ರಾಜ್ಯ ಹಾಗೂ ಕೇಂದ್ರದ ಬಿಜೆಪಿ ಸರ್ಕಾರವು ರೈತ ಪರ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್ ಹೇಳಿದರು.
ದಾವಣಗೆರೆ (ಡಿ.12) : ರಾಜ್ಯ ಹಾಗೂ ಕೇಂದ್ರದ ಬಿಜೆಪಿ ಸರ್ಕಾರವು ರೈತ ಪರ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಇಲ್ಲಿಯವರೆಗೆ ರೈತರು ಮತ್ತು ಸಕ್ಕರೆ ಕಾರ್ಖಾನೆಗಳ ನಡುವೆ ಆದಾಯ ಹಂಚಿಕೆ ಮಾಡುವಾಗ ಸಕ್ಕರೆ, ಬಗಾಸ್, ಮೊಲಾಸಿಸ್, ಪ್ರೆಸ್ ಮಡ್ ಗಳಿಂದ ಬರುವ ಆದಾಯವನ್ನು ಮಾತ್ರ ಪರಿಗಣಿಸಲಾಗುತ್ತಿತ್ತು. ಆದರೆ ಎಫ್ ಆರ್ ಪಿ ದರದ ಮೇಲೆ ಹೆಚ್ಚುವರಿಯಾಗಿ ಕಬ್ಬಿನ ಬಿಲ್ಲನ್ನು ಪಾವತಿಸಲು ಅನುಕೂಲವಾಗುವಂತೆ ಉಪ ಉತ್ಪನ್ನವಾದ ಎಥೆನಾಲ್ ಅನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ ಎಂದರು.
ಟನ್ ಕಬ್ಬಿಗೆ ₹50 ಹೆಚ್ಚುವರಿ ದರ ಪಾವತಿಗೆ ಆದೇಶ
ಅದರನ್ವಯ ಪ್ರಥಮ ಕಂತಿನಲ್ಲಿ ಎಪ್ ಆರ್ ಪಿ ಜೊತೆಗೆ ಪ್ರತಿ ಟನ್ ಗೆ 50 ರೂ ಹೆಚ್ಚುವರಿಯಾಗಿ ಪಾವತಿಸಲು ಸಂಬಂಧಿಸಿದ ಎಲ್ಲ ಸಕ್ಕರೆ ಕಾರ್ಖಾನೆಗಳಿಗೆ ಸೂಚನೆ ನೀಡಲಾಗಿದೆ. ಇದರಿಂದ ರಾಜ್ಯದ ರೈತರಿಗೆ 204.42 ಕೋಟಿ ರೂಪಾಯಿ ಹೆಚ್ಚುವರಿಯಾಗಿ, ಕಬ್ಬಿನ ಬಿಲ್ಲು ಸಿಗಲಿದೆ. ರಾಜ್ಯದ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ರೈತರ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸಲಾಗುವುದು. ಈ ಸಾಲಿನಲ್ಲಿ 2900 ನಿಗದಿ ಮಾಡಿತ್ತು. ಕಳೆದ ಸಾಲಿಗಿಂತ ಹೆಚ್ಚುವರಿಯಾಗಿ 150 ರೂಪಾಯಿ ನೀಡಲು ನಿಗದಿ ಮಾಡಿದೆ. ಇದಲ್ಲದೆ ಎಥೆನಾಲ್ ನಿಂದ ಹೆಚ್ಚುವರಿಯಾಗಿ 50 ರೂಪಾಯಿ ಸೇರಿ 200 ರೂಪಾಯಿಗಳಷ್ಟು ಹೆಚ್ಚುವರಿ ದರ ಸಿಗಲಿದೆ ಎಂದರು.
ದರ ಏರಿಕೆಯಿಂದ ಜಿಲ್ಲೆಯ ರೈತರಿಗೆ 445 ಕೋಟಿ ರೂ. ನೇರವಾಗಿ ತಲುಪಲಿದೆ ಎಂದರು. ಹೀಗೆ ಸಾಕಷ್ಟು ರೈತ ಪರ ಯೋಜನೆಗಳನ್ನು ತಂದಿರುವ ಡಬಲ್ ಇಂಜಿನ್ ಸರ್ಕಾರ ರೈತರ ಅಭಿವೃದ್ಧಿಗೆ ಪಣ ತೊಟ್ಟಿದೆ ಎಂದು ಸರ್ಕಾರದ ಸಾಧನೆಯನ್ನು ನಾಗರಾಜ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮೋರ್ಚಾ ರಾಜ್ಯ ಸಂಚಾಲಕ ಕೊಳೇನಳ್ಳಿ ಬಿ. ಎಂ. ಸತೀಶ್, ಬಾತಿ ಶಿವಕುಮಾರ್, ಅಣಬೇರು ಶಿವಪ್ರಕಾಶ್, ನವೀನ್ ಕುಮಾರ್ ಇನ್ನಿತರರಿದ್ದರು.