ಜೆಡಿಎಸ್‌ನತ್ತ ಬಿಜೆಪಿ-ಕಾಂಗ್ರೆಸ್‌ ಮುಖಂಡರ ಚಿತ್ತ..!

By Kannadaprabha NewsFirst Published Jan 23, 2023, 2:30 AM IST
Highlights

ಮಾಜಿ ಸಿಎಂ ಎಚ್‌ಡಿಕೆ ಭೇಟಿಯಾದ ಮಾಜಿ ಶಾಸಕ ಹಾಲಹರವಿ, ತಮಟಗಾರ, ಚಿಂಚೋರೆ, ತವರು ನೆಲದಲ್ಲೇ ಮತ್ತೊಂದು ಪಕ್ಷದ ನಾಯಕನ ಭೇಟಿ/ ಜಿಲ್ಲೆಯ ರಾಜಕಾರಣದಲ್ಲಿ ಸಂಚಲನ. 

ಶಿವಾನಂದ ಗೊಂಬಿ

ಹುಬ್ಬಳ್ಳಿ(ಜ.23):  ವಿಧಾನಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಟಿಕೆಟ್‌ ಘೋಷಣೆಗೂ ಮುನ್ನವೇ ಪಕ್ಷಾಂತರ ಪರ್ವವೂ ಜೋರಾಗುವ ಲಕ್ಷಣ ದಟ್ಟವಾಗುತ್ತಿವೆ. ಬಿಜೆಪಿಯ ಮಾಜಿ ಶಾಸಕ ಸೇರಿದಂತೆ ಕಾಂಗ್ರೆಸ್‌ನ ಇಬ್ಬರು ಪ್ರಮುಖ ಮುಖಂಡರು ಜೆಡಿಎಸ್‌ನತ್ತ ಚಿತ್ತ ಹರಿಸಿದ್ದಾರೆ ಎಂಬ ಗುಲ್ಲು ಜಿಲ್ಲೆಯಲ್ಲಿ ಹಬ್ಬಿದೆ. ಇದು ಜಿಲ್ಲಾ ರಾಜಕೀಯದಲ್ಲಿ ಭಾರೀ ಸಂಚಲನ ಉಂಟುಮಾಡಿದೆ.

ಬಿಜೆಪಿ ನಾಯಕ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಕಾಂಗ್ರೆಸ್‌ನ ಇಸ್ಮಾಯಿಲ್‌ ತಮಟಗಾರ ಹಾಗೂ ದೀಪಕ ಚಿಂಚೋರೆ ಜೆಡಿಎಸ್‌ ವರಿಷ್ಠ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಚರ್ಚೆ ಕೂಡ ನಡೆಸಿದ್ದಾರೆ ಎನ್ನಲಾಗಿದೆ.
ಕಳೆದ ಎರಡ್ಮೂರು ದಶಕದಿಂದ ಬಿಜೆಪಿಯಲ್ಲಿ ಗುರುತಿಸಿಕೊಂಡವರು ಹಾಲಹರವಿ 2008ರಲ್ಲಿ ಪೂರ್ವ ಕ್ಷೇತ್ರದಿಂದ ಸ್ಪರ್ಧಿಸಿ ಗೆಲವು ಕಂಡವರು. 2013ರಲ್ಲೂ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಆದರೆ ಆಗ ಬಿಜೆಪಿ-ಕೆಜೆಪಿ ಜಗಳದಲ್ಲಿ ಕಾಂಗ್ರೆಸ್‌ನ ಪ್ರಸಾದ ಅಬ್ಬಯ್ಯ ಆರಿಸಿ ಬಂದರು. ಬಳಿಕ 2018ರಲ್ಲಿ ಬಿಜೆಪಿ ಇವರಿಗೆ ಟಿಕೆಟ್‌ ನೀಡಿರಲಿಲ್ಲ. ಇದು ಹಾಲಹರವಿಗೆ ಅಸಮಾಧಾನವನ್ನುಂಟು ಮಾಡಿತ್ತು. ಇದೀಗ 2023ರ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿದ್ದಾರೆ.

ನನಗೆ ಮೋದಿ ಕಂಡರೆ ಭಯವಿಲ್ಲ, ನನ್ನನ್ನು ಕಂಡರೆ ಬಿಜೆಪಿಯವರಿಗೆ ಭಯ: ಸಿದ್ದರಾಮಯ್ಯ

ಆದರೆ ಇಷ್ಟರ ನಡುವೆಯೇ ಎರಡು ದಿನದ ಹಿಂದೆಯಷ್ಟೇ ನಗರಕ್ಕೆ ಆಗಮಿಸಿದ್ದ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಇಲ್ಲಿನ ವಿಮಾನ ನಿಲ್ದಾಣದಲ್ಲಿ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಬಿಜೆಪಿಯಲ್ಲಿ ಟಿಕೆಟ್‌ ಸಿಗುವುದಿಲ್ಲ ಎಂಬುದು ಹಾಲಹರವಿ ಅವರಿಗೆ ಖಚಿತವಾಗಿದೆಯೇ? ಅದಕ್ಕಾಗಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರಾ? ಎಂಬಂತಹ ಪ್ರಶ್ನೆಗಳು ಇದೀಗ ಮುನ್ನೆಲೆಗೆ ಬಂದಿವೆ. ಈ ಬಗ್ಗೆ ಪ್ರಶ್ನಿಸಿದರೆ, ‘ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಭೇಟಿಯಾಗಿದ್ದೇನೋ ಇಲ್ಲವೋ ಎಂಬುದನ್ನು ತಿಳಿಸುವುದಿಲ್ಲ’ ಎಂದಿರುವುದು ಇನ್ನಷ್ಟುಅನುಮಾನಕ್ಕೆ ಕಾರಣವಾಗಿದೆ.

ಚಿಂಚೋರೆ-ತಮಾಟಗಾರ:

ಕಾಂಗ್ರೆಸ್‌ ಮುಖಂಡ ದೀಪಕ ಚಿಂಚೋರೆ ಕೂಡ ಕುಮಾರಸ್ವಾಮಿ ಅವರನ್ನು ಕಂಡು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಚಿಂಚೋರೆ ಪಶ್ಚಿಮ ಕ್ಷೇತ್ರದ ಕಾಂಗ್ರೆಸ್‌ನ ಪ್ರಬಲ ಆಕಾಂಕ್ಷಿ. ಆದರೆ ಇದನ್ನು ತಳ್ಳಿಹಾಕುವ ಚಿಂಚೋರೆ, ‘ನಾನು ಯಾರನ್ನೂ ಭೇಟಿಯೇ ಮಾಡಿಲ್ಲ. ಇದು ವಿರೋಧ ಪಕ್ಷಗಳ ಷಡ್ಯಂತ್ರ’ ಎಂದಿದ್ದಾರೆ.

ಧಾರವಾಡ ಗ್ರಾಮೀಣ ಕ್ಷೇತ್ರದ ಪ್ರಬಲ ಆಕಾಂಕ್ಷಿ ಇಸ್ಮಾಯಿಲ್‌ ತಮಟಗಾರ ಕೂಡ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್‌ನಿಂದ ಟಿಕೆಟ್‌ ಬಯಸಿ ಇವರು ಕೆಪಿಸಿಸಿಗೆ ಅರ್ಜಿ ಸಲ್ಲಿಸಿರುವುದುಂಟು. ಕಾಂಗ್ರೆಸ್‌ ಇನ್ನೂ ಅಭ್ಯರ್ಥಿಗಳನ್ನು ಅಖೈರುಗೊಳಿಸಿಲ್ಲ. ಅಷ್ಟರೊಳಗೆ ಇದೀಗ ಕುಮಾರಸ್ವಾಮಿ ಅವರನ್ನೂ ಭೇಟಿ ಮಾಡಿ ಚರ್ಚಿಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಈ ಬಗ್ಗೆ ಪ್ರತಿಕ್ರೀಯಿಸಲು ತಮಟಗಾರ ಸಂಪರ್ಕಕ್ಕೆ ಸಿಗಲಿಲ್ಲ.

ಈ ಮೂವರು ಮುಖಂಡರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ ಎಂಬ ಗುಲ್ಲು ಮಾತ್ರ ಇಡೀ ಜಿಲ್ಲೆಯಲ್ಲಿ ಹಬ್ಬಿದ್ದು, ಸಂಚಲನ ಮೂಡಿಸಿರುವುದಂತೂ ಸತ್ಯ. ಇನ್ನು ಎಲ್ಲರೂ ಬಿಟ್ಟು ಹೋಗಿ ಅಸ್ತಿತ್ವದಲ್ಲಿದ್ದ ಜೆಡಿಎಸ್‌ಗೆ ಈ ಮೂವರು ಮುಖಂಡರು ಬಂದರೆ ಕೊಂಚ ಶಕ್ತಿ ಬಂದಂತಾಗುತ್ತದೆ ಎಂಬ ಲೆಕ್ಕಾಚಾರ ಜೆಡಿಎಸ್‌ ಮುಖಂಡರದ್ದು.

ವೀರಭದ್ರಪ್ಪ ಹಾಲಹರವಿ, ಚಿಂಚೋರೆ ಹಾಗೂ ಇಸ್ಮಾಯಿಲ್‌ ತಮಟಗಾರ ಕಳೆದ ಎರಡು ದಿನಗಳ ಹಿಂದೆ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿರುವುದು ಸತ್ಯ. ಜೆಡಿಎಸ್‌ಗೆ ಸೇರ್ಪಡೆ ಕುರಿತಂತೆ ಕುಮಾರಸ್ವಾಮಿ ಏನು ಪ್ರತಿಕ್ರಿಯೆ ನೀಡಿದ್ದಾರೆ ಎಂಬುದು ಮಾತ್ರ ಗೊತ್ತಾಗಿಲ್ಲ. ಪಕ್ಷಕ್ಕೆ ಸೇರಿಸಿಕೊಳ್ಳುವುದಾದರೂ ಎಲ್ಲವನ್ನು ಪರಿಶೀಲಿಸಿಯೇ ಸೇರ್ಪಡೆ ಮಾಡಿಕೊಳ್ಳಲಾಗುತ್ತದೆ ಅಂತ ಜೆಡಿಎಸ್‌ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ ಹೇಳಿದ್ದಾರೆ. 

Election Canvass: ಶೆಟ್ಟರ್‌ ಪ್ರಚಾರಕ್ಕೆ ಬಂದ ಪಟಪಟ ಪಾರ್ವತಿ!

ಸಮಯ ಬಂದಾಗ ಎಲ್ಲವನ್ನು ತಿಳಿಸುತ್ತೇನೆ. ಆದರೆ ಸದ್ಯ ಏನನ್ನು ಹೇಳುವುದಿಲ್ಲ. ಈ ಬಗ್ಗೆ ಸದ್ಯ ಏನನ್ನು ಕೇಳಬೇಡಿ ಅಂತ ಮಾಜಿ ಶಾಸಕ ಬಿಜೆಪಿ ಮುಖಂಡ ವೀರಭದ್ರಪ್ಪ ಹಾಲಹರವಿ ತಿಳಿಸಿದ್ದಾರೆ. 

ಕುಮಾರಸ್ವಾಮಿ ಅವರನ್ನು ತಾವೇನೂ ಭೇಟಿ ಮಾಡಿ ಚರ್ಚೆ ನಡೆಸಿಲ್ಲ. ಇದೆಲ್ಲ ಕಪೋಲಕಲ್ಪಿತ. ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತನಾಗಿದ್ದೇನೆ. ಪಶ್ಚಿಮ ಕ್ಷೇತ್ರದ ಪ್ರಬಲ ಆಕಾಂಕ್ಷಿ ಕೂಡ ಆಗಿದ್ದೇನೆ. ಈ ಸಲ ನನಗೆ ಟಿಕೆಟ್‌ ಸಿಗುವ ವಿಶ್ವಾಸವಿದೆ. ಹೀಗಾಗಿ ಬಿಜೆಪಿಯವರು ನನ್ನ ವಿರುದ್ಧ ಈ ರೀತಿ ಸುಳ್ಳು ಹಬ್ಬಿಸಿ ನನ್ನ ಪ್ರಯತ್ನಕ್ಕೆ ಹಿನ್ನಡೆ ಮಾಡಲು ಷಡ್ಯಂತ್ರ ಮಾಡುತ್ತಿದ್ದಾರೆ ಅಂತ ಕಾಂಗ್ರೆಸ್‌ ಮುಖಂಡ ದೀಪಕ ಚಿಂಚೋರೆ ತಿಳಿಸಿದ್ದಾರೆ. 

click me!