ಸಂಸದೀಯ ಮಂಡಳಿ, ಚುನಾವಣಾ ಸಮತಿಯಲ್ಲಿ BSYಗೆ ಮಹತ್ವದ ಸ್ಥಾನ

By Sharath SharmaFirst Published Aug 17, 2022, 2:34 PM IST
Highlights

BJP High Command appoints BS Yediyuappa to Parliamentary committee and Central Election Committee: ಬಿಜೆಪಿ ಹೈಕಮಾಂಡ್‌ ಬಿಎಸ್‌ ಯಡಿಯೂರಪ್ಪ ಅವರಿಗೆ ದೊಡ್ಡ ಜವಾಬ್ದಾರಿಯನ್ನು ನೀಡಿದ್ದು, ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಓಲೈಕೆ ರಾಜಕಾರಣಕ್ಕೆ ಮುಂದಾಗಿದೆ ಎನ್ನಲಾಗುತ್ತಿದೆ.

ನವದೆಹಲಿ: ಮಾಜಿ ಮುಖ್ಯಮಂತ್ರಿ ಬಿಎಸ್‌  ಯಡಿಯೂರಪ್ಪ ಅವರನ್ನು ಬಿಜೆಪಿ ಮೂಲೆಗುಂಪು ಮಾಡಿದೆ ಎಂಬ ಮಾತುಗಳು ಕೇಳಿ ಬರುತ್ತಿರುವ ಹೊತ್ತಿನಲ್ಲೇ ಬಿಜೆಪಿ ಹೈಕಮಾಂಡ್‌ ಬಿಎಸ್‌ವೈ ಅವರಿಗೆ ದೊಡ್ಡ ಜವಾಬ್ದಾರಿಯನ್ನು ನೀಡಿದೆ. ಬಿಜೆಪಿ ಸಂಸದೀಯ ಮಂಡಳಿ ಮತ್ತು ಕೇಂದ್ರೀಯ ಚುನಾವಣಾ ಸಮಿತಿಯಲ್ಲಿ ಯಡಿಯೂರಪ್ಪ ಅವರಿಗೆ ಸ್ಥಾನ ನೀಡುವ ಮೂಲಕ ಹೈಕಮಾಂಡ್‌ ಅಚ್ಚರಿ ಮೂಡಿಸಿದೆ. ಕೇಂದ್ರ ನಾಯಕರಾದ ನಿತಿನ್‌ ಗಡ್ಕರಿ, ಶಿವರಾಜ್‌ ಸಿಂಗ್‌ ಚೌಹಾಣ್‌ರಂತ ನಾಯಕರನ್ನು ಸಮಿತಿಯಿಂದ ಹೊರಕ್ಕಿಟ್ಟು ಯಡಿಯೂರಪ್ಪ ಅವರಿಗೆ ಈ ಹುದ್ದೆಯನ್ನು ನೀಡಿದೆ. ಜತೆಗೆ ಮತ್ತೊಬ್ಬ ಕನ್ನಡಿಗರಾದ ಬಿಎಲ್‌ ಸಂತೋಶ್‌ ಅವರನ್ನೂ ಸಹ ಸಂಸದೀಯ ಮಂಡಳಿ ಮತ್ತು ಕೇಂದ್ರೀಯ ಚುನಾವಣಾ ಸಮಿತಿಯಲ್ಲಿ ಸ್ಥಾನ ಕಲ್ಪಿಸಲಾಗಿದೆ. 

ಈ ಸಂಬಂಧ ಎರಡೂ ಸಮಿತಿಗಳನ್ನು ಪುನಾರಚನೆ ಮಾಡಿ ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಜೆಪಿ ನಡ್ಡಾ ಆದೇಶ ಹೊರಡಿಸಿದ್ದಾರೆ. ಇದೊಂದು ಅಚ್ಚರಿಯ ರಾಜಕೀಯ ಬೆಳವಣಿಗೆಯಾಗಿದ್ದು ಯಡಿಯೂರಪ್ಪ ಅವರನ್ನು ಸಕ್ರಿಯ ರಾಜಕಾರಣದಲ್ಲೇ ಮುಂದುವರೆಯುವಂತೆ ಮಾಡಲು ಬಿಜೆಪಿ ಮಾಡಿರುವ ಯೋಜನೆಯಂತೆ ಮೇಲ್ನೋಟಕ್ಕೆ ಭಾಸವಾಗುತ್ತಿದೆ. ಜತೆಗೆ ಮುಂಬರುವ ಕರ್ನಾಟಕ ವಿಧಾನ ಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ಅವರ ಬೆಂಬಲವಿಲ್ಲದೇ ಚುನಾವಣೆ ಎದುರಿಸಲು ಸಾಧ್ಯವಿಲ್ಲ ಎಂಬ ಅಂಶ ಬಿಜೆಪಿ ಹೈಕಮಾಂಡ್‌ ತಿಳಿದಿರುವ ವಿಚಾರವೇ. ಇದೇ ಕಾರಣಕ್ಕೆ ಓಲೈಕೆ ರಾಜಕಾರಣಕ್ಕೆ ಹೈಕಮಾಂಡ್‌ ಮಣೆಹಾಕಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. 

ಮುಂಬರುವ ಚುನಾವಣೆಯ ಟಿಕೆಟ್‌ ಹಂಚಿಕೆಯಲ್ಲಿ ಬಿಎಸ್‌ ಯಡಿಯೂರಪ್ಪ ಅವರ ಮಾತು ಮುಖ್ಯವಾಗಲಿದೆ ಎಂಬುದೂ ಈ ಮೂಲಕ ಸ್ಪಷ್ಟವಾಗಿದೆ. ಈ ಬೆಳವಣಿಗೆಗೆ ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, "ಯಡಿಯೂರಪ್ಪ ಅವರನ್ನು ರಾಷ್ಟ್ರ ಮಟ್ಟದ ಸಮಿತಿಗೆ ಆಯ್ಕೆ ಮಾಡಿರುವುದಕ್ಕೆ ಹೈಕಮಾಂಡ್‌ಗೆ ಧನ್ಯವಾದ ಅರ್ಪಿಸಿದ್ದಾರೆ. ಯಡಿಯೂರಪ್ಪ ಅವರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ."

ನವದೆಹಲಿಯಲ್ಲಿ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು "ಬಿಎಸ್ ಯಡಿಯೂರಪ್ಪನವರು ನಮ್ಮ ಪಕ್ಷದ ಹಿರಿಯರು. ಅವರಿಗೆ ಯಾವುದೇ ಸ್ಥಾನಮಾನ ನೀಡಿದರೂ ನಮಗೆ ಖುಷಿ," ಎಂದು ಹೇಳಿದ್ದಾರೆ. 

ಇದನ್ನೂ ಓದಿ: ಅಧಿಕಾರ ಮುಖ್ಯವೂ ಅಲ್ಲ, ಶಾಶ್ವತವೂ ಅಲ್ಲ: ಮಾಜಿ ಸಿಎಂ ಯಡಿಯೂರಪ್ಪ

ಬಿಜೆಪಿಯ ಮಾಸ್‌ ಲೀಡರ್‌ ಯಡಿಯೂರಪ್ಪ:

ಬಿಜೆಪಿಯಲ್ಲಿ ಅತಿದೊಡ್ಡ ನಾಯಕ ಬಿಎಸ್‌ ಯಡಿಯೂರಪ್ಪ ಎಂಬುದು ರಾಜ್ಯದ ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ. ಅವರ ಇಚ್ಛೆಗೆ ವಿರುದ್ಧವಾಗಿ ಪೂರ್ಣಾವಧಿ ಅಧಿಕಾರ ನಿರ್ವಹಿಸಲು ಬಿಡದೇ ಮುಖ್ಯಮಂತ್ರಿ ಸ್ಥಾನದಿಂದ ಹೈಕಮಾಂಡ್‌ ಕೆಳಗಿಳಿಸಲಿದೆ ಎನ್ನಲಾಗಿತ್ತು. ಆ ಸಂದರ್ಭದಲ್ಲಿ ಯಡಿಯೂರಪ್ಪ ಅವರೂ ಕಣ್ಣೀರು ಹಾಕಿದ್ದರು. ಇವೆಲ್ಲವೂ ಬಿಜೆಪಿಯ ಲಿಂಗಾಯತ ವೋಟ್‌ ಬ್ಯಾಂಕ್‌ ಮೇಲೆ ಪರಿಣಾಮ ಬೀರುವುದು ಶತಸಿದ್ಧ ಎನ್ನಲಾಗಿತ್ತು. ಇತ್ತೀಚೆಗೆ ತಮ್ಮ ಸ್ವ ಕ್ಷೇತ್ರ ಶೀಕಾರಿಪುರದಿಂದ ಮಗ ಬಿವೈ ವಿಜಯೇಂದ್ರ ಚುನಾವಣೆ ಎದುರಿಸುತ್ತಾರೆ ಎಂದು ಯಡಿಯೂರಪ್ಪ ಹೇಳಿದ್ದರು. ಆದರೆ ಅದಾದ ನಂತರ ಬೆಳವಣಿಗೆಗಳಿಂದ ಅವರ ಹೇಳಿಕೆಯನ್ನು ವಾಪಸ್‌ ಪಡೆಯಬೇಕಾಗಿ ಬಂತು. 

ಇದನ್ನೂ ಓದಿ: Karnataka Politics ಯಡಿಯೂರಪ್ಪ ಬೆನ್ನಲ್ಲೇ ಕಾಂಗ್ರೆಸ್‌ ನಾಯಕನಿಂದ ಪುತ್ರನಿಗೆ ಕ್ಷೇತ್ರ ತ್ಯಾಗ

ಈ ಎಲ್ಲಾ ಬೆಳವಣಿಗೆಗಳ ಲಾಭ ಪಡೆದ ಕಾಂಗ್ರೆಸ್‌ ನಾಯಕರು, ಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಲಾಗುತ್ತಿದೆ. ಯಡಿಯೂರಪ್ಪ ಅವರನ್ನು ಬಳಸಿಕೊಂಡು ಅಧಿಕಾರ ಹಿಡಿದ ಬಿಜೆಪಿ ಅವರನ್ನು ಕೇರ್‌ ಮಾಡುತ್ತಿಲ್ಲ ಎಂಬೆಲ್ಲಾ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದರು. ಯಡಿಯೂರಪ್ಪ ಅವರಿಗೆ ಪಕ್ಷದಲ್ಲಿ ಬೆಲೆಯಿಲ್ಲ, ಅವರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಮಾತುಗಳೂ ಕೇಳಿ ಬಂದಿದ್ದವು. ಈ ಎಲ್ಲಾ ಆರೋಪಿಗಳಿಗೆ ಬಿಜೆಪಿ ಉತ್ತರ ನೀಡುವ ಸಲುವಾಗಿಯೇ ಕೇಂದ್ರ ಸಂಸದೀಯ ಮಂಡಳಿ ಮತ್ತು ಕೇಂದ್ರೀಯ ಚುನಾವಣಾ ಸಮಿತಿಯಲ್ಲಿ ಅವರಿಗೆ ಸ್ಥಾನ ನೀಡಿರುವ ಸಾಧ್ಯತೆಯಿದೆ. ಜತೆಗೆ ಲಿಂಗಾಯತ ಸಮುದಾಯಕ್ಕೂ ಯಡಿಯೂರಪ್ಪ ಅವರನ್ನು ಪಕ್ಷ ಗೌರವಯುತವಾಗಿ ನಡೆಸಿಕೊಳ್ಳುತ್ತಿದೆ ಎಂಬ ಮಾತು ತಲುಪಿಸುವ ಯತ್ನ ಇದಾಗಿದೆ ಎನ್ನಲಾಗಿದೆ.

click me!