ನನ್ನ ಮಗ ನನಗೆ ಬೆಂಬಲವಾಗಿ ನಾಮಪತ್ರ ಸಲ್ಲಿಸಿದ್ದಾನೆ. ನಂತರ ಹಿಂಪಡಿಯುತ್ತಾನೆ ಅಷ್ಟೆಅದಕ್ಕೆ ಬೇರೆ ಅರ್ಥ ಕಲ್ಪಿಸಬೇಕಾಗಿಲ್ಲ: ರಮೇಶ ಜಾರಕಿಹೊಳಿ
ಗೋಕಾಕ(ಏ.19): ಗೋಕಾಕ ಜನರ ಆಶೀರ್ವಾದದಿಂದ 7ನೇ ಬಾರಿಗೆ ಶಾಸಕನಾಗಿ ಆಯ್ಕೆಯಾಗುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ, ಶಾಸಕ ರಮೇಶ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು. ನಗರದ ತಹಸೀಲ್ದಾರ್ ಕಚೇರಿಯಲ್ಲಿ ಮಂಗಳವಾರ ಚುನಾವಣಾಧಿಕಾರಿ ಗೀತಾ ಕೌಲಗಿ ಅವರಿಗೆ ತಮ್ಮ ನಾಮಪತ್ರ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪ್ರತಿಸ್ಫರ್ಧಿ ಅಭ್ಯರ್ಥಿಯನ್ನು ನಾವು ಕಡಿಮೆ ಎಂದು ತಿಳಿಯದೇ ಪ್ರಬಲ ಅಭ್ಯರ್ಥಿ ಎಂದು ಭಾವಿಸಿ ಚುನಾವಣೆ ಎದುರಿಸುತ್ತೇನೆ. ಜಿಲ್ಲೆಯಲ್ಲಿ ನಾನೊಬ್ಬ ಸಾಮಾನ್ಯ ಕಾರ್ಯಕರ್ತ ನನ್ನಕ್ಕಿಂತ ಪ್ರಬಲ ನಾಯಕರು ಇದ್ದಾರೆ. ಮೇ.13ರ ಫಲಿತಾಂಶದವರೆಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಫಲಿತಾಂಶ ಬಂದ ನಂತರ ಮಾತನಾಡುತ್ತೇನೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಮಾತನಾಡಿ, ಗೋಕಾಕ, ಅರಭಾವಿ ಅಷ್ಟೇಯಲ್ಲ ಅಥಣಿ, ಬೆಳಗಾವಿ ಗ್ರಾಮೀಣ, ಕಾಗವಾಡ ಸೇರಿದಂತೆ ಜಿಲ್ಲೆಯ ವಿವಿಧ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯದಲ್ಲಿ ತೋಡಗಲಿದ್ದೇನೆ. ನಾನು 18 ಕ್ಷೇತ್ರಕ್ಕೆ ಬಾಸ್ ಎಂದರು.
undefined
ಬೆಳಗಾವಿ ಬಂಡಾಯ ಶಮನ: ನಾಯಕರ ಜೊತೆ ಬಿ.ಎಲ್. ಸಂತೋಷ್ ಸಭೆ
ಕಳೆದ ಬೈ ಎಲೆಕ್ಷನ್‌ನಲ್ಲಿ ಸಹೋದರ ರಮೇಶ ವಿರುದ್ಧ ನಾನು ಪ್ರತಿಸ್ಫರ್ಧಿಯಾಗಿ ಕಣದಲ್ಲಿದ್ದೆ. ಆಗಲೂ ರಮೇಶ ಜಾರಕಿಹೊಳಿ ಅಭೂತಪೂರ್ವ ಗೆಲುವು ಸಾಧಿಸಿದ್ದರು. ಈ ಬಾರಿ ರಮೇಶ ಜಾರಕಿಹೊಳಿ ಅವರೊಂದಿಗೆ ನಾವು ಇದ್ದೇವೆ. ಈ ಬಾರಿ ರಮೇಶ ಜಾರಕಿಹೊಳಿ ಅವರ 50 ಸಾವಿರಕ್ಕೂ ಅಧಿಕ ಲೀಡ್ ಪಡೆಯಲಿದ್ದಾರೆ. ನಮಗೆ ಪಂಚಮಸಾಲಿ ಸೇರಿದಂತೆ ಎಲ್ಲ ಸಮಾಜಗಳ ಬೆಂಬಲವಿದೆ ಎಂದು ತಿಳಿಸಿದರು.
ರಮೇಶ ಜಾರಕಿಹೊಳಿ ಹೊರಗೆ ಸಂಚರಿಸಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕೈಗೊಳ್ಳಲಿ. ನಾವು ನಮ್ಮ ಬೆಂಬಲಿಗರು ರಮೇಶ ಪರ ಪ್ರಚಾರ ಕೈಗೊಳ್ಳುತ್ತೇವೆ. ಸಹೋದರ ರಮೇಶ-ಬಾಲಚಂದ್ರ ಅಷ್ಟೆಯಲ್ಲ ಕೋರೆ, ಕತ್ತಿ, ಜೊಲ್ಲೆ ಸೇರಿ ಬಿಜೆಪಿ ಪಕ್ಷದ 16ಕ್ಕೂ ಹೆಚ್ಚು ಅಭ್ಯರ್ಥಿಗಳ ಗೆಲುವಿಗೆ ಕೆಲಸ ಮಾಡುತ್ತಾರೆ. ಎಲ್ಲ ಮತಕ್ಷೇತ್ರಗಳಲ್ಲಿ 15 ಸಾವಿರಕ್ಕೂ ಹೆಚ್ಚು ಜನ ನನ್ನ ಬೆಂಬಲಿಗರಿದ್ದಾರೆ. ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಏನು ಮಾಡಬೇಕು ಅದನ್ನು ನಾವು ಮಾಡುತ್ತೇವೆ ನೋಡುತ್ತಿರಿ ಎಂದು ಬಿಜೆಪಿಗೆ ಬೆಂಬಲ ನೀಡಿದರು.
ನಾಮಪತ್ರ ಸಲ್ಲಿಕೆ ವೇಳೆ ಗೋಕಾಕ ಮತಕ್ಷೇತ್ರದಿಂದ ಬಂದಿದ್ದ ಸಹಸ್ರ ಸಹಸ್ರ ಸಂಖ್ಯೆಯ ಜನಸಾಗರ ತನ್ನ ನೆಚ್ಚಿನ ನಾಯಕ ರಮೇಶ ಜಾರಕಿಹೊಳಿ ಪರ ಜಯ ಘೋಷ ಹಾಕಿ ನಗರದೂದ್ದಕ್ಕು ಹೂ ಮಳೆಗೈದು ಸ್ವಾಗತಿಸಿದ್ದು, ಎಲ್ಲರ ಗಮನ ಸೆಳೆಯಿತು.
ಬೃಹತ್ ಕಾರ್ಯಕರ್ತರೊಂದಿಗೆ ರಮೇಶ ಮತ್ತೊಮ್ಮೆ ಉಮೇದುವಾರಿಕೆ ಸಲ್ಲಿಕೆ
ಬಿಜೆಪಿ ಅಭ್ಯರ್ಥಿಯಾಗಿ ಶಾಸಕ ರಮೇಶ ಜಾರಕಿಹೊಳಿ ಏ.13ರಂದು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದು, ಮಂಗಳವಾರದಂದು ತಮ್ಮ ಬೃಹತ್ ಕಾರ್ಯಕರ್ತರೊಂದಿಗೆ ಮತ್ತೊಮ್ಮೆ ಉಮೇದುವಾರಿಕೆ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆಗೆ ಮುನ್ನ 40 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಹಾಗೂ ಬೆಂಬಲಿಗರೊಂದಿಗೆ ನಗರದ ಕೊಳವಿ ಹನಮಂತ ದೇವರ ದೇವಸ್ಥಾನದಿಂದ ಸಂಗೋಳ್ಳ ರಾಯಣ್ಣ ವೃತ್ತ, ಬಸ್ ನಿಲ್ದಾಣ ಮಾರ್ಗವಾಗಿ ಬಸವೇಶ್ವರ ವೃತ್ತದವರೆಗೆ ಮೆರವಣಿಗೆ ನಡೆಸಿ, ಶಕ್ತಿ ಪ್ರದರ್ಶನ ಮಾಡಿದರು. ಬಿಜೆಪಿ ಅಭ್ಯರ್ಥಿ, ಶಾಸಕ ರಮೇಶ ಜಾರಕಿಹೊಳಿ ಅಭಿಮಾನಿಗಳು ನಗರದ ಬಸವೇಶ್ವರ ವೃತ್ತದಲ್ಲಿ ಸುಮಾರು ಎರಡು ಕ್ವಿಂಟಾಲ್ ಹೂವಿನ ಹಾರವನ್ನು ಕ್ರೇನ್ ಮೂಲಕ ಹಾಕಿ ಅಭಿನಂದಿಸಿದರು.
ತಹಸೀಲ್ದಾರ್ ಕಚೇರಿಯಲ್ಲಿ ಚುನಾವಣಾಧಿಕಾರಿ ಗೀತಾ ಕೌಲಗಿ ಅವರಿಗೆ ತಮ್ಮ ನಾಮಪತ್ರ ಸಲ್ಲಿಕೆ ಮಾಡಿದರು. ಈ ವೇಳೆ ಸಹೋದರ ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ, ಸುಪುತ್ರರಾದ ಅಮರನಾಥ ಜಾರಕಿಹೊಳಿ, ಸರ್ವೋತ್ತಮ ಜಾರಕಿಹೊಳಿ, ನಗರಸಭೆ ಅಧ್ಯಕ್ಷ ಜಯಾನಂದ ಹುಣ್ಣಚ್ಯಾಳಿ, ಬಿಜೆಪಿ ನಗರಾಧ್ಯಕ್ಷ ಭೀಮಶಿ ಭರಮನ್ನವರ, ಗ್ರಾಮೀಣ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ ಸೇರಿ ಮತ್ತಿತರ ನಾಯಕರು ಸಾಥ್ ನೀಡಿದರು.
ನನ್ನ ಮಗ ನನಗೆ ಬೆಂಬಲವಾಗಿ ನಾಮಪತ್ರ ಸಲ್ಲಿಸಿದ್ದಾನೆ. ನಂತರ ಹಿಂಪಡಿಯುತ್ತಾನೆ ಅಷ್ಟೆಅದಕ್ಕೆ ಬೇರೆ ಅರ್ಥ ಕಲ್ಪಿಸಬೇಕಾಗಿಲ್ಲ ಅಂತ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಹೇಳಿದ್ದಾರೆ.
'ಕರ್ನಾಟಕದಲ್ಲಿ ಈ ಬಾರಿ ಕಾಂಗ್ರೆಸ್‌ಗೆ 150ಕ್ಕೂ ಹೆಚ್ಚು ಸ್ಥಾನ'
ಸವದಿ ಚಿತ್ತ ಮೊದಲಿನಿಂದಲೂ ಕಾಂಗ್ರೆಸ್ ಪಕ್ಷದತ್ತ ಇದ್ದು ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದು ಒಳ್ಳೆಯದಾಗಿದೆ. ವಿಧಾನ ಪರಿಷತ ಚುನಾವಣೆ ವೇಳೆ ಕಾಂಗ್ರೆಸ್ ಶಾಸಕರೊಂದಿಗೆ ಸಂಪರ್ಕ ಮಾಡಿ ಬಿಜೆಪಿ ಅಭ್ಯರ್ಥಿ ಸೊಲಿಗೆ ಕಾರಣರಾದರು. ಈ ಬಾರಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಬರಲಿದೆ ಅಂತ ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.