BJP Politics: ಕತ್ತಿ ಮನೆಯಲ್ಲಿ ಜಾರಕಿಹೊಳಿ ಬ್ರದರ್ಸ್‌ ಹೊರಗಿಟ್ಟು ಸಭೆ..!

Kannadaprabha News   | Asianet News
Published : Jan 24, 2022, 08:52 AM IST
BJP Politics: ಕತ್ತಿ ಮನೆಯಲ್ಲಿ ಜಾರಕಿಹೊಳಿ ಬ್ರದರ್ಸ್‌ ಹೊರಗಿಟ್ಟು ಸಭೆ..!

ಸಾರಾಂಶ

*  ನಿರಂತರ 3 ಗಂಟೆಗಳ ಕಾಲ ಚರ್ಚೆ *  ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ಸೋಲನುಭವಿಸಿರುವ ವಿಚಾರ ಪ್ರಸ್ತಾಪ *  ತೀವ್ರ ಸಂಚಲನ ಮೂಡಿಸಿದ ಸಂಸದರು, ಶಾಸಕರ ಸಭೆ

ಬೆಳಗಾವಿ(ಜ.24):  ಸಚಿವ ಉಮೇಶ ಕತ್ತಿ(Umesh Katti) ಅವರ ಬೆಳಗಾವಿ(Belagavi) ನಿವಾಸದಲ್ಲಿ ಶನಿವಾರದಂದು ಜಾರಕಿಹೊಳಿ ಸಹೋದರರು ಮತ್ತವರ ಆಪ್ತರನ್ನು ಹೊರತುಪಡಿಸಿ ಜಿಲ್ಲೆಯ ಸಂಸದರು, ಶಾಸಕರು ಸಭೆ ನಡೆಸಿದ್ದು ತೀವ್ರ ಸಂಚಲನ ಮೂಡಿಸಿದೆ. ಮುಂಬರಲಿರುವ ಸಂಪುಟ ಸಭೆ ವಿಸ್ತರಣೆ, ನಿಗಮ-ಮಂಡಳಿ ರಚನೆ ಬಗ್ಗೆ ನಿರಂತರ 3 ಗಂಟೆಗಳ ಕಾಲ ಚರ್ಚೆ ನಡೆಸಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಂಸದರಾದ ಅಣ್ಣಾಸಾಹೇಬ ಜೊಲ್ಲೆ, ಈರಣ್ಣ ಕಡಾಡಿ, ಶಾಸಕರಾದ ಪಿ.ರಾಜೀವ್‌, ಮಹಾಂತೇಶ ದೊಡ್ಡಗೌಡರ, ಮಹಾದೇವಪ್ಪ ಯಾದವಾಡ, ಅಭಯ ಪಾಟೀಲ, ಅನಿಲ ಬೆನಕೆ, ವಿಧಾನ ಪರಿಷತ್‌ ಮಾಜಿ ಸದಸ್ಯ ಮಹಾತೇಂಶ ಕವಟಗಿಮಟ ಸಭೆಯಲ್ಲಿ ಪಾಲ್ಗೊಂಡಿದ್ದರು. ಬೆಳಗಾವಿ ಸಂಸದೆ ಮಂಗಲ ಅಂಗಡಿ ಅವರಿಗೆ ಆಹ್ವಾನ ನೀಡಿದ್ದರೂ ಬಂದಿರಲಿಲ್ಲ ಎನ್ನಲಾಗಿದೆ.

Karnataka Cabinet ಸಚಿವ ಸಂಪುಟ ವಿಸ್ತರಣೆ ಆಗೋದಾದ್ರೆ ಈಗಲೇ ಆಗಲಿ, ಬಿಜೆಪಿ ಶಾಸಕ ಪಟ್ಟು

ಕುಡಚಿ ಶಾಸಕ ಪಿ.ರಾಜೀವ್‌ಗೆ ಸಚಿವ, ಚ.ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ಕೊಡಿಸುವ ಕುರಿತೂ ಚರ್ಚೆ ನಡೆದಿದೆ. ಅಲ್ಲದೆ ಬೆಳಗಾವಿ ಮೇಯರ್‌-ಉಪಮೇಯರ್‌ ಆಯ್ಕೆಯನ್ನು ಶಾಸಕ ಅಭಯ ಪಾಟೀಲ ಅವರ ಹೆಗಲಿಗೆ ಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ.

ಜೊತೆಗೆ ಇತ್ತೀಚೆಗಷ್ಟೇ ವಿಧಾನ ಪರಿಷತ್‌ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಲಖನ್‌ ಜಾರಕಿಹೊಳಿ ಗೆಲವು ಸಾಧಿಸಿರುವುದು ಮತ್ತು ಬಿಜೆಪಿ ಹೀನಾಯ ಸೋಲನುಭವಿಸಿರುವ ವಿಚಾರ ಕೂಡ ಪ್ರಸ್ತಾಪವಾಗಿದೆ. ಈ ಹಿನ್ನೆಲೆಯಲ್ಲಿ ಪಕ್ಷ ವ್ಯಕ್ತಿಗತವಾಗಿ ಹೋಗದೆ ಪಕ್ಷಕ್ಕೆ ಸೀಮಿತವಾಗಲಿ. ಇಲ್ಲವಾದಲ್ಲಿ ಪಕ್ಷಕ್ಕೆ ಧಕ್ಕೆಯಾಗಲಿದೆ ಎಂದು ಸಭೆಯಲ್ಲಿದ್ದ ಹಲವು ನಾಯಕರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆ, ಸಂಚಲನ ಮೂಡಿಸಿದ ರಮೇಶ್ ಜಾರಕಿಹೊಳಿ ನಡೆ

ಬೆಳಗಾವಿ: ಕರ್ನಾಟಕ ಬಿಜೆಪಿಯಲ್ಲಿ(Karnataka BJP) ಮಹತ್ವದ ಬೆಳವಣಿಗೆಗಳು ನಡೆದಿವೆ. ಅತ್ತ ರೇಣುಕಾಚಾರ್ಯ ಬೊಮ್ಮಾಯಿ ಸಂಪುಟದ ವಿರುದ್ಧ ಬಹಿರಂಗ ಅಸಮಾಧಾನ ಹೊರಹಾಕಿದ್ರೆ, ಇತ್ತ ರಮೇಶ್ ಜಾರಕಿಹೊಳಿ ಆರ್‌ಎಸ್‌ಎಸ್‌ ಮುಖಂಡರ ಮನೆಗೆ ಭೇಟಿ ನೀಡಿದ್ದಾರೆ. ಹೀಗಾಗಿ ರಮೇಶ್ ಜಾರಕಿಹೊಳಿ (Ramesh Jarkiholi) ನಡೆ ಭಾರೀ ಸಂಚಲನ ಮೂಡಿಸಿತ್ತು.

ಬೆಳಗಾವಿ (Belagavi) ಜಿಲ್ಲೆಯ ಅಥಣಿಯಲ್ಲಿರುವ ಆರ್.ಎಸ್.ಎಸ್ (RSS) ಪ್ರಮುಖ ಅರವಿಂದರಾವ್ ದೇಶಪಾಂಡೆ ಮನೆಗೆ ಜ.15 ರಂದು ಮಾಜಿ ಸಚಿವ ರಮೇಶ್​​ ಜಾರಕಿಹೊಳಿ ಭೇಟಿ ನೀಡಿದ್ದು, ಮಹತ್ವದ ಮಾತುಕತೆ ನಡೆಸಿದ್ದರು ಎಂದು ಹೇಳಲಾಗಿತ್ತು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು, ಪಕ್ಷದ ಬಗ್ಗೆ ಹಾಗೂ 2023ರ ಚುನಾವಣೆ ಕುರಿತು ಮೊನ್ನೆ ಕಲಬುರಗಿಯಲ್ಲಿ ನಡೆದ ಸಂಘದ ಬೈಠಕ್​ನಲ್ಲಿ ಚರ್ಚೆಯಾಗಿದೆ. ಹೀಗಾಗಿ ಮಾರ್ಗದರ್ಶನ ಪಡೆಯಲು ಬಂದಿದ್ದೇನೆ ಎಂದರು.
ಸಚಿವ ಸಂಪುಟ ವಿಸ್ತರಣೆಯಲ್ಲಿ ಹೊಸಬರಿಗೆ ಆದ್ಯತೆ ನೀಡಬೇಕೆಂಬ ವಿಚಾರವಾಗಿ ಮಾತನಾಡಿದ ರಮೇಶ್​​ ಜಾರಕಿಹೊಳಿ, ನಾನು ಸಚಿವ ಸ್ಥಾನಕ್ಕೆ ಪ್ರಯತ್ನ ಮಾಡಿಲ್ಲ. ಅದು ನಮ್ಮ ಪಕ್ಷದ ವರಿಷ್ಠರು, ಸಿಎಂ ತೀರ್ಮಾನ ಮಾಡುತ್ತಾರೆ ಎಂದು ಸ್ಪಷ್ಟಪಡಿಸಿದ್ದರು.

Belagavi: ಸಚಿವೆ ಜೊಲ್ಲೆ ತವರು ಜಿಲ್ಲೆಯಲ್ಲಿ ಭ್ರಷ್ಟಾಚಾರ ಬಟಾಬಯಲು: ಇಬ್ಬರ ಬಂಧನ

ಎಲ್ಲವನ್ನು ಬಹಿರಂಗವಾಗಿ ಮಾತನಾಡಲು ಬರುವುದಿಲ್ಲ. ಪಕ್ಷದ ವೇದಿಕೆಯಲ್ಲಿ ಕೆಲವು ಚರ್ಚೆಯಾಗಿದೆ, ಶೀಘ್ರದಲ್ಲೇ ಒಳ್ಳೆಯದಾಗುವ ವಿಶ್ವಾಸವಿದೆ. ಇನ್ನು ಮುಂದಿನ ಚುನಾವಣೆ ಸಿಎಂ ಬೊಮ್ಮಾಯಿ ನೇತೃತ್ವದಲ್ಲೇ ನಡೆಯಲಿದೆ ಎಂದು ಹೇಳಿದ್ದರು.

ವಿಶ್ವಾಸ ಗಳಿಸಲು ಸಾಹುಕಾರ ಯತ್ನ

ಹೌದು..ಮೊನ್ನೇ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ರಮೇಶ್ ಜಾರಕಿಹೊಳಿ ಅವರು ತಮ್ಮ ಸಹೋದರ ಲಖನ್ ಜಾರಕಿಹೊಳಿ ಅವರನ್ನ ಕಣಕ್ಕಿಳಿಸುವ ಮೂಲಕ ಪರೋಕ್ಷವಾಗಿ ಬಿಜೆಪಿ ಅಭ್ಯರ್ಥಿ ಮಹಾಂತೇಶ್ ಕವಟಗಿಮಠ ಅವರ ಸೋಲಿಗೆ ಕಾರಣರಾಗಿದ್ದಾರೆ. ಇದು ರಾಜ್ಯ ಬಿಜೆಪಿಯಲ್ಲಿ ಚರ್ಚೆಯಾಗುತ್ತಿದೆ. ಅಲ್ಲದೇ ರಮೇಶ್ ಜಾರಕಿಹೊಳಿ ಅವರ ವಿರುದ್ಧ ಶಿಸ್ತುಕ್ರಮಕ್ಕೆ ಕೆಲ ಶಾಸಕರು ಆಗ್ರಹಿಸಿದ್ದರು. ಇದರಿಂದ ರಮೇಶ್ ಜಾರಕಿಹೊಳಿ ಅವರು ಆರ್‌ಎಸ್‌ಎಸ್‌ ನಾಯಕರ ಮೂಲಕ ಅದನ್ನ ಶಮನ ಮಾಡಲು ಪ್ರಯತ್ನ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೇ ಸಚಿವ ಸ್ಥಾನಕ್ಕೂ ಲಾಬಿ ನಡೆಸಿದ್ದಾರೆ ಎನ್ನಲಾಗಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ