಕನಾಗಿ ಸ್ಪಂದಿಸಬೇಕಾಗಿದ್ದು ಜವಾಬ್ದಾರಿ ಹಾಗೂ ಕರ್ತವ್ಯ ಎಂದರಿತು ತೆಲಂಗಾಣದ ಪ್ರವಾಸ ಮೊಟಕುಗೊಳಿಸಿ ಧಾವಿಸಿ ಹೋರಾಟಕ್ಕೆ ಇಳಿದಿರುವುದಾಗಿ ತಿಳಿಸಿದರು. ತಾಲೂಕಿನಲ್ಲಿ ಮಳೆ ಶೇ.70-80 ಕೊರತೆಯಾಗಿದ್ದು, 25 ಸಾವಿರ ಹೆಕ್ಟೇರ್ ಮೆಕ್ಕೆಜೋಳ ಭಿತ್ತನೆಯಲ್ಲಿ ಅರ್ಧಕ್ಕಿಂತ ಹೆಚ್ಚು ಪೈರು ಹಾಳಾಗಿದೆ ಅಂಜನಾಪುರ ಹಾಗೂ ಅಂಬ್ಲಿಗೊಳ್ಳ ಜಲಾಶಯದ ಕೆಳಭಾಗದಲ್ಲಿನ ಭತ್ತ ಬೆಳೆ ಹೊರತುಪಡಿಸಿ ಹೆಚ್ಚಿನ ಬೆಳೆ ಹಾಳಾಗುತ್ತಿದೆ ಬೆಳೆ ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದು, ವಿದ್ಯುತ್ ಕಣ್ಣಾಮುಚ್ಚಾಲೆ ರೈತರನ್ನು ಕಂಗೆಡಿಸಿದೆ. ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಅವಧಿಯಲ್ಲಿನ ಏತ ನೀರಾವರಿ ಮೂಲಕ ನೀರು ಹಾಯಿಸಲು ವಿದ್ಯುತ್ ಸಮಸ್ಯೆಯಾಗಿದೆ ಎಂದು ಆರೋಪಿಸಿದರು.
ಪುಕ್ಕಟೆ ವಿದ್ಯುತ್‌ನಿಂದ ರೈತರಿಗೆ ಅನ್ಯಾಯವಾಗುತ್ತಿದೆ. ರೈತರಿಗೆ ಭಿಕ್ಷೆ ಬೇಕಿಲ್ಲ, ನಿತ್ಯ 7-8 ಗಂಟೆ ವಿದ್ಯುತ್ ನೀಡುವ ಜತೆಗೆ ಬೆಳೆವಿಮೆ ಪಾವತಿಸಿದ ರೈತರಿಗೆ ಮಧ್ಯಂತರ ಪರಿಹಾರ ಕೂಡಲೇ ಬಿಡುಗಡೆಗೊಳಿಸಬೇಕು. ರೈತರ ಬಗ್ಗೆ ಕಿಂಚಿತ್ತು ಯೋಚಿಸದ ಸರ್ಕಾರವನ್ನು ಕುಂಭಕರ್ಣ ನಿದ್ರೆಯಿಂದ ಎಚ್ಚರಿಸಬೇಕಾಗಿದೆ. ಗ್ಯಾರಂಟಿ ಅನುಷ್ಠಾನಕ್ಕಾಗಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಪ್ರತಿ ರೈತರಿಗೆ ರಾಜ್ಯ ಸರ್ಕಾರದ ರು. 4 ಸಾವಿರ ಹಣವನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದರು.
ಆಪರೇಷನ್ ಹಸ್ತದಲ್ಲಿ ಹೆಚ್ಚು ಆಸಕ್ತಿವಹಿಸಿರುವ ಸರ್ಕಾರ ರೈತರ ಬಗ್ಗೆ ಯೋಚಿಸುತ್ತಿಲ್ಲ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಎಲ್ಲ ವಿರೋಧಿ ಶಕ್ತಿಗಳು ಒಟ್ಟಾಗುತ್ತಿದ್ದು, ಜಾತಿ ವಿಷಬೀಜ ಬಿತ್ತಿ ಮತದಾರರನ್ನು ಅಡ್ಡದಾರಿ ಮೂಲಕ ಒಡೆಯುವ ಪ್ರಯತ್ನ ನಡೆಯುತ್ತಿದೆ. ಕಾಂಗ್ರೆಸ್‌ಗೆ ಎಲ್ಲ ಪುಡಾರಿಗಳನ್ನು ಸೇರಿಸಿಕೊಂಡು ಕಮೀಷನ್ ಹೊಡೆಯುವ ಸಂಚು ರೂಪಿಸಲಾಗುತ್ತಿದೆ. ಚುನಾವಣೆಯಲ್ಲಿ 50 ಸಾವಿರ ಅಧಿಕ ಲೀಡ್ ಪಡೆಯುವುದು ನಿಶ್ಚಿತ ಎಂದು ತಿಳಿಸಿದರು.
ಯಾವ ಕಾರಣಕ್ಕೂ ಬಿಜೆಪಿ ಶಾಸಕರು ಕಾಂಗ್ರೆಸ್‌ಗೆ ಹೋಗಲ್ಲ: ಈಶ್ವರಪ್ಪ
ರಾಜ್ಯ ಉಗ್ರಾಣ ನಿಗಮದ ಮಾಜಿ ಅಧ್ಯಕ್ಷ ಎಚ್.ಟಿ. ಬಳಿಗಾರ್ ಮಾತನಾಡಿ, ಆಪರೇಷನ್ ಹಸ್ತದಲ್ಲಿ ಸಿದ್ದರಾಮಯ್ಯ ಹೆಚ್ಚು ಬ್ಯುಸಿ ಆಗಿದ್ದು, ವೈಜ್ಞಾನಿಕ ತಳಹದಿಯಲ್ಲಿ ರೂಪಿಸದ 5 ಗ್ಯಾರಂಟಿಯಿಂದ ರಾಜ್ಯದ ಆರ್ಥಿಕ ಸ್ಥಿತಿ ದಿವಾಳಿಯಾಗಲಿದೆ. ಸಿದ್ದರಾಮಯ್ಯ, ಡಿಕೆಶಿ, ಜಿ. ಪರಮೇಶ್ವರ್ ಪರಸ್ಪರ ಗುಂಪು ಕಟ್ಟಿಕೊಂಡು ಕಾಲೆಳೆಯುತ್ತಿದ್ದಾರೆ, ಇದರಿಂದ ರೈತರ ಸ್ಥಿತಿ ಭೀಕರವಾಗಿದೆ. ವಿಜಯೇಂದ್ರ ನೇತೃತ್ವದಲ್ಲಿ ಹೋರಾಟ ಆರಂಭವಾಗಿದ್ದು, ರಾಜ್ಯಾದ್ಯಂತ ಕಾಂಗ್ರೆಸ್ ಅಧಿಕಾರ ಬಿಟ್ಟು ತೊಲಗಿ ಎಂಬ ಹೋರಾಟಕ್ಕೆ ಕಾರಣವಾಗಲಿದೆ ಎಂದು ತಿಳಿಸಿದರು.
ನಂತರದಲ್ಲಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಕೂಡಲೇ ಬರಪೀಡಿತ ತಾಲೂಕು, ಮದ್ಯಂತರ ಬೆಳೆ ವಿಮೆ ಪರಿಹಾರ, ಸಮರ್ಪಕ ವಿದ್ಯುತ್‌ಗೆ ಆಗ್ರಹಿಸಿ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಎಂಎಡಿಬಿ ಮಾಜಿ ಅಧ್ಯಕ್ಷ ಗುರುಮೂರ್ತಿ, ಬಿಜೆಪಿ ಅಧ್ಯಕ್ಷ ವೀರೇಂದ್ರ, ಕಾರ್ಯದರ್ಶಿ ಹನುಮಂತಪ್ಪ, ರೈತ ಮೋರ್ಚಾ ಅಧ್ಯಕ್ಷ ಪ್ರೇಮಕುಮಾರ್ ಗೌಡ, ಮುಖಂಡ ಹಾಲಪ್ಪ, ಚನ್ನವೀರಪ್ಪ, ಅಗಡಿ ಅಶೋಕ್, ಗಾಯತ್ರಿದೇವಿ, ನಿವೇದಿತಾ ಮತ್ತಿತರರು ಹಾಜರಿದ್ದರು.