* ನನಗೆ ಪಕ್ಷದಲ್ಲಿ ಸ್ಥಾನಮಾನ ನೀಡದೆ ಕಡೆಗಣಿಸಲಾಗಿದೆ ಎಂಬುದು ತಪ್ಪು ಕಲ್ಪನೆ
* ಲೆಹೆರ್ ಸಿಎಂಗ್ ಗೆಲುವು ಖಚಿತ
* ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ಮಿಂಚಿನ ಸಂಚಾರ ನಡೆಸಿದ ವಿಜಯೇಂದ್ರ
ಮೈಸೂರು/ಮಂಡ್ಯ(ಜೂ.08): ಬಿಜೆಪಿಯಲ್ಲಿ ನನಗೆ ಯಾವುದೇ ಸ್ಥಾನಮಾನಗಳನ್ನೂ ನೀಡದೆ ಕಡೆಗಣಿಸಲಾಗಿದೆ ಎನ್ನುವುದು ತಪ್ಪು ಕಲ್ಪನೆಯಾಗಿದೆ. ರಾಜ್ಯ ಬಿಜೆಪಿ ಉಪಾಧ್ಯಕ್ಷನಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ 150 ಸ್ಥಾನ ಗೆಲ್ಲಲು ಹೋರಾಟ ನಡೆಸಲುವುದು ನನ್ನ ಗುರಿಯಾಗಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ಮೇಲ್ಮನೆ ಚುನಾವಣೆ ಪ್ರಚಾರಾರ್ಥವಾಗಿ ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ಮಿಂಚಿನ ಸಂಚಾರ ನಡೆಸಿದ ಅವರು, ಪ್ರಚಾರ ಭಾಷಣ ಮತ್ತು ಸುದ್ದಿಗಾರರ ಜೊತೆ ಮಾತನಾಡುವ ವೇಳೆ, ನಾನು ಈಗಾಗಲೇ ಪಕ್ಷದ ರಾಜ್ಯ ಉಪಾಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದೇನೆ. ಮುಂದಿನ ವಿಧಾನ ಸಭಾ ಚುನಾವಣೆ ವೇಳೆ ನನ್ನ ಅಧಿಕಾರವನ್ನು ಸಮರ್ಥವಾಗಿ ಬಳಕೆ ಮಾಡಿಕೊಂಡ ಪಕ್ಷ ಸಂಘಟನೆ ಜೊತೆಗೆ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ 150 ಸ್ಥಾನಗಳನ್ನು ಗೆಲುವಿನ ಹೋರಾಟ ನಡೆಸುವುದು ನನ್ನ ಗುರಿಯಾಗಿದೆ ಎಂದು ತಿಳಿಸಿದರು.
undefined
ನಾನೇನಾಗಬೇಕೆಂದು ಪಕ್ಷ ತೀರ್ಮಾನಿಸುತ್ತೆ:
ಇದೇ ವೇಳೆ ನನ್ನ ತಂದೆ ಯಡಿಯೂರಪ್ಪ ಅವರು ಮಗನನ್ನು ಎಂಎಲ್‌ಸಿ ಮಾಡಿ ಎಂದು ಯಾರನ್ನೂ ಕೇಳಿರಲಿಲ್ಲ. ನಾನು ಏನಾಗಬೇಕು ಎಂಬುದನ್ನು ಪಕ್ಷ ತೀರ್ಮಾನಿಸುತ್ತದೆ. ಈ ಬಗ್ಗೆ ಕಾಂಗ್ರೆಸ್ ನಾಯಕರು ತಲೆಕೆಡಿಸಿಕೊಳ್ಳುವುದು ಬೇಡ ಎಂದು ಸಲಹೆ ನೀಡಿದರು. ಜೊತೆಗೆ ಮುಂದಿನ ವಿಧಾನಸಭೆಯಲ್ಲಿ ನಾನು ಎಲ್ಲಿಂದ ಸ್ಪರ್ಧಿಸಬೇಕು ಎಂಬುದನ್ನೂ ಪಕ್ಷ ತೀರ್ಮಾನ ಮಾಡುತ್ತದೆ. ಈ ಬಗ್ಗೆ ಈಗಲೇ ಚರ್ಚೆ ಬೇಡ. ಪಕ್ಷ ಏನೇ ತೀರ್ಮಾನಿಸಿದರೂ ಅದಕ್ಕೆ ನಾನು ಬದ್ಧವಾಗಿರುತ್ತೇನೆ. ಚುನಾವಣೆ ಸ್ಪರ್ಧೆ ಮಾಡು ಎಂದರು ಮಾಡುತ್ತೇನೆ. ಬೇಡ ಎಂದರೂ ಪಕ್ಷಕ್ಕೆ ದುಡಿಯುತ್ತೇನೆ ಎಂದು ಉತ್ತರಿಸಿದರು.
ಇನ್ನು ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವ ಮುನ್ನ ಸವಾಲು ಹಾಕಿದ್ದಾರೆ. ಮತ್ತೆ ಬಿಜೆಪಿಯನ್ನು ಸ್ಪಷ್ಟಬಹುಮತದೊಡನೆ ಅಧಿಕಾರಕ್ಕೆ ತರುವುದಾಗಿ ಹೇಳಿದ್ದಾರೆ. ಅನೇಕರು ರಾಜೀನಾಮೆ ಕೊಟ್ಡ ತಕ್ಷಣ ಮನೆಯಲ್ಲಿ ಹೋಗಿ ಮಲಗುತ್ತಾರೆ. ಆದರೆ ಯಡಿಯೂರಪ್ಪನವರು ಸವಾಲು ಹಾಕಿದ್ದಾರೆ. ಈ ಸವಾಲು ನಮಗಿಂತ ವಿಪಕ್ಷದವರಿಗೆ ಹೆಚ್ಚು ಗೊತ್ತಾಗುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು.
ಲೆಹೆರ್‌ಸಿಂಗ್ ಗೆಲುವು ಖಚಿತ: ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ಮೂರನೇ ಅಭ್ಯರ್ಥಿ ಲೆಹರ್‌ಸಿಂಗ್ ಗೆಲುವು ಖಚಿತ ಎಂದು ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯಸಭಾ ಚುನಾವಣೆಯಲ್ಲಿ ಸಂಖ್ಯಾ ಬಲದ ಆಧಾರದಲ್ಲಿ ಬಿಜೆಪಿಯ ನಿರ್ಮಲಾ ಸೀತಾರಾಮನ್, ನಟ ಜಗ್ಗೇಶ್ ಹಾಗೂ ಕಾಂಗ್ರೆಸ್‌ನ ಜೈರಾಂ ರಮೇಶ್ ಗೆಲುವು ಸುಲಭವಾಗಿದೆ. ಉಳಿದಂತೆ ಮತಗಳ ಲೆಕ್ಕಾಚಾರದ ಪ್ರಕಾರ ಮೂರನೇ ಅಭ್ಯರ್ಥಿ ಬಿಜೆಪಿಯ ಲೆಹರ್ ಸಿಂಗ್ ಗೆಲ್ಲುವ ಸಾಧ್ಯತೆ ಬಹಳವಾಗಿದೆ ಎಂದರು.