ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಕಂದಾಯ ಸಚಿವ ಕೃಷ್ಣ ಭೈರೇಗೌಡ, ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನರನ್ನು ಭೇಟಿ ಮಾಡಿದ್ದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದ ರೇಣುಕಾಚಾರ್ಯ
ದಾವಣಗೆರೆ(ಆ.27): ವಿಧಾನಸಭೆಯಲ್ಲಿ ವಿಪಕ್ಷ ನಾಯಕರಿಲ್ಲದೇ, ಹೊಸ ರಾಜ್ಯಾಧ್ಯಕ್ಷರ ಆಯ್ಕೆಯಾಗದ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಕಡೆಗಣಿಸಿದ ಬಿಜೆಪಿ ನಾವಿಕನಿಲ್ಲದ ಹಡಗಿನಂತಾಗಿದೆ ಎಂದು ರಾಜ್ಯದ ಜನತೆ ಮಾತನಾಡುತ್ತಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಹೊನ್ನಾಳಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ,ರಾಜ್ಯ ಬಿಜೆಪಿಯಲ್ಲಿ ಏನು ನಡೆಯುತ್ತಿದೆಯೆಂದು ಜನರೇ ಕೇಳುತ್ತಿದ್ದಾರೆ. ಯಡಿಯೂರಪ್ಪನವರಿಗೆ ಅಧಿಕಾರದಿಂದ ಹೊರ ಹಾಕಿದರು. ರಾಜ್ಯಾಧ್ಯಕ್ಷರ ಆಯ್ಕೆ ಇಲ್ಲ, ವಿಪಕ್ಷ ನಾಯಕನನ್ನೂ ಆಯ್ಕೆ ಮಾಡಿಲ್ಲವೆಂದು ಜನರೇ ಪ್ರಶ್ನೆ ಮಾಡುತ್ತಾರೆ ಎಂದರು. ಯಡಿಯೂರಪ್ಪನಂತಹ ನಾಯಕರನ್ನು ಕಡೆಗಣಿಸಿದ ಶಾಪ ಎಂಬ ಮಾತು ಕೇಳಿ ಬರುತ್ತಿದೆ. 2013ರಲ್ಲಿ ಮತ್ತೆ 2023ರಲ್ಲಿ ಹೀಗೆ ಯಡಿಯೂರಪ್ಪನವರಿಗೆ ಕಡೆಗಣಿಸಿಕೊಂಡೇ ಬಂದರು. ಪ್ರಧಾನಿ ನರೇಂದ್ರ ಮೋದಿಯವರಿಗೆ ಇರುವಷ್ಟೇ ಗೌರವ ರಾಜ್ಯದಲ್ಲಿ ಬಿಎಸ್‌ವೈಗೆ ಇದೆ. ಇಡೀ ರಾಜ್ಯದಲ್ಲಿ ಕಟ್ಟಿಬೆಳೆಸಿದ ಬಿಎಸ್‌ವೈ ಪಕ್ಷಕ್ಕೆ ಏನು ಅನ್ಯಾಯ ಮಾಡಿದ್ದರು? ಪಕ್ಷಕ್ಕಾಗಿ ತ್ಯಾಗ ಮಾಡಿದ, ಕೇಸ್‌ಗಳ ಮೇಲೆ ಮೇಲೆ ಹಾಕಿಸಿ ಸಂಘಟನೆ ಮಾಡಿದ್ದ ಯಡಿಯೂರಪ್ಪನವರ ಯಾಕೆ ಕೆಡಗಣಿಸಿದ್ದಾರೆಂಬ ಪ್ರಶ್ನೆ ಜನರದ್ದಾಗಿದೆ ಎಂದು ತಿಳಿಸಿದರು.
ಆಪರೇಷನ್ ಹಸ್ತ ಬೆನ್ನಲ್ಲೇ ಸಿಎಂ, ಡಿಸಿಎಂ ಭೇಟಿ ಮಾಡಿದ ಎಂಪಿ ರೇಣುಕಾಚಾರ್ಯ!
ಎಲ್ಲೋ ಕುಳಿತು ರಾಜ್ಯ ಬಿಜೆಪಿ ನಿಯಂತ್ರಣ:
ಎಲ್ಲೋ ಕುಳಿತವರು ರಾಜ್ಯ ಬಿಜೆಪಿಯನ್ನು ನಿಯಂತ್ರಿಸಿದರೆ ಹೀಗೆಯೇ ಆಗುತ್ತದೆ. ಕರ್ನಾಟಕದ ರಾಜಕಾರಣವನ್ನು ಯಾರೋ ಎಲ್ಲೋ ಕುಳಿತು ನಿಯಂತ್ರಿಸುತ್ತಿದ್ದಾರೆ. ಪ್ರಧಾನಿ ಮೋದಿ ಬಗ್ಗೆ ನಮಗೆಲ್ಲರಿಗೂ ಅಪಾರ ಗೌರವವಿದೆ. ಮತ್ತೆ ಮೋದಿ ಪ್ರಧಾನಿಯಾಗಬೇಕೆನ್ನುವವರು ನಾವು. ಆದರೆ, ರಾಜ್ಯವನ್ನು ಎಲ್ಲೋ ಒಂದು ರಾಷ್ಟ್ರೀಯ ನಾಯಕರು ಕಡೆಗಣಿಸುತ್ತಿದ್ದಾರೆಂಬ ಅಳುಕು ಕಾಡುತ್ತಿದೆ ಎಂದು ಹೇಳಿದರು.
ವರ್ಚಸ್ಸಿನ ನಾಯಕ ಯಾರೂ?
ಎರಡು ವರ್ಷದ ಹಿಂದೆಯೇ ರಾಜ್ಯಾಧ್ಯಕ್ಷರ ಬದಲಾವಣೆ ಆಗಬೇಕಿತ್ತು. ಇದು ನನ್ನದಲ್ಲ, ಜನರ ಅಭಿಪ್ರಾಯ. ರಾಜ್ಯಾಧ್ಯಕ್ಷ, ವಿಪಕ್ಷ ನಾಯಕ ಸ್ಥಾನಗಳ ಬW್ಗæ ಜನ ನಾನು ಹೋದಲ್ಲೆಲ್ಲಾ ಕೇಳುತ್ತಾರೆ. ಯಡಿಯೂರಪ್ಪಗೆ ಮತ್ತೆ ನಾಯಕತ್ವ ಕೊಡಿರೆಂಬ ಒತ್ತಾಯ ಜನರಿಂದ ಕೇಳಿ ಬರುತ್ತಿದೆ. ಜನರಲ್ಲೂ ಒಂದು ರೀತಿ ಆಕ್ರೋಶ ಇದೆ. ವಿಪಕ್ಷ ನಾಯಕ, ರಾಜ್ಯಾಧ್ಯಕ್ಷರಿಲ್ಲ. ವರ್ಚಸ್ಸಿರುವ ನಾಯಕರಾದರೂ ಬೇಕಲ್ಲವೇ? ಅಂತಹ ಕೆಟ್ಟಪರಿಸ್ಥಿತಿ ಇದೆ. ಯಡಿಯೂರಪ್ಪ ಪಕ್ಷಕ್ಕಾಗಿ ದುಡಿದಿಲ್ಲವೇನ್ರಿ ಅಂತಾರೆ ಜನ ಎಂದು ವಿವರಿಸಿದರು.
ಬಿಎಸ್‌ವೈ ನೇತೃತ್ವದಲ್ಲೇ ಬಿಜೆಪಿಗೆ ಭವಿಷ್ಯ
ಯಡಿಯೂರಪ್ಪ ನೇತೃತ್ವದಲ್ಲೇ ಲೋಕಸಭೆ ಚುನಾವಣೆಗೆ ಹೋದರೆ ಗೆಲುವು ಸಾಧ್ಯ. ಮೋದಿ, ಅಮಿತ್ ಶಾ, ನಡ್ಡಾ ಬಗ್ಗೆ ಮಾತನಾಡಲ್ಲ. ಅವರೆಲ್ಲಾ ಟಾಲೆಸ್ಟ್ ನಾಯಕರು. ಎಲ್ಲೋ ಒಂದು ಕಡೆ ಕಾಣದ ಕೈಗಳು ರಾಜ್ಯದ ಬಿಜೆಪಿ ವಿಚಾರದಲ್ಲಿ ಕೆಲಸ ಮಾಡುತ್ತಿವೆ. ಇದೇ ರೀತಿ ಕಾಣದ ಕೈಗಳು ಆಟವಾಡುತ್ತಿದ್ದರೆ ನಾಳೆ ಇದು ಬಿಜೆಪಿಗೆ ಹಿನ್ನೆಡೆಯಾಗುತ್ತದೆ. ರಾಜ್ಯದಲ್ಲಿ ಅತೀ ಹೆಚ್ಚು ಲೋಕಸಭಾ ಕ್ಷೇತ್ರ ಗೆಲ್ಲಬೇಕು. ಚುನಾವಣೆಗೆ ಇನ್ನೂ 7-8 ತಿಂಗಳಿದ್ದು, ಯಡಿಯೂರಪ್ಪ ನೇತೃತ್ವದಲ್ಲಿ ಹೋದರಷ್ಟೇ ಬಿಜೆಪಿಗೆ ಭವಿಷ್ಯ. ಈ ಮಾತು ರೇಣುಕಾಚಾರ್ಯ ಅಲ್ಲ, ರಾಜ್ಯದ ಪ್ರತಿಯೊಬ್ಬರೂ ಹೇಳುವ ಮಾತಾಗಿದೆ ಎಂದು ರೇಣುಕಾಚಾರ್ಯ ತಿಳಿಸಿದರು.