ಸಾವರ್ಕರ್ ಭಾವಚಿತ್ರ ಕಿತ್ತಿದ್ದು ಅಕ್ಷಮ್ಯ ಅಪರಾಧ. ಸಾವರ್ಕರ ದೇಶಕ್ಕಾಗಿ ಹೋರಾಟ ಮಾಡಿದಂಥವರು. ಅವರ ಬಗ್ಗೆ ತಿಳಿಯದೇ ಕಿಡಿಗೇಡಿಗಳು ಈ ರೀತಿ ಮಾಡಿದ್ದಾರೆ: ಕಾರಜೋಳ
ಬೆಳಗಾವಿ(ಆ.17): ಕೀಳುಮಟ್ಟದ ರಾಜಕಾರಣ ಮಾಡಿದ್ದರಿಂದ ಇಂದು ಕಾಂಗ್ರೆಸ್‌ನವರು ಮನೆಯಲ್ಲಿ ಕುಳಿತಿದ್ದಾರೆ. ಇನ್ನು ಅದನ್ನೇ ಮುಂದುವರಿಸಿದರೆ ಸ್ವಚ್ಛವಾಗಿ ಹೋಗುತ್ತಾರೆ. ಜತೆಗೆ ಕಾಂಗ್ರೆಸ್ ಮನೆ ದೀಪಕ್ಕೆ ದಿಕ್ಕಿಲ್ಲದಂತಾಗುತ್ತದೆ ಎಂದು ಹೇಳುವ ಮೂಲಕ ಸಚಿವ ಗೋವಿಂದ ಕಾರಜೋಳ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರು ಕೀಳುಮಟ್ಟದ ರಾಜಕಾರಣ ಮಾಡಿದ್ದರಿಂದಲೇ ಇಂದು ಮೂಲೆಗುಂಪಾಗಿದ್ದಾರೆ. ಇನ್ನು ಅದನ್ನೇ ಅವರು ಮುಂದುವರೆಸಿದರೆ ಸಂಪೂರ್ಣವಾಗಿ ಸ್ವಚ್ಛವಾಗುತ್ತಾರೆ. ನಾನು ಈ ಹಿಂದೆ ಬೆಳಗಾವಿಯಲ್ಲಿ ಹೇಳಿದ್ದೇನೆ. ಕಾಂಗ್ರೆಸ್ ಮನೆ ಹೇಗಾಗುತ್ತದೆ ಎಂದರೆ ದೀಪಕ್ಕೆ ದಿಕ್ಕಿಲ್ಲದಂತಾಗುತ್ತದೆ ಎಂದರು.
ಸಿದ್ದು ಸಿಎಂ ಆಗಲಿ: ಸ್ಪಷ್ಟನೆ ಕೊಡಲು ಹೋಗಿ ಶ್ರೀರಾಮುಲು ಮತ್ತೆ ಯಡವಟ್ಟು, ಪೇಚಿಕೆ ಸಿಲುಕಿದ ಸಚಿವ..!
ಸಿದ್ದರಾಮಯ್ಯ ಟಿಪ್ಪು ಸುಲ್ತಾನರನ್ನು ಪ್ರಶಂಶಿಸುತ್ತಾರೆ. ಆದರೆ ಸಾವರ್ಕರ್ ಅವರನ್ನು ಟೀಕಿಸುತ್ತಾರೆ ಎಂಬುದಕ್ಕೆ ಪ್ರತಿಕ್ರಿಯಿಸಿದ ಅವರು, ಬೆಳಗಾವಿಗೆ ಸಿದ್ದರಾಮಯ್ಯನವರೇ ಬರುತ್ತಾರೆ. ಆಗ ಅವರನ್ನೇ ಕೇಳಿ ಎಂದಷ್ಟೇ ಹೇಳಿದರು.
ಇದೇ ವೇಳೆ ಕಿಡಿಗೇಡಿಗಳು ಸಾವರ್ಕರ್ ಅವರ ಫೋಟೊವನ್ನು ಕಿತ್ತು ಹಾಕಿದ ಕುರಿತಂತೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಸಾವರ್ಕರ್ ಭಾವಚಿತ್ರವನ್ನು ಕಿತ್ತಿದ್ದು ಅಕ್ಷಮ್ಯ ಅಪರಾಧ. ಸಾವರ್ಕರ ದೇಶಕ್ಕಾಗಿ ಹೋರಾಟ ಮಾಡಿದಂಥವರು. ಅವರ ಬಗ್ಗೆ ತಿಳಿಯದೇ ಕಿಡಿಗೇಡಿಗಳು ಈ ರೀತಿ ಮಾಡಿದ್ದಾರೆ. ಯಾರೂ ಈ ರೀತಿ ಮಾಡಬಾರದು. ಈ ದೇಶದಲ್ಲಿ ಎಲ್ಲರೂ ಒಂದೇ ತಾಯಿಯ ಮಕ್ಕಳಂತೆ ಬದುಕಬೇಕು. ನಿನ್ನೆ ಮೋದಿ ಅವರು ಅದನ್ನೇ ಹೇಳಿದ್ದಾರೆ. ಅವರ ಮಾತಿನಲ್ಲೇ ನಾವೆಲ್ಲ ಹೇಗೆ ಬದುಕಬೇಕೆಂಬ ಕುರಿತಂತೆ ಹೇಳಿದ್ದಾರೆ ಎಂದರು.
ಬೆಳಗಾವಿ-ಕಿತ್ತೂರು ಮಾರ್ಗವಾಗಿ ಧಾರವಾಡಕ್ಕೆ ರೈಲು ಮಾರ್ಗವಾಗಬೇಕೆಂದು ದಿ.ಸುರೇಶ ಅಗಂಡಿ ಅವರ ಕನಸಾಗಿತ್ತು. ಕೇಂದ್ರದ ರಾಜ್ಯ ರೈಲ್ವೆ ಖಾತೆ ಸಚಿವರಾಗಿ ಇದರ ಸಲುವಾಗಿ ಸಾಕಷ್ಟುಪ್ರಯತ್ನ ಮಾಡಿದ್ದರು. ಈಗ ಅದು ಒಂದು ಹಂತಕ್ಕೆ ಬಂದಿದೆ. 446 ಎಕರೆ ಒಂದು ವಾರದಲ್ಲಿ ಗೆಜೆಟ್ ನೋಟಿಫಿಕೇಶನ್ ಆಗುತ್ತದೆ. 150 ಎಕರೆ ನೋಟಿಫಿಕೇಶನ್ ಮಾಡಲು ಕಳುಹಿಸಲು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಅಲ್ಲದೆ, ಭೂಸ್ವಾಧೀನಕ್ಕೆ ರಾಜ್ಯ ಬಜೆಟ್‌ನಲ್ಲಿ .300 ಕೋಟಿ ಅನುದಾನ ಮೀಸಲಿಡಲಾಗಿದೆ. ಇದನ್ನು ಆದಷ್ಟುಬೇಗ ಭೂಸ್ವಾಧೀನ ಪೂರ್ಣಗೊಳಿಸಿ ಕಾಮಗಾರಿ ಪ್ರಾರಂಭವಾಗಬೇಕು ಎನ್ನುವುದು ಎಲ್ಲರ ಅಪೇಕ್ಷವಾಗಿದೆ ಎಂದರು.
ಜನಪರ ಯೋಜನೆ ಮೆಚ್ಚಿ ಬಿಜೆಪಿ ಸೇರಿದ 'ಕೈ' ನಾಯಕಿ: ಕಾಂಗ್ರೆಸ್‌ಗೆ ಮುಖಭಂಗ
ಕುಡಚಿ-ಬಾಗಲಕೋಟೆ ರೈಲ್ವೆ ಮಾರ್ಗ 234 ಎಕರೆ ನೋಟಿಫಿಕೇಶನ್ ಆಗಿದೆ. ಇದಕ್ಕೂ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಿದೆ. ಯಾವುದೇ ಹಣದ ಕೊರತೆ ಇಲ್ಲ. ಇದಕ್ಕೆ 8 ದಿನದಲ್ಲಿ ಪೂರ್ಣ ಮಾಡಿಕೊಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ ಎಂದರು.
ಸಾಂಬ್ರಾ ರಸ್ತೆಯನ್ನು ಅಗಲೀಕರಣ ಮಾಡಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡುವುದು. ಭೂಸ್ವಾಧೀನ ಮಾಡಬೇಕು ಎಂಬುದರ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅದಕ್ಕೆ ಅನುಮೋದನೆ ಕೊಡಿಸುವ ಕೆಲಸವನ್ನು ಮಾಡುತ್ತೇನೆ ಎಂದು ಭರವಸೆ ನೀಡಿದರು.