BJP Politics: ತಮ್ಮದೇ ಸರ್ಕಾರದ ವಿರುದ್ಧವೇ ಗುಡುಗಿಡ ಚಿಂಚನಸೂರು...!

By Kannadaprabha NewsFirst Published Jan 24, 2022, 11:02 AM IST
Highlights

*  ಬಿಜೆಪಿ ಸೇರಿ 3 ವರ್ಷಗಳಾಯ್ತು, ನನ್ನನ್ನ ಮುಂದಿಟ್ಟುಕೊಂಡು ಎಲೆಕ್ಷನ್ ಗೆದ್ದರು
*  ಸಿಎಂ ಬೊಮ್ಮಾಯಿ ಭೇಟಿಯಾಗಿ ಮಾತನಾಡ್ತೇನೆ
*  ತಮ್ಮ ಮಾತೇ ಕೇಳದ ಅಧಿಕಾರಿಗಳು, ಡಿಸಿ ಕಚೇರಿಯೆದುರು ಪ್ರತಿಭಟನೆಗೆ ಬಾಬುರಾವ್ ನಿರ್ಧಾರ
 

ಯಾದಗಿರಿ(ಜ.24):  ಮಾಜಿ ಸಿಎಂ ಎಸ್.ಎಂ.ಕೃಷ್ಣ(SM Krishna) ಅವಧಿಯ ಕಾಂಗ್ರೆಸ್ ಸರ್ಕಾರದಲ್ಲಿ(Congress Government) ಸಪ್ತ ಖಾತೆಯ ಸಚಿವನೆರೆಸಿಕೊಂಡು, ಮೊನ್ನೆಯ ಲೋಕಸಭಾ ಚುನಾವಣೆಯ ವೇಳೆ ಬಿಜೆಪಿ ಪಕ್ಷ ಸೇರ್ಪಡೆಗೊಂಡು, ಖರ್ಗೆ ಕುಟುಂಬದ ವಿರುದ್ಧ ಹರಿಹಾಯ್ದಿದ್ದ ಮಾಜಿ ಸಚಿವ, ನಿಜಶರಣ ಅಂಬಿಗರ ಚೌಡಯ್ಯ ನಿಗಮದ ಹಾಲಿ ಅಧ್ಯಕ್ಷ ಬಾಬುರಾವ್ ಚಿಂಚನಸೂರ್(Baburao Chinchansur) ಇದೀಗ ರಾಜ್ಯ ಸರ್ಕಾರದ(Government of Karnataka) ಕಾರ್ಯವೈಖರಿ ವಿರುದ್ಧವೇ ಗರಂ ಆಗಿದ್ದಾರೆ. 

ಭಾನುವಾರ ತಮ್ಮನ್ನು ಸಂಪರ್ಕಿಸಿದ ‘ಕನ್ನಡಪ್ರಭ’ದೊಂದಿಗೆ(Kannada Prabha) ಮಾತನಾಡಿದ ಅವರು, ತಮ್ಮದೇ ಸರ್ಕಾರದ ಆಡಳಿತವಿದ್ದಾಗ್ಯೂ ಕೂಡ, ಅಧಿಕಾರಿಗಳ್ಯಾರೂ ಮಾತೇ ಕೇಳ್ತಿಲ್ಲ ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು. ಸಮುದಾಯದ ದೃಷ್ಟಿಯಿಂದ ತಮ್ಮನ್ನು ಮುಂದಿಟ್ಟುಕೊಂಡು ಬಸವ ಕಲ್ಯಾಣ ಹಾಗೂ ಸಿಂದಗಿ ಬೈ ಎಲೆಕ್ಷನ್ ಗೆದ್ದರು. 20-30 ಸಾವಿರ ಮತಗಳ ಅಂತರದಲ್ಲಿ ಚುನಾವಣೆಯಲ್ಲಿ(Election) ಅಭ್ಯರ್ಥಿಗಳನ್ನು ಗೆಲ್ಲಿಸಿಕೊಟ್ಟೆ. ಹಾಗೆಯೇ, ಲೋಕಸಭಾ ಚುನಾವಣೆಯಲ್ಲೂ(Lok Sabha Elections) ನನ್ನ ಪಾತ್ರ ದೊಡ್ಡದಿತ್ತು. ಹೀಗಿದ್ದಾಗ್ಯೂ ಕೂಡ, ಸರ್ಕಾರದಲ್ಲಿ ನನ್ನ ಮಾತುಗಳು ಕಿಮ್ಮತ್ತು ಸಿಗ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

Yadgir| ಸಚಿವ ಶ್ರೀರಾಮುಲುಗೆ ಶಾಕ್‌ ಕೊಟ್ಟ ಚಿಂಚನಸೂರ್‌..!

ನನ್ನ ಕಾರ್ಯಕರ್ತರು ಹಾಗೂ ಬೆಂಬಲಿಗರು ಮತ್ತು ಬಡಜನರ ಕೆಲಸಗಳು ಆಗುತ್ತಿಲ್ಲ. ಅನೇಕ ಬಾರಿ ಹೇಳಿದರೂ ಯಾರೂ ಕೇಳುತ್ತಿಲ್ಲ. ಬಿಜೆಪಿ(BJP) ಸೇರ್ಪಡೆಗೊಂಡು ಮೂರು ವರ್ಷಗಳು ಕಳೆದಿವೆ. ನನ್ನ ಬಳಿ ಬಂದ ಅನೇಕ ಜನಪರ ಕೆಲಸಗಳನ್ನು ಮಾಡುವಂತೆ ಅಧಿಕಾರಿಗಳಿಗೆ ಹೇಳಿದರೂ ಕೇಳುತ್ತಿಲ್ಲ. ನನ್ನ ಮಾತಿಗೇ ಕಿಮ್ಮತ್ತು ಇಲ್ಲದಂತಾಗಿದೆ ಎಂದ ಅವರು, ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರನ್ನು ಭೇಟಿಯಾಗಿ ನನ್ನ ಅಳಲನ್ನು ತೋಡಿಕೊಳ್ಳುತ್ತೇನೆ ಎಂದರು. 

ರಾಜ್ಯ ರಾಜಕಾರಣದಲ್ಲಿ(Politics) ನಾನೂ ಒಬ್ಬ ಹಿರಿಯ. ಮೇಲಾಗಿ, ಬಿಜೆಪಿ ಪಕ್ಷದ್ದೇ ಸರ್ಕಾರವಿರುವಾಗ ಬಡವರ ಕೆಲಸಗಳ ಮಾಡುವಂತೆ ಹೇಳಿದರೂ ಅಧಿಕಾರಿಗಳು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ವಾರದೊಳಗೆ ನನ್ನ ಈ ನೋವಿಗೆ ಸ್ಪಂದಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿಯೆದುರೆ ನನ್ನ ಕಾರ್ಯಕರ್ತರೊಡನೆ ಪ್ರತಿಭಟನೆ ಮಾಡುವುದಾಗಿ ಹೇಳಿದರು. 

ಇನ್ನು ಬಿಜೆಪಿಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪ(BS Yediyurappa) ಅವರಿಗೆ ನನ್ನ ಬಗ್ಗೆ ಅಪಾರ ಗೌರವವಿದೆ. ಅವರ ಬಗ್ಗೆಯೂ ನನಗೆ ಒಳ್ಳೆಯ ಅಭಿಪ್ರಾಯವಿದೆ. ಆದರೆ, ನನ್ನ ಕಾರ್ಯಕರ್ತರಿಗೆ ಹಾಗೂ ಬೆಂಬಲಿಗರಿಗೆ ಆಗುತ್ತಿರುವ ನೋವು, ಬಡಜನರ ಕೆಲಸಗಳಲ್ಲಿ ನಿರ್ಲಕ್ಷ್ಯ ನನಗೆ ಬೇಜಾರು ತರಿಸಿದೆ ನೋವು ತೋಡಿಕೊಂಡರು. 

ಶಾಸಕರನ್ನ ಹಿಗ್ಗಾಮುಗ್ಗಾ ಝಾಡಿಸಿದ ಕಾರ್ಯಕರ್ತ: ಕಕ್ಕಾಬಿಕ್ಕಿಯಾದ ಚಿಂಚನಸೂರ್!

ಕಳೆದ ಕೆಲವು ತಿಂಗಳ ಹಿಂದಷ್ಟೇ ವಸತಿ ನಿಲಯ ಉದ್ಘಾಟನೆ ವೇಳೆ, ತಮಗೆ ಆಹ್ವಾನಿಸದೆ ಕಾರ್ಯಕ್ರಮ ಇಟ್ಟುಕೊಂಡಿದ್ದರ ಬಗ್ಗೆ ಸಚಿವ ಶ್ರೀರಾಮುಲುರೆದುರೇ(B Sriramulu) ಕೋಪ-ತಾಪ ಪ್ರದರ್ಶಿಸಿದ್ದ ಬಾಬುರಾವ್, ಉದ್ಘಾಟನೆ ಸ್ಥಳಕ್ಕೆ ಶ್ರೀರಾಮುಲು ತೆರಳದಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಬಾಬುರಾವ್ ಬಿಜೆಪಿ ತೊರೆಯುತ್ತಾರೆ ಎನ್ನುವ ಮಾತುಗಳ ಮುನ್ನೆಲೆಗೆ ಬಂದಾಗಲೆಲ್ಲ, ಅವೆಲ್ಲ ವದಂತಿಗಳು ಎಂದು ತೆರೆ ಎಳೆಯುವ ಚಿಂಚನಸೂರು, ಈ ಬಾರಿ ತಮ್ಮ ಅಸಮಾಧಾನದ ಹೊಗೆ ಹೆಚ್ಚಿಸಿದ್ದು ಅಚ್ಚರಿ ಮೂಡಿಸಿದೆ.

ಲೋಕಸಭೆ ಚುನಾವಣೆಯ ವೇಳೆ ಕಾಂಗ್ರೆಸ್ ಕೈಬಿಟ್ಟು, ಬಿಜೆಪಿ ಸೇರಿದ್ದ ಬಾಬುರಾವ್, ಖರ್ಗೆ ವಿರುದ್ಧ ತೀಕ್ಷ್ಣವಾಗಿ ಟೀಕಿಸಿದ್ದರು. ಕಲಬುರಗಿ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಡಾ. ಜಾಧವ್(Dr Umesh Jadhav) ಗೆಲುವಿನಲ್ಲಿ ಚಿಂಚನಸೂರು ಪಾತ್ರವೂ ಅಷ್ಟೇ ಮುಖ್ಯವಾಗಿತ್ತು ಎನ್ನಲಾಗಿದೆ. ಈ ಮಧ್ಯೆ, ಕೆಲವೊಮ್ಮೆ ಡಾ. ಜಾಧವ್ ಇವರನ್ನು ಕಡೆಗೆಣಿಸುತ್ತಿದ್ದಾರೆ, ಬಿಜೆಪಿ ಸರ್ಕಾರದಲ್ಲಿ ಇವರ ಮಾತುಗಳಿಗೆ ಕಿಮ್ಮತ್ತು ಸಿಗುತ್ತಿಲ್ಲ ಅನ್ನೋ ಅಸಮಾಧಾನ ಅವರ ಬೆಂಬಲಿಗರ ವಲಯದಲ್ಲಿ ಮೂಡಿಬರುತ್ತಿತ್ತು. ಅಂತಹ ಸಂದರ್ಭಗಳಲ್ಲಿ ಮಾತ್ರ ಕೇಳಿ ಬರುತ್ತಿದ್ದ ಪಕ್ಷಾಂತರ ಮಾತುಗಳನ್ನು ಖುದ್ದು ಬಾಬುರಾವ್ ತಳ್ಳಿ ಹಾಕುತ್ತಿದ್ದರು. ಆದರೀಗ, ಅಸಮಾಧಾನದ ಹೊಗೆ ಮತ್ತಷ್ಟೂ ಬಹಿರಂಗವಾಗಿ ಕಾಣಿಸುತ್ತಿರುವುದು ರಾಜಕೀಯ ಪಂಡಿತರಲ್ಲಿ ಹಲವು ಲೆಕ್ಕಾಚಾರಗಳ ಮೂಡಿಸಿದೆ. 
 

click me!