ಅಧಿಕಾರಕ್ಕಾಗಿ ರಾಜಕೀಯ, ಈ ಮಾತಿಗೆ ಸಂಸದೀಯ ಸಮಿತಿಯಿಂದ ಹೊರಬಿದ್ರಾ ನಿತಿನ್‌ ಗಡ್ಕರಿ?

By Santosh NaikFirst Published Aug 17, 2022, 4:04 PM IST
Highlights

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ದೊಡ್ಡ ಮಟ್ಟದ ಬದಲಾವಣೆಯಾಗಿದೆ. ನರೇಂದ್ರ ಮೋದಿ ಹೊರತಾಗಿ ಬಿಜೆಪಿಯಲ್ಲಿ ಪ್ರಧಾನಮಂತ್ರಿ ಹುದ್ದೆಗೆ ಪರ್ಯಾಯ ಎಂದೇ ಹೇಳಲಾಗುತ್ತಿದ್ದ ಮಹಾರಾಷ್ಟ್ರ ರಾಜಕೀಯದ ಅನುಭವಿ ನಾಯಕ ಹಾಗೂ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರನ್ನು ಬಿಜೆಪಿಯ ಸಂಸದೀಯ ಸಮಿತಿ ಹಾಗೂ ಕೇಂದ್ರ ಚುನಾವಣಾ ಸಮಿತಿಯಿಂದ ಕೈಬಿಡಲಾಗಿದೆ. ಕೇಂದ್ರ ಚುನಾವಣಾ ಸಮಿತಿಯಲ್ಲಿ ನಿತನ್‌ ಗಡ್ಕರಿ ಸ್ಥಾನಕ್ಕೆ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ಅವರನ್ನು ಆಯ್ಕೆ ಮಾಡಲಾಗಿದೆ. ಇದರ ಬೆನ್ನಲ್ಲಿಯೇ ರಾಜಕೀಯ ಲೆಕ್ಕಾಚಾರಗಳು ಆರಂಭವಾಗಿದೆ.
 

ನವದೆಹಲಿ (ಆ.17): ಬಿಜೆಪಿಯ ಸಂಸದೀಯ ಸಮಿತಿಯಲ್ಲಿ ಕರ್ನಾಟಕದ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಸೇರಿಸಿದ್ದು ಎಷ್ಟು ದೊಡ್ಡ ವಿಚಾರವವೋ ಅಷ್ಟೇ ದೊಡ್ಡ ಸಂಗತಿ ನಿತಿನ್‌ ಗಡ್ಕರಿ ಹಾಗೂ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರನ್ನು ಕೈಬಿಟ್ಟಿರುವುದು. ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಅರುಣ್‌ ಸಿಂಗ್‌, ಬುಧವಾರ 11 ಸದಸ್ಯರ ಸಂಸದೀಯ ಸಮಿತಿ ಹಾಗೂ 15 ಸದಸ್ಯರ ಕೇಂದ್ರ ಚುನಾವಣಾ ಸಮಿತಿಯ ಪಟ್ಟಿಯನ್ನು ಪ್ರಕಟಿಸಿದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಯಾವ ಸಮಿತಿಯಲ್ಲೂ ಸ್ಥಾನ ಪಡೆದಿಲ್ಲ. ನಿತಿನ್‌ ಗಡ್ಕರಿ ಅವರನ್ನು ಕೇಂದ್ರ ಚುನಾವಣಾ ಆಯೋಗಕ್ಕೂ ಪರಿಗಣನೆ ಮಾಡಿಲ್ಲ. ಅವರ ಬದಲು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ಗೆ ಮಣೆ ಹಾಕಲಾಗಿದೆ. 2013ರಲ್ಲಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರನ್ನು ಸಂಸದೀಯ ಸಮಿತಿಗೆ ಸೇರಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಇರುವ ಸಂಸದೀಯ ಸಮಿತಿ ಹಾಗೂ ಚುನಾವಣಾ ಸಮಿತಿಯಲ್ಲಿ ಯಾವುದೇ ರಾಜ್ಯದ ಮುಖ್ಯಮಂತ್ರಿಯನ್ನೂ ಪರಿಗಣನೆ ಮಾಡಲಾಗಿಲ್ಲ. ಇವೆಲ್ಲದರ ನಡುವೆ ಹಿರಿಯ ರಾಜಕಾರಣಿ ನಿತಿನ್‌ ಗಡ್ಕರಿ ಅವರನ್ನು ಈ ಸಮಿತಿಯಿಂದ ಕೈಬಿಟ್ಟಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ.

ರಾಜಕೀಯ ತೊರೆಯಬೇಕು ಎಂದನಿಸಿದೆ: ಸಾಮಾಜಿಕ ಕಾರ್ಯಕರ್ತ ಗಿರೀಶ್ ಗಾಂಧಿ ಅವರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ನಿತಿನ್‌ ಗಡ್ಕರಿ ಇತ್ತೀಚೆಗೆ ಭಾಗವಹಿಸಿದ್ದರು. ಕಳೆದ ತಿಂಗಳು ನಡೆದಿದ್ದ ಈ ಕಾರ್ಯಕ್ರಮದಲ್ಲಿ ಮಾತನಾಡಿದ್ದ ನಿತಿನ್‌ ಗಡ್ಕರಿ, ಕೆಲವೊಮ್ಮೆ ನನಗೆ ರಾಜಕೀಯವನ್ನು ಬಿಟ್ಟುಬಿಡಬೇಕು ಎಂದನಿಸುತ್ತದೆ. ರಾಜಕೀಯದ ಹೊರತಾಗಿಯೂ ಸಮಾಜವನ್ನು ಉದ್ಧಾರ ಮಾಡುವ ಸಾಕಷ್ಟು ಕೆಲಸಗಳನ್ನು ಮಾಡಬಹುದು ಎನ್ನುವುದು ನನ್ನ ಅಭಿಪ್ರಾಯ. ಮಹಾತ್ಮಾ ಗಾಂಧಿ ಇದ್ದ ಸಮಯದಲ್ಲಿ ಇರುತ್ತಿದ್ದ ರಾಜಕಾರಣಕ್ಕೂ ಈಗಿನ ರಾಜಕಾರಣಕ್ಕೂ ಸಾಕಷ್ಟು ಬದಲಾವಣೆಯಾಗಿದೆ ಎಂದು ಅವರು ಹೇಳಿದ್ದರು. ಬಾಪು ಅವರ ಕಾಲದಲ್ಲಿ ದೇಶಕ್ಕಾಗಿ, ಸಮಾಜಕ್ಕಾಗಿ ಹಾಗೂ ಅಭಿವೃದ್ಧಿಗಾಗಿ ರಾಜಕಾರಣವನ್ನು ಮಾಡುತ್ತಿದ್ದರು. ಆದರೆ, ಈಗ ಕೇವಲ ಅಧಿಕಾರಕ್ಕಾಗಿ ರಾಜಕೀಯ ಮಾಡಲಾಗುತ್ತಿದೆ ಎಂದು ಹೇಳಿದ್ದರು. ನಿತಿನ್‌ ಗಡ್ಕರಿ ಅವರ ಈ ಮಾತುಗಳು ಕೂಡ ಈಗ ಮಹತ್ವ ಪಡೆದುಕೊಂಡಿವೆ.

ಸಂಸದೀಯ ಮಂಡಳಿ, ಚುನಾವಣಾ ಸಮತಿಯಲ್ಲಿ BSYಗೆ ಮಹತ್ವದ ಸ್ಥಾನ

ಫಡ್ನವಿಸ್‌ಗೆ ಅವಕಾಶ: ಈ ಎರಡೂ ಹೊಸ ಪಟ್ಟಿಗಳಿಗೆ ರಾಜಕೀಯ ಮಹತ್ವವಿರುವುದು ಖಂಡಿತ. ಇತ್ತೀಚೆಗಷ್ಟೇ ಮಹಾರಾಷ್ಟ್ರದಲ್ಲಿ ಶಿವಸೇನೆಯ ಶಿಂಧೆ ಬಣದೊಂದಿಗೆ ಬಿಜೆಪಿ ಸರ್ಕಾರ ರಚಿಸಿತ್ತು. ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಿದ್ದ ಈ ಸರ್ಕಾರದಲ್ಲಿ ಏಕನಾಥ್ ಶಿಂಧೆ ಅವರನ್ನು ಮುಖ್ಯಮಂತ್ರಿ ಮಾಡಲಾಗಿತ್ತು. ಕೊನೇ ಕ್ಷಣದಲ್ಲಿ ಬದಲಾವಣೆ ಆಗುವವರೆಗೂ ದೇವೇಂದ್ರ ಫಡ್ನವಿಸ್‌ ಮಹಾರಾಷ್ಟ್ರದ ಮುಖ್ಯಮಂತ್ರಿ ಆಗುತ್ತಾರೆ ಎಂದು ಹೇಳಲಾಗಿತ್ತು. ಕೊನೆಯಲ್ಲಿ ಶಿಂಧೆಗೆ ಸಿಎಂ ಸ್ಥಾನ ನೀಡಿದಾಗ, ಫಡ್ನವಿಸ್‌ ತಾವು ಸರ್ಕಾರದಲ್ಲಿ ಯಾವುದೇ ಭಾಗವಾಗುವುದಿಲ್ಲ ಎಂದು ಹೇಳಿದ್ದರು. ಕೊನೆಗೆ ಕೇಂದ್ರ ನಾಯಕತ್ವದ ಆದೇಶದ ಮೇರೆಗೆ ಇದ್ದಕ್ಕಿದ್ದಂತೆ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಇದೀಗ ಮಹಾರಾಷ್ಟ್ರ ರಾಜಕೀಯದ ಬಹುದೊಡ್ಡ ಮುಖವಾದ ನಿತಿನ್ ಗಡ್ಕರಿ ಅವರನ್ನು ಸಂಸದೀಯ ಮಂಡಳಿ ಮತ್ತು ಚುನಾವಣಾ ಸಮಿತಿಯಿಂದ ತೆಗೆದು ಹಾಕಿ ದೇವೇಂದ್ರ ಫಡ್ನವೀಸ್ ಅವರನ್ನು ಈ ಸ್ಥಾನಕ್ಕೆ ತರಲಾಗಿದೆ.

ವಿಜಯೇಂದ್ರ ಸ್ಪರ್ಧೆ ಬಗ್ಗೆ ಮತ್ತೊಂದು ಸ್ಪಷ್ಟನೆ ಕೊಟ್ಟ ಯಡಿಯೂರಪ್ಪ

ಮತ್ತೊಂದೆಡೆ, ಬಿಜೆಪಿ ಕೂಡ ಕರ್ನಾಟಕದ ಸಮೀಕರಣವನ್ನು ಪರಿಹರಿಸಲು ಪ್ರಯತ್ನಿಸಿದೆ. ಕೆಲವು ಸಮಯದ ಹಿಂದೆ ಬಿಜೆಪಿ ಇಲ್ಲಿ ನಾಯಕತ್ವವನ್ನು ಬದಲಾಯಿತ್ತು. ಸಿಎಂ ಆಯ್ಕೆಯಲ್ಲಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಅವರಿಗೆ ಯಾವ ಆಯ್ಕೆಯನ್ನು ನೀಡಲಾಗಿರಲಿಲ್ಲ ಎಂದು ಹೇಳಲಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಅವರನ್ನು ಕೇಂದ್ರದ ರಾಜಕೀಯಕ್ಕೆ ಕರೆತರುವ ಮೂಲಕ ಬಿಜೆಪಿ 2023ರ ವಿಧಾನಸಭಾ ಚುನಾವಣೆಗೂ ಮುನ್ನ ರಾಜ್ಯ ರಾಜಕಾರಣದಲ್ಲಿ ಯಡಿಯೂರಪ್ಪ ಪ್ರಭಾವವನ್ನು ಬಳಸಿಕೊಳ್ಳಲು ಯತ್ನಿಸಿದೆ.
 

click me!