ಬಹುಮತದೊಡನೆ ಬಿಜೆಪಿ ಮತ್ತೆ ಅಧಿಕಾರಕ್ಕೆ: ಕೆ.ಎಸ್‌.ಈಶ್ವರಪ್ಪ

By Kannadaprabha NewsFirst Published Mar 4, 2023, 11:59 PM IST
Highlights

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೈಗೊಂಡಿರುವ ವಿಜಯ ಸಂಕಲ್ಪ ಯಾತ್ರೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು, ನಿಚ್ಚಳ ಬಹುಮತದೊಡನೆ ಮತ್ತೆ ಅಧಿಕಾರಕ್ಕೆ ಬರುವುದಾಗಿ ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು. 

ಮೈಸೂರು (ಮಾ.04): ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೈಗೊಂಡಿರುವ ವಿಜಯ ಸಂಕಲ್ಪ ಯಾತ್ರೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು, ನಿಚ್ಚಳ ಬಹುಮತದೊಡನೆ ಮತ್ತೆ ಅಧಿಕಾರಕ್ಕೆ ಬರುವುದಾಗಿ ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು. ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಎಸ್ಸಿ, ಎಸ್ಟಿಮೀಸಲಾತಿ ಪ್ರಮಾಣ ಹೆಚ್ಚಳ, ದಲಿತರು ಮತ್ತು ಹಿಂದುಳಿದವರಿಗೆ ಆದ್ಯತೆ, ಸೇರಿದಂತೆ ಹಲವಾರು ಯೋಜನೆ ಜಾರಿಗೊಳಿಸಿದೆ. ನಾವು ನೀಡಿದ್ದ ಭರವಸೆಯನ್ನು ಈಡೇರಿಸಿದ್ದೇವೆ. ಇದರಿಂದಾಗಿ ಬಿಜೆಪಿ ಕೈಗೊಂಡಿರುವ ವಿಜಯ ಸಂಕಲ್ಪ ಯಾತ್ರೆಗೆ ನಿರೀಕ್ಷೆಗೂ ಮೀರಿದ ಬೆಂಬಲ ವ್ಯಕ್ತವಾಗಿದೆ ಎಂದು ಹೇಳಿದರು.

ಚನ್ನಗಿರಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅವರ ಪುತ್ರ ಲೋಕಾಯುಕ್ತ ಬಲೆಗೆ ಬಿದ್ದು, ಕೋಟ್ಯಂತರ ರೂ. ಪತ್ತೆಯಾದ ಹಿನ್ನೆಲೆಯಲ್ಲಿ ಸಿಎಂ ಬೊಮ್ಮಾಯಿ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಕೆಪಿಸಿಸಿ ಅಧಯಕ್ಷ ಡಿ.ಕೆ. ಶಿವಕುಮಾರ್‌ ಆಗ್ರಹಿಸಿದ್ದಾರೆ. ತಿಹಾರ್‌ ಜೈಲಿಗೆ ಹೋಗಿ ಬಂದಿರುವವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಅವರ ಮನೆ ಮೇಲೆ ರೇಡ್‌ ಆದಾಗ ಕಂತೆ ಕಂತೆ ನೋಟು ದೊರಕಿರುವುದನ್ನು ದೇಶವೇ ನೋಡಿದೆ. ಅವರು ಬೇಲ್‌ ಮೇಲಿದ್ದು, ಮತ್ತೆ ಯಾವಾಗ ಜೈಲಿಗೆ ಹೋಗುತ್ತಾರೋ ಗೊತ್ತಿಲ್ಲ. ಪ್ರಕರಣದ ತನಿಖೆ ನಡೆಯಲಿದ್ದು, ಉಪ್ಪು ತಿಂದವರು ನೀರು ಕುಡಿಯಲೇಬೇಕು. ಯಾರನ್ನೂ ರಕ್ಷಿಸುವ ಪ್ರಶ್ನೆ ಇಲ್ಲ ಎಂದರು.

ಚುನಾವಣೆಗೆ ಬಿಎಸ್‌ವೈ, ಸೋಮಣ್ಣ ಒಟ್ಟಾಗಿ ಹೋಗಬೇಕು: ಮುಖಂಡರು, ಕಾರ್ಯಕರ್ತರ ಅಭಿಮತ

ಮುಸ್ಲಿಂ ಮತ ಸಾಕು ಎಂದಿಲ್ಲ: ನಾನು ಅಲ್ಪಸಂಖ್ಯಾತರ ಮತ ಬೇಡ ಎಂದು ಹೇಳಿಲ್ಲ. ಪಿಎಫ್‌ಐ, ಎಸ್‌ಡಿಪಿಎ ಮತಗಳು ನಮಗೆ ಬೇಕಿಲ್ಲ. ಭಯೋತ್ಪಾದನೆ ಬೆಂಬಲಿಸುವ ಸಂಘಟನೆಗಳ ಮತ ನಮಗೆ ಬೇಕಿಲ್ಲ. ನಮ್ಮೊಂದಿಗಿರುವ ರಾಷ್ಟ್ರೀಯವಾದಿ ಮುಸ್ಲಿಮರು ನಮಗೆ ಮತ ಹಾಕುತ್ತಾರೆ ಎಂದು ಅವರು ಹೇಳಿದರು. ಬಿಜೆಪಿಗಿಂತ ಕಾಂಗ್ರೆಸ್‌ ನಾಯಕರು ಹೆಚ್ಚು ಉತ್ಸಾಹದಲ್ಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಈಶ್ವರಪ್ಪ ಕಳೆದ ಲೋಕಸಭಾ ಚುನಾವಣೆಯಲ್ಲೂ ಇದೇ ರೀತಿ ಉತ್ಸಾಹದಲ್ಲಿದ್ದರು. ಬಿಜೆಪಿ ಒಂದು ಸ್ಥಾನವನ್ನೂ ಗೆಲ್ಲುವುದಿಲ್ಲ ಎನ್ನುತ್ತಿದ್ದರು. ಆದರೆ ಅವರ ಪರಿಸ್ಥಿತಿ ಏನಾಯಿತು? 

ಸಿದ್ದರಾಮಯ್ಯ ಚುನಾವಣೆಗೂ ಮುನ್ನ ಜನರ ಮುಂದೆ ಘೋಷಿಸಿ ಪಟಾಕಿ ಹೊಡೆಯುವುದರಲ್ಲಿ ಮುಂದು. ಈ ಚುನಾವಣೆಯಲ್ಲೂ ಅದನ್ನೇ ಮಾಡುತ್ತಿದ್ದಾರೆ. ಆದರೆ, ಜನರಿಗೆ ಯಾರು ಅಭಿವೃದ್ಧಿ ಪರವಾಗಿದ್ದಾರೆ ಎಂದು ಗೊತ್ತಿದೆ. ಹೀಗಾಗಿ ಈ ಬಾರಿ ಬಿಜೆಪಿಗೆ ಮತ ಹಾಕುತ್ತಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ರಾಜೇಂದ್ರ, ನಗರಾಧ್ಯಕ್ಷ ಟಿ.ಎಸ್‌. ಶ್ರೀವತ್ಸ, ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್‌, ಸಹ ಸಂಚಾಲಕ ದತ್ತಾತ್ರೇಯ, ಜಿಲ್ಲಾ ಸಂಚಾಲಕ ಮಹದೇವು, ಮೈ.ವಿ. ರವಿಶಂಕರ್‌, ಮುಖಂಡರಾದ ಕಾ.ಪು. ಸಿದ್ದಲಿಂಗಸ್ವಾಮಿ, ಜಿಲ್ಲಾ ವಕ್ತಾರ ವಸಂತಕುಮಾರ್‌ ಇದ್ದರು.

ಎಚ್‌ಡಿಕೆಯವರನ್ನು ಮುಖ್ಯಮಂತ್ರಿ ಮಾಡುವುದೇ ದೇವೇಗೌಡರ ಕೊನೆಯ ಆಸೆ: ಶಾಸಕ ಜಿ.ಟಿ.ದೇವೇಗೌಡ

ಸಾಧನೆ ಮೇಲೆ ಚುನಾವಣೆ ಎದುರಿಸುತ್ತಿದ್ದೇವೆ: ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಚುನಾವಣೆ ವ್ಯವಸ್ಥಿತವಾಗಿ ನಡೆಯುತ್ತಿದೆ. ಸರ್ಕಾರದ ಕೆಲಸ ಕಾರ್ಯವನ್ನು ಜನರ ಮುಂದಿಡುತ್ತಿದ್ದೇವೆ. ಕಾಂಗ್ರೆಸ್‌, ಜೆಡಿಎಸ್‌ ಕೇವಲ ಪ್ರಚಾರಕ್ಕಾಗಿ ಯಾತ್ರೆ ನಡೆಸುತ್ತಿದ್ದಾರೆ ಅಷ್ಟೆ. ಆದರೆ ನಾವು ನಮ್ಮ ಕಾರ್ಯಕ್ರಮವನ್ನು ಮೌಲ್ಯಮಾಪನ ಮಾಡಿ ಮತ ಕೇಳುತ್ತಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಹೇಳಿದರು. ನಮ್ಮ ಕೆಲಸ ಎಲ್ಲರನ್ನೂ ತಲುಪಿರುವುದರಿಂದ ಜನರ ಸ್ಪಂದನೆಯೂ ಉತ್ತಮವಾಗಿದೆ. ಘೋಷಣೆಗಳ ಆಧಾರದ ಮೇಲೆ ಚುನಾವಣೆ ಎದುರಿಸದೆ ಸಾಧನೆಯ ಆಧಾರದ ಮೇಲೆ ಚುನಾವಣೆ ಎದುರಿಸುತ್ತಿದ್ದೇವೆ ಎಂದರು. ಸಚಿವ ವಿ. ಸೋಮಣ್ಣ ಅವರಿಗೆ ಪೂರ್ವ ನಿಯೋಜಿತ ಕಾರ್ಯಕ್ರಮ ಇದ್ದುದರಿಂದ ಚಾಮರಾಜನಗರದ ವಿಜಯ ಸಂಕಲ್ಪ ಯಾತ್ರೆಗೆ ಗೈರಾದರು. ಇದರಲ್ಲಿ ಯಾವುದೇ ಅಸಮಧಾನ ಇಲ್ಲ ಎಂದು ಸ್ಪಷ್ಟನೆ ನೀಡಿದರು.

click me!