ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಸಹಕರಿಸಿದ ಸುಮಲತಾ ಅಂಬರೀಶ್ ಅವರಿಗೆ ರಾಜಕೀಯವಾಗಿ ಮುಂದೆ ಒಳ್ಳೆಯ ಭವಿಷ್ಯವಿದೆ. ಸೂಕ್ತ ಸ್ಥಾನ-ಮಾನ ದೊರಕಿಸುವ ಭರವಸೆ ನೀಡಿದ್ದರು. ಅದರಂತೆ ಮಂಡ್ಯ ಕ್ಷೇತ್ರ ಬಿಟ್ಟುಕೊಟ್ಟ ಒಂದೂವರೆ ತಿಂಗಳಲ್ಲೇ ವಿಧಾನಪರಿಷತ್ ಸ್ಥಾನಕ್ಕೆ ಹೆಸರನ್ನು ಫೈನಲ್ ಮಾಡುವುದರೊಂದಿಗೆ ಕೊಟ್ಟಿದ್ದ ಮಾತನ್ನು ಉಳಿಸಿಕೊಂಡಿರುವುದು ಗಮನಾರ್ಹವಾಗಿದೆ.
ಮಂಡ್ಯ(ಜೂ.01): ಬಿಜೆಪಿ-ಜೆಡಿಎಸ್ ಮೈತ್ರಿಯಿಂದಾಗಿ ಮಂಡ್ಯ ಕ್ಷೇತ್ರವನ್ನು ತ್ಯಾಗ ಮಾಡಿದ್ದ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ವಿಧಾನಪರಿಷತ್‌ಗೆ ಹೆಸರನ್ನು ಅಂತಿಮಗೊಳಿಸುವುದರೊಂದಿಗೆ ಬಿಜೆಪಿ ಹೈಕಮಾಂಡ್ ಉಡುಗೊರೆ ನೀಡಿದೆ ಎಂದು ಹೇಳಲಾಗಿದೆ. ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಸಹಕರಿಸಿದ ಸುಮಲತಾ ಅಂಬರೀಶ್ ಅವರಿಗೆ ರಾಜಕೀಯವಾಗಿ ಮುಂದೆ ಒಳ್ಳೆಯ ಭವಿಷ್ಯವಿದೆ. ಸೂಕ್ತ ಸ್ಥಾನ-ಮಾನ ದೊರಕಿಸುವ ಭರವಸೆ ನೀಡಿದ್ದರು. ಅದರಂತೆ ಮಂಡ್ಯ ಕ್ಷೇತ್ರ ಬಿಟ್ಟುಕೊಟ್ಟ ಒಂದೂವರೆ ತಿಂಗಳಲ್ಲೇ ವಿಧಾನಪರಿಷತ್ ಸ್ಥಾನಕ್ಕೆ ಹೆಸರನ್ನು ಫೈನಲ್ ಮಾಡುವುದರೊಂದಿಗೆ ಕೊಟ್ಟಿದ್ದ ಮಾತನ್ನು ಉಳಿಸಿಕೊಂಡಿರುವುದು ಗಮನಾರ್ಹವಾಗಿದೆ.
2019ರ ಲೋಕಸಭಾ ಚುನಾವಣೆ ವೇಳೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ ಸುಮಲತಾ ರಾಷ್ಟ್ರದ ಗಮನಸೆಳೆದಿದ್ದರು. 2023ರ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ಬೆಂಬಲಿಸುವ ತೀರ್ಮಾನ ಕೈಗೊಂಡು ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದರು. 2024ರ ಲೋಕಸಭೆ ಚುನಾವಣೆ ವೇಳೆಗೆ ಬಿಜೆಪಿ ಸೇರಿದ ಸಂಸದೆ ಸುಮಲತಾ ಅಂಬರೀಶ್ ಕಮಲ ಪಾಳಯದಿಂದ ಸ್ಪರ್ಧೆಗೆ ಒಲವು ತೋರಿದ್ದರು. ಕೊನೆಯ ಕ್ಷಣದವರೆಗೂ ಮಂಡ್ಯ ಟಿಕೆಟ್‌ಗೆ ತೀವ್ರ ಹೋರಾಟ ನಡೆಸಿದ್ದರು. ಬಿಜೆಪಿ-ಜೆಡಿಎಸ್ ಮೈತ್ರಿ ಪರಿಣಾಮ ಮಂಡ್ಯ ಕ್ಷೇತ್ರ ಜೆಡಿಎಸ್ ಪಾಲಾಗಿದ್ದರಿಂದ ಸುಮಲತಾ ಕ್ಷೇತ್ರ ತ್ಯಾಗ ಮಾಡುವುದು ಅನಿವಾರ್ಯವಾಯಿತು.
ಚುನಾವಣೆ ಮೇಲೆ ಪೆನ್‌ಡ್ರೈವ್ ಪರಿಣಾಮ: ಸಚಿವ ಎನ್.ಚಲುವರಾಯಸ್ವಾಮಿ
ಸುಮಲತಾ ಬಂಡಾಯ ಅಭ್ಯರ್ಥಿಯಾಗುವುದನ್ನು ತಡೆಯುವ ಸಲುವಾಗಿ ಬಿಜೆಪಿ ಹೈಕಮಾಂಡ್ ಮುಂದಿನ ದಿನಗಳಲ್ಲಿ ರಾಜಕೀಯ ಸ್ಥಾನ-ಮಾನ ದೊರಕಿಸುವುದಾಗಿ ಮಾತು ಕೊಟ್ಟಿದ್ದರು. ಅದಕ್ಕೆ ಸಮ್ಮತಿ ಸೂಚಿಸಿದ್ದ ಸುಮಲತಾ ಜೆಡಿಎಸ್‌ನಿಂದ ಎಚ್.ಡಿ.ಕುಮಾರಸ್ವಾಮಿ ಸ್ಪರ್ಧೆಗೆ ಹಾದಿ ಸುಗಮ ಮಾಡಿಕೊಟ್ಟಿದ್ದರು. ಆದರೆ, ಇಷ್ಟು ಶೀಘ್ರವಾಗಿ ಸುಮಲತಾ ಅವರಿಗೆ ರಾಜಕೀಯ ಸ್ಥಾನ-ಮಾನ ಸಿಗುತ್ತದೆಂದು ಯಾರೂ ನಿರೀಕ್ಷಿಸಿರಲಿಲ್ಲ.
ರಾಷ್ಟ್ರ ರಾಜಕಾರಣದ ಮೇಲೆ ಹೆಚ್ಚು ಒಲವನ್ನು ಹೊಂದಿದ್ದ ಸುಮಲತಾ ಅವರಿಗೆ ರಾಜ್ಯಸಭೆ ಸ್ಥಾನ ನೀಡಬಹುದೆಂದು ಭಾವಿಸಲಾಗಿತ್ತು. ಆದರೆ, ದಿಢೀರ್ ಬೆಳವಣಿಗೆಯಲ್ಲಿ ರಾಜ್ಯಬಿಜೆಪಿ ನಾಯಕರು ಕಳುಹಿಸಿದ ಅಭ್ಯರ್ಥಿಗಳ ಪಟ್ಟಿಯಲ್ಲಿ ಸುಮಲತಾ ಅವರ ಹೆಸರಿಲ್ಲದಿದ್ದರೂ ಹೈಕಮಾಂಡ್ ಕೋಟಾದಡಿ ವಿಧಾನಪರಿಷತ್‌ಗೆ ಹೆಸರನ್ನು ಅಂತಿಮಗೊಳಿಸಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.
ರಾಜ್ಯ ಬಿಜೆಪಿ ನಾಯಕರಿಗಿಂತಲೂ ಹೈಕಮಾಂಡ್ ನಾಯಕರೊಂದಿಗೆ ಹೆಚ್ಚಿನ ವಿಶ್ವಾಸದಲ್ಲಿರುವ ಸುಮಲತಾ ಅಂಬರೀಶ್ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಹೆಸರನ್ನು ಅಂತಿಮಗೊಳಿಸಿರುವುದು ಜಿಲ್ಲೆಯಲ್ಲಿರುವ ಅವರ ಬೆಂಬಲಿಗರಿಗೆ ಖುಷಿಯನ್ನು ತಂದುಕೊಟ್ಟಿದೆ. ರಾಜ್ಯ ರಾಜಕಾರಣದ ಮೇಲೆ ಆಸಕ್ತಿ ಇಲ್ಲ ಎಂದು ಸುಮಲತಾ ಹೇಳಿದ್ದರ ನಡುವೆಯೂ ತಕ್ಷಣಕ್ಕೆ ನೀಡಬಹುದಾದ ಸ್ಥಾನ-ಮಾನವನ್ನು ಗುರುತಿಸಿ ಬಿಜೆಪಿ ಹೈಕಮಾಂಡ್ ವಿಧಾನಪರಿಷತ್ ಸ್ಥಾನಕ್ಕೆ ಹೆಸರನ್ನು ಸೂಚಿಸಿದೆ. ರಾಜ್ಯಸಭೆ ಆಯ್ಕೆ ತಡವಾಗಬಹುದು ಅಥವಾ ಆಕಾಂಕ್ಷಿತರು ಹೆಚ್ಚಿದ್ದು ಅವಕಾಶ ಒದಗಿಸಲು ಸಾಧ್ಯವಾಗದೆ ಹೋಗಬಹುದೆಂಬ ಕಾರಣಕ್ಕೆ ವಿಧಾನಪರಿಷತ್‌ಗೆ ಹೆಸರನ್ನು ಸೂಚಿಸಿರಬಹುದೆಂದು ಹೇಳಲಾಗುತ್ತಿದೆ.
ವಿಧಾನಪರಿಷತ್ ಚುನಾವಣೆ 2024: ಬಿಜೆಪಿ ಮೇಲ್ಮನೆ ಅಭ್ಯರ್ಥಿ ನಾಳೆಯ ನಂತರ ಆಯ್ಕೆ
ಅಂತೂ ಮಂಡ್ಯ ಕ್ಷೇತ್ರ ಬಿಟ್ಟು ಎಲ್ಲಿಯೂ ಹೋಗುವುದಿಲ್ಲ. ಸೋಲಿರಲಿ, ಗೆಲುವಿರಲಿ ನನ್ನ ಸ್ಪರ್ಧೆ ಏನಿದ್ದರೂ ಮಂಡ್ಯದಿಂದಲೇ ಎಂದು ಹೇಳುತ್ತಲೇ ಬಂದಿದ್ದ ಸುಮಲತಾ ಅಂಬರೀಶ್, ಈಗ ಮುಂದಿನ ಚುನಾವಣೆಯವರೆಗೂ ವಿಧಾನಪರಿಷತ್ ಸ್ಥಾನ ನೀಡಿ ಅವರನ್ನು ವಿಶ್ವಾಸ ಮತ್ತು ಗೌರವದಿಂದ ನಡೆಸಿಕೊಳ್ಳುವುದಕ್ಕೆ ಬಿಜೆಪಿ ಮುಂದಾಗಿದೆ ಎನ್ನಲಾಗಿದೆ.
ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಮಂಡ್ಯದಿಂದ ಯಾರ ಹೆಸರೂ ಆಕಾಂಕ್ಷಿತರ ಪಟ್ಟಿಯಲ್ಲಿ ಇರಲಿಲ್ಲ. ಇದೀಗ ಸುಮಲತಾ ಅಂಬರೀಶ್‌ಗೆ ಹೈಕಮಾಂಡ್ ಕೋಟಾದಡಿ ಸ್ಥಾನ-ಮಾನ ದೊರಕಿರುವುದು ಮಂಡ್ಯಕ್ಕೆ ಹೆಗ್ಗಳಿಕೆ ತಂದುಕೊಟ್ಟಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಇತ್ತೀಚೆಗೆ ಪಕ್ಷ ಸೇರಿದ ಸುಮಲತಾ ಅವರಿಗೆ ವಿಧಾನಪರಿಷತ್ ಸದಸ್ಯ ಸ್ಥಾನ ನೀಡಿರುವ ಬಗ್ಗೆ ಕಮಲ ಪಾಳಯದಲ್ಲಿ ಹಲವರಿಗೆ ಅಸಮಾಧಾನ ಉಂಟುಮಾಡಿದೆ. ಆದರೆ, ಕ್ಷೇತ್ರ ತ್ಯಾಗ ಮಾಡಿದರೆಂಬ ಒಂದು ಕಾರಣಕ್ಕೆ ಸುಮಲತಾ ಅವರಿಗೆ ಮಾತುಕೊಟ್ಟಂತೆ ವಿಧಾನಪರಿಷತ್ ಸ್ಥಾನವನ್ನು ಹೈಕಮಾಂಡ್ ನೀಡಿದೆ ಎನ್ನುವುದೂ ಬಿಜೆಪಿಯ ವಲಯದಲ್ಲಿ ಕೇಳಿಬರುತ್ತಿದೆ.